ಶ್ರೀರಾಮ ದರ್ಶನ ಬಳಿಕ ಸರ್ಜೆವಾಲಾ ಭೇಟಿ ಮಾಡಿದ ಜೆ.ಟಿ.‌ ಪಾಟೀಲ

ಮಂತ್ರಿಸ್ಥಾನಕ್ಕಾಗಿ ಪಟ್ಟು ಹಿಡಿದು ಇಂದ್ರಪ್ರಸ್ತದಲ್ಲಿ ಗಟ್ಟಿಯಾಗಿ ಕುಳಿತಿರುವ ಜಿಲ್ಲೆಯ ಬೀಳಗಿ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಜೆ.ಟಿ.‌ ಪಾಟೀಲ ಇತರ ಶಾಸಕರ ಜತೆ ಅಯೋಧ್ಯೆಯಲ್ಲಿ ರಾಮಲಲ್ಲಾ ದರ್ಶನ ಪಡೆದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ್ದು ಗಮನಾರ್ಹ ಅಂಶ. ಈ ವೇಳೆ ಸಂಪುಟ ಪುನಾರಚನೆಗೆ ಒತ್ತಾಯಿಸಿದ್ದು ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿರುವುದು ಬಹುದೊಡ್ಡ ರಾಜಕೀಯ ಬೆಳೆವಣಿಗೆ ಆಗಿದೆ.

ಸರ್ಜೆವಾಲಾ ಭೇಟಿ:

ದೆಹಲಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಶಾಸಕರ ಗುಂಪು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಅಹವಾಲು ಸಲ್ಲಿಸಿದೆ. ಇದೀಗ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದೆ. ರಾಜ್ಯ ಕಾಂಗ್ರೆಸ್ ಶಾಸಕರ ಗುಂಪು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನಾರಚನೆಗೆ ಒತ್ತಾಯಿಸುತ್ತಿರುವಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂಪುಟ ಪುನಾರಚನೆಗೆ ಒತ್ತಾಯಿಸಲು ಇದು ಸಕಾಲವಲ್ಲ ಎನ್ನು ಹೇಳಿಕೆ ನೀಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪುನಾರಚನೆಗೆ ಒತ್ತಡ:

ನಾಯಕತ್ವ ಬದಲಾವಣೆ ವಿಷಯವೆ ಬೇರೆ. ಸಂಪುಟ ಪುನಾರಚನೆ ವಿಷಯವೇ ಬೇರೆ. ಅದಕ್ಕೂ ಇದಕ್ಕೂ ತಾಳೆ ಹಾಕುವುದು ಸರಿಯಲ್ಲ ಎಂದು ದೆಹಲಿಯಲ್ಲಿನ ಕಾಂಗ್ರೆಸ್ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಮೂರುವರ್ಷ ಸಮೀಪಿಸುತ್ತಿದೆ. ಎರಡುವರೆ ವರ್ಷ ಆಗುತ್ತಿದ್ದಂತೆ ಸಂಪುಟ ಪುನಾರಚನೆ ಆಗಬೇಕಿತ್ತು.

ಹಿರಿಯರು ಹಾಗೂ ಹೊಸಬರಿಗೆ ಅವಕಾಶ ಕೊಡಬೇಕಿತ್ತು. ಆದರೆ ಇದುವರೆಗೂ ಸಂಪುಟ ವಿಸ್ತರಣೆ ಮಾಡಿಲ್ಲ. ಬೇಗ ಪುನಾರಚನೆ ಮಾಡಿ ಎಂದು ಶಾಸಕರು ಕಾಂಗ್ರೆಸ್ಸಿನ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಬದಲಾವಣೆ ಪರ್ವ:

ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರ ಪೈಕಿ ಜಿಲ್ಲೆಯ ಜೆ.ಟಿ. ಪಾಟೀಲರು ಇದ್ದಾರೆ. ದೆಹಲಿಯ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಿಲ್ಲಾ ಕಾಂಗ್ರೆಸ್ ಪಾಳೆಯದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.

ಸದ್ಯ ಸಂಪುಟದಲ್ಲಿ ಜಿಲ್ಲೆಯಿಂದ ಪ್ರಾತಿನಿಧ್ಯ ಪಡೆದಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಅಬಕಾರಿ ಇಲಾಖೆಯಲ್ಲಿ ನಡೆದಿವೆ ಎನ್ನಲಾಗುತ್ತಿರುವ ಹಗರಣಗಳಿಂದ ಪಕ್ಷದ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕೆಲ ಸಂದರ್ಭಗಳಲ್ಲಂತೂ ಪಕ್ಷ ಮತ್ತು ಸರ್ಕಾರವನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿದ ಪ್ರಸಂಗಗಳು ನಡೆದ ನಿದರ್ಶನಗಳಿವೆ. ಹಾಗಾಗಿ ಪುನಾರಚನೆಗೊಳ್ಳಲಿರುವ ಸಂಪುಟದಲ್ಲಿ ಅವರಿಗೆ ಸಿಗಬಹುದಾದ ಅವಕಾಶಗಳ ಬಗೆಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಪರಿಣಾಮ ಸಹಜ:

ಕಾಂಗ್ರೆಸ್ಸಿನ ಹಿರಿಯ ಶಾಸಕ ಜೆ.ಟಿ.‌ಪಾಟೀಲರ ಪ್ರಯತ್ನಕ್ಕೆ ಫಲ ಸಿಕ್ಕರೂ ಸಿಕ್ಕಬಹುದು. ಅವರ ಹಿರಿತನ, ಅನುಭವ ಮತ್ತು ಅವರ ನಡೆಗಳು ಕೌಂಟ್ ಆಗುವ ಸಾಧ್ಯತೆಗಳು ಇವೆ. ಸಂಪುಟಕ್ಕೆ ಜಿಲ್ಲೆಯಿಂದ ಹೊಸಬರ ಸೇರ್ಪಡೆ ಆದಲ್ಲಿ ಅದು ಪಕ್ಷದ ಮತ್ತು ಜಿಲ್ಲೆಯ ಆಡಳಿತದ ಮೇಲೆಯೂ ಸಹಜವಾಗಿಯೇ ಇನ್ನಿಲ್ಲದ ಪರಿಣಾಮ ಬೀರಲಿದೆ.

ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಗೊಂದಲಗಳ ಜತೆಗೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿನ ಮಹತ್ತರ ಬದಲಾವಣೆಗೆ ನಾಂದಿ ಹಾಡಲಿವೆ ಎನ್ನುವ ಮಾತುಗಳು ಜಿಲ್ಲಾದ್ಯಂತ ವ್ಯಾಪಕವಾಗಿ ಕೇಳಿ ಬರುತ್ತಿವೆ. ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಕಳೆದ ಎರಡುವರೆ ದಶಕದಿಂದ ನಡೆದುಕೊಂಡು ಬಂದಿರುವ ರಾಜಕಾರಣ ಅಂತ್ಯಗೊಂಡು ಹೊಸ ವಾತಾವರಣ ಸೃಷ್ಟಿ ಆಗುತ್ತದೋ ಹೇಗೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top