ಪಂಕಾ ಮಸಿದಿ ಶಾಶ್ವತ ಬಂದ್‌ಗೆ ಒತ್ತಾಯ

ಬಾಗಲಕೋಟೆ: ಬಾಬರಿ ಮಸಿದೆಯನ್ನೇ ನೆಲಸಮ ಮಾಡಿದ ನಮಗೆ ಬಾಲಕೋಟೆಯ ಪಂಕಾ ಮಸಿದಿ ಇನ್ಯಾವ ಲೆಕ್ಕ ಎಂದು ಪ್ರಶ್ನಿಸಿದ ಹಿಂದುಪರ ಸಂಘಟನೆಗಳ ಮುಖಂಡರು ಕೂಡಲೇ ಸರ್ಕಾರ ಸದಾ ಗಲಭೆಗೆ ಕಾರಣವಾಗಿರುವ ಪಂಕಾ ಮಸಿದಿಯನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.

ಇಲ್ಲಿನ ನವನಗರದ ಜಿಲ್ಲಾಡಳಿತ ಭವನದ ಮುಂದಿನ ರಸ್ತೆಯಲ್ಲಿ ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಉಲ್ಲಾಸ ಕೊಡಗ, ಅಶೋಕ ಲಿಂಬಾವಳಿ, ಪ್ರಶಾಂತ ಪವಾರ, ರಾಜು ನಾಯ್ಕರ್, ಅರವಿಂದ ಬೆಲ್ಲದ, ಬಸವರಾಜ ಯಂಕಂಚಿ, ಹೂವಪ್ಪ ರಾಠೋಡ, ಕಿರಣ ಪವಾಡ ಶೆಟ್ಟರ್, ಶ್ರೀಮತಿ ಮಜ್ಜಗಿ, ಹಂಸನೂರಿನ ಬಸವಾನಂದ ಸ್ವಾಮೀಜಿ, ಶ್ರೀಕಾಂತ ಹೊಸಕೇರಿ ಅವರು ಮಾತನಾಡಿದರು.

ಘಟನೆ ಖಂಡನೀಯ:

ಫೆ.೧೯ ರಂದು ಶಿವಾಜಿ ಮಹಾರಾಜರ ಜನ್ಮದಿನ ಹಿನ್ನೆಲೆಯಲ್ಲಿ ನಡೆದ ಮೇರವಣಿಗೆ ಮೇಲೆ ನಡೆದ ಚಪ್ಪಲಿ ಎಸೆತ ಹಾಗೂ ಕಲ್ಲು ತೂರಾಟ ಘಟನೆಯನ್ನು ತೀವ್ರವಾಗಿ ಖಂಡಿಸಿ, ಬಾಗಲಕೋಟೆಯಲ್ಲಿ ಮೊದಲಿನಿಂದಲೂ ಗಲಭೆಗೆ ಕಾರಣವಾಗುತ್ತಿರುವ ಪಂಕಾ ಮಸಿದಿಯನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಮಸಿದಿಯ ಪ್ರಸಕ್ತ ಆಡಳಿತ ಮಂಡಳಿಯ ಸದಸ್ಯರನ್ನು ಬಂಧಿಸಬೇಕು. ಕಲ್ಲು ತೂರಾಟ ನಡೆಸಿದವರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ಫೆ. ೧೯ ರಂದು ನಡೆದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೂರ್ವ ನಿಯೋಜಿತ ಕೃತ್ಯವಾಗಿದೆ. ಉದ್ದೇಶಪೂರ್ವಕವಾಗಿಯೇ ಮೆರಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪೊಲೀಸ್ ವೈಫಲ್ಯ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆಯೇ ಕಲ್ಲು ಬಿದ್ದು ಗಾಯವಾಗಿದ್ದರೂ ಕಲ್ಲು ತೂರಿದವರ ಮೇಲೆ ಸೂಕ್ತ ಕ್ರಮಗಳು ಜರುಗದೇ ಇರುವುದು ಪೊಲೀಸ್ ವ್ಯವಸ್ಥೆಯ ವೈಫಲ್ಯವೆಂದು ಆಪಾದಿಸಿದ ಮುಖಂಡರು ಜಿಲ್ಲಾಡಳಿತ ತುಷ್ಠೀಕರಣ ನೀತಿಗೆ ಮುಂದಾಗಿರುವುದು ಖಂಡನಾರ್ಹ. ಘಟನೆಗೆ ಸಂಬಂಧಿಸಿದವರನ್ನು ಬಂಧಿಸದೇ ಹೋದಲ್ಲಿ ಮತ್ತೆ ಶಿವಾಜಿ ಜಯಂತಿ ಮಾಡುತ್ತೇವೆ. ಅಲ್ಲಿಯೇ ಮೆರವಣಿಗೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅನಧಿಕೃತ ಮಸಿದೆಗಳ ನಿರ್ಮಾಣ:

ಬಾಗಲಕೋಟೆ ನವನಗರದ ನಾನಾ ಸೆಕ್ಟರ್‌ಗಳಲ್ಲಿ ಅನಧಿಕೃತವಾಗಿ ಮಸಿದಿಗಳ ನಿರ್ಮಾಣ ನಡೆಯುತ್ತಿದೆ. ಇದು ಕೂಡಲೇ ಬಂದಾಗಬೇಕು. ಪ್ರತಿ ಸೆಕ್ಟರ್‌ನಲ್ಲು ಮಸಿದಿ ನಿರ್ಮಾಣಕ್ಕೆ ಬಿಟಿಡಿಎದಲ್ಲಿ ಜಾಗ ಕೇಳಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮಸಿದಿಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು. ಇದನ್ನು ತಡೆಯುವುದಕ್ಕಾಗಿಯೇ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ನೋಟಿಸಿಗೆ ಹೆದರಲ್ಲ:

ಗಲಭೆಗೆ ಕಾರಣರಾದವರನ್ನು ಬಿಟ್ಟು ಹಿಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ನೋಟಿಸ್ ಕೊಡುವ ಕೆಲಸ ನಡೆದಿದೆ. ಇಂತಹ ಕ್ರಮಗಳಿಗೆ ಹಿಂದು ಕಾರ್ಯಕರ್ತರು ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿ, ಮೊದಲು ಕಾನೂನು ಕ್ರಮಕ್ಕೆ ಮುಂದಾಗಿ ಎಂದರು.

ವ್ಯಾಪಕ ಬಂದೋಬಸ್ತ್:

ಪ್ರತಿಭಟನಾ ಧರಣಿ ನಿಮಿತ್ತ ಬಾಗಲಕೋಟೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಹಳೆ ಪಟ್ಟಣವಂತೂ ಸಂಪೂರ್ಣ ನಿರ್ಜನ ಪ್ರದೇಶವಾಗಿ ಪರಿಣಮಿಸಿತ್ತು. ಪ್ರತಿಭಟನಾ ಧರಣಿ ಸ್ಥಳದ ಸುತ್ತಲೂ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕಂಡು ಬಂದಿತು. ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ಪ್ರತಿಭಟನಾ ಧರಣಿಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡರ, ನಾರಾಯಣಸಾ ಭಾಂಡಗೆ, ಮೇಲ್ಮನೆ ಸದಸ್ಯರಾದ ಪಿ.ಎಚ್. ಪೂಜಾರ್, ಎಚ್.ಆರ್. ನಿರಾಣಿ, ಜಯಂತ ಕುರಂದವಾಡ, ಕುಮಾರಸ್ವಾಮಿ ಹಿರೇಮಠ, ಅಶೋಕ ಮುತ್ತಿನಮಠ, ಬಸವರಾಜ ಕಟಗೇರಿ, ವಿಜಯ ಸುಲಾಖೆ, ಕಳಕಪ್ಪ ಬಾದೋಡಗಿ, ಬಸವರಾಜ ಹುನಗುಂದ ಮೊದಲಾದವರು ಇದ್ದರು.

Scroll to Top