ಶಿವಾನಂದ ಪಾಟೀಲ ಸಚಿವ ಸ್ಥಾನ ತ್ಯಜಿಸುವ ಮಾತು

ಆಡಳಿತ ಪಕ್ಷದ ಬಹುತೇಕ ಶಾಸಕರು ಮಂತ್ರಿ ಆಗಲು ಏನೆಲ್ಲ ಪ್ರಯತ್ನ ನಡೆಸುವುದು, ಸಚಿವರಾದವರು ಹೇಗಾದರೂ ಸರಿ ಸಚಿವ ಸ್ಥಾನ ಉಳಿಸಿಕೊಳ್ಳಲು ತಿಪ್ಪರಲಾಗಾ ಹಾಕುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಬಸವನ ಬಾಗೇವಾಡಿ ಶಾಸಕ, ಸಚಿವ ಶಿವಾನಂದ ಪಾಟೀಲ ಮಂತ್ರಿ ಸ್ಥಾನ ತ್ಯಜಿಸುವ ಮಾತನಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ.

ವರಿಷ್ಠರ ಭೇಟಿ ಮಾಡಿದ ಶಾಸಕರು:

ರಾಜ್ಯ ಸಚಿವ ಸಂಪುಟ ಪುನಾರಚನೆ ಕಸರತ್ತು ಕಾಂಗ್ರೆಸ್ ಪಾಳೆಯದಲ್ಲಿ ಜೋರಾಗಿದೆ. ಈಗಾಗಲೇ ಕಾಂಗ್ರೆಸ್ಸಿನ 40 ಜನ ಹಿರಿಯ ಶಾಸಕರು ಇಂದ್ರಪ್ರಸ್ಥಕ್ಕೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಾಯಿಸಿ ಬಂದಿದ್ದಾರೆ. ಮೇ 5 ರ ಬಳಿಕ‌ ಮತ್ತೆ ಹಿರಿಯ ಶಾಸಕರು ಶಾಸಕ ಅಶೋಕ ಪಟ್ಟಣ ನೇತೃತ್ವದಲ್ಲಿ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ.

ಮಂತ್ರಿಸ್ಥಾನ ತ್ಯಜಿಸುವ ಮಾತು:

ಹಿರಿಯ ಕಾಂಗ್ರೆಸ್ ಶಾಸಕರ ಪ್ರಯತ್ನದ ಜತೆಗೆ ಇನ್ನಷ್ಟು ಜನ ಹೊಸಬರು ಸೇರಿದಂತೆ ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಲಾಬಿ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸಚಿವ ಶಿವಾನಂದ ಪಾಟೀಲ ಮಂತ್ರಿ ಸ್ಥಾನ ತ್ಯಜಿಸುವ ಮಾತನ್ನು ಆಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗೂ ಉಂಟೆ ಎನ್ನುವ ವಾತಾವರಣ ಕಾಂಗ್ರೆಸ್ ಪಾಳೆಯದಲ್ಲಿ ಸೃಷ್ಟಿಯಾಗಿದೆ.

ಸಚಿವ ಸಂಪುಟ ಪುನಾರಚನೆ ಆಗಬೇಕಾಗಿದೆ. ಹೊಸಬರಿಗೆ ಅವಕಾಶ ಸಿಗಬೇಕು. ಕೆಲವರು ಸಚಿವ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಆದರೆ, ನಾನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಸಚಿವ ಸ್ಥಾನ ತ್ಯಜಿಸಲು ಸಿದ್ಧನಿದ್ದೇನೆ” ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ರೋಚಕ ರಾಜಕಾರಣ:

ಸಚಿವ ಶಿವಾನಂದ ಪಾಟೀಲರ ರಾಜಕಾರಣ ಬಹಳ ರೋಚಕವಾಗಿದೆ. 1990 ರಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದರು. 1991ರಲ್ಲಿ ನಡೆದ ತಿಕೋಟಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಜನತಾ ದಳದಿಂದ ಸ್ಪರ್ಧಿಸಿ ಸೋಲುಂಡಿದ್ದರು. 1992ರಲ್ಲಿ ವಿಜಯಪುರ ನಗರಸಭೆಯ ಅಧ್ಯಕ್ಷರಾಗಿದ್ದರು.

1994ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಜನತಾ ದಳದಿಂದ ಆಯ್ಕೆಗೊಂಡರು. 1999ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಪಕ್ಷ ಬದಲಿಸಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಪಕ್ಷಾಂತರ ಅಷ್ಟೇ ಅಲ್ಲ, ತಿಕೋಟಾ ವಿಧಾನಸಭೆ ಕ್ಷೇತ್ರವನ್ನು ಬಿಟ್ಟು ಅಲ್ಲದೇ, ಬಿಜೆಪಿಯನ್ನೂ ತೊರೆದು ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಆಯ್ಕೆಯಾದರು.

ಎರಡನೇ ಸೋಲು:

2008ರಲ್ಲಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ಸಿನಂದ ಪುನರಾಯ್ಕೆ ಬಯಸಿ, ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಬೆಳ್ಳುಬ್ಬಿ ವಿರುದ್ಧ ಸೋಲುಂಡರು. 2013ರಲ್ಲಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ಮತ್ತೆ ಸ್ಪರ್ಧಿಸಿ ಆಯ್ಕೆಯಾದರು. 2018ರಲ್ಲಿ ಬಸವನ ಬಾಗೇವಾಡಿಯಿಂದ ಪುನರಾಯ್ಕೆಗೊಂಡು ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮೊದಲ ಬಾರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು.

ಎರಡನೆ ಬಾರಿ ಮಂತ್ರಿ:

2023 ರ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಕ್ಷೇತ್ರದದ ಮತ್ತೊಮ್ಮೆ ಗೆಲುವಿನ‌ ದಾಖಲೆ ನಿರ್ಮಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎರಡು ದಶಕಗಳ ಕಾಲ ಶಾಸಕರಾಗಿದ್ದ ಅವರು ಬಳಿಕ ಮಂತ್ರಿ ಆದವರು. ಅಂತವರು ಈಗ “ಸಚಿವ ಸಂಪುಟ ಪುನಾರಚನೆ ಆದರೆ ನನಗೇನು ಚಿಂತೆಯಿಲ್ಲ. ಸಚಿವ ಸ್ಥಾನ ಬಿಡು ಎಂದರೆ ಬಿಡಲು ಸಿದ್ಧ. ಸಚಿವ ಸ್ಥಾನಕ್ಕಾಗಿ ಹೊಸಬರು ಕಾಯುತ್ತಿರುತ್ತಾರೆ. ಅವರಿಗೂ ಅವಕಾಶ ಸಿಗಬೇಕು” ಎಂದು ಹೇಳಿದ್ದಾರೆ.

ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ಸಾಕಷ್ಟು ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಶಿವಾನಂದ ಪಾಟೀಲ್ ಅವರು ಸಚಿವ ಸ್ಥಾನದ ತ್ಯಾಗ ಮಾಡುವ ಮಾತನ್ನಾಡಿದ್ದಾರೆ. ಸದ್ಯ ಸಂಪುಟದಲ್ಲಿನ ಕೆಲವರು ಮಂತ್ರಿಗಳಾದರೂ ಮಂತ್ರಿಸ್ಥಾನ ತ್ಯಜಿಸುವ ನಿರ್ಧಾರಕ್ಕೆ ಬಂದಲ್ಲಿ ಸಂಪುಟ ಪುನಾರಚನೆ ಕಗ್ಗಂಟಾಗದೆ ಎಲ್ಲವೂ ಸುಲಭವಾಗಲಿದೆ. ಹೊಸಬರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ. ಸಂಪುಟ ಪುನಾರಚನೆ ಬಗೆಗೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು , ಮೇ ತಿಂಗಳಲ್ಲಿ ಸಂಪುಟ ಪುನಾರಚನೆ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಫಲಿತಾಂಶ ನಿರ್ಣಾಯಕ:

ಪಕ್ಷದ ವರಿಷ್ಠರ ಮೇಲೆ ಸಂಪುಟ ಪುನಾರಚನೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂತ್ರಿಸ್ಥಾನಕ್ಕಾಗಿನ ಲಾಬಿಯೂ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅದೆಲ್ಲವೂ ಮೇ. 4 ರಂದು‌ ನಡೆಯುವ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಫಲಿತಾಂಶವನ್ನು ಅವಲಂಬಿಸಿದೆ. ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಅದು ಯಾರೆಲ್ಲರ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದೆ ಎನ್ನುವುದನ್ನು ಕಾಯ್ದು ಮೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top