ನೂತನ ಶಾಸಕ ಉಮೇಶ್ ಮೇಟಿ ಸಹೋದರಿ ಮಹಾದೇವಿ ಮೇಟಿ ಅವರು ಆಡಳಿತದಲ್ಲಿ ಯಾರ ಹಸ್ತಕ್ಷೇಪ ಇರಬಾರದು ಎಂದು ಹಠ ಹಿಡಿದು ಟಿಕೆಟ್ ಹಂಚಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರೋ, ಈಗ ಅವರದ್ದೇ ಪಾರುಪತ್ಯ ಆರಂಭಗೊಂಡಿದೆ. ನೂತನ ಶಾಸಕ ಉಮೇಶ್ ಮೇಟಿ ಅವರು, ತಮ್ಮ ತಂದೆಯವರ ಆಪ್ತನ ಬಿಟ್ಟು ಏನೂ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.
ಚುನಾವಣೆ ಹೊತ್ತಲ್ಲೇ ಉಮೇಶ ಅವರನ್ನು ಗೆಲ್ಲಿಸಲು ಹೊರಗಿನ ವ್ಯಕ್ತಿಯ ಓಡಾಟ ತೀವ್ರಗೊಂಡಿತ್ತು. ಫಲಿತಾಂಶ ಹೊರಬೀಳುತ್ತಿದ್ದಂತೆ ಹೊಸ ಶಾಸಕರಿಗೆ ಅವರೇ ಆಕ್ಸಿಜನ್ ಎನ್ನುವಂತೆ ಕಾಣಿಸುತ್ತಿದೆ.
ಅಭಿಮಾನಿಗಳ ಸಿಡಿಮಿಡಿ:
ಹೊಸ ಶಾಸಕರೊಂದಿಗೆ ಹೊರಗಿನ ವ್ಯಕ್ತಿಯ ಆಪ್ತತೆ ಹೆಚ್ಚಾಗುತ್ತಿದ್ದಂತೆ ಎಚ್. ವೈ. ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ಅವರ ಅಭಿಮಾನಿ ಬಳಗ, ಎಚ್.ವೈ. ಮೇಟಿ ಅವರ ಆಪ್ತನ ಚಟುವಟಿಕೆಗಳಿಂದ ಬೇಸತ್ತು ಸಿಡಿಮಿಡಿ ವ್ಯಕ್ತ ಪಡಿಸಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಏನಾಯ್ತು ಷರತ್ತು:
ಆಡಳಿತದಲ್ಲಿ ಹೊರಗಿನವರ ಹಸ್ತಕ್ಷೇಪ ಇರಬಾರದು ಎನ್ನುವ ಷರತ್ತಿನೊಂದಿಗೆ ಮಹಾದೇವಿ ಮೇಟಿ ಅವರು ಉಮೇಶ್ ಮೇಟಿ ಅವರಿಗೆ ಟಿಕೆಟ್ ಕೊಡಲು ಒಪ್ಪಿಕೊಂಡಿದ್ದರು. ಮೇಟಿ ಕುಟುಂಬಸ್ಥರಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಮಹಾದೇವಿ ಮೇಟಿ ಹಾಗೂ ಅವರ ಬೆಂಬಲಿಗರಿಂದಾಗಿ ಎರಡ್ಮೂರು ತಿಂಗಳು ವಿಷಯ ಸಾಕಷ್ಟು ಸುದ್ದಿಯಲ್ಲಿತ್ತು. ಈ ಅವಧಿಯಲ್ಲಿ ಮೇಟಿ ಅವರ ಇನ್ನೊರ್ವ ಪುತ್ರ ಮಲ್ಲಿಕಾರ್ಜುನ ಮೇಟಿ ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ವಾತಾವರಣ ಸೃಷ್ಟಿ ಆಗಿತ್ತು. ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಸಾಕಷ್ಟು ರಾಜಕೀಯ ಹೈಡ್ರಾಮಾಗಳು ನಡೆದು ಮಹಾದೇವಿ ಮೇಟಿ ಅವರ ಆಶಯದಂತೆ ಉಮೇಶ್ ಮೇಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತು.
ಅನಿವಾರ್ಯತೆ ಸೃಷ್ಟಿ:
ಬಳಿಕ ನಡೆದದ್ದೆಲ್ಲ ಈಗ ಇತಿಹಾಸ. ಉಪಚುನಾವಣೆ ಟಿಕೆಟ್ ಹಂಚಿಕೆ ಆಗುತ್ತಿದ್ದಂತೆ, ಅದುವರೆಗೂ ಸೈಲೆಂಟ್ ಆಗಿದ್ದ ಹೊರಗಿನ ವ್ಯಕ್ತಿಯ ಚಟುವಟಿಕೆಗಳು ಮತ್ತೆ ಗರಿಗೆದರಿದವು. ತೆರೆಮರೆ ರಾಜಕಾರಣವೂ ಜೋರಾಗಿತ್ತು. ಆಗಲೇ ಉಮೇಶ ಮೇಟಿ ಅವರಿಗೆ ಹೊರಗಿನ ವ್ಯಕ್ತಿಯ ಅಗತ್ಯ ಎಷ್ಟಿದೆ ಎನ್ನುವುದು ಸ್ವತಃ ಮಹಾದೇವಿ ಮೇಟಿ ಅವರಿಗೂ ಅರಿವಿಗೆ ಬಂದಂತೆ ಕಾಣಿಸುತ್ತದೆ. ಎಲ್ಲವನ್ನು ಕಂಡೂ ಕಾಣದಂತೆ ಇರುವ ಅನಿವಾರ್ಯತೆ ಅವರಿಗೆ ಎದುರಾಗಿ ಮೌನಕ್ಕೆ ಶರಣಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿತ್ತು.
ಮತ್ತೆ ಸಕ್ರೀಯ:
ಚುನಾವಣೆ ಫಲಿತಾಂಶ ವೇಳೆ ಕಾಂಗ್ರೆಸ್ ಪಾಳೆಯದಲ್ಲಿ ಹೊರಗಿನ ವ್ಯಕ್ತಿಯ ಓಡಾಟ ಕಂಡು, ಇವರು ಮತ್ತೆ ಸಕ್ರೀಯರಾದರಾ ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡಿದ್ದು ಸುಳ್ಳಲ್ಲ. ಫಲಿತಾಂಶ ಪ್ರಕಟಗೊಂಡು, ಪ್ರಮಾಣ ಪತ್ರ ಪಡೆಯುವುದಕ್ಕೂ ಹೊರಗಿನ ವ್ಯಕ್ತಿ ಬೇಕಾಯಿತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಮೊದಲಾದವರನ್ನು ಭೇಟಿ ಮಾಡಿ ಅವರಿಗೆ ನೂತನ ಶಾಸಕರು ಅಭಿನಂದನೆ ಸಲ್ಲಿಸುವುದಕ್ಕೂ ಹೊರಗಿನ ವ್ಯಕ್ತಿಯ ಉಪಸ್ಥಿತಿ ಅನಿವಾರ್ಯ ಎನ್ನುವಂತೆ ಕಾಣಿಸುತ್ತಿತ್ತು.
ಶುರುವಾಯ್ತು ತಲೆನೋವು:
ಹೊರಗಿನ ವ್ಯಕ್ತಿಯ ವಿಷಯದಲ್ಲಿ ನೂತನ ಶಾಸಕರು ನಡೆದುಕೊಳ್ಳುತ್ತಿರುವುದನ್ನು ಸಹಿಸದ ಮಹಾದೇವಿ ಮೇಟಿ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದೆ. ಹಾಗಾಗಿ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ತಲೆನೋವು ಶುರುವಾದಂತಾಗಿದೆ. ಸದ್ಯದ ಬೆಳವಣಿಗೆಗಳ ಬಗೆಗೆ ಮಹಾದೇವಿ ಮೇಟಿ ಅವರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.
ಮಹತ್ವದ ಪಾತ್ರ:
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಆಡಳಿತದಲ್ಲಿ ಹೊರಗಿನ ವ್ಯಕ್ತಿಯ ಹಸ್ತಕ್ಷೇಪ ಬೇಡ ಮಹತ್ತರ ಉದ್ದೇಶದೊಂದಿಗೆ ಕ್ಷೇತದಲ್ಲಿ ದಿ. ಶಾಸಕ ಎಚ್.ವೈ. ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ಅಭಿಮಾನಿ ಬಳಗ ಅಸ್ತಿತ್ವಕ್ಕೆ ಬಂದಿತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವುದನ್ನು ನಿರ್ಣಾಯಕ ಹಂತಕ್ಕೆ ತರುವಲ್ಲಿ ಈ ಅಭಿಮಾನಿಗಳ ಬಳಗ ಮಹತ್ವದ ಪಾತ್ರ ವಹಿಸಿದ್ದು ಗಮನಾರ್ಹ.
ಉಲ್ಟಾ ಪಲ್ಟಾ:
ಫಲಿತಾಂಶ ಹೊರಬಿದ್ದ 48 ಗಂಟೆಗಳಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಯಾರ ಹಸ್ತಕ್ಷೇಪ ಬೇಡ ಎನ್ನುವ ಹೋರಾಟ ನಡೆದಿತ್ತೋ ಅದೆ ಹೊರಗಿನವರ ಹಸ್ತಕ್ಷೇಪ ಪ್ರತಿ ಹಂತದಲ್ಲೂ ಆರಂಭಗೊಂಡಿದೆ. ಇದನ್ನು ಮಹಾದೇವಿ ಮೇಟಿ ಅಭಿಮಾನಿ ಬಳಗ ಆಕ್ಷೇಪಿಸಿದೆ. ಮುಂದಿನ ಬೆಳವಣಿಗೆಗಳನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ



