ಬಿಜೆಪಿ ಉಚ್ಛಾಟಿತ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪುತ್ರನ ಅದ್ಧೂರಿ ಮದುವೆ ಮೂಲಕ ರಾಜ್ಯ ರಾಜಕಾರಣದ ಗಮನ ಸೆಳೆದಿದ್ದಾರೆ. ಯತ್ನಾಳ್ ಗೌಡರ ಪುತ್ರನ ಮದುವೆಗೆ ಪಕ್ಷಾತೀತವಾಗಿ ರಾಜಕೀಯ ಸ್ನೇಹಿತರ ದಂಡು ಆಗಮಿಸಿತ್ತು. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ರೆಬಲ್ ಗುಂಪು ಮತ್ತು ತಟಸ್ಥ ಬಣದ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮಿತ್ರರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧು-ವರರಿಗೆ ಹಾರೈಸಿದರು.
ಕೊಟೆಯಲ್ಲಿ ಯತ್ನಾಳ್ ಬಲ:
ಯತ್ನಾಳರ ಮದುವೆ ಸಮಾರಂಭದ ಬೆನ್ನಲ್ಲೇ ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದೆ. ಅದರಲ್ಲೂ ಅಖಂಡ ವಿಜಯಪುರ ಜಿಲ್ಲೆಗೆ ಸೇರಿದ್ದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಾಕಷ್ಟು ಗಮನ ಸೆಳೆದಿದೆ. ಕೇಸರಿ ಪಡೆಯ ಭದ್ರಕೋಟೆಯಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಅವರ ಬಹುದೊಡ್ಡ ಬೆಂಬಲಿಗರ ಪಡೆ ಇದೆ. ಇತ್ತೀಚೆಗೆ ಶಿವಾಜಿ ಜಯಂತಿ ವೇಳೆ ನಡೆದ ಘಟನೆ ಹಿನ್ನೆಲೆ ಬಾಗಲಕೋಟೆಗೆ ಭೇಟಿ ನೀಡಿದ್ದ ವೇಳೆ ಅವರ ಬೆಂಬಲಿಗರ ಪಡೆಯ ಬಲಾಬಲ ಪ್ರದರ್ಶನವೇ ನಡೆಯಿತು. ಹಾಗೇ ಬಿಜೆಪಿಯ ಪ್ರಮುಖರು, ಅಪಾರ ಸಂಖ್ಯೆಯ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದ್ದರು ಎನ್ನುವುದು ಗಮನಾರ್ಹ.
ಪ್ರಚಾರಕ್ಕೆ ಬಂದರೆ ತಪ್ಪಿಲ್ಲ:
ಬಿಜೆಪಿ ನಂಬಿದ್ದೆ ಹಿಂದುಗಳ ಮತಬ್ಯಾಂಕ್ ಈ ಮತಬ್ಯಾಂಕ್ ನ್ನು ಒಗ್ಗೂಡಿಸಿ ಗಟ್ಟಿಗೊಳಿಸಲು ಯತ್ನಾಳ್ ಅವರು ಚುನಾವಣೆ ಪ್ರಚಾರಕ್ಕೆ ಬರಲೇಬೇಕು ಎನ್ನುವ ಒತ್ತಡ ಬಿಜೆಪಿ ಪಾಳೆಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ಏತನ್ಮಧ್ಯೆ ಬಿಜೆಪಿ ಮುಖಂಡ , ಮಾಜಿ ಶಾಸಕ, ಯತ್ನಾಳರ ಆತ್ಮೀಯ ಒಡನಾಡಿ ವೀರಣ್ಣ ಚರಂತಿಮಠ ಅವರು, ಯತ್ನಾಳ್ ಅವರು ವೈಯಕ್ತಿಕವಾಗಿ ಚುನಾವಣೆಗೆ ಬಂದರೆ ತಪ್ಪೇನು ಎಂದು ಪ್ರಶ್ನಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವೈಯಕ್ತಿಕ ಸ್ನೇಹದಿಂದಾಗಿ ಚರಂತಿಮಠ ಅವರು ಯತ್ನಾಳರ ಮಗನ ಮದುವೆಯಲ್ಲಿ ಭಾಗವಹಿಸಿದ್ದರು. ಈಗ ಯತ್ನಾಳರು ವೈಯಕ್ತಿಕ ಆಸಕ್ತಿಯಿಂದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬಹುದು ಎನ್ನುವ ಮಾತನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳರು ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಪಕ್ಷದ ಮುಖಂಡರು ಒಪ್ಪುತ್ತಾರೋ ಹೇಗೆ ಎನ್ನುವುದೇ ಸದ್ಯ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಬಿಜೆಪಿಯ ಅನೇಕ ಮುಖಂಡರು ಹೇಗಾದರೂ ಮಾಡಿ ಪಕ್ಷಕ್ಕೆ ವಾಪಸ್ ಕರೆ ತರಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ. ಅದಕ್ಕೆ ಯತ್ನಾಳರ ಸಹಮತವಿದ್ದರೂ ಅವರ ಷರತ್ತುಗಳು ಮುಂದಿನ ಪ್ರಕ್ರಿಯೆಗೆ ಅಡ್ಡಿಯಾಗಿವೆ.
ಆಪ್ತತೆ ಅಡ್ಡಿ:
ಬಿಜೆಪಿ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳದೇ ಹೋದಲ್ಲಿ ಹೊಸ ಪಕ್ಷವನ್ನು ಕಟ್ಟುವುದಾಗಿ ಅನೇಕ ಸಾರಿ ಬಹಿರಂಗವಾಗಿಯೇ ಹೇಳಿದ್ದಾರೆ. ಅದರ ಮೊದಲ ಪ್ರಯತ್ನ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದಲೇ ಆರಂಭಗೊಳ್ಳುತ್ತದೋ ಹೇಗೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಬಹಶಃ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಹೊಸ ಪ್ರಯತ್ನಕ್ಕೆ ಸ್ಥಳೀಯ ಮುಖಂಡರ ನಡುವಿನ ಆಪ್ತತೆ ಅಡ್ಡಿಯಾಗಿ ಪರಿಣಮಿಸಬಹುದಾಗಿದೆ.
ಪ್ರಚಾರಕ್ಕೆ ಬರಲಿ :
ಒಂದಂತೂ ನಿಜ. ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಯತ್ನಾಳರು ತಮ್ಮದೇ ಆದ ಬಹುದೊಡ್ಡ ಬೆಂಬಲಿಗರ ಪಡೆಯನ್ನು ಹೊಂದಿದ್ದಾರೆ. ಹಾಗಾಗಿ ಇಲ್ಲಿನ ಬಿಜೆಪಿ ಮುಖಂಡರು ಯತ್ನಾಳರ ಬೆಂಬಲವನ್ನು ಆಶಿಸುತ್ತಿದ್ದಾರೆ. ಯತ್ನಾಳರು ಪ್ರಚಾರಕ್ಕೆ ಬಂದಲ್ಲಿ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯವನ್ನು ಯಾರೂ ತಳ್ಳಿ ಹಾಕುತ್ತಿಲ್ಲ.
ರಾಜ್ಯ ನಾಯಕರು ಒಪ್ಪುತ್ತಾರಾ ?:
ರಾಜ್ಯ ಬಿಜೆಪಿಯಲ್ಲಿ ಯತ್ನಾಳರೊಂದಿಗೆ ಹಾವು- ಮುಂಗಸಿಯಂತಿರುವ ಪ್ರಬಲ ನಾಯಕರು ಅವರು ಪ್ರಚಾರಕ್ಕೆ ಬರಬೇಕು ಎನ್ನುವ ಸ್ಥಳೀಯ ಮುಖಂಡರ ನಿಲುವಿಗೆ ಸ್ಪಂದಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ. ಚುನಾವಣೆ ಪ್ರಚಾರಕ್ಕೆ ಬರಬೇಕು. ವೈಯಕ್ತಿಕವಾಗಿ ಬಂದರೆ ತಪ್ಪಿಲ್ಲ ಎನ್ನುವ ಹೇಳಿಕೆಯೇ ಟಿಕೆಟ್ ವಿಚಾರದಲ್ಲಿ ಮಾರಕವಾಗಿ ಪರಿಣಮಿಸುತ್ತಾ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
ಅಚ್ಚರಿಯ ಸಂಗತಿ ಎಂದರೆ ಪುತ್ರನ ಅದ್ಧೂರಿ ಮದುವೆಯ ನಂತರ ಯತ್ನಾಳರು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಹಾಗಾಗಿಯೇ ಬಾಗಲಕೋಟೆ ಉಪಚುನಾವಣೆಯಲ್ಲಿ ಅವರ ಸಹಕಾರದ ಅಗತ್ಯತೆಯನ್ನು ಪ್ರತಿಪಾದಿಸಿರುವುದು ಸಹಜವೆಂದು ರಾಜಕೀಯ ವಲಯದಲ್ಲಿ ಪರಿಗಣಿಸಲಾಗುತ್ತಿದೆ. ಪಕ್ಷದ ವರಿಷ್ಠರ ನಿರ್ಧಾರ ಇದಕ್ಕೆ ಉತ್ತರವಾಗಲಿದೆ. ಅದಕ್ಕಾಗಿಯೇ ವೈಯಕ್ತಿಕವಾಗಿ ಚುನಾವಣೆ ಪ್ರಚಾರಕ್ಕೆ ಬರುವುದರಲ್ಲಿ ತಪ್ಪೇನಿದೆ ಎನ್ನುವ ನಿಲುವನ್ನು ಬಹಿರಂಗ ಪಡಿಸಿದಂತಿದೆ. ಹಾಗೆ ಈ ವಿಷಯದಲ್ಲಿ ಪಕ್ಷದ ನಿರ್ಧಾರವೇ ಅಂತಿಮ ಎಂದು ಹೇಳಿರುವುದರ ಹಿಂದೆ ಸಾಕಷ್ಟು ರಾಜಕೀಯ ಮರ್ಮ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
- ವಿಠ್ಠಲ ಆರ್. ಬಲಕುಂದಿ




