ರಾಜ್ಯದ ಪ್ರಬಲ ಸಮುದಾಯವೊಂದರ ಬೇರೆ ಬೇರೆ ಪಕ್ಷಗಳ ಇಬ್ಬರು ಮುಖಂಡರು ಎರಡು ರಾಷ್ಟ್ರೀಯ ಪಕ್ಷಗಳ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಅದೃಷ್ಟ ಇಬ್ಬರ ಪಾಲಿಗೂ ಒಲಿಯುವುದೋ ಹೇಗೆ ಎನ್ನುವ ಕುತೂಹಲ ತೀವ್ರಗೊಂಡಿದೆ.
ಕೆಪಿಸಿಸಿ ಸ್ಥಾನಕ್ಕೆ ಸತೀಶ್:
ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಯ್ದು ಕುಳಿತಿದ್ದಾರೆ. ಇಂದೊ ನಾಳೆಯೋ ಈ ಬಗೆಗೆ ಪಕ್ಷದ ವರಿಷ್ಠರು ಒಂದು ನಿರ್ಧಾರ ಪ್ರಕಟಿಸುವ ನಿರೀಕ್ಷೆಯಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ಡಿ.ಕೆ. ಶಿವಕುಮಾರ ಬಂದಲ್ಲಿ, ಅವರಿಂದ ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮ್ಮದಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮಂತ್ರಿಸ್ಥಾನ ತ್ಯಾಗಕ್ಕೂ ಅವರು ಸಿದ್ಧರಾಗಿದ್ದಾರೆ.
ರಾಜಕೀಯ ಮುಂದಾಲೋಚನೆ:
ಮುಂಬರುವ 2028 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಬಹುಮತದೊಂದಿಗೆ ಗೆಲ್ಲಿಸಿಕೊಂಡು ಮುಖ್ಯಮಂತ್ರಿ ಆಗುವ ಆಲೋಚನೆಯಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದಲ್ಲಿ, ಸಿದ್ದರಾಮಯ್ಯ ನೇತೃತ್ವದ ಅಹಿಂದ್ ಚಳುವಳಿಗೂ ಹೆಚ್ಚಿನ ಬಲ ತುಂಬುವ ಉದ್ದೇಶ ಹೊಂದಿದ್ದಾರೆ. ಒಂದು ಕಡೆ ಪಕ್ಷ ಸಂಘಟನೆ , ಇನ್ನೊಂದು ಕಡೆ ಅಹಿಂದ ಸಂಘಟನೆ ಮೂಲಕ ಮುಂದಿನ ತಮ್ಮ ಗುರಿ ಸಾಧನೆಗೆ ಅವರು ಸಜ್ಜಾಗಿದ್ದಾರೆ. ಪಕ್ಷ ಅವಕಾಶ ಕೊಟ್ಟಲ್ಲಿ ಕೆಪಿಸಿಸಿ ಹುದ್ದೆ ನಿರ್ವಹಿಸುವ ಮಾತನ್ನೂ ಆಡಿದ್ದಾರೆ. ಕಾಂಗ್ರೆಸ್ ವರಿಷ್ಠರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗೆಗೆ ಇಷ್ಟರಲ್ಲೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷತೆಗೆ ಶ್ರೀರಾಮುಲು:
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರು ಮೊನ್ನೆ ತಾನೆ ರಾಜ್ಯಕ್ಕೆ ಆಗಮಿಸಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಪಶ್ಚಿಮ ಬಂಗಾಳ ಮಾದರಿಯಲ್ಲಿ ಎದುರಿಸಿ, ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕಿದೆ. ಪಕ್ಷದ ರಾಜ್ಯ ನಾಯಕರು ಆ ನಿಟ್ಟಿನಲ್ಲಿ ಸಂಘಟನೆಯಲ್ಲಿ ಸಕ್ರಿಯರಾಗುವಂತೆ ಕಿವಿಮಾತು ಹೇಳಿ ಹೋಗಿದ್ದಾರೆ.
ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷರ ನೇಮಕದ ಬಗೆಗೂ ಅವರು ಮಾತನಾಡಿದ್ದು, ವರಿಷ್ಠರೊಂದಿಗೆ ಮಾತುಕತೆ ನಡೆಸಿ ಅಧ್ಯಕ್ಷರ ಹೆಸರು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ನಿತಿನ್ ನಬಿನ್ ಅವರು ರಾಜ್ಯಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರೂ ರಾಜ್ಯಕ್ಕೆ ಭೇಟಿ ನೀಡಿ, ಪಕ್ಷದ ಸಂಘಟನೆ ಬಗೆಗೆ ಮಾತನಾಡಿ ಹೋಗಿದ್ದಾರೆ. ಈ ವೇಳೆ ನಡೆದ ರಾಜ್ಯಾಧ್ಯಕ್ಷರ ನೇಮಕದ ಚರ್ಚೆ ಸದ್ಯ ರಾಜ್ಯ ಬಿಜೆಪಿಯಲ್ಲಿ ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ. ರಾಜ್ಯಾಧ್ತಕ್ಷರ ನೇಮಕದ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ನಡೆದು, ಅಭಿಪ್ರಾಯ ಸಂಗ್ರಹಣೆ ಕೂಡ ನಡೆದಿದೆ.
ಅಧ್ಯಕ್ಷ ಗಾದಿಗೆ ಹಲವು ಹೆಸರು:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅವರ ಪುತ್ರ, ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಂದುವರಿಸುವುದು ಸೇರಿದಂತೆ ಹೊಸಬರ ನೇಮಕದ ಬಗೆಗೆ ಚರ್ಚೆಗಳು ನಡೆದಿವೆ. ಈ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿ ವಿ. ಸೋಮಣ್ಣ, ಮಾಜಿ ಸಚಿವ ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದು, ಸದ್ಯ ಗೋವಿಂದ ಕಾರಜೋಳ ಮತ್ತು ಬಿ. ಶ್ರೀರಾಮುಲು ಅವರ ಹೆಸರು ಸಾಕಷ್ಟು ಮುನ್ನೆಲೆಗೆ ಬಂದಿವೆ.
ಒಟ್ಟಾರೆ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ರಾಜ್ಯದ ಪ್ರಬಲ ಸಮುದಾಗಳಲ್ಲೊಂದಾದ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ಕೇಳಿ ಬರುತ್ತಿದ್ದರೆ, ಅತ್ತ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಾಲ್ಮೀಕಿ ಸಮುದಾಯದ ಇನ್ನೋರ್ವ ಮುಖಂಡ ಬಿ. ಶ್ರೀರಾಮುಲು ಅವರ ಹೆಸರುಗಳು ಓಡಾಡುತ್ತಿದೆ.
ಕಾಕ ತಾಳಿಯ ಎನ್ನುವಂತೆ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ಸಮುದಾಯಕ್ಕೆ ಸೇರಿರುವ ಮುಖಂಡರಿಗೆ ಮಣೆ ಹಾಕುತ್ತಾರೋ ಹೇಗೆ ಎನ್ನುವುದು ಬಹುತೇಕರನ್ನು ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ. ಹಾಗಾಗಿ ಉಭಯ ಮುಖಂಡರ ರಾಜಕೀಯ ಅದೃಷ್ಟ ಹೇಗಿದೆ ಎನ್ನುವುದಕ್ಕೆ ಇನ್ನಷ್ಟು ಸಮಯ ಕಾಯಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




