ಸಿದ್ದರಾಮಯ್ಯ ರಾಜೀನಾಮೆ: ತಿಮ್ಮಾಪುರ ಕಣ್ಣಿರಿನ ರೋಚಕ ಕಥೆ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾಜೀನಾಮೆ ನೀಡುವುದಾಗಿ ಪ್ರಕಟಿಸುತ್ತಿದ್ದಂತೆ ಭಾವುಕರಾಗಿ ಕಣ್ಣಿರು ಹಾಕಿದವರಲ್ಲಿ ಮಾಜಿ ಆಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕೂಡ ಒಬ್ಬರು. ಇತರರು ಕಣ್ಣಿರು ಹಾಕಿರುವುದರ ಹಿಂದೆ ಒಂದೊಂದು ಕಾರಣಗಳಿವೆ. ಆದರೆ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಕಣ್ಣಿರಿನ ಹಿಂದೆ ರೋಚಕವಾದ ಕಥೆ ಇದೆ.

ಹ್ಯಾಟ್ರಿಕ್ ಸೋಲು:

1999 ರಿಂದ 2004 ರ ವರೆಗಿನ ಎಸ್. ಎಂ.ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿ ಆಗಿದ್ದ ಯಂಗ್ ಟಕ್೯ ಆರ್.ಬಿ.‌ ತಿಮ್ಮಾಪುರ 2004 , 2008 ಮತ್ತು 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಸತತ ಸೋಲು ಕಂಡಿದ್ದರು. ಇನ್ನೆನು ತಿಮ್ಮಾಪುರ ಅವರ ರಾಜಕೀಯ ಭವಿಷ್ಯವೇ ಮುಗಿಯಿತು ಎನ್ನುವ ಷರಾ ಬರೆದ ಹಾಗೆ ವ್ಯಾಪಕ ಮಾತುಗಳು ಕೇಳಿ ಬಂದವು. ಬಹಶಃ ಅವರೂ ಕೂಡಾ ರಾಜಕಾರಣದಲ್ಲಿ ತಮಗೊಂದು ಯೂಟನ್೯ ಸಿಗಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಕ್ಕಿಲ್ಲ.

ಪರಿಷತ್ತಿಗೆ ನೇಮಕ:

ಇಂತಹ ಸನ್ನಿವೇಶದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹ್ಯಾಟ್ರಿಕ್ ಸೋಲುಗಳಿಂದ ಸಾಕಷ್ಟು ಬೇಸರಗೊಂಡಿದ್ದ ತಿಮ್ಮಾಪುರ ಅವರು ಎಂದೂ ಪಕ್ಷ ಸಂಘಟನೆಯಿಂದ ವಿಮುಖಗೊಂಡರಲಿಲ್ಲ. ತಮ್ಮ ಕ್ಷೇತ್ರದಲ್ಲಿ ತಾವು ಸೋತರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುತ್ತಿದ್ದರು. ಪಕ್ಷ ಸಂಘನೆಯಲ್ಲಿ ಅವರ ಸಕ್ರಿಯ ತೊಡಗುವಿಕೆಯನ್ನು ಮನಗಂಡ ಸಿದ್ದರಾಮಯ್ಯ ಅವರು ಇವರನ್ನು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮೇಲ್ಮನೆಗೆ ಆಯ್ಕೆ ಮಾಡಿ ಕಳುಹಿಸಿಕೊಟ್ಟರು.

ಮಂತ್ರಿಸ್ಥಾನದ ಯೋಗ:

ಸತತ ಮೂರು ವಿಧಾನ ಸಭೆ ಚುನಾವಣೆಗಳ ಹ್ಯಾಟ್ರಿಕ್ ಸೋಲಿನಿಂದ ರಾಜಕೀಯವಾಗಿ ಕಂಗೆಟ್ಟು ಹೋಗಿದ್ದ, ತಿಮ್ಮಾಪುರ ಅವರಿಗೆ ಸಿದ್ದರಾಮಯ್ಯ ಅವರ ಸಹಕಾರದಿಂದ ಮೇಲ್ಮನೆಗೆ ಆಯ್ಕೆಗೊಂಡಿದ್ದು ” ನದಿಯಲ್ಲಿ ಮುಳುಗಿ ಹೋಗುತ್ತಿದ್ದ ವ್ಯಕ್ತಿಗೆ ಹುಲ್ಲು ಕಡ್ಡಿ ಆಸರೆ ” ಎನ್ನುವಂತೆ ರಾಜಕೀಯ ಪುನರ್ ಜನ್ಮ ಸಿಕ್ಕಂತಾಯಿತು. ಮೇಲ್ಮನೆ ಆಯ್ಕೆಗೊಂಡ ಅವರಿಗೆ ಯೋಗಾಯೋಗ ಎನ್ನುವಂತೆ ಮಂತ್ರಿಸ್ಥಾನದ ಅವಕಾಶವೂ ಕೂಡಿ ಬಂದಿತು. ಅಬಕಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಟಿಕೆಟ್ ನಿರಾಕರಣೆ:

2018 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಇವರಿಗೆ ವಿಧಾನ ಸಭೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿತು. ಆಗ. ಸತೀಶ್ ಬಂಡಿವಡ್ಡರ ಅವರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ತಿಮ್ಮಾಪುರ ಅವರಿಗೆ ನೀಡಿತಾದರೂ ಬಿಜೆಪಿ ಗಾಳಿಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ‌ ಮುಗ್ಗರಿಸಿತು. 2018 ರಲ್ಲಿ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ಚಕ್ಕೆ ಬಂದಿತು. ಆಗ ತಿಮ್ಮಾಪುರ ಅವರು ಮೇಲ್ಮನೆ ಸದಸ್ಯರಾಗಿ ಇದ್ದದ್ದರಿಂದ ಮತ್ತೆ ಮಂತ್ರಿಗಿರಿಯ ಅದೃಷ್ಟ ಇವರನ್ನು ಹುಡುಕಿಕೊಂಡು ಬಂದಿತು. ಆಗ ಎಚ್. ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಕ್ಕರೆ ಸಚಿವರಾದರು.

ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವು:

2023 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತು. ಬಿಜೆಪಿ ಆಡಳಿತ ವಿರೋಧಿಯಲ್ಲಿ ಸತತ ನಾಲ್ಕುಬಾರಿ ಗೆಲುವಿನ ದಾಖಲೆ ನಿರ್ಮಿಸಿದ್ದ ಗೋವಿಂದ‌ ಕಾರಜೋಳರನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದರು.

ಆರೋಪಗಳ ಸುರಿಮಳೆ:

ಮುಖ್ಯಮಂತ್ರಿ ಸಿದ್ದರಾಮಯ್ಯ‌ ನೇತೃತ್ಚದ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಮ್ಮೆ ಅಬಕಾರಿ ಸಚಿವರಾಗಿ ನೇಮಕಗೊಂಡರು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅವರ ದಾರಿ ಸುಗಮವಾಗಿರಲಿಲ್ಲ. ಇಲಾಖೆಯಲ್ಲಿನ ಭ್ರಷ್ಟಾಚಾರ ಹಗರಣಗಳ ಆರೋಪ, ಲಂಚದ ಆರೋಪಗಳು ಇವರ ವಿರುದ್ಧ ಸಾಮಾನ್ಯ ಎನ್ನುವಂತಾಗಿದ್ದವು. ಭ್ರಷ್ಟಾಚಾರ ಆರೋಪಗಳು ವ್ಯಾಪಕವಾಗಿ‌ ಕೇಳಿ ಬಂದು, ಇನ್ನೆನು ಕಾಂಗ್ರೆಸ್ ವರಿಷ್ಠರು ಇವರನ್ನು ಮಂತ್ರಿಸ್ಥಾನದಿಂದ ತೆಗೆಯುತ್ತಾರೆ ಎನ್ನುವ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ನೆರವಿಗೆ ಧಾವಿಸಿ, ರಾಜೀನಾಮೆಯ ತೂಗುಗತ್ತಿಯಿಂದ ಇವರನ್ನು ಬಚಾವ್ ಮಾಡಿದ್ದರು ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಇವರ ಇಲಾಖೆಯಲ್ಲಿ ಭಷ್ಟಾಚಾರ ಆರೋಪ ಕೇವಲ ರಾಜ್ಯದಲ್ಲಷ್ಟೆ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿತ್ತು.

ರಕ್ಷಕ ರಾಮಯ್ಯ:

2013ರ ವಿಧಾನ ಸಭೆ ಚುನಾವಣೆ ಬಳಿಕ ಇಷ್ಠಲ್ಲ ಏರಿತಗಳು ನಡೆದ ವೇಳೆ “ಅರ್ಜುನನಿಗೆ ಕೃಷ್ಣ ಪರಮಾತ್ಮ ಸದಾ ರಕ್ಷಕನಾಗಿ ನಿಂತಂತೆ” ಸಿದ್ದರಾಮಯ್ಯ ಅವರು ಸದಾ ಇವರಿಗೆ ರಾಜಕೀಯವಾಗಿ ಬೆನ್ನಿಗೆ ನಿಂತು ರಕ್ಷಕ ರಾಮಯ್ಯ ಆಗಿದ್ದರು. ಅಂತವರು ಪಕ್ಷದ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದಾಗ ಮನುಷ್ಯ ಸಜಹವಾದ ಭಾವೋದ್ವೆಗಕ್ಕೆ ತಿಮ್ಮಾಪುರ ಅವರು ಒಳಗಾಗಿ ಕಣ್ಣಿರು ಹಾಕಿದ್ದು ಸಹಜ. ಅದು ಅವರು ಸಿದ್ದರಾಮಯ್ಯ ಅವರ ಉಪಕಾರಕ್ಕೆ ಸಲ್ಲಿಸಿದ ಕಣ್ಣಿರ ಗೌರವ.

ಸಂಪುಟ ಸೇರ್ಪಡೆ ಯತ್ನ:

ಕಾಂಗ್ರೆಸ್ ಪಕ್ಷದ ಇದೀಗ ಡಿ.ಕೆ. ಶಿವಕುಮಾರ ಅವರನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ. ಜೂನ್ 3 ರಂದು ಲೋಕ ಭವನದ ಆವರಣದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿವೆ. ಏತನ್ಮಧ್ಯೆ ಡಿ.ಕೆ. ಶಿವಕುಮಾರ ಅವರ ಮಂತ್ರಿಮಂಡಳ ಸೇರಲು ಶಾಸಕರ ಮಧ್ಯೆ ಪೈಪೋಟಿ ಜೋರಾಗಿದೆ. ತಿಮ್ಮಾಪುರ ಕೂಡ ಸಂಪುಟ ಸೇರ್ಪಡೆ ಕಸರತ್ತು ನಡೆಸಿದ್ದಾರೆ.

ಆರೋಪಗಳ ಅಡ್ಡಿ:

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅವರ ಇಲಾಖೆಯಲ್ಲಿ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳು, ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರನ್ನೂ ಮುಜುಗರಕ್ಕೆ ಒಳಪಡಿಸಿದ್ದವು ಎನ್ನುವುದು ಬಹಿರಂಗ ಸತ್ಯ. ಅವರು ನಿಭಾಯಿಸಿದ ಇಲಾಖೆಯಲ್ಲಿ ಕೇಳಿ ಬಂದಿರುವ ಆರೋಪಗಳೇ ಅವರ ಮಂತ್ರಿಗಿರಿಯ ಪ್ರಯತ್ನಕ್ಕೆ ಅಡ್ಡಿಯಾಗಿ ಕಾಡಲಿವೆ. ಜತೆಗೆ 23 ರ ಚುನಾವಣೆ ಬಳಿಕ ತಮ್ಮ ಸುತ್ತ ಕಟ್ಟಿಕೊಂಡ ಆಪ್ತರ ಪಡೆಯ ಬಗೆಗೂ ಪಕ್ಷ ಮತ್ತು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮಡುಗಟ್ಟಿದೆ ಎನ್ನುವುದು ಸುಳ್ಳಲ್ಲ.

ಒಂದೊಮ್ಮೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಂಪುಟ ಸೇರ್ಪಡೆ ಪ್ರಯತ್ನದಲ್ಲಿ ತಿಮ್ಮಾಪುರ ವಿಫಲವಾದಲ್ಲಿ ಅದಕ್ಕೆ ಅವರೇ ನಿಭಾಯಿಸಿದ ಇಲಾಖೆಯಲ್ಲಿ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳು ಮತ್ತು ಸುತ್ತ ಕಟ್ಟಿಕೊಂಡಿದ್ದ ಆಪ್ತರ ಪಡೆಯೇ ಕಾರಣವಾಗಿ ಪರಿಣಮಿಸಲಿವೆ.

  • ವಿಠ್ಠಲ ಆರ್. ಬಲಕುಂದಿ
Scroll to Top