ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ಬಿಟಿಡಿಎ) ನೂತನ ಸಭಾಪತಿಯಾಗಿ ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಎರಡನೇ ಬಾರಿಗೆ ಸಭಾಪತಿಗಳಾಗಿ ಶುಭ ಶುಕ್ರವಾರ ಅಧಿಕಾರ ಗ್ರಹಣ ಮಾಡುತ್ತಿದ್ದಾರೆ.
ಬಾಗಲಕೋಟೆ ಪಟ್ಟಣದ ಮುಳುಗಡೆ ಸಂತ್ರಸ್ತರ ಪುನರ್ ವಸತಿ, ಪುನರ್ ನಿರ್ಮಾಣದ ಹೊಣೆ ಹೊತ್ತು ಅಸ್ತಿತ್ವಕ್ಕೆ ಬಂದಿರುವ ಕೆಬಿಜೆಎನ್ಎಲ್ ಅಡಿಯಲ್ಲಿನ ಸರ್ಕಾರದ ಸ್ವಾಯತ್ತ ಸಂಸ್ಥೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ. ಇದು ಒಬ್ಬರು ಸಭಾಪತಿ ಹಾಗೂ ಮೂವರು ಸದಸ್ಯರ ಆಡಳಿತ ಮಂಡಳಿ ಹೊಂದಿದೆ.
ಪ್ರಭಾವಿ ಹುದ್ದೆ:
ಮಂತ್ರಿಸ್ಥಾನದಷ್ಟೆ ಪ್ರಭಾವಿ ಸಂಸ್ಥೆ ಆಗಿರುವ ಬಿಟಿಡಿಎ ಸಭಾಪತಿ ಸ್ಥಾನಕ್ಕೆ ಮೊದಮೊದಲು ಆಡಳಿತಾರೂಢ ಪಕ್ಷಗಳ ಕಾರ್ಯಕರ್ತರನ್ನು ನೇಮಿಸುವ ಪದ್ಧತಿ ಇತ್ತು. ಇತ್ತೀಚಿನ ವರ್ಷಗಳಲ್ಲಿ ಶಾಸಕರಾದವರು ಬಿಟಿಡಿಎ ಸಭಾಪತಿ ಹುದ್ದೆ ಅಲಂಕರಿಸುವುದು ವಾಡಿಕೆ ಆಗಿ ಬಿಟ್ಟಿದೆ.
2018 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಬಂದಾಗ ಮಾಜಿ ಸಚಿವ ಎಚ್.ವೈ. ಮೇಟಿ ಸಭಾಪತಿಯಾದರು. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕ ವೀರಣ್ಣ ಚರಂತಿಮಠ ಸಭಾಪತಿಯಾದರು. 2023 ರಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಶಾಸಕ ಎಚ್.ವೈ .ಮೇಟಿ ಸಭಾಪತಿ ಆದರು. ಹೀಗೆ ಶಾಸಕರೆ ಸಭಾಪತಿ ಅಗುತ್ತ ಬಂದಿದ್ದರು.
ಪ್ರಭಾವಿ ಸಮುದಾಯಕ್ಕೆ ಮಣೆ:
ಇದೀಗ ಅದು ಶಾಸಕರ ಕೈ ತಪ್ಪಿ ಕಾಂಗ್ರೆಸ್ ಪಕ್ಷದ ಹಿರಿಯರು, ಬಸವೇಶ್ವರ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ ಅವರು ಸಭಾಪತಿ ಅಗಿದ್ದಾರೆ. ಅವರು ಸಭಾಪತಿ ಆಗಿದ್ದರ ಹಿಂದೆ ರೋಚಕ ರಾಜಕೀಯ ಕಥೆ ಇದೆ. ಉಪಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ನಡೆದ ಕ್ಷೀಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರಿಗೆ ಈ ಹುದ್ದೆ ಲಭಿಸಿದೆ ಎನ್ನುವುದು ಸರ್ವವಿಧಿತ. ಉಪ ಚುನಾವಣೆ ಮುಗಿಯಲಿ ಮುಂದೆ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರೆ, ಅದು ಮತ್ತೆ ಶಾಸಕರ ಪಾಲಾಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದ್ದವು. ಆದರೆ ಚುನಾವಣೆ ಎದುರಿಸುವುದು ಕಷ್ಟವಾಗುತ್ತಿತ್ತು. ಹಲವು ಪ್ರಭಾವಿಗಳ ಪಕ್ಷಾಂತರ ಕೂಡ ತಪ್ಪಿದ್ದು ಇದೆ ನೇಮಕಾತಿ ಆದೇಶ ಹಿನ್ನೆಲೆಯಲ್ಲಿ ಎನ್ನುವುದು ಗಮನಾರ್ಹ.
ಗೆಲುವಿನ ತಂತ್ರ:
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ನಡೆದ ವಿದ್ಯಮಾನಗಳ ಫಲವಾಗಿ, ಉಪಚುನಾವಣೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಸೃಷ್ಟಿಗೊಂಡ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರಕಾಶ ತಪಶೆಟ್ಟಿ ಅವರು ಸಭಾಪತಿ ಆಗಿ ನೇಮಕಗೊಂಡರು. ತಪಶೆಟ್ಟಿ ಅವರ ನೇಮಕದ ಹಿಂದೆ ಉಪಚುನಾವಣೆ ಗೆಲುವಿನ ತಂತ್ರ ಬಿಟ್ಟರೆ ಬೇರೆನೂ ಇರಲಿಲ್ಲ.
ಅನುಭವಿಗಳು:
ಇದೀಗ ಅವರು ಸಭಾಪತಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಸ್ಥಾನ ಶಾಸಕರ ಕೈ ತಪ್ಪಿ ಪಕ್ಷದ ಪ್ರಮುಖರ ಪಾಲಾಗಿರುವುದು ಉತ್ತಮ ಬೆಳವಣಿಗೆ ಎಂದು ರಾಜಕೀಯ ವಲಯದಲ್ಲಿ ಬಣ್ಣಿಸಲಾಗುತ್ತಿದೆ. ಮುಳುಗಡೆ ಸಂತ್ರಸ್ತರ ಪಾಲಿನ ಆಶಾಕಿರಣವಾಗಿರುವ ಬಿಟಿಡಿಎ ಆಡಳಿತ ಮಂಡಳಿ ಯಾರ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಮುನ್ನಡೆಯಬೇಕಿದೆ. ಅಂತಹ ವಾತಾರಣ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಸಾಧ್ಯವೇ ಎನ್ನುವುದು ಜನತೆಗೆ ಯಕ್ಷಪ್ರಶ್ನೆಯಾಗಿದೆ.
ಎಜೆಂಟರ್ ಹಾವಳಿ:
ಬಿಟಿಡಿಎ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಎಜೆಂಟರ ಹಾವಳಿ. ಕಾರ್ಯಕರ್ತರ ಅನಗತ್ಯ ಹಸ್ತಕ್ಷೇಪ ತಪ್ಪಿಸುವ ಮೂಲಕ ಮುಳುಗಡೆ ಸಂತ್ರಸ್ತರ ಕೆಲಸಗಳು ವಿಳಂಭವಿಲ್ಲದೆ ಸರಳವಾಗಿ ಆಗುವ ವಾತಾವರಣ ಸೃಷ್ಟಿಸಬೇಕಿದೆ. ಸಂತ್ರಸ್ತರನ್ನು ಅನಗತ್ಯವಾಗಿ ಅಲೆದಾಡಿಸುವುದು ತಪ್ಪಬೇಕಿದೆ.ಇದಕ್ಕೆ ಅಧಿಕಾರಿಗಳ ಸಹಕಾರವೂ ಬಹಳ ಮುಖ್ಯವಾಗಿದೆ.
ನೂತನ ಸಭಾಪತಿ ಪ್ರಕಾಶ ತಪಶೆಟ್ಟಿ ಅವರು ಈಗಾಗಲೇ ಒಂದು ಬಾರಿ ಸಭಾಪತಿಗಳಾಗಿ ಕೆಲಸ ಮಾಡಿದ ಅನುಭವಿಗಳು. ಮೊದಲ ಬಾರಿಗೆ ಅವರು ಸಭಾಪತಿಗಳಾಗಿದ್ದ ಸಮಯವೇ ಬೇರೆ. ಈಗಿನ ಸಮಯವೇ ಬೇರೆ. ಸದ್ಯ ಸಭಾಪತಿಗಳು ಬಾಗಲಕೋಟೆ ನವನಗರ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎನ್ನುವುದು ಸಂತ್ರಸ್ತರ ಆಶಯವಾಗಿದೆ.
- ವಿಠ್ಠಲ ಆರ್. ಬಲಕುಂದಿ




