ಕೊಲ್ಹಾಪುರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿಷಯದಲ್ಲಿ ಸನಾತನ ಹಿಂದು ಧರ್ಮದ ಪ್ರತಿಪಾದಕರಾದ ಸೂಲಿಬೆಲೆ ಚಕ್ರವರ್ತಿ- ಬಸನಗೌಡ ಪಾಟೀಲ ಯತ್ನಾಳ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಮೂಡಿಸಿದೆ. ಕನ್ಹೇರಿ ಶ್ರೀಗಳು ಕೆಲ ಸ್ವಾಮೀಜಿಗಳ ಕುರಿತು ಟೀಕೆ ಮಾಡುವ ವೇಳೆ ಬಳಸಿದ ಅವಾಚ್ಯ ಪದ ಮುಂದಿಟ್ಟುಕೊಂಡು ಸರ್ಕಾರ ಅವರಿಗೆ ಜಿಲ್ಲಾ ಪ್ರವೇಶ ನಿರ್ಬಂಧ ಪ್ರಶ್ನಿಸುವ ವಿಷಯದಲ್ಲಿ ಈ ಜೋಡಿ ಒಂದೇ ವೇದಿಕೆಗೆ ಬಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಬಸವಾದಿ ಶರಣರ ಹಿಂದು ಸಮಾವೇಶ:
ಜಿಲ್ಲಾ ಪ್ರವೇಶ ನಿರ್ಬಂಧದ ಹಿಂದೆ, ಹಿಂದು ಸಮಾಜ ಒಡೆಯುವ ಷಡ್ಯಂತ್ರ ಅಡಗಿದೆ ಎನ್ನುವುದು ಉಭಯ ಮುಖಂಡರ ಅಭಿಪ್ರಾಯ. ಹಿಂದು ಸಮಾಜ ಒಡೆಯುವ ಕೆಲವರ ತಂತ್ರಗಾರಿಕೆ ವಿರೋಧಿಸಿ, ಹಿಂದು ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ರಾಜ್ಯದ ತಾಲೂಕುಗಳಲ್ಲಿ ಪತ್ರ ಚಳುವಳಿ ನಡೆಸುವುದು,ಬಸವಾದಿ ಶರಣರ ಹಿಂದು ಸಮಾವೇಶಗಳ ಆಯೋಜನೆಗೆ ಉಭಯ ಮುಖಂಡರು ಮುಂದಾಗಿದ್ದಾರೆ.
ಹತ್ತಾರು ಪ್ರಶ್ನೆಗಳು:
ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಸಮವೇಶಗಳು ಆರಂಭಗೊಳ್ಳಲಿದ್ದು, ದಾವಣಗೆರೆಯಲ್ಲಿ ಸಮಾರೋಪ ಸಮಾವೇಶ ಆಯೋಜನೆ ನಿರ್ಧಾರ ಕೈಗೊಂಡಿದ್ದಾರೆ. ಕನ್ಹೇರಿ ಸ್ವಾಮೀಜಿ ಜಿಲ್ಲಾ ನಿರ್ಬಂಧ ವಿಷಯದಲ್ಲಿ ಸೂಲಿಬೆಲೆ ಚಕ್ರವರ್ತಿ ಮತ್ತು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಒಟ್ಟಾಗಿರುವುದು ರಾಜಕೀಯ ವಲಯದಲ್ಲಿ ಹತ್ತಾರು ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿದೆ.
ಅರಗಿಸಿಕೊಳ್ಳಲಾಗದ ಸ್ಥಿತಿ:
ನಮೋ ಬ್ರಿಗೇಡ್ ಮೂಲಕ ರಾಜ್ಯದಾದ್ಯಂತ ಮನೆ ಮಾತಾಗಿರುವ ಸೂಲಿಬೆಲೆ ಅವರು ಸ್ವಾಮೀಜಿಗಳ ವಿಷಯ ಮುಂದಿಟ್ಟುಕೊಂಡು ಬಸವಾದಿ ಶರಣರ ಹಿಂದು ಸಮಾಜ ಸಭೆಗಳನ್ನು ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಸೇರಿ ಆಯೋಜನೆಗೆ ಮುಂದಾಗಿರುವುದು ಯಕ್ಷಪ್ರಶ್ನೆಯಾಗಿದೆ. ಬೆಳಗಾವಿಯಲ್ಲಿ ಏಕಾಏಕಿ ಒಂದೆ ವೇದಿಕೆಯಲ್ಲಿ ಈ ಮುಖಂಡರು ಕಾಣಿಸಿಕೊಂಡಿದ್ದು ಕೆಲವರಿಗೆ ಅರಗಿಸಿಕೊಳ್ಳಲಾಗದ ಸ್ಥಿತಿಯನ್ನು ಸೃಷ್ಟಿಸಿದೆ.
ಮುಖ್ಯಮಂತ್ರಿ ಕನಸುಗಾರ:
ಹಿಂದುಗಳಲ್ಲಿ ಒಗ್ಗಟ್ಟು ಮೂಡಿಸಲು ಸದಾ ಹಿಂದುತ್ವ ಜಾಗೃತಿ ಸಭೆ, ಸಮಾವೇಶಗಳಲ್ಲಿ ಭಾಗಿಯಾಗಿ ಉಪನ್ಯಾಸ ನೀಡುವ ಸೂಲಿಬೆಲಿ ಚಕ್ರವರ್ತಿ ಅವರದ್ದೆ ಒಂದು ನಡೆಯಾದರೆ, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸನಾತನ ಹಿಂದು ಧರ್ಮ ರಕ್ಷಣೆಗಾಗಿ ಜೆಸಿಬಿ ಪಕ್ಷ ಕಟ್ಟಿ ಆ ಪಕ್ಷವನ್ನು ಅಧಿಕಾರಕ್ಕೆ ತರುವ ಕುರಿತು ಸದಾ ಚಿಂತಿಸುವ ಅವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.
ಹೊಸ ಸಮೀಕರಣ:
ಹೀಗೆ ಎರಡು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಇವರು ಕನ್ಹೇರಿ ಶ್ರೀಗಳ ನಿರ್ಬಂಧ ವಿಷಯದಲ್ಲಿ ಒಟ್ಟಾಗಿ ಹಿಂದು ಸಭೆಗಳನ್ನು, ಸಮಾವೇಶಗಳನ್ನು ನಡೆಸಲು ಮುಂದಾಗಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣದ ಚರ್ಚೆಯನ್ನು ಹುಟ್ಟು ಹಾಕಿದೆ. ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಪಾಲಿಗೆ ಚಕ್ರವರ್ತಿ ಸೂಲಿಬೆಲೆ ನೀಲಿಗಣ್ಣಿನ ಹುಡುಗ. ಅಂತವರು ಯಾವುದೋ ಒಂದು ವಿಷಯವನ್ನು ಮುಂದಿಟ್ಟುಕೊಂಡು ಯತ್ನಾಳರ ಜತೆ ಕೈ ಜೋಡಿಸಿರುವುದು ಕೆಲವರ ಇರುಸು ಮುರಿಸಿಗೂ ಕಾರಣವಾಗಿದೆ.
ನುಂಗಲಾರದ ತುತ್ತು:
ಯಾವ ಶಕ್ತಿಗಳು ಇವರಿಬ್ಬರನ್ನೂ ಒಂದೇ ವೇದಿಕೆ ತಂದಿವೆ ಎನ್ನುವುದೇ ಯತ್ನಾಳ ವಿರೋಧಿಗಳ ಪಾಲಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಡೀ ರಾಜ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ಅವರದ್ದೇ ಆದ ಬಲಾಢ್ಯ ಯುವ ಪಡೆ ಇದೆ. ಹಾಗೇ ಬಸನಗೌಡ ಪಾಟೀಲ ಯತ್ನಾಳರಿಗೂ ಅಭಿಮಾನಿಗಳ ದಂಡೆ ಇದೆ. ಹಿಂದುತ್ವ ಪ್ರತಿಪಾದನೆಯ ಎರಡು ಧೃವಗಳು ಒಂದಾಗಿ ಹಿಂದು ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಜಾಗೃತು ಅಭಿಯಾನಕ್ಕೆ ಕೈ ಹಾಕಿದಾಗ ಅದು ಕೆಲವರ ಪಾಲಿಗೆ ನುಂಗಲಾರದ ತುತ್ತಾಗುವುದು ಸಹಜ.
ಟೀಕೆಯ ಜಾಗದಲ್ಲಿ ತಿರುಗೇಟು:
ಉಭಯ ಮುಖಂಡರ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದು ಸಮಾಜ ಜಾಗೃತಿ ಅಭಿಯಾನ ರಾಜಕೀಯಕ್ಕಾಗಿ ಹಿಂದುತ್ವ ನಂಬಿದವರಲ್ಲಿ ಸಹಜಆತಂಕ ಸೃಷ್ಟಿಸಲಿದೆ. ಕನ್ಹೇರಿ ಶ್ರೀಗಳ ವಿರುದ್ಧ ಗುಟುರು ಹಾಕಿದ್ದ ಸ್ಥಳ, ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲೇ ಇವರ ಮೊದಲ ಸಮಾವೇಶ ನಡೆಯಲಿದೆಯಂತೆ. ಅಲ್ಲಿಂದ ಆರಂಭಗೊಳ್ಳುವ ಇವರ ಅಭಿಯಾನ ದಾವಣಗೆರೆಯಲ್ಲಿ ಸಮಾರೋಪಗೊಳ್ಳಲಿದೆ. ಸಮಾವೇಶ ಆರಂಭ ಮತ್ತು ಸಮಾವೇಶ ಸಮಾರೋಪದ ದಿನಾಂಕಗಳು ಇನ್ನೂ ನಿಗದಿ ಆಗಬೇಕಿದೆ.
ಅನುಮಾನ:
ಹಿಂದುಗಳ ಜಾಗೃತಿಗಾಗಿ ಒಂದಾಗಿರುವ ಈ ಮುಖಂಡರು ಎಷ್ಟು ದಿನ ಒಂದಾಗಿ ಹೆಜ್ಜೆ ಹಾಕಬಲ್ಲರು ಎನ್ನುವ ಅನುಮಾನ ಬಹುತೇಕರದ್ದು. ಇದಕ್ಕೆ ಅವರು ಇಗಾಗಲೇ ಅಂತರಂಗ ಶುದ್ಧಿ, ಬಹಿರಂಗ ಶುದ್ದಿ ಎನ್ನುವ ಮಾತನ್ನು ಆಡಿದ್ದಾರೆ. ಅದರ ಮಧ್ಯೆ ಯತ್ನಾಳ ಅವರು ಯಾರನ್ನು ಯಾವಾಗ ಎದುರು ಹಾಕಿಕೊಳ್ಳುತ್ತಾರೋ ಏನೋ ಎನ್ನುವ ಭಯ ರಾಜ್ಯದ ರಾಜಕಾರಣಿಗಳನ್ನು ಕಾಡುತ್ತಲೇ ಇದೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲು ಕೊಡಿಸುವ ವಿಷಯದಲ್ಲಿ ಯತ್ನಾಳ ಮತ್ತು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಜೋಡೆತ್ತಿನಂತೆ ರಾಜ್ಯದಾದ್ಯಂತ ಹೋರಾಟ ನಡೆಸಿದರು. ಈಗ ಅವರ ಪರಸ್ಪರ ಕಟು ಟೀಕಾಕಾರರು. ಹೀಗೆ ಒಟ್ಟಾಗಿದ್ದವರು ದೂರವಾಗಿದ್ದಾರೆ. ದೂರವಿದ್ದವರು ಒಟ್ಟಾಗಿದ್ದಾರೆ.
ವಿರೋಧಿಗಳ ನಿದ್ರಾ ಭಂಗ:
ಅದೇನೆ ಇರಲಿ ಇದೀಗ ಚಕ್ರವರ್ತಿ ಸೂಲಿಬೆಲೆ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಬಸವಾದಿ ಶರಣರ ಹಿಂದು ಜಾಗೃತಿ ಸಮಾವೇಶ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಅದು ಯಾವ ಸ್ವರೂಪ ಪಡೆದುಕೊಳ್ಳಲಿದೆ. ರಾಜಕೀಯವಾಗಿ ಯಾವ ಪರಿಣಾಮಗಳನ್ನುಂಟು ಮಾಡಲಿದೆ ಎನ್ನುವುದು ಕುತೂಹಲಕರ ಸಂಗತಿ. ಏಕೆಂದರೆ ಯತ್ನಾಳ ಮತ್ತು ಸುಲಿಬೆಲೆ ಒಟ್ಟಾಗಿರುವುದು ಸಾಕಷ್ಟು ಮುಖಂಡರ ನಿದ್ದೆಗೆಡಿಸಿರುವುದಂತೂ ಸತ್ಯ.
- ವಿಠ್ಠಲ ಆರ್. ಬಲಕುಂದಿ



