ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅಡಿಯಲ್ಲಿ ಸ್ವಾಧೀನಗೊಳ್ಳಲಿರುವ ಜಮೀನುಗಳಿಗೆ ಪರಿಹಾರ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿರುವಾಗಲೇ ಮುಳುಗಡೆ ಸಂತ್ರಸ್ತರು ನೆರೆಯ ಆಂಧ್ರಪ್ರದೇಶ ಇಡೀ ಯೋಜನೆ ಅನುಷ್ಠಾನಕ್ಕೆ ಕಲ್ಲು ಚಪ್ಪಡಿ ಎಳೆಯುವ ಕೆಲಸಕ್ಕೆ ಹೊರಟಿರುವುದು ಆಘಾತಕಾರಿ ಸಂಗತಿ.
ಕೇಂದ್ರಕ್ಕೆ ಪತ್ರ:
ಕೃಷ್ಣಾ ನ್ಯಾಯಾಧೀಕರಣ -2 ರ ಐತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚಿಸುವುದಕ್ಕೆ ಹಾಗೂ ಈ ಯೋಜನೆ ಅನುಷ್ಠಾನಕ್ಕೆ ಬೇಕಾಗಿರುವ ಅಗತ್ಯ ಭೂಸ್ವಾಧೀನಕ್ಕೆ ಅವಕಾಶ ಕೊಡಬಾರದು ಎಂದು ಆಂಧ್ರಪ್ರದೇಶ ತಕಾರರು ಎತ್ತಿದೆ.
ಈಗಾಗಲೇ ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ವಿಳಂಬಗೊಂಡಿರುವ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿರುವಾಗಲೇ ಆಂಧ್ರಪ್ರದೇಶ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ರಾಜ್ಯದ ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಆಂಧ್ರಪ್ರದೇಶದ ತಡೆಯಾಜ್ಞೆ ಪತ್ರದ ಮೇಲೆ ಕ್ರಮಗಳಾಗುವ ಮುನ್ನ ಕೃಷ್ಣಾ ನ್ಯಾಯಾಧೀಕರಣ-೨ ರ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಭೇಟಿ ಮಾಡುವ ಚಿಂತನೆಯನ್ನು ನೀರಾವರಿ ಸಚಿವರು ಹರಿ ಬಿಟ್ಟಿದ್ದಾರೆ. ಉಪ ಮುಖ್ಯಮಂತ್ರಿಗಳ ಈ ವಿಚಾರ ಅತ್ಯಂತ ಸೂಕ್ತವಾಗಿದೆ. ಇವರ ವಿಚಾರವನ್ನು ರಾಜ್ಯದ ಸಂಸದರು ಗಂಭೀರವಾಗಿ ಪರಿಗಣಿಸಬೇಕಿದೆ.
ನಿದ್ರಾವಸ್ಥೆಯಲ್ಲಿ ಸಂಸದರು:
ಯುಕೆಪಿ ಹಂತ -3 ರ ಅನುಷ್ಠಾನ ವಿಷಯದಲ್ಲಿ ಆಂಧ್ರ ಪ್ರದೇಶ ತಡೆಯಾಜ್ಞೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದರೂ ನಮ್ಮ ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಜನತೆಯಲ್ಲಿ ಮೂಡುತ್ತಿದೆ. ಯುಕೆಪಿ ಯೋಜನೆ ಹಂತ -3 ರ ಅನುಷ್ಠಾನಕ್ಕೆ ಆಂಧ್ರಪ್ರದೇಶ ಕಲ್ಲು ಚಪ್ಪಡಿ ಎಳೆಯಲು ಹೋರಟಿರುವಾಗಲೂ ಇದುವರೆಗೂ ಒಬ್ಬರೇ ಒಬ್ಬರು ಸಂಸದರು ಬಾಯಿ ಬಿಟ್ಟಿಲ್ಲ. ಕೇಂದ್ರದಲ್ಲಿ ಸಚಿವರಾದವರೂ ಚಕಾರ ಎತ್ತದಿರುವುದು ಶೋಚನೀಯ ಸಂಗತಿ.
ನೆರೆ ರಾಜ್ಯಗಳ ತಕರಾರು:
ಯುಕೆಪಿ ಹಂತ-3 ರ ಯೋಜನೆ ಬಗೆಗೆ ಮಹಾರಾಷ್ಟ್ರ ಪ್ರವಾಹದ ನೆಪವೊಡ್ಡಿ ವಿರೋಧ ವ್ಯಕ್ತ ಪಡಿಸುತ್ತಲೇ ಇದೆ. ಈಗ ಆಂಧ್ರ ಪ್ರದೇಶ ಇಡೀ ಯೋಜನೆ ಅನುಷ್ಠಾನವೇ ಬೇಡ ಎನ್ನುವ ಅರ್ಥದಲ್ಲಿ ಕೇಂದ್ರಕ್ಕೆ ಪತ್ರ ಬರೆದಿದೆ. ಒಂದು ಕಡೆ ಮಹಾರಾಷ್ಟç, ಇನ್ನೊಂದು ಕಡೆ ಆಂಧ್ರ ಪ್ರದೇಶದ ತಕರಾರು ಮಧ್ಯೆ ರಾಜ್ಯ ಸರ್ಕಾರ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಮತ್ತು ಭೂಸ್ವಾಧೀನ ಕ್ರಮಕ್ಕೆ ಮುಂದಾಗಿದೆ. ಅದಕ್ಕಾಗಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಲೇ ಇದೆ.
ಭೂಸ್ವಾಧೀನಕ್ಕೆ ಸಿದ್ಧತೆ:
ರಾಜ್ಯ ಸರ್ಕಾರ ಮಾರ್ಚ್ ತಿಂಗಳಿನಲ್ಲಿ ಹಂತ-3 ರ ವ್ಯಾಪ್ತಿಯ ಜಮೀನುಗಳ ಸ್ವಾಧೀನಕ್ಕೆ ಪರಿಹಾರ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಆಂಧ್ರ ಪ್ರದೇಶ ತಡೆಕೋರಿ ಕೇಂದ್ರಕ್ಕೆ ಪತ್ರ ಬರೆದಿರುವುದು ಯುಕೆಪಿ ಯೋಜನೆ ಪೂರ್ಣ ಪ್ರಮಾಣದ ಅನುಷ್ಠಾನದ ಬಗೆಗೆ ಜನತೆಯಲ್ಲಿ ಇಲ್ಲದ ಅನುಮಾನಗಳು ಶುರುವಾಗಿವೆ. ನದಿ ನೀರು ಹಂಚಿಕೆ ಕುರಿತು ಕೃಷ್ಣಾ ನ್ಯಾಯಧೀಕರಣ ವರದಿ ಕೇಂದ್ರಕ್ಕೆ ಸಲ್ಲಿಕೆ ಆಗಿದ್ದರೂ ಅಧಿಸೂಚನೆ ಮಾತ್ರ ರಾಜಕೀಯ ಕಾರಣಗಳಿಂದಾಗಿ ಹೊರಬೀಳುತ್ತಿಲ್ಲ.
ಕೇಂದ್ರದ ಅಸಡ್ಡೆ:
ಇದುವರೆಗೂ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ರಾಷ್ಟ್ರೀಯ ಪಕ್ಷಗಳು ರಾಜಕೀಯ ಕಾರಣಗಳಿಂದಾಗಿ ರಾಜ್ಯದ ನೀರಾವರಿ ಯೋಜನೆಗಳ ವಿಷಯದಲ್ಲಿ ರಾಜ್ಯಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಅನ್ಯಾಯ ಮಾಡುತ್ತಲೇ ಬಂದಿವೆ. ಕೃಷ್ಣಾ ನ್ಯಾಯಾಧೀಕರಣ ವಿಷಯದಲ್ಲಿ ಅಧಿಸೂಚನೆ ಹೊರಡಿಸುತ್ತಿಲ್ಲ. ಮಹಾದಾಯಿ ವಿಚಾರದಲ್ಲಿ ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಇದ್ದು, ಪರಿಸರ ಇಲಾಖೆಯಿಂದ ಕಾಮಗಾರಿಗೆ ಕ್ಲೀಯರನ್ಸ್ ಸಿಕ್ಕುತ್ತಿಲ್ಲ.
ಇದರಿಂದಾಗಿ ಮಹಾದಾಯಿ, ಕಳಸಾ -ಬಂಡೂರಿ ಯೋಜನೆ ಕೂಡ ವಿಳಂಬವಾಗುತ್ತಿದೆ. ಭದ್ರಾ, ಮೆಕೆದಾಟು ವಿಷಯದಲ್ಲೂ ಅಷ್ಟೆ. ಕೇಂದ್ರ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಪರಿಸ್ಥಿತಿ ಇದು ಹೀಗೆ ಮುಂದುವರಿದಲ್ಲಿ ಯೋಜನಾನುಷ್ಠಾನ ಕಷ್ಟವಾಗಲಿದೆ. ಇನ್ನಾದರೂ ರಾಜ್ಯದ ಸಂಸದರು ರಾಜ್ಯದಲ್ಲಿ ಕೃಷ್ಣೆಯ ಮಕ್ಕಳಿಗೆ ಅನ್ಯಾಯ ಆಗದಂತೆ ಮುತುವರ್ಜಿ ವಹಿಸಬೇಕಿದೆ. ರಾಜ್ಯದ ಪರ ಒಟ್ಟಾಗಿ ನಿಂತು ಹಕ್ಕಿನ ಪಾಲಿನ ನೀರಿನ ಬಳಕೆಗಾಗಿ ಕೃಷ್ಣಾ ನ್ಯಾಯಾಧೀಕರಣ -2 ರ ವರದಿಯ ಅಧಿಸೂಚನೆ ಹೊರಡಿಸಲು ಪಟ್ಟುಹಿಡಿದು ಕುಳಿತುಕೊಳ್ಳಬೇಕಿದೆ.
ಕ್ರಸ್ಟ್ ಗೆಟ್ಗೆ ಕತ್ತರಿ:
ಈಗಾಗಲೇ ಆಂಧ್ರ ಪ್ರದೇಶದ ಹಠಮಾರಿ ಧೋರಣಿಯಿಂದಲೇ ಆಲಮಟ್ಟಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಈ ಹಿಂದೆ ಕತ್ತರಿಸಿ ಹಾಕಲಾಯಿತು. ಈಗ ನೋಡಿದರೆ ಇಡೀ ಯುಕೆಪಿ ಹಂತ-೩ ರ ಯೋಜನೆಯನ್ನೇ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಮಾತನಾಡುತ್ತಿದೆ. ಆಂಧ್ರ ಪ್ರದೇಶ ಕೇಂದ್ರಕ್ಕೆ ಈ ಯೋಜನಾನುಷ್ಠಾನಕ್ಕೆ ತಡೆಕೋರಿ ಸಲ್ಲಿಸಿರುವ ಪತ್ರವನ್ನೇ ನೆಪವಾಗಿಸಿಕೊಂಡು ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸುವಂತಾಗಬಾರದು. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಯಬೇಕು. ಅಂದಾಗ ಮಾತ್ರ ಮುಂದಿನ ನಾಲ್ಕು ಆರ್ಥಿಕ ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲು ಸಾಧ್ಯವಾಗಲಿದೆ.
ಒಗ್ಗಟ್ಟು ಪ್ರದರ್ಶನ ಅಗತ್ಯ:
ಅದಕ್ಕೂ ಮೊದಲು ಆಂಧ್ರ ಪ್ರದೇಶ ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸಬಾರದು, ಭೂಸ್ವಾಧೀನ ಪ್ರಕ್ರಿಯೆ ಅನುಮತಿಸಬಾರದು ಎಂದು ಬರೆದ ಪತ್ರಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಹಾಗೂ ಇಲ್ಲಿನ ಸಂಸದರು ಯೋಜನಾನುಷ್ಠಾನದ ಸಾಧಕ-ಬಾಧಕಗಳ ಬಗೆಗೆ ಮನದಟ್ಟು ಮಾಡಬೇಕು. ಈಗಲಾದರೂ ರಾಜ್ಯದ ಜನಪ್ರತಿನಿಧಿಗಳು ರಾಜಕಾರಣ ಬಿಟ್ಟು, ರಾಜ್ಯದ ಒಳತಿಗಾಗಿ ಒಟ್ಟಾಗಿ ನಿಲ್ಲುವ ಕೆಲಸ ಮಾಡಬೇಕು. ಈ ವಿಷಯದಲ್ಲಿ ಸ್ವಲ್ಪವೇ ಯಾಮಾರಿದರೂ ರಾಜ್ಯದಲ್ಲಿನ ಕೃಷ್ಣೆಯ ಮಕ್ಕಳ ಕಣ್ಣೀರ ಕಥೆ ಹಾಗೆ ಮುಂದುವರಿಯಲಿದೆ.
- ವಿಠ್ಠಲ ಆರ್. ಬಲಕುಂದಿ


