ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆಯ ಪ್ರದೇಶಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿರುವುದು ಇದೆ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದೆ. ಆದರೂ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಮುಂದುವರಿದಿದೆ. ಜಿಲ್ಲೆಯ ನದಿ, ಹಳ್ಳಕೊಳ್ಳ, ನದಿ ದಂಡೆ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಎತ್ತುವ ದಂಧೆ ಎಷ್ಟೆ ನಿರ್ಬಂಧಗಳ ನಡುವೆಯೂ ನಡೆಯುತ್ತಿರುವ ಇಲ್ಲಿನ ಪ್ರಭಾವಿ ಜನಪ್ರತಿನಿಧಿಗಳು ಹಾಗೂ ಅವರ ಹಿಂಬಾಲಕರ ಕುಮ್ಮಕ್ಕು ಕಾರಣ ಎನ್ನುವ ಆರೋಪ ವ್ಯಾಪಕವಾಗಿದೆ.
ಸುದ್ದಿಯಾದಾಗ ಸದ್ದು:
ಅಕ್ರಮ ಮರಳು ದಂಧೆಯ ಕುರಿತು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಳ್ಳುವ ಜಿಲ್ಲಾಡಳಿತ ನೆಪಕ್ಕೆ ಎನ್ನುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಮೌನಕ್ಕೆ ಶರಣಾಗಿ ಬಿಡುತ್ತದೆ. ಜಿಲ್ಲಾಡಳಿತದ ದಾಳಿ ನಡೆದು ವಾರವೂ ಕಳೆದಿರುವುದಿಲ್ಲ. ಮತ್ತೆ ನದಿಗಳ, ಹಳ್ಳಗಳ ಒಡಲಲ್ಲಿ ಜೆಸಿಬಿ ಯಂತ್ರಗಳ ಸದ್ದು ಆರಂಭಗೊಳ್ಳುತ್ತದೆ. ಜನಪ್ರತಿನಿಧಿಗಳು ಹಾಗೂ ಅವರ ಹಿಂಬಾಲಕರ ಕುಮ್ಮಕ್ಕು ಇದಕ್ಕೆ ಕಾರಣ. ಅವರ ಬೆಂಬಲವಿಲ್ಲದೆ ಅಕ್ರಮ ಮರಳು ದಂಧೆ ನಡೆಯದು ಎನ್ನುವುದು ಜನಸಾಮಾನ್ಯರ ದೂರಾಗಿದೆ.
ಹಫ್ತಾ ವಸೂಲಿ:
ಅಕ್ರಮ ಮರಳು ದಂಧೆಯಲ್ಲಿ ಅಪಾರ ಪ್ರಮಾಣದ ಹಫ್ತಾ ವಸೂಲಿ ಆಗುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾಗಿವೆ. ಆದರೆ ಅದು ಯಾರ ಯಾರ ಜೇಬಿಗೆ ಸೇರುತ್ತದೆ ಎನ್ನುವುದನ್ನೂ ಜನ ಸಹವಾಗಿಯೇ ಹೇಳುತ್ತಾರೆ. ಅವರು ಹೇಳುವ ಪಟ್ಟಿಯಲ್ಲಿ ಬರಿ ಗಣ್ಯರ ಹೆಸರುಗಳ ಇರುತ್ತವೆ. ಜಿಲ್ಲೆಯ ಪ್ರಭಾವಿ ಮುಖಂಡರೆ ದಂಧೆಯಲ್ಲಿ ಭಾಗಿಯಾಗಿರುವಾಗ ಅಧಿಕಾರಿಗಳು ಎಷ್ಟೆ ತಿಪ್ಪರಲಾಗಾ ಹಾಕಿದರೂ ನಿಲ್ಲದು. ಇದು ಒಂದು ರೀತಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಸ್ಥಿತಿ ಇದೆ.
ತಿಮಿಂಗಲುಗಳು ಸೇಫ್:
ಜಿಲ್ಲಾಡಳಿತ ಅಕ್ರಮ ಮರಳು ದಂಧೆ ನಡೆಯುವ ಪ್ರದೇಶಗಳ ಮೇಲೆ ದಾಳಿ ನಡೆಸಿದಾಗ ಅವರ ಬಲೆಗೆ ಬರಿ ಸಣ್ಣಪುಟ್ಟ ಮೀನುಗಳು ಮಾತ್ರ ಬೀಳುತ್ತವೆ. ಅವುಗಳ ಮೇಲೆ ಕೇಸ್ ಜಡಿದು ಸುಮ್ಮನಾಗುತ್ತದೆ. ದಂಧೆಯ ಹಿಂದಿನ ಪ್ರಭಾವಿ ಕೈಗಳ ಪತ್ತೆ ಉಸಾಬರಿಗೆ ಜಿಲ್ಲಾಡಳಿತ ಹೋಗುವುದೆ ಇಲ್ಲ. ನಮಗೆಕೆ ಇಲ್ಲದ ಉಸಾಬರಿ ಎನ್ನುವ ಮನೋಸ್ಥಿತಿ ಪ್ರದರ್ಶಿಸಿಸುತ್ತದೆ.
ಅಕ್ರಮ ಮರಳು ದಂಧೆಯ ಪ್ರದೇಶಗಳ ಮೇಲಿನ ದಾಳಿ ಎನ್ನುವುದು ಹೇಗಾಗಿದೆ ಎಂದರೆ, ಹೆಗ್ಗಣಗಳನ್ನು ಗುದ್ದಿನಲ್ಲೆ ಇಟ್ಟು ಮಣ್ಣು ಹಾಕಿ ಮುಚ್ಚುವ ಕೆಲಸದಂತೆ ಆಗುತ್ತಿದೆ. ಒಳಗಿರುವ ಹೆಗ್ಗಣ ಸ್ವಲ್ಪ ಸಮಯದಲ್ಲಿ ಮಣ್ಣು ಸರಿಸಿ ಹೊರಬಂದಂತೆ ಮರಳು ದಂಧೆ ಕೊರರು ಮತ್ತೆ ತಮ್ಮ ಕಾಯಕ ಆರಂಭಿಸಿ ಬಿಡುತ್ತಾರೆ.
ಸಂಪತ್ತಿನ ಲೂಟಿ:
ಜಿಲ್ಲೆಯಲ್ಲಿ ಯಾರು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಿದೆಯೋ ಅವರ ಕುಮ್ಮಕ್ಕಿನಿಂದಲೇ ನಿರಂತರವಾಗಿ ನಡೆಯುತ್ತಿರುವುದರಿಂದ ಇಲ್ಲಿನ ಪ್ರಾಕೃತಿಕ ಸಂಪತ್ತಿನ ಲೂಟಿ ನಿರಂತರವಾಗಿ ನಡೆಯುತ್ತಲೇ ಇದೆ. ಹಾಗಾಗಿಯೇ ನದಿ, ಹಳ್ಳಕೊಳ್ಳಗಳು ಮಳೆಗಾಲದಲ್ಲಿ ದಿಕ್ಕುತಪ್ಪಿ ಹರಿಯುತ್ತಿವೆ. ಜತೆಗೆ ಅಕ್ರಮ ಮರಳು ದಂಧೆಯಿಂದ ಸರ್ಕಾರಕ್ಕೆ ಬರಬೇಕಿರುವ ಕೋಟ್ಯಂತರ ರೂಪಾಯಿ ರಾಜಸ್ವ ಧನಕ್ಕೂ ಕೊಕ್ಕೆ ಬಿದ್ದಿದೆ.
ಕಡಿವಾಣವಿಲ್ಲ ಕುದುರೆ:
ಈ ಕುರಿತು ನೀವು ಜನಪ್ರತಿನಿಧಿಗಳನ್ನು ಮಾತನಾಡಿಸಿ ನೋಡಿ, ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಕಳ್ಳರು ಎಲ್ಲಿಯೇ ಇದ್ದರೂ ಅವರನ್ನು ಮಟ್ಟ ಹಾಕುತ್ತಾರೆ ಎನ್ನುವ ಸಿದ್ದ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತವಾಗಲಿ, ಲೋಕಾಯುಕ್ತವಾಗಲಿ ಅಕ್ರಮ ಮರಳು ದಂಧೆಕೊರರ ಮಟ್ಟ ಹಾಕುವ ಕೆಲಸಕ್ಕೆ ಮುಂದಾದರೂ ಪ್ರಯೋಜನವಾಗದು ಎನ್ನುವ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ. ಎಲ್ಲಿಯವರೆಗೂ ಅಕ್ರಮ ಮರಳು ದಂಧೆಕೋರರಿಗೆ ಕುಮ್ಮಕ್ಕು ನೀಡುವ ತಿಮಿಂಗಲುಗಳನ್ನು ಹಿಡಿಯುವ ಕೆಲಸ ನಡೆಯುವುದಿಲ್ಲವೋ ಅಲ್ಲಿಯವರೆಗೂ ಅಕ್ರಮ ಮರಳು ದಂಧೆ ಯಾವ ಕಡಿವಾಣವಿಲ್ಲದೆ ನಡೆಯತ್ತಲೇ ಇರುತ್ತದೆ.
- ವಿಠ್ಠಲ ಆರ್. ಬಲಕುಂದಿ




