ಮೇಲ್ಮನೆ 13 ಸ್ಥಾನಗಳ ಚುನಾವಣೆ: ಕೋಟೆನಾಡಲ್ಲೂ ಆಕಾಂಕ್ಷಿಗಳ ದಂಡು

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಮುಗಿದದ್ದೆ ತಡ, ಜೂನ್ ತಿಂಗಳಲ್ಲಿ ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಸ್ಥಾನಗಳ ಮೂಲಕ ವಿಧಾನ ಪರಿಷತ್ ಪ್ರವೇಶಕ್ಕೆ ಜಿಲ್ಲೆಯಿಂದಲೂ ಆಕಾಂಕ್ಷಿಗಳು ಇದ್ದಾರೆ.

ಸದ್ಯ ನಾಲ್ವರ ಹೆಸರು:

ಮೇಲ್ಮನೆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮುಖಂಡರೆಲ್ಲ ಉಪಚುನಾವಣೆ ವೇಳೆ ಅತ್ಯಂತ ಸಕ್ರೀಯವಾಗಿ ಚುನಾವಣೆ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವರಿಷ್ಠರ ಗಮನ ಸೆಳೆಯುವ ಕೆಲಸ ಮಾಡಿದ್ದು ಸುಳ್ಳಲ್ಲ. ಸದ್ಯ ಮೇಲ್ಮನೆ ಸದಸ್ಯತ್ವ ಗಿಟ್ಟಿಸಿಕೊಳ್ಳಬೇಕು ಎನ್ನುವವರ ಸಂಖ್ಯೆ ನಾಲ್ಕು ಎಂದು ಹೇಳಲಾಗುತ್ತಿದೆ. ಈ ಸಂಖ್ಯೆ ಮುಂದೆ ಇನ್ನಷ್ಟು ಹೆಚ್ಚಾಗಬಹುದು.

ಅಜಯಕುಮಾರ ಸರನಾಯಕ:

ಮೇಲ್ಮನೆ ಸ್ಥಾನದ ಆಕಾಂಕ್ಷಿಗಳ ಪೈಕಿ ಮಾಜಿ ಸಚಿವರು, ಮಾಜಿ ಸಂಸದರು, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಕೆಲಸ ಮಾಡಿರುವ ಪಕ್ಷದ ಹಿರಿಯ ಮುಖಂಡ,ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕರ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಅಧಿಕಾರ ಇರಲಿ, ಬಿಡಲಿ ಪಕ್ಷದ ವಿಷಯದಲ್ಲಿ ಸದಾ ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಬಾರಿ ಅವರ ಹೆಸರು ಮೇಲ್ಮನೆ ಸ್ಥಾನಕ್ಕೆ ಕೇಳಿ ಬಂದಿತ್ತಾದರೂ ಪಕ್ಷದಲ್ಲಿನ ತೀವ್ರ ಪೈಪೋಟಿ ಪರಿಣಾಮ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅವಕಾಶ ಸಿಗಬಹುದು ಎನ್ನುವ ವಿಶ್ವಾಸದಲ್ಲಿ ಪ್ರಯತ್ನ ನಡೆಸಿದ್ದಾರೆ.

ಮೂಲತಃ ಜನತಾ ಪರಿವಾರದಿಂದ ಕಾಂಗ್ರೆಸ್ಸಿಗೆ ಬಂದಿರುವ ಇವರು ವಿಧಾನ ಸಭೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಟಿಕೆಟ್ ಪಡೆದು ಚುನಾವಣೆ ಅಖಾಡಕ್ಕೆ ಇಳಿದರೂ ಅವುಗಳನ್ನು ಪ್ರವೇಶಿಸುವುದು ಸಾಧ್ಯವಾಗಲಿಲ್ಲ. ಆದರೆ ಕಳೆದ 10 ವರ್ಷಗಳಿ‌ಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಹಿರಿಯ ಕಾಂಗ್ರೆಸ್ಸಿಗ ಆರ್.ವಿ. ದೇಶಪಾಂಡೆ ಸೇರಿದಂತೆ ಪಕ್ಷದ ಪ್ರಮುಖರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಮೇಲ್ಮನೆ ಸ್ಥಾನಕ್ಕಾಗಿನ ತೀವ್ರ ಪೈಪೋಟಿಯಲ್ಲೂ ಇವರಿಗೊಂದು ಅವಕಾಶ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಲ್ಲಾ ಕಾಂಗ್ರೆಸ್ಸಿನ ಬಹುತೇಕ ಮುಖಂಡರು ಇವರ ಪ್ರಯತ್ನಕ್ಕೆ ಸಾಥ್ ನೀಡಲಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಎಂ.ಬಿ. ಸೌದಾಗರ:

ಜಿಲ್ಲೆಯ ಇನ್ನೋರ್ವ ಕೆಪಿಸಿಸಿ ಉಪಾಧ್ಯಕ್ಷ , ಅಲ್ಪಸಂಖ್ಯಾತರ ಮುಖಂಡ ಎಂ.ಬಿ. ಸೌದಾಗರ ಕೂಡ ಮೇಲ್ಮನೆ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಇವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಹುಬ್ಬಳ್ಳಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೊಮ್ಮೆ ಮೇಲ್ಮನೆ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಮೇಲ್ಮನೆ ಪ್ರವೇಶಕ್ಕೆ ಪ್ರಯತ್ನಸಿದ್ದರು ಎನ್ನುವುದು ಗಮನಾರ್ಹ. ಅಲ್ಪಸಂಖ್ಯಾತರ ಕೋಟಾದಲ್ಲಿ ತಮಗೊಂದು ಅವಕಾಶ ಕೊಡಬೇಕು ಎನ್ನುವ ಹಕ್ಕೊತ್ತಾಯ ಇವರದ್ದಾಗಿದೆ.

ಕಂಗನೋಳಿ:

ಜಿಲ್ಲಾ ಕಾಂಗ್ರೆಸ್ಸಿನ ಇನ್ನೋರ್ವ ಅಲ್ಪಸಂಖ್ಯಾತ ಸಮುದಾಯದ ಮುಖಂಡ ನಜೀರ್ ಕಂಗನೋಳಿ ಕೂಡ ಮೇಲ್ಮನೆ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಇವರು ನೇಕಾರ ಮೂಲ ಸೌಕರ್ಯಗಳ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರೂ ಮೇಲ್ಮನೆ ಟಿಕೆಟ್ ಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಸೌದಾಗರ ಮತ್ತು‌ ಕಂಗನೋಳಿ ಅವರು ರಾಜ್ಯ ಅಲ್ಪ ಸಂಖ್ಯಾತ ಮುಖಂಡ. ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಅದು ಎಷ್ಟರ‌ ಮಟ್ಟಿಗೆ ಇವರಿಗೆ ಸಹಕಾರಿ ಆಗಲಿದೆ ಎನ್ನುವುದು ಕುತೂಹಲದ ಸಂಗತಿ.

ನಂಜಯ್ಯನಮಠ:

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ಕೈಗಾರಿಕೆ ಮೂಲ ಸೌಲಭ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹಿರಿಯ ಕಾಂಗ್ರೆಸ್ಸಿಗರು. 2008 ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಗುಳೇದಗುಡ್ಡ ಕ್ಷೇತ್ರ ಇಲ್ಲವಾದ ಬಳಿಕ ಅವರಿಗೆ ಸ್ಪರ್ಧೆಗೆ ಕ್ಷೇತ್ರವೇ ಇಲ್ಲವಾಯಿತು. ಅಲ್ಲಿಂದ ಅವರು ಪಕ್ಷಸಂಘಟನೆ ಕೆಲಸದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಪಕ್ಷ ಮತ್ತು ಸರ್ಕಾರ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಮೇಲ್ಮನೆ ಸದಸ್ಯತ್ವ ಇದುವರೆಗೂ ಗಗನ ಕುಸುಮವಾಗಿದೆ. ಈ ಬಾರಿ ಅವಕಾಶ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ.‌ ಇವರು ಪಕ್ಷದ ಅಧ್ಯಕ್ಷರಾದ ಬಳಿಕ ನಡೆದ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಪಕ್ಷ‌ದ‌ಸಾಧನೆ ಉತ್ತಮವಾಗಿದೆಯಂತೆ. ಅದಕ್ಕೆ ಬಕ್ಷಿಸ್ ಆಗಿ ಮೇಲ್ಮನೆ ಸ್ಥಾನ ಒಲಿದಲ್ಲಿ ಅಚ್ಚರಿ ಪಡಬೇಕಿಲ್ಲ.

ಎಸ್ಸಾರ್:

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಈ ಹಿಂದೆ ನಡೆದ ಚುನಾವಣೆ ವೇಳೆ ಚುನಾವಣೆಯಿಂದ ದೂರ ಉಳಿದ ಬಳಿಕ ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆಗಳು ನಡೆದ ವೇಳೆ ಪಕ್ಷದ ಟಿಕೆಟ್ ಗಾಗಿ ನಡೆದ ಪ್ರಯತ್ನಗಳು ವಿಫಲವಾಗಿವೆ. ಹಾಗಾಗಿ ಈ ಬಾರಿಯ ಮೇಲ್ಮನೆ ಚುನಾವಣೆ ಟಿಕೆಟ್ ಗಾಗಿ ಪ್ರಯತ್ನಿಸುವುರೋ ಹೇಗೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ ದಿನಗಳು ಇದನ್ನು ಸ್ಪಷ್ಟ ಪಡಿಸಲಿವೆ.

ಅದೃಷ್ಟದಾಟ:

ಒಟ್ಟಾರೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಹಾಗೂ ನಾಮ ನಿರ್ದೇಶನ ಸ್ಥಾನಗಳಿಗೆ ನಡೆಯಲಿರುವ ಪೈಪೋಟಿಯಲ್ಲಿ ಜಿಲ್ಲೆಗೊಂದು ಸ್ಥಾನ ಸಿಕ್ಕರೆ, ಅದೇ ಅದೃಷ್ಟ ಎನ್ನಲಾಗುತ್ತಿದೆ. ಈಗಲೇ ಮೇಲ್ಮನೆ ಪ್ರವೇಶಕ್ಕೆ ಅಷ್ಟೊಂದು ಪೈಪೋಟಿ ಏರ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠರು ಅಸ್ತು ಎಂದಲ್ಲಿ ಮಾತ್ರ ಜಿಲ್ಲೆಗೊಂದು ಅವಕಾಶ ಸಿಗಬಹುದು. ಸಿಕ್ಕರೂ ಯಾರಿಗೆ ಎನ್ನುವುದಕ್ಕೆ ಇನ್ನಷ್ಟು ದಿನ ಕಾಯಬೇಕಷ್ಟೆ.

ರಾಜ್ಯಸಭೆ:

ವಿಧಾನ ಪರಿಷತ್ ಸ್ಥಾನಗಳಿಗೂ‌ ಮೊದಲೇ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಸ್ಥಾನಗಳಿಗೆ ತೀವ್ರ ಪೈಪೋಟಿ ಇದ್ದು, ಜಿಲ್ಲೆಗೆ ಇಲ್ಲಿ ಅವಕಾಶ ಸಿಗುವ ಯಾವ ಸಾಧ್ಯತೆಗಳೂ ಇಲ್ಲ. ಪಕ್ಷದ ಘಟಾನುಘಟಿಗಳು ರಾಜ್ಯಸಭೆ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಗೆ ಏನಿದ್ದರೂ ಮೇಲ್ಮನೆ ಚುನಾವಣೆ ವೇಳೆ ಅವಕಾಶ ಸಿಗಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top