ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ…

ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ ಎಂದೇ ಬಣ್ಣಿಸಲಾಗುತ್ತಿರುವ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಎರಡೂ ಕ್ಷೇತ್ರದ ಜನತೆಯಷ್ಟೆ ಅಲ್ಲ ರಾಜ್ಯದ ಜನ ಫಲಿತಾಂಶದ ಕಾತರದಲ್ಲಿದ್ದಾರೆ. ಈ ಫಲಿತಾಂಶ ರಾಜ್ಯ ರಾಜಕಾರಣವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಫಲಿತಾಂಶ ಎಂದೆ ರಾಜಕೀಯ ವಲಯದಲ್ಲಿ‌ ಬಣ್ಣಿಸಲಾಗುತ್ತಿದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಎಲ್ಲವೂ ನಿರ್ಧಾರವಾಗಲಿದೆ.

ಎರಡನ್ನೂ ಗೆಲ್ಲುವ ಅನಿವಾರ್ಯ:

ಎರಡು ಸ್ಥಾನಗಳ ಪೈಕಿ ಎರಡನ್ನೂ ಆಡಳಿತಾರೂಢ ಕಾಂಗ್ರೆಸ್ ಗೆದ್ದಲ್ಲಿ ಪರವಾಗಿಲ್ಲ. ಒಂದನ್ನು ಗೆದ್ದು ಇನ್ನೊಂದನ್ನು ಸೋತರೂ ಪಕ್ಷದಲ್ಲಿ ತಳಮಳ‌ ಶುರುವಾಗಲಿದೆ. ಎರಡನ್ನೂ ಸೋತರಂತೂ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಎನ್ನುವ ಸ್ಥಿತಿ ಇದೆ. ಹಾಗಾಗಿಯೇ ಮುಖ್ಯಮಂತ್ರಿಗಳು ಮಂತ್ರಿಗಳ ದಂಡು ಸಮೇತ ಎರಡೂ ಕ್ಷೇತ್ರದಲ್ಲಿ ಬೀಡುಬಿಟ್ಟು ಚುನಾವಣೆ ಪ್ರಚಾರ ಮಾಡಿದ್ದಾರೆ.

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಕೂಗು ತಾರಕಕ್ಕೇರಿರುವಾಗಲೇ ಉಪಚುನಾವಣೆ ನಡೆದಿದ್ದು, ಅದರ ಫಲಿತಾಂಶ ಕಾಂಗ್ರೆಸ್ಸಿಗರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಎರಡನ್ನೂ ಗೆಲ್ಲುವ ಅನಿವಾರ್ಯತೆ ಪಕ್ಷದ್ದಾಗಿದೆ. ಎರಡನ್ನೂ ಗೆಲ್ಲುತ್ತೇವೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಪ್ರತಿಪಕ್ಷ ಪಾಲಿಗೂ ಮಹತ್ವದ್ದು:

ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ಫಲಿತಾಂಶ ಎಷ್ಟು ಮುಖ್ಯವೋ ಪ್ರತಿಪಕ್ಷ‌ ಪಾಲಿಗೂ ಅಷ್ಟೆ ಮಹತ್ವದ್ದಾಗಿದೆ. ಹಾಗಾಗಿ ಪಕ್ಷದ ಮುಖಂಡರು ಆಂತರಿಕ‌ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಚುನಾವಣೆ ಪ್ರಚಾರದಲ್ಲಿ ಧುಮಿಕಿದ್ದರು. ಎಷ್ಟರ ಮಟ್ಟಿನ ಒಗ್ಗಟ್ಟು ಪ್ರದರ್ಶಿಸಿದರು ಎಂದರೆ ಪಕ್ಷದಿಂದ ಉಚ್ಚಾಟನೆಗೊಂಡ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಬಾಗಲಕೋಟೆ ಕ್ಷೇತ್ರದಲ್ಲಿ ಮಿಂಚಿನ ಪ್ರವಾಸ ಕೈಗೊಂಡು ಬಿಜೆಪಿ ಅಭ್ಯರ್ಥಿ ಪರ, ಹಿಂದುತ್ವದ ಪರ ಮತಯಾಚನೆ ಮಾಡಿದರು.

ಪರಿಣಾಮ ಹಾಗೆ ಕಾಂಗ್ರೆಸ್ ಪಕ್ಷದಲ್ಲಿನ ಒಳಸುಳಿ ಅರಿತಿರುವ ಬಿಜೆಪಿ ಮುಖಂಡರು ಗೆಲುವಿನ ವಿಶ್ವಾದಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರ ಸೋತರೂ ಬಿಜೆಪಿಗೆ ಏನೂ ತೊಂದರೆ ಇಲ್ಲ.ಇಲ್ಲಿಯೂ ನಾಯಕತ್ವದ ಪ್ರಶ್ನೆ ಇಂದಿಗೂ ಕಗ್ಗಂಟಾಗಿಯೇ ಉಳಿದಿದೆ.

ಆದರೆ ಉಪಚುನಾವಣೆಯಲ್ಲಿ ಸಹಜವಾಗಿ ಹಣಬಲ, ಅಧಿಕಾರ ಪ್ರಯೋಗದಿಂದ ಸೋಲಾಯಿತು ಎನ್ನುವ ಕಾರಣ ನೀಡಿ ಪ್ರತಿಪಕ್ಷ ಬಿಜೆಪಿ‌ ಮುಖಂಡರು ಸುಮ್ಮನಾಗುವ ಸಾಧ್ಯತೆಗಳಿವೆ.

ಒಂದೂ ಗೆದ್ದರೂ ಅಬ್ಬರ:

ಒಂದೊಮ್ಮೆ ಬಿಜೆಪಿ ಎರಡೂ ಸ್ಥಾನ ಬಿಡಿ ಒಂದನ್ನು ಗೆದ್ದರೂ ಅದನ್ನು ಆಡಳಿತ ವಿರೋಧಿ ಅಲೆಯ ಮುನ್ಸೂಚನೆ ಎಂದು ಅಬ್ಬರಿಸುತ್ತಾರೆ. ಎರಡನ್ನೂ ಗೆದ್ದರಂತೂ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಅಭಿಮಾನೋತ್ಸವದಲ್ಲಿ ಉಪಚುನಾವಣೆ ಫಲಿತಾಂಶ 28 ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು, ಆಡಳಿತ ಪಕ್ಷದ ವಿರುದ್ಧದ ಜನಾದೇಶ ಎಂದು ಬೀಗಿದಲ್ಲಿ ಅಚ್ಚರಿ ಪಡಬೇಕಾದ್ದಿಲ್ಲ.

ಗೆಲುವಿನ‌ ಲೆಕ್ಕಾಚಾರ:

ಈಗಾಗಲೇ ಎರಡೂ ಪಕ್ಷಗಳು ಮತದಾನದ ಬಳಿಕ ಗೆಲುವಿನ ಲೆಕ್ಕಾಚಾರ ಹಾಕಿದ್ದು, ಎರಡೂ ಪಕ್ಷದವರು ಗೆಲುವು ನಮ್ಮದೆ ಎನ್ನುವ ವಾದ ಮಂಡಿಸುತ್ತಿದ್ದಾರೆ.

ಆದರೆ ಮತದಾರ ಪ್ರಭುವಿನ ಇಚ್ಛೆ ಏನಾಗಿದೆ ಎನ್ನುವುದು ಸೋಮವಾರ ಫಲಿತಾಂಶ ಹೊರಬಿದ್ದಾಗಲೇ ಆಡಳಿತ ಮತ್ತು ಪ್ರತಿಪಕ್ಷದ ಅಭ್ಯರ್ಥಿಗಳ ಹಣೆ ಬರಹ ಏನು ಎತ್ತ ಎನ್ನುವುದು ಗೊತ್ತಾಗಲಿದೆ. ಅಲ್ಲಿಯವರೆಗೂ ಕಾಯುವಿಕೆ ಅನಿವಾರ್ಯ. ಫಲಿತಾಂಶದ ಕೊನೆ ಕ್ಷಣದವರೆಗೂ ಕುತೂಹಲ ಮುಂದುವರಿಯಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top