ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಸತ್ತಿಗೆ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಶಿಗ್ಗಾವ ವಿಧಾನಸಭೆ ಕ್ಷೇತ್ರದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆ ಆದಾಗ ಆ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಹೊಣೆಹೊತ್ತು ಅದನ್ನು ಯಶಸ್ವಿಯಾಗಿ ನಿಭಾಯಿಸಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವ ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ. ಈಗ ಅಂತಹುದ್ದೇ ಮತ್ತೊಂದು ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಜಾರಕಿಹೊಳಿ ಉಸ್ತುವಾರಿ:
ದಿ.ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆ ಉಸ್ತುವಾರಿಯನ್ನು ಪಕ್ಷದ ವರಿಷ್ಠರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಹಿಸಿದ್ದಾರೆ. ಅಂದು ಶಿಗ್ಗಾವ ವಿಧಾನಸಭೆ ಕ್ಷೇತ್ರ ಗೆಲ್ಲಿಸಿಕೊಂಡು ಬರಲು ಏಕಾಂಗಿಯಾಗಿ ಅಖಾಡಕ್ಕಿಳಿದಿದ್ದ ಜಾರಕಿಹೊಳಿ ಅವರು ಇಂದು ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಲು ಪುತ್ರ ರಾಹುಲ್ ಜಾರಕಿಹೊಳಿ ಅವರನ್ನೂ ಜತೆಯಾಗಿಸಿಕೊಂಡಿದ್ದಾರೆ.
ರಾಹುಲ್ ಎಂಟ್ರಿ:
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆ ಪ್ರಚಾರ ತೀವ್ರಗೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯದಲ್ಲಿ ಘಟಾನುಘಟಿಗಳು ಚುನಾವಣೆ ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಇವರುಗಳ ಮಧ್ಯೆ ಸತೀಶ್ ಜಾರಕಿಹೊಳಿ, ಅವರ ಮಗ ರಾಹುಲ್ ಜಾರಕಿಹೊಳಿ ಅಖಾಡಕ್ಕಿಳಿದಿರುವುದು ಸಾಕಷ್ಟು ಗಮನ ಸೆಳೆದಿದೆ.
ಯುವ ಮತದಾರರ ಗುರಿ:
ಬಾಗಲಕೋಟೆ ಕ್ಷೇತ್ರಕ್ಕೆ ಆಗಮಿಸಿರುವ ರಾಹುಲ್ ಜಾರಕಿಹೊಳಿ ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಅವರೆಷ್ಟು ದಿನ ಕ್ಷೇತ್ರದಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನುವುದು ಕೂಡ ಕುತೂಹಲದ ಸಂಗತಿ ಆಗಿದೆ. ಅಂದಹಾಗೆ ಕ್ಷೇತ್ರದಲ್ಲಿನ ಯುವ ಮತದಾರರನ್ನು ಸೆಳೆಯುವುದು ಇವರ ಪ್ರಚಾರದ ಕಾರ್ಯ ತಂತ್ರವಾಗಿದೆ ಎನ್ನುವುದು ರಾಜಕೀಯ ಲೆಕ್ಕಾಚಾರ.
ಅಹಿಂದ ಮತಗಳ ಕ್ರೋಢೀಕರಣ:
ಅಂದು ಶಿಗ್ಗಾವದಲ್ಲಿ ಅಹಿಂದ ಮತಗಳನ್ನು ಒಗ್ಗೂಡಿಸುವ ಮೂಲಕ ಕ್ಷೇತ್ರವನ್ನು ಕೇಸರಿ ಪಡೆಯಿಂದ “ಕೈ” ವಶ ಮಾಡಿಕೊಂಡಿದ್ದ ಸತೀಶ್ ಜಾರಕಿಹೊಳಿ ಈಗಲೂ ಅಹಿಂದ ಮತಬ್ಯಾಂಕ್ ಕ್ರೋಢಿಕರಿಸುವ ಮೂಲಕವೇ ಕ್ಷೇತ್ರವನ್ನು ಗೆಲ್ಲಲು ಹೊರಟಿದ್ದಾರೆ. ಆ ನಿಟ್ಟಿನಲ್ಲಿಯೇ ತಂತ್ರ- ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ. ಸಣ್ಣ ಪುಟ್ಟ ಸಮುದಾಯದ ಮತಗಳ ಕ್ರೋಢಿಕರಣಕ್ಕೆ ಮುಂದಾಗಿದ್ದಾರೆ.
ಮುಧೋಳದಲ್ಲೂ ಮ್ಯಾಜಿಕ್:
ಗಮನಾರ್ಹ ಅಂಶವೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಧೋಳ ವಿಧಾನಸಭೆ ಕ್ಷೇತ್ರದಲ್ಲೂ ಇದೇ ಸತೀಶ್ ಜಾರಕಿಹೊಳಿ ಅವರು ಮ್ಯಾಜಿಕ್ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ. ತಿಮ್ಮಾಪುರ ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಸತತ ಐದನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಮಾಜಿ ಉಪಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳರಿಗೆ ಸೋಲಿನ ರುಚಿ ತೋರಿಸಿದ್ದರು.
ಈಗ ಬಾಗಲಕೋಟೆ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲು ಮುಂದಾಗಿರುವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪರವಾಗಿ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಾಗೆ ಬಿಜೆಪಿ ಉಸ್ತುವಾರಿ ಪಟ್ಟಿಯಲ್ಲಿ ಸಂಸದ ಗೋವಿಂದ ಕಾರಜೋಳರೂ ಇರುವುದು ಕಾಕತಾಳಿಯ ಎಂದು ಅರ್ಥೈಸಲಾಗುತ್ತಿದೆ.
ಮತಬ್ಯಾಂಕ್ ತಂತ್ರ:
ಉಭಯತರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಮತಬ್ಯಾಂಕ್ ಕ್ರೋಢಿಕರಣಕ್ಕಾಗಿ ಏನೆಲ್ಲ ತಂತ್ರಗಳ ಮೊರೆ ಹೋಗಿದ್ದಾರೆ. ಬಿಜೆಪಿಗರು ಹಿಂದುತ್ವದ ಆಧಾರದ ಮೇಲೆ ಮತಗಳ ಕ್ರೋಢಿಕರಣಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಅಹಿಂದ ಮತಬ್ಯಾಂಕ್ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಶತಾಯ-ಗತಾಯ ಕ್ಷೇತ್ರವನ್ನು ಕೈ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ನಡೆದಿವೆ. ಕ್ಷೇತ್ರವನ್ನು ಉಳಿಸಿಕೊಳ್ಳುವ ಮೂಲಕ ಅಹಿಂದನ ಗಟ್ಟಿತನ ಪ್ರದರ್ಶನಕ್ಕೂ ಈ ಚುನಾವಣೆ ಸಾಕ್ಷಿಕರಿಸುವ ಕೆಲಸ ಕಾಂಗ್ರೆಸ್ ಪಾಳೆಯದಲ್ಲಿ ಸದ್ದಿಲ್ಲದೆ ನಡೆದಿದೆ.
ಒಟ್ಟಾರೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಖಾಡಕ್ಕೆ ಸತೀಶ ಜಾರಕಿಹೊಳಿ ಮತ್ತು ಅವರ ಪುತ್ರ ರಾಹುಲ್ ಧುಮುಕಿರುವುದು ರಾಜಕೀಯವಾಗಿ ಸಾಕಷ್ಟು ಲೆಕ್ಕಾಚಾರಗಳಿಗೆ ಗ್ರಾಸವಾಗಿದೆ.
- ವಿಠ್ಠಲ ಆರ್. ಬಲಕುಂದಿ




