ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಜೋಡಿ 2028 ರಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಅಳೆದು ತೂಗಿ ಆಯ್ಕೆ ಮಾಡಿದಂತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾದ, ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಹುಸಿಗೊಳಿಸಿ, ಹೈಕಮಾಂಡ್ ನಿಷ್ಠ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಿದೆ.
ಕೃಷ್ಣ – ಪೂಜಾರ ಜೋಡಿ ಹೀಗಿತ್ತು:
ರಾಜ್ಯದ ನೂತನ ಜೋಡಿ ಗಮನಿಸಿದಾಗ 1999 -2004 ರ ಅವಧಿಯಲ್ಲೂ ಇತಹುದೆ ಜೋಡಿ ಇತ್ತು ಎನ್ನುವುದು ಗಮನಾರ್ಹ ಅಂಶ. ಅಂದು ಎಸ್. ಎಂ. ಕೃಷ್ಣ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ಸಿಗ ಜನಾರ್ಧನ ಪೂಜಾರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಎರಡೂ ಜೋಡಿಗಳ ನಡುವೆ ಸಾಕಷ್ಟು ಸಾಮ್ಯತೆ ಕಾಣಬಹುದಾಗಿದೆ.
ಅಂದು ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಸರ್ಕಾರದ ಗಟ್ಟಿ ಧ್ವನಿಯಾಗಿ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿದ್ದರೆ, ಜನಾರ್ಧನ ಪೂಜಾರಿ ಅವರು ಪಕ್ಷದ ಕಾರ್ಯಕರ್ತರ ಧ್ವನಿಯಾಗಿದ್ದರು. ಪಕ್ಷದ ವಿಷಯ ಬಂದಾಗ ಸರ್ಕಾರಕ್ಕೂ ಛಾಟಿ ಬೀಸಿದ ಉದಾಹರಣೆಗಳು ಇವೆ.
ಸರ್ಕಾರಕ್ಕೆ ಖಡಕ್ ಸೂಚನೆ:
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಂಪುಟದ ಸಹದ್ಯೋಗಿಗಳು ಪಕ್ಷದ ಕಚೇರಿ ಕಡೆಗೆ ಸುಳಿಯದೆ, ಕಾರ್ಯಕರ್ತರ ಸಮಸ್ಯೆಗಳನ್ನು ಸರಿಯಾಗಿ ಆಲಿಸದೆ ಇದ್ದಾಗ, ಜನಾರ್ಧನ ಪೂಜಾರಿ ಅವರು ಸಂಪುಟದ ಪ್ರತಿಯೊಬ್ಬ ಸಚಿವರು ಪಕ್ಷದ ಕಚೇರಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಕಾರ್ಯಕರ್ತರ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸಬೇಕು. ಜತೆಗೆ ಪ್ರವಾಸ ವೇಳೆ ಜಿಲ್ಲಾ ಕಚೇರಿಗಳಿಗೂ ಭೇಟಿ ನೀಡಬೇಕು ಎನ್ನುವ ಖಡಕ್ ಸೂಚನೆ ನೀಡಿದ್ದರು.
ನಂಟು ಬಿಡಲಾರೆ:
ಬಹುಶಃ ಇವರ ಬಳಿಕ ಕೆಪಿಸಿಸಿ ಸಾರಥ್ಯ ವಹಿಸಿದವರು ಪಕ್ಷದ ಕಾರ್ಯಕರ್ತರ ಬಗೆಗೆ ಕಾಳಜಿ ವಹಿಸಿರುವ ಉದಾಹರಣೆ ಇಲ್ಲ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೆಪಿಸಿಸಿ ಸಾರಥ್ಯ ವಹಿಸಿದಾಗಿನಿಂದಲೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು, ಸಂಘಟನೆಯಲ್ಲಿ ಅವರನ್ನು ತೊಡಗಿಸಿಕೊಂಡಿದ್ದರು. ಈಗ ಅವರು ರಾಜ್ಯದ ಮುಖ್ಯಮಂತ್ರಿ. ಈಗಾಗಲೇ ಅವರು ಮುಖ್ಯಮಂತ್ರಿ ಆದರೂ ಅಷ್ಟು ಸಲೀಸಲಾಗಿ ಕಚೇರಿ ನಂಟು ಬಿಡುವುದಿಲ್ಲ ಎಂದು ಹೇಳಿ ಆಗಿದೆ.
ಕೇಂದ್ರದಿಂದ ರಾಜ್ಯಕ್ಕೆ:
ಹಾಗೆ ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ತಮ್ಮ ಹೆಚ್ಚಿನ ರಾಜಕಾರಣವನ್ನು ರಾಷ್ಟ್ರ ಮಟ್ಟಕ್ಕೆ ಸೀಮಿತಗೊಳಿಸಿ ಪಕ್ಷದ ಸಿದ್ಧಾಂತಕ್ಕೆ ಕಟ್ಟು ಬಿದ್ದು ಕೆಲಸ ಮಾಡಿದವರು. ಕಳೆದ ಆರು ವರ್ಷಗಳ ಹಿಂದೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಸಮರ್ಥವಾಗಿ ಸಂಘಟಿಸುವ ಮೂಲಕ ಅಹಿಂದ ಮತಬ್ಯಾಂಕ್ ಗಟ್ಟಿಗೊಳಿಸಬೇಕು ಎನ್ನುವ ಉದ್ದೇಶದಿಂದಲೆ ರಾಹುಲ್ ಗಾಂಧಿ ಇವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸಿ ಮೇಲ್ಮನೆ ಸದಸ್ಯರಾಗಿಸಿದ್ದರು. ಈ ವೇಳೆ ಅವರು ಮೇಲ್ಮನೆ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡುತ್ತ ರಾಜ್ಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವ ಕೆಲಸ ಮಾಡಿದವರು.
ಕಿವಿ ಹಿಂಡುವ ಕೆಲಸ:
ಮೇಲ್ಮನೆ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿದ್ದರೂ ಮತ್ತೊಂದು ಅವಧಿಗೆ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡುವ ಮೂಲಕ ಕೆಪಿಸಿಸಿ ಸಾರಥ್ಯ ವಹಿಸಿದ್ದಾರೆ. ಪಕ್ಷದ ಸಿದ್ಧಾಂತಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತ, ಪ್ರತಿಪಕ್ಷಗಳನ್ನು ಅತ್ಯಂತ ಸಮರ್ಥವಾಗಿ ಹಣಿಯುತ್ತಿದ್ದಾರೆ. ರಾಷ್ಟ್ರ ಮಟ್ಡದಲ್ಲಿ ಕೆಲಸ ಮಾಡಿರುವ ಇವರ ಸುತ್ತ ಸದ್ಯ ಯಾವುದೇ ಪಟಾಲಂ ಪಡೆಯಿಲ್ಲ. ರಾಜ್ಯ ರಾಜಕಾರಣದಲ್ಲಿ ಸಕ್ರೀಯವಾಗಬೇಕಿರುವ ಇವರು ರಾಜ್ಯದಾದ್ಯಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಪ್ರೀತಿ, ವಿಶ್ವಾಸ ಗಳಿಸಬೇಕಿದೆ.
ಹೌದಪ್ಪ ನೀತಿಗೆ ಶರಣಾಗದೆ, ಸಮಯ ಬಂದಾಗ ಸರ್ಕಾರದ ಕಿವಿ ಹಿಂಡುವ ಕೆಲಸಕ್ಕೆ ಅಣಿಯಾಗಬೇಕಿದೆ. ಆ ನಿಟ್ಟಿನಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ ಎನ್ನುವ ಅಚಲ ವಿಶ್ವಾಸ ಪಕ್ಷದ ವರಿಷ್ಠರಲ್ಲಿದೆ. ಅಂತಹುದೇ ವಿಶ್ವಾಸವನ್ನು ಕಾರ್ಯಕರ್ತರಲ್ಲೂ ಮೂಡಿಸುವ ಮೂಲಕ ಪಕ್ಷವನ್ನು 2028 ರಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತವಾಗಿ ಕಾಯೋನ್ಮುಖರಾಗಬೇಕಿದೆ.
ಪೂಜಾರಿ ಪ್ರದೇಶದವರು:
ಹಿರಿಯ ಕಾಂಗ್ರೆಸ್ಸಿಗ ಜನಾರ್ಧನ ಪೂಜಾರಿ ಅವರು ರಾಷ್ಟ್ರ ರಾಜಕಾರಣ ಮಾಡಿಕೊಂಡು, ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿ, ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯ ರಾಜಕಾರಣ ಮಾಡಿದವರು. ಅವರದೇ ಪ್ರದೇಶದಿಂದ ಬಂದಿರುವ ಹರಿಪ್ರಸಾದ ಕೂಡ ರಾಷ್ಟ್ರ ರಾಜಕಾರದಿಂದ ರಾಜ್ಯ ರಾಜಕಾರಣಕ್ಕೆ ಬಂದವರು. ಇದೀಗ ಕೆಪಿಸಿಸಿ ಸಾರಥ್ಯ ವಹಿಸಿಕೊಂಡಿದ್ದಾರೆ. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸುವ ಮಹತ್ತರ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಆ ಮೂಲಕ ಪಕ್ಷದ 2028 ರ ಗುರಿಯನ್ನು ತಲುಪಿಸಬೇಕಿದೆ. ಸರ್ಕಾರ ಮತ್ತು ಕಾರ್ಯಕರ್ತರ ನಡುವೆ ಹೇಗೆ ಸಮನ್ವಯ ಸಾಧಿಸುವರು ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




