ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಮುಕ್ತಾಯವಾದದ್ದೆ ತಡ, ಜಿಲ್ಲೆಯ ಹಿರಿಯ ಕಾಂಗ್ರೆಸ್ ಶಾಸಕ ಜೆ.ಟಿ. ಪಾಟೀಲ ಇತರ ಶಾಸಕರ ಜತೆಗೂಡಿ ದೆಹಲಿಗೆ ಹಾರಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಜೆಟಿ ಮಂತ್ರಿ ಸ್ಥಾನಕ್ಕಾಗಿ ಹಕ್ಕೊತ್ತಾಯ ಮಂಡಿಸಿದ್ದಾರೆ.
ಸೋತವರಿಗೆ ಅವಕಾಶ:
ವಿಧಾನಸಭೆ ಚುನಾವಣೆಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡವರನ್ನು ಮೇಲ್ಮನೆಗೆ ನೇಮಕ ಮಾಡಿ, ಅವರನ್ನು ಮೂರನೇ ಬಾರಿಗೆ ಸಂಪುಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರ್ಪಡೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಾಲ್ಕನೆ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವವರಿಗೆ ಇದುವರೆಗೂ ಮಂತ್ರಿಭಾಗ್ಯ ಸಿಕ್ಕಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸತತ ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಆರ್.ಬಿ. ತಿಮ್ಮಾಪುರ ಅವರನ್ನು ಮೇಲ್ಮನೆಗೆ ನೇಮಕ ಮಾಡಿ ಮಂತ್ರಿಮಂಡಲಕ್ಕೆ ಸೇರಿಸಿಕೊಂಡರು. 2013 -2018 ರ ಅವಧಿಯಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಆಗಿದ್ದರು. 2018 ರಲ್ಲಿ ಕಾಂಗ್ರೆಸ್ – ಜೆಡಿಎಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಸತತ ನಾಲ್ಕುಬಾರಿ ಶಾಸಕರಾಗಿ, ಪ್ರಭಾವಿ ಸಚಿವರಾಗಿ ಕೆಲಸ ಮಾಡಿದ್ದ ಗೋವಿಂದ ಕಾರಜೋಳರಿಗೆ ಸೋಲಿನ ರುಚಿ ತೋರಿಸಿದ ತಿಮ್ಮಾಪುರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೂ ತಿಮ್ಮಾಪುರ ಸಚಿವರಾಗಿದ್ದಾರೆ.
ಸಂಪುಟ ಪುನಾರಚನೆ ಕೂಗು:
ಸದ್ಯ ರಾಜ್ಯ ಸಚಿವ ಸಂಪುಟ ಪುನಾರಚನೆ ಕೂಗು ಜೋರಾಗಿದೆ. 20 ಕ್ಕೂ ಅಧಿಕ ಶಾಸಕರು ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದಾರೆ. ದೆಹಲಿಗೆ ಹೋಗಿರುವ ಶಾಸಕರ ಪೈಕಿ ಜಿಲ್ಲೆಯ ಬೀಳಗಿ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಜೆ.ಟಿ. ಪಾಟೀಲ ಕೂಡ ಇದ್ದಾರೆ ಎನ್ನುವುದು ಗಮನಾರ್ಹ.
ಸಿಗದ ಅವಕಾಶ:
ನಾಲ್ಕನೆ ಬಾರಿಗೆ ಶಾಸಕರಾಗಿರುವ ಜೆ.ಟಿ. ಪಾಟೀಲರ ಸಂಪುಟ ಸೇರ್ಪಡೆಗೆ ಇದುವರೆಗೂ ಜಿಲ್ಲೆ, ಪ್ರದೇಶವಾರು ಆದ್ಯತೆ, ಸಮುದಾಯ ಪರಿಗಣನೆ ವಿಷಯಗಳು ಅಡ್ಡಯಾಗುತ್ತಿವೆಯಂತೆ. ರೆಡ್ಡಿ ಸಮುದಾಯಕ್ಕೆ ಆದ್ಯತೆ ನೀಡುವ ಸಮಯದಲ್ಲಿ ಇತರರಿಗೆ ಅವಕಾಶ ಸಿಕ್ಕುತ್ತಿರುವ ಪರಿಣಾಮ ಜೆ.ಟಿ.ಪಾಟೀಲರಿಗೆ ಮಂತ್ರಿಭಾಗ್ಯ ಸಿಕ್ಕುತ್ತಿಲ್ಲವಂತೆ. ಈ ಬಾರಿಯಾದರೂ ಅವಕಾಶ ನೀಡುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಇತರ ಶಾಸಕರ ಜತೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಕಾಶಪ್ಪನಬರ ಆಕಾಂಕ್ಷಿ:
ಒಂದೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನಾರಚನೆಗೆ ಹಸಿರು ನಿಶಾನೆ ತೋರಿದಲ್ಲಿ ಜಿಲ್ಲಾವಾರು ಪ್ರಾತಿನಿಧ್ಯದಲ್ಲಿ ಜೆ.ಟಿ.ಪಾಟೀಲರಿಗೆ ಅವಕಾಶಗಳ ಸಾಧ್ಯತೆಗಳು ನಿಚ್ಚಳವಾಗಿವೆ. ಜತೆಗೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದಾರೆ.
ಆರೋಪಗಳ ಸರಮಾಲೆ:
ಏತನ್ಮಧ್ಯೆ ಸಂಪುಟ ಪುನಾರಚನೆ ವೇಳೆ ಸದ್ಯ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಕೈ ಬಿಡುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅಬಕಾರಿ ಇಲಾಖೆ ಬಗೆಗೆ ಆಗಾಗ್ಗೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಅಬಕಾರಿ ಇಲಾಖೆಯಲ್ಲಿನ ಹಗರಣಗಳಲ್ಲಿ ಸಚಿವರು ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಬಕಾರಿ ಇಲಾಖೆಯಲ್ಲಿನ ಹಗರಣವನ್ನು ಬಹಿರಂಗವಾಗಿ ಪ್ರಸ್ತಾಪಿಸಿ ಟೀಕಿಸಿದ್ದರು. ಒಂದು ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಇವರನ್ನು ಸಂಪುಟದಿಂದ ಕೈಬಿಡಲು ಮನಸ್ಸು ಮಾಡಿತ್ತಂತೆ. ಸರ್ಕಾರಕ್ಕೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಮಧ್ಯಸ್ಥಿಕೆ ವಹಿಸಿ, ಸಂಪುಟದಲ್ಲಿ ಉಳಿಯುವಂತೆ ನೋಡಿಕೊಂಡರು ಎನ್ನುವ ಮಾತು ಜಗಜ್ಜಾಹಿರು ಆಗಿತ್ತು.
ಜಿಲ್ಲಾ ಪ್ರಾತಿನಿಧ್ಯ:
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ವೇಳೆ ತಿಮ್ಮಾಪುರ ಅವರನ್ನು ಕೈಬಿಟ್ಟು ಜಿಲ್ಲಾವಾರು ಪ್ರಾತಿನಿಧ್ಯ ದಡಿ ಬೀಳಗಿ ಶಾಸಕ ಜೆ.ಟಿ. ಪಾಟೀಲರಿಗೆ ಮಂತ್ರಿ ಸ್ಥಾನದ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ. ಶಾಸಕ ವಿಜಯಾನಂದ ಕಾಶಪ್ಪನವರ ಕೂಡ ಮೊದಲಿನಿಂದ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಈ ಮೂವರ ಪೈಕಿ ಪುನಾರಚಿತ ಸಂಪುಟದಲ್ಲಿ ಯಾರಿಗೆ ಅವಕಾಶ ಸಿಗಬಹುದು ಎನ್ನುವ ಕುರಿತು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಜಿಲ್ಲೆಯ ಹಿರಿಯ ಶಾಸಕ ಜೆ.ಟಿ.ಪಾಟೀಲರು ಮಂತ್ರಿಸ್ಥಾನ ಗಿಟ್ಟಿಸಿಕೊಳ್ಳಲು ಹೋಗಿರುವುದು ಅಚ್ಚರಿಯ ಬೆಳವಣಿಗೆ. ಇದುವರೆಗೂ ಅವರು ಮಂತ್ರಿಸ್ಥಾನಕ್ಕಾಗಿ ವರಿಷ್ಠರ ಬಳಿ ಅಲೆದವರಲ್ಲ. ಪಕ್ಷ ಗುರುತಿಸಿ ಮಂತ್ರಿಸ್ಥಾನದ ಅವಕಾಶ ನೀಡಲಿ ಎಂದವರು. ಕಾಂಗ್ರೆಸ್ ಹೈಕಮಾಂಡ್ ನಿಷ್ಠುರತೆಗೆ ಹೆಸರಾಗಿರುವ ಜೆ.ಟಿ.ಪಾಟೀಲರಿಗೆ ಅವಕಾಶ ನೀಡಬೇಕು ಎನ್ನುವ ಚರ್ಚೆ ಜಿಲ್ಲಾ ರಾಜಕಾರಣದಲ್ಲಿ ಜೋರಾಗಿದೆ.
- ವಿಠ್ಠಲ ಆರ್. ಬಲಕುಂದಿ



