ನೀರುಕಾರಣ ಬಿಡಿ; ಕೃಷ್ಣೆಯ ಮಕ್ಕಳಿಗೆ ನೀರು ಕೊಡಿ

ಬತ್ತಿ ಬರಿದಾದ ಕೃಷ್ಣೆಯ ಒಡಲಿಗೆ ಮಹಾರಾಷ್ಟ್ರದಿಂದ ಒಂದಿಷ್ಟು ನೀರು‌ ಬಿಡಿಸಿ, ಜನ- ಜಾನುವಾರುಗಳಿಗೆ ಕುಡಿವ ನೀರಿನ ದಾಹ ತಣಿಸಿ ಎನ್ನುವ ಕೃಷ್ಣೆಯ ಮಕ್ಕಳ ಮನದಾಳದ ಕೂಗಿಗೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಪಲಾಯನವಾದಕ್ಕೆ ಶರಣಾಗಿದ್ದಾರೆ. ಸಚಿವರ ಹೇಳಿಕೆ ಜನರಲ್ಲಿ ಸಾಕಷ್ಟು ಬೇಸರವನ್ನು ಮೂಡಿಸಿದೆಯಾದರೂ ಪ್ರತಿಪಕ್ಷ ಬಿಜೆಪಿ ಶಾಸಕರು ಹಾಗೂ ಮುಖಂಡರು ಯಾವುದೇ ಪ್ರತಿರೋಧ ವ್ಯಕ್ತ ಪಡಿಸದೇ ಮೌನಕ್ಕೆ ಶರಣಾಗಿರುವುದರಿಂದ ಜನ- ಜಾನುವಾರುಗಳು ಕುಡಿವ ನೀರಿನ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ.

ಬೇಕಿದೆ ಜನಕಾಳಜಿ:

ಜಿಲ್ಲೆಯಲ್ಲಿ ಐವರು ಶಾಸಕರು, ರಾಜ್ಯದಲ್ಲಿ ಸರ್ಕಾರ ಇಟ್ಟುಕೊಂಡವರು ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಬಿಡಿಸಿಕೊಂಡು ಬರಬೇಕು. ಅದು ಬಿಟ್ಟು, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಅವರು ಹೋಗಿ ” ಮಹಾ” ಸರ್ಕಾರದಿಂದ ನೀರು ಬಿಡಿಸಿಕೊಂಡು ಬರಲಿ ಎನ್ನುವ ಮಾತುಗಳನ್ನು ಆಡಿರುವುದು, ಸಚಿವರ ಜನ ಸಮುದಾಯದ ಕಾಳಜಿ ಎಷ್ಟು ಎನ್ನುವುದಕ್ಕೆ ಸಾಕ್ಷಿ ಆಗಿದೆ.

ನೀರು ಬಂದರೆ ನೆಮ್ಮದಿ:

ಕೃಷ್ಣೆ ಬತ್ತಿರುವುದರಿಂದ ಜನ- ಜಾನುವಾರು ಗಳಿಗೆ ಕುಡಿವ ನೀರಿನ ಅಗತ್ಯವಿದೆ. ಕನಿಷ್ಠ ಪಕ್ಷ ಮಳೆಗಾಲ ಆರಂಭಗೊಂಡು, ನದಿಗೆ ನೀರು ಬರುವವರೆಗಾದರೂ ನೀರು ಬೇಕಿದೆ. ಮಹಾರಾಷ್ಟ್ರ ನೀರು ಬಿಟ್ಟರೆ ಮಾತ್ರ ನದಿ ತೀರದ ಜನತೆ- ಜಾನುವಾರುಗಳು ನೆಮ್ಮದಿಯಿಂದರಲು ಸಾಧ್ಯವಾಗಲಿದೆ. ಇಲ್ಲದೆ ಹೋದಲ್ಲಿ ಸಮಸ್ಯೆ ತಪ್ಪಿದ್ದಲ್ಲ. ನೀರು ಬಿಡಿಸಿಕೊಳ್ಳುವ ವಿಷಯದಲ್ಲಿ ರಾಜಕೀಯ ಮಾಡುವುದು ಬಿಟ್ಟು, ಮೊದಲು ನೀರು ಕೊಡುವ ಕೆಲಸ ಮಾಡಬೇಕಿದೆ.

ನೀರು ಬಿಟ್ಟ ನಿದರ್ಶನವಿಲ್ಲ:

ಅಂದ ಹಾಗೆ ಮಹಾರಾಷ್ಟ್ರ ಯಾವತ್ತು ಕೇಳಿದ ಕೂಡಲೇ ನೀರು ಬಿಟ್ಟ ನಿದರ್ಶನಗಳೇ ಇಲ್ಲ. ಎಷ್ಟೆ ನೀರಿನ ತೊಂದರೆ ಇದ್ದರೂ, ಕರ್ನಾಟಕ ಸರ್ಕಾರ ಅದೆಷ್ಟೆ ಮನವಿ ಮಾಡಿದರೂ ನೀರು‌ ಬಿಟ್ಟಿಲ್ಲ. ಮಳೆಗಾಲ ಆರಂಭಗೊಂಡು ನದಿಗೆ ನೀರು ಬಂದಾಗಲೇ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಈಗ ಪರಿಸ್ಥಿತಿ ಹಾಗಿಲ್ಲ. ನದಿಯ ಒಡಲಲ್ಲಿ ಹನಿ‌ ನೀರು ಇಲ್ಲ. ನೀರು ಬಿಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಇಂತಹ ಸನ್ನಿವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿರುವ ಇಬ್ಬರು ಬಿಜೆಪಿ ಶಾಸಕರು ಹೋಗಿ ನೀರು ಬಿಡಿಸಿಕೊಂಡು ಬರಲಿ ಎಂದು‌ ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಹೈನುಗಾರಿಕೆ ನಂಬಿ‌ ಬದುಕು:

ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಮಹಾರಾಷ್ಟ್ರದಿಂದ ನೀರು ಬಿಡಿಸಿಕೊಳ್ಳುವ ಪ್ರಯತ್ನ‌ ಸರ್ಕಾರ ಮಟ್ಟದಲ್ಲೆ ಆಗಬೇಕಿದೆ. ಹೈನುಗಾರಿಕೆಗೆ ಹೆಸರಾಗಿರುವ ಜಮಖಂಡಿ ಭಾಗದ ನದಿ ತೀರದ ಪ್ರದೇಶ ತೀರ ತೊಂದರೆಗೆ ಒಳಗಾಗುವ ಮುನ್ನ ನೀರು ತಂದು ಅವರನ್ನು ಉಳಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಉಸ್ತುವಾರಿ‌ ಸಚಿವರು ಮುಂದಾಗಬೇಕಿದೆ.

ಹೋರಾಟ ಅನಿವಾರ್ಯ:

ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರದಿಂದ ಕುಡಿವ ನೀರಿನ ಉದ್ದೇಶಕ್ಕಾಗಿ ನೀರು ಬಿಡಿಸಿಕೊಳ್ಳುವ ಪ್ರಯತ್ನ ಮಾಡದೆ ಹೋದಲ್ಲಿ ಜನತೆಗೆ ಹೋರಾಟ ಅನಿವಾರ್ಯವಾಗಲಿದೆ.‌ ಜನ ಹೋರಾಟಕ್ಕೆ ಇಳಿಯುವ ಮುನ್ನ ಆಡಳಿತ ಹಾಗೂ ಪ್ರತಿಪಕ್ಷಗಳು ಎಚ್ಚೆತ್ತುಕೊಳ್ಳಬೇಕಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top