ಇತಿಹಾಸ ಸೃಷ್ಟಿಸಿದ ವಿರಾಟ್ ಹಿಂದು ಸಮ್ಮೇಳನ

ನಾರಿಶಕ್ತಿ ಅನಾವರಣ, ಹಿಂದುತ್ವದ ವಿರಾಟ್ ದರ್ಶನ ಹಾಗೂ ಬಿಜೆಪಿ ಮುಖಂಡರ ನಡುವೆ ಮುಂದುವರಿದಿರುವ ಗುಂಪುಗಾರಿಕೆಗೆ ಭಾನುವಾರ ವಿರಾಟ್ ಹಿಂದು ಸಮ್ಮೇಳನದ ನಿಮಿತ್ತ ನಡೆದ ಬೃಹತ್ ಮೆರವಣೆಗೆ ಸಾಕ್ಷಿಯಾಯಿತು.

ಜಾಗೃತ ಮಹಿಳಾ ಶಕ್ತಿ :

ಬಾಗಲಕೋಟೆಯಲ್ಲಿ ಭಾನುವಾರ ನಡೆದ ವಿರಾಟ ಹಿಂದು ಸಮ್ಮೇಳನ ಎಂದಿನಂತಹ‌ ಸಮ್ಮೇಳನ ಆಗಿರಲಿಲ್ಲ. ಅದೊಂದು ಐತಿಹಾಸಿಕ ಎನ್ನುವಂತಿತ್ತು. ಬಹಶಃ ಇದುವರೆಗೂ ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಕಾಣಿಸದಷ್ಟು ಮಹಿಳೆಯರು ಭಾಗವಹಿಸಿದ್ದು ಗಮನ ಸೆಳೆಯುವಂತಿತ್ತು.

ವಿರಾಟ ಹಿಂದು ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಶೋಭಾಯಾತ್ರೆಯಲ್ಲಿ ಸಹಸ್ರಾರು ಜನ ಭಾಗವಹಿಸಿದ್ದರು.‌ ಅದರಲ್ಲಿ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೇಸರಿ ಧ್ವಜ ಹಿಡಿದು, ಹಿಂದು ಪರ ಘೋಷಣೆಗಳನ್ನು ಕೂಗುತ್ತಿದ್ದರು. ಮಹಿಳಾ ಕಲಾತಂಡಗಳಿಂದ ಜಾಂಜ್ ಪಥಕ್ ಪ್ರದರ್ಶನ ಕೂಡಾ ಗಮನ ಸೆಳೆಯುವಂತಿತ್ತು.

ವಿರಾಟ ಹಿಂದು ಸಮ್ಮೇಳನದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಇಷ್ಟೊಂದು ಜನ ಮಹಿಳೆಯರು ಭಾಗವಹಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಮೆಚ್ಚುಗೆ ಮಾತುಗಳು ಕೇಳಿ ಬಂದವು. ಹಿಂದು‌ ಮಹಿಳಾ ಜಾಗೃತಿ ಮೆರವಣಿಗೆಯಲ್ಲಿ ಅನಾವರಣಗೊಂಡಿತ್ತು.

ಮೆರವಣಿಗೆಯಲ್ಲಿ ಇಷ್ಟೊಂದು ಜನ‌ಮಹಿಳೆಯರ ಭಾಗವಹಿಸುವಿಕೆಗೆ ಕಾರಣ ಹುಡುಕುತ್ತ ಹೋದಾಗ ಸಿಕ್ಕ ಉತ್ತರ ರೋಚಕವಾಗಿದೆ. ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಹಿಂದು ಯುವಕರನ್ನು ಬಂಧಿಸಲು ಹೋದ ವೇಳೆ ನಡೆದ ಬೆಳವಣಿಗೆಗಳು ಸಮಾವೇಶದಲ್ಲಿ ದಾಖಲೆ ರೀತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಕಾರಣವಂತೆ.

ಕಾರಣಗಳು ಏನೇ ಇರಲಿ. ಮಹಿಳೆಯರು ಜಾಗೃತಗೊಂಡು ಹಿಂದು ಸಮ್ಮೇಳನದಲ್ಲಿ ಭಾಗವಹಿಸಿದ್ದು ಮಾತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮಹಿಳೆ ಶಕ್ತಿ ಜಾಗೃತಿಗೆ ವಿರಾಟ್ ಹಿಂದು ಸಮ್ಮೇಳನ ಸಾಕ್ಷಿಯಾಗಿದ್ದಂತೂ ನಿಜ.

ಈಗಾಗಲೇ ಬಾಗಲಕೋಟೆ ನವನಗರ ಪೂರ್ವ ಮತ್ತು ನವನಗರ ಪಶ್ಚಿಮ‌ ಭಾಗದಲ್ಲಿ ವಿರಾಟ್ ಹಿಂದು ಸಮ್ಮೇಳನ ನಿಮಿತ್ತ ಮೆರವಣಿಗೆಗಳು ಅತ್ಯಂತ ಯಶಸ್ವಿಯಾಗಿ ನಡೆದಿದ್ದವು. ಭಾನುವಾರದ ಸಮ್ಮೇಳನದ ಅಂಗವಾಗಿ ನಡೆದ ಮೆರವಣಿಗೆ ಅವುಗಳಿಗಿಂತ ವಿಭಿನ್ನವಾಗಿತ್ತು.

ಹಿಂದು ವಿರಾಟ್ ಸಮ್ಮೇಳನ

ಗುಂಪುಗಾರಿಕೆ :

ಅಚ್ಚರಿಯ ಸಂಗತಿ ಎಂದರೆ, ಮೂರು ಸಮಾವೇಶಗಳಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರಲ್ಲಿ ಮಾತ್ರ ಭಿನ್ನತೆ ಎದ್ದು ಕಾಣಿಸುತ್ತಿತ್ತು. ಮೂರೂ ಮೆರವಣಿಗಳಲ್ಲಿ ಮುಖಂಡರ ನಡುವಿನ ಗುಂಪುಗಾರಿಕೆ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿತ್ತು. ಪ್ರತಿ ಮೆರವಣಿಗೆಯಲ್ಲೂ ಒಂದು ಗುಂಪು ಮುಂದೆ, ಇನ್ನೊಂದು ಗುಂಪು ಹಿಂದೆ ಇರುತ್ತಿದ್ದವು. ಮೆರವಣಿಗೆಗಳಲ್ಲಿ ಭಾಗವಹಿಸಿದ್ದ ಮುಖಂಡರ ನಡೆ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ಮೇಲ್ಮನೆ ಸದಸ್ಯ ಪಿ.ಎಚ್.ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನಡುವಿನ ಅಸಮಾಧಾನ ಸಾಕಷ್ಟು ಮಾತುಕತೆ ನಂತರವೂ ಶಮನವಾದಂತೆ ಕಾಣಿಸುತ್ತಿಲ್ಲ. ಇವರಿಬ್ಬರೂ ಯಾವುದೇ ಕಾರ್ಯಕ್ರಮವಾಗಲಿ, ಮೆರವಣಿಗಯಲ್ಲಾಗಲಿ ಭಾಗವಹಿಸಿದರೂ ಒಬ್ಬರಿಗೆ ಮುಖಾಮುಖಿ ಆಗುತ್ತಿಲ್ಲ. ಒಬ್ಬೊಬ್ಬರದೂ ಒಂದೊಂದು ಗುಂಪು ಪ್ರತ್ಯೇಕವಾಗಿಯೇ ಇರುತ್ತದೆ.

ತಂತ್ರ -ಪತ್ರಿತಂತ್ರ:

ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಲಾಭ ಪಡೆಯಲು ಪ್ರಮುಖ ರಾಜಕೀಯ ಪಕ್ಷಗಳು ತಂತ್ರ- ಪ್ರತಿತಂತ್ರ ಹೆಣೆಯುವ ಕೆಲಸ ಮಾಡುತ್ತಿವೆ. ಒಬ್ಬರು ಒಂದು ರೀತಿಯ ತಂತ್ರಕ್ಕೆ ಮೊರೆ ಹೊದಲ್ಲಿ, ಇನ್ನೊಬ್ಬರು ಮತ್ತೊಂದು ರೀತಿಯಲ್ಲಿ ಪ್ರತಿತಂತ್ರ ನಡೆಸುತ್ತಿದ್ದಾರೆ. ಪ್ರಮುಖ ರಾಜಕೀಯ ತಂತ್ರ, ಪ್ರತಿತಂತ್ರಗಳು ಏನೇ ಆಗಿರಲಿ ನಗರದ ಶಾಂತಿ, ಸುವ್ಯವಸ್ಥೆಗೆ ತೊಂದರೆ ಆಗದಿರಲಿ ಎನ್ನುವುದು ಜನತೆಯ ಆಶಯವಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top