ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ರಣಕಣದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದಲ್ಲಿ ಸದ್ಯ ಬಿಜೆಪಿ ಕಾಂಗ್ರೆಸ್ಸಿಗಿಂತ ಒಂದು ಹೆಜ್ಜೆ ಮುಂದಿದೆ. ಕಾಂಗ್ರೆಸ್ಸಿನಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಮತ್ತು ಅವರ ಪುತ್ರ ರಾಹಲ್ ಬಿಟ್ಟರೆ ಉಳಿದವರು ಇನ್ನೂ ಅಖಾಡ ಪ್ರವೇಶಿಸಿಲ್ಲ. ಆದರೆ ಬಿಜೆಪಿ ಪಾಳೆಯದಲ್ಲಿ ಹಾಗಿಲ್ಲ ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರ ದಂಡು, ಸಂಸದರು ಕ್ಷೇತ್ರ ಸುತ್ತಿ ಬಿರುಸಿನ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.
ಪಿಎಚ್ ಎಂಟ್ರಿ ಮಧ್ಯೆಯೂ ದುಗುಡ:
ಸದಸ್ಯ ಪಿ.ಎಚ್. ಪೂಜಾರ್ ನಾಮಪತ್ರ ಸಲ್ಲಿಕೆ ಕಾರ್ಯದ ವೇಳೆ ಕಾಣಿಸಿಕೊಂಡು, ಬಳಿಕ ಚುನಾವಣೆ ಕಣದಿಂದ ದೂರವಿದ್ದರು. ಅದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಆದರೆ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಪಕ್ಷದ ಅಭ್ಯರ್ಥಿ ಪರ ಬೆಂಬಲಿಗರೊಂದಿಗೆ ಬಹಿರಂಗ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇಷ್ಟೆಲ್ಲ ಅಬ್ಬರದ ಮಧ್ಯೆಯೂ ಎಲ್ಲೊ ಒಂದುಕಡೆ ದುಗುಡ ಹಾಗೆ ಮನೆ ಮಾಡಿರುವುದು ಎದ್ದು ಕಾಣಿಸುತ್ತಿದೆ.
ಕೈಗೂಡದ ಯತ್ನಾಳ ಬೆಂಬಲಿಗರ ಆಶಯ:
ಚುನಾವಣೆ ಪ್ರಚಾರಕ್ಕೆ ಹಿಂದುತ್ವದ ಪ್ರಬಲ ಪ್ರತಿಪಾದಕ , ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬರಬೇಕು ಎನ್ನುವ ಅವರ ಬೆಂಬಲಿಗರ ಹಾಗೂ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಆಶಯವೂ ಆಗಿದೆ. ಈ ಆಶಯ ಎಷ್ಟರ ಮಟ್ಟಿಗೆ ಕೈಗೂಡಲಿದೆ ಎನ್ನುವ ಅನುಮಾನ ಬಹುತೇಕರನ್ನು ಕಾಡುತ್ತಲೇ ಇದೆ.
ರಾಜ್ಯಾಧ್ಯಕ್ಷ ಮೌನ:
ಯತ್ನಾಳ ಚುನಾವಣೆ ಪ್ರಚಾರಕ್ಕೆ ಬರಬೇಕು ಎನ್ನುವ ನಿಲುವಿನ ಬಗೆಗೆ ಸ್ಪಷ್ಟನೆ ನೀಡಬೇಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆ ದಿನದ ಮೆರವಣಿಗೆ ಕಾರ್ಯಕ್ರಮದಲ್ಲಿ ಬಿ.ವೈ. ವಿಜಯೇಂದ್ರ ಅವರು ಆಗಮಿಸಿದ್ದ ವೇಳೆ ಯತ್ನಾಳ ಬೆಂಬಲಿಗರಿಂದ “ಯತ್ನಾಳ ನೆಕ್ಸ್ಟ್ ಸಿಎಂ” ಎನ್ನುವ ಭಾವಚಿತ್ರದ ಪ್ಲೆಕ್ಸ್ ಗಳು ರಾರಾಜಿಸಿದ್ದವು. ಬಿಜೆಪಿ ರಾಜ್ಯ ಮುಖಂಡರು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡವರ ಭಾವಚಿತ್ರದ ಪ್ಲೆಕ್ಸ್ ರಾರಾಜಿಸಿದ ಬಗೆಗೆ ಯಾರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿಲ್ಲದ ಒತ್ತಡ:
ಸ್ವತಃ ಪಕ್ಷದ ರಾಜ್ಯಾಧ್ಯಕ್ಷರೆ ಏನೂ ಪ್ರತಿಕ್ರಿಯೆ ನೀಡದಿದ್ದರೂ ಯತ್ನಾಳರ ಬೆಂಬಲಿಗರು ಮಾತ್ರ ಚುನಾವಣೆ ಪ್ರಚಾರಕ್ಕೆ ಕರೆಯಿಸಬೇಕು ಎನ್ನುವ ಒತ್ತಡವನ್ನು ಹಾಕುತ್ತಿದ್ದಾರೆ. ಹಾಗಾದರೆ ಈ ಯಕ್ಷಪ್ರಶ್ನೆಗೆ ಮೌನವೇ ಉತ್ತರವಾಗಲಿದೆಯಾ ಎನ್ನುವ ಅನುಮಾನಗಳು ಶುರುವಾಗಿವೆ. ಬಿಜೆಪಿಯ ಬಹುದೊಡ್ಡ ತಂಡವೇ ಕ್ಷೇತ್ರದಲ್ಲಿ ಬೀಡು ಬಿಟ್ಡಿದ್ದರೂ, ಕ್ಷೇತ್ರದಲ್ಲಿ ಕೇಸರಿ ಪಡೆಯ ಹವಾ ಇದ್ದಾಗಲೂ ಯತ್ನಾಳರ ವಿಷಯದಲ್ಲಿ ರಾಜ್ಯಾಧ್ಯಕ್ಷರು ಏಕೆ ಸ್ಪಷ್ಟತೆಗೆ ಬರುತ್ತಿಲ್ಲ ಎನ್ನುವುದು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮತಬ್ಯಾಂಕ್ ರಾಜಕಾರಣ:
ಬಿಜೆಪಿ ಇಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯ ಸಾಕಷ್ಡು ಪ್ರಾಬಲ್ಯ ಹೊಂದಿದೆ. ಜತೆಗೆ ಇಲ್ಲಿ ಪ್ರಬಲ ಹಿಂದುತ್ವ ಪ್ರತಿಪಾದಕರ ಬಹುದೊಡ್ಡ ಪಡೆಯೇ ಇದೆ. ಇದು ಯತ್ನಾಳರ ಪರವಾಗಿ ಕೆಲಸ ಮಾಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಯಾವುದೇ ಸ್ಪಷ್ಟ ನಿರ್ಧಾರ ಬಿಜೆಪಿ ಪಾಳೆಯದಿಂದ ಹೊರಬರುತ್ತಿಲ್ಲ.
ನೆಂಟರ ಮೇಲೆ ಇಷ್ಟ:
ಮೂಲಗಳ ಪ್ರಕಾರ ಯತ್ನಾಳ ಅವರಿಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಇರಾದೆ ಇದ್ದಲ್ಲಿ ಬಹಿರಂಗ ಪ್ರಚಾರಕ್ಕೆ ಇಳಿಯದೇ ಗುಪ್ತಗಾಮಿನಿಯಂತೆ ಕೆಲಸ ಮಾಡಲಿ ಎನ್ನುವ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಇಷ್ಟ ಎನ್ನುವಂತಹ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ ಇಂತಹ ವಿಚಾರಗಳಿಗೆಲ್ಲ ಯತ್ನಾಳ ಅವರು ಕ್ಯಾರೇ ಎನ್ನುವ ಆಸಾಮಿ ಅಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿರುವ ಸಂಗತಿ. ಏತನ್ಮಧ್ಯೆ ಚುನಾವಣೆ ಪ್ರಚಾರ ವಿಷಯಕ್ಕೆ ಸಂಬಂಧಿಸಿದಂತೆ ಯತ್ನಾಳರ ವಿಷಯ ಚರ್ಚೆಯೇ ಬೇಡ. ಬೇಕಿದ್ದರೆ ಅವರಷ್ಟಕ್ಕೆ ಅವರು ಬಂದು ಹೋಗಲಿ ಎನ್ನುವ ವಾದ ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸ್ಪಷ್ಟ ನಿಲುವಿನ ನಿರೀಕ್ಷೆ:
“ಹಬ್ಬ ಆಗಲಿ, ಬೇಳೆ ಉಳಿಯಲಿ” ಎನ್ನುವ ಬಿಜೆಪಿಗರ ಈ ನೀತಿ ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎನ್ನುವುದು ಕುತೂಹಲದ ಸಂಗತಿ ಆಗಿದೆ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳನ್ನು ಗೆಲ್ಲಬೇಕು ಎನ್ನುವ ವಿಚಾರದಲ್ಲಿರುವಾಗಲೇ ದಾವಣಗೆರೆಯಲ್ಲಿನ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿದಿರುವುದು ಬಿಜೆಪಿ ಗೆಲುವಿನ ದಾರಿಯನ್ನು ದುರ್ಗಮಗೊಳಿಸಿದೆ. ಹಾಗೇ ಬಾಗಲಕೋಟೆ ಕ್ಷೇತ್ರದಲ್ಲೂ ಎಷ್ಟೆ ಒಗ್ಗಟ್ಟಿನ ಮಂತ್ರ ಜಪಿಸಿದರೂ ಹಿಂದುತ್ವ ಪ್ರತಿಪಾದನೆಯ ಯುವ ಪಡೆಯ ಬಯಕೆ ಇಡೇರದೆ ಹೋದಲ್ಲಿ, ಪಕ್ಷ ಗೆಲುವಿಗೆ ಇನ್ನಷ್ಟು, ಮತ್ತಷ್ಟು ಬೇವರು ಹರಿಸಬೇಕಾಗುತ್ತದೆ. ಬಿಜೆಪಿ ರಾಜಾಧ್ಯಕ್ಷರ ನಿಲುವು ಯತ್ನಾಳ ಬೆಂಬಲಿಗರ ಪ್ರಶ್ನೆಗಳಿಗೆ ಉತ್ತರವಾಗಲಿದೆ.
- ವಿಠ್ಠಲ ಆರ್. ಬಲಕುಂದಿ



