ಉಪಚುನಾವಣೆ: ಯತ್ನಾಳ್ ಪರ ಶ್ರೀರಾಮುಲು ಭರ್ಜರಿ ಬ್ಯಾಟಿಂಗ್

ತಮ್ಮನ್ನು ಬಿಜೆಪಿ ಪಕ್ಷ ಮರುಸೇರ್ಪಡೆ ಮಾಡಿಕೊಂಡರೆ ಸೇರ್ಪಡೆ ಆಗುತ್ತೇನೆ. ಹಾಗಂತ ಯಾರ ಬಳಿಯೂ ಅಲೆಯಲಾರೆ. ಅವರೇ ಪಕ್ಷ ಸೇರಿಸಿಕೊಳ್ಳುವ ಕಾಲ ಬರುತ್ತದೆ ಎನ್ನುವ ಹೇಳಿಕೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್ ಅವರಿಂದ ಹೊರಬಿದ್ದ ಬೆನ್ನಲ್ಲೇ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಅಂದು ಇಂದು ಯತ್ನಾಳ ನಮ್ಮ ನಾಯಕರೆ. ತಾಂತ್ರಿಕ ಕಾರಣಗಳಿಂದ ದೂರವಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನೂ ಒಗ್ಗೂಡಿಸಿಕೊಂಡು ಎಲ್ಲರೂ ಒಟ್ಟಾಗಿ ನಡೆಯುತ್ತೇವೆ ಎನ್ನುವ ಹೇಳಿಕೆ ಗಮನಿಸಿದಾಗ ಎಲ್ಲೊ ಒಂದುಕಡೆ ಯತ್ನಾಳರ ಪಕ್ಷ ಮರು ಸೇರ್ಪಡೆಗೆ ಕಾಲ ಸನ್ನಿಹಿತವಾದಂತೆ ಭಾಸವಾಗುತ್ತಿದೆ.

ಯತ್ನಾಳರನ್ನು ಬಿಟ್ಟುಕೊಡುವುದಿಲ್ಲ:

ಯತ್ನಾಳ್ ಅವರನ್ನು ಹಿಂದೆಯೂ ಒಪ್ಪಿದ್ದೇವೆ. ಇಂದೂ ಒಪ್ಪಿದ್ದೇವೆ. ಅವರು ಚುನಾವಣೆ ಪ್ರಚಾರಕ್ಕೆ ಬರಬೇಕು ಎನ್ನುವ ಒತ್ತಡವಿದೆ. ಅವರು ಬಂದಲ್ಲಿ ಬೇಡ ಎನ್ನುವವರು ಯಾರು ಎಂದು ಪ್ರಶ್ನಿಸಿರುವ ಶ್ರೀರಾಮುಲು, ಯತ್ನಾಳ ಅವರು ಈ ಭಾಗದಲ್ಲಿ ದೊಡ್ಡಶಕ್ತಿ. ಎಲ್ಲರೂ ಸೇರಿಕೊಂಡು ಚುನಾವಣೆ ಮಾಡುತ್ತಿದ್ದೇವೆ. ಇದು ಕೂಡಲಸಂಗಮ ತಾಣ ಎಲ್ಲರೂ ಸೇರಿ ಕೆಲಸ ಮಾಡುತ್ತಿದ್ದೇವೆ.

ರಾಜ್ಯಾಧ್ಯಕ್ಷರು ಅವರು ಬರಬೇಕು, ಇವರು ಬರಬಾರದು ಎಂದು ಎಲ್ಲೂ ಹೇಳಿಲ್ಲ. ಯತ್ನಾಳರು ಮೊದಲಿನಿಂದಲೂ ನಮ್ಮೊಂದಿಗೆ ಇದ್ದವರು. ನಾವೆಲ್ಲ ಒಪ್ಪುವ ನಾಯಕರು. ಅವರು ಅವಿಭಜಿತ ವಿಜಯಪುರ ಜಿಲ್ಲೆಯ ಪ್ರಭಾವಿ ನಾಯಕರು. ಬೇರೆ ಬೇರೆ ಕಾರಣದಿಂದ ನಮ್ಮಿಂದ ದೂರವಿದ್ದಾರೆ. ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಚುನಾವಣೆ ಪ್ರಚಾರಕ್ಕೆ ಅವರ ಆಗಮನ ಪಕ್ಷಕ್ಕೆ ಲಾಭವಾಗಲಿದೆ ಎನ್ನುವ ಶ್ರೀರಾಮುಲು ಅವರ ಹೇಳಿಕೆ ಗಮನಿಸಿದಾಗ ಯತ್ನಾಳ ಶೀಘ್ರ ಬಾಗಲಕೋಟೆ ಚುನಾವಣೆ ಅಖಾಡಕ್ಕೆ ಧುಮುಕಲಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಶೀಘ್ರ ಘರ್ ವಾಪ್ಸಿ:

ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳರ ವಿಷಯದಲ್ಲಿ ಶ್ರೀರಾಮುಲು ಅವರ ಸಕಾರಾತ್ಮಕ ಮಾತುಗಳನ್ನು ಗಮನಿಸಿದಾಗ ಆದಷ್ಟು ಬೇಗ ಯತ್ನಾಳ ಘರ್ ವಾಪ್ಸಿ ಆಗಲಿದ್ದಾರೆ ಎನ್ನುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಜತೆಗೆ ಅವರನ್ನು ಪಕ್ಷಕ್ಕೆ ಕರೆ ತರುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಹಾಗಾಗಿ ಅವರು ಪಕ್ಷ ಸೇರ್ಪಡೆಗಿಂತ ಮೊದಲು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ಕೆ ಧುಮುಕಲಿದ್ದಾರೆ ಎನ್ನಲಾಗುತ್ತಿದೆ.

ಆಶಯ ಸಾಕಾರ:

ಪ್ರಬಲ ಹಿಂದುತ್ವ ಪ್ರತಿಪಾದಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಚುನಾವಣೆ ಪ್ರಚಾರಕ್ಕೆ ಬರಬೇಕು ಎನ್ನುವ ಹಿಂದುಪರ ಕಾರ್ಯಕರ್ತರ ಹಾಗೂ ಅವರ ಅಭಿಮಾನಿಗಳ ಆಶಯ ಈಡೇರುವ ಲಕ್ಷಣಗಳು ಗೋಚರಿಸತೊಡಗಿವೆ. ಚುನಾವಣೆ ಪ್ರಚಾರಕ್ಕೆ ಯತ್ನಾಳ ಅವರು ಎಂದು, ಯಾವಾಗ ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವುದು ಮಾತ್ರ ಸ್ಪಷ್ಟವಾಗಬೇಕಿದೆ. ಒಂದೊಮ್ಮೆ ಯತ್ನಾಳರು ಚುನಾವಣೆ ಪ್ರಚಾರಕ್ಕೆ ಬಂದಿದ್ದು ನಿಜವಾದಲ್ಲಿ, ಅದು ಪಕ್ಷ ಸೇರ್ಪಡೆಯ ಮೊದಲ ಹೆಜ್ಜೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಯತ್ನಾಳ್ ಪ್ರಭಾವ:

ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚುನಾವಣೆ ಪ್ರಚಾರಕ್ಕೆ ಬರಲಿ ಎನ್ನುವ ಹಿಂದುತ್ವವಾದಿಗಳ ಹಠಕ್ಕೆ ಬಿಜೆಪಿ ರಾಜಾಧ್ಯಕ್ಷರು ಪರೋಕ್ಷವಾಗಿ ಅಸ್ತು ಎಂದಂತೆ ಶ್ರೀರಾಮುಲು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿದೆ. ಅವರ ಆಗಮನ ಪಕ್ಷ ಮತ್ತು ಪಕ್ಷದ ಅಭ್ಯರ್ಥಿಗೆ ಸಹಕಾರಿ ಆಗಲಿದೆ ಎನ್ನುವ ಲೆಕ್ಕಚಾರಗಳು ಜೋರಾಗಿವೆ. ಒಂದಂತೂ ನಿಜ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಬೆಂಬಲಿಗರ ಪಡೆ ಇದೆ. ಇದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭವಿದೆ ಎನ್ನುವ ಲೆಕ್ಕಾಚಾರವನ್ನು ಪಕ್ಷದ ಪ್ರಮುಖರಲ್ಲೊಬ್ಬರಾದ ಶ್ರೀರಾಮುಲು ಅವರೇ ಬಹಿರಂಗವಾಗಿ ಒಪ್ಪಿದ್ದಾರೆ.

ನಿತ್ಯ ಸಂಘರ್ಷ:

ದಿನ ಬೆಳಗಾದರೆ ಸಾಕು, ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬಸ್ಥರನ್ನು ಯತ್ನಾಳ ಅವರು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದಾರೆ. ಅವರನ್ನು ಬಿಟ್ಟರೆ ಪಕ್ಷದಲ್ಲಿ ಇನ್ನಾರ ಬಗೆಗೂ ಅವರು ಟೀಕೆ ಮಾಡಿದ ನಿದರ್ಶನಗಳು ಕಡಿಮೆ. ಯತ್ನಾಳ ಮತ್ತು ಯಡಿಯೂರಪ್ಪ ಕುಟುಂಬ ರಾಜಕೀಯವಾಗಿ ಒಟ್ಟಾಗುವುದಿಲ್ಲವೋ ಏನೋ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದ್ದರೂ ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವ ಮಾತು ಮತ್ತೊಮ್ಮೆ ನಿಜವಾಗುವ ಕಾಲ ಬಿಜೆಪಿ ಪಾಳೆಯದಲ್ಲಿ ಸನ್ನಿಹಿತವಾದಂತೆ ಕಾಣುತ್ತಿದೆ. ರಾಜಕಾರಣ ನಿಂತ ನೀರಲ್ಲ. ಇಲ್ಲಿ ಎಲ್ಲವು ಸಾಧ್ಯವಿರುವುದರಿಂದ, ಯಾವುದಕ್ಕೂ ಕಾಯ್ದು ನೋಡಬೇಕಷ್ಟೆ. ಏಕೆಂದರೆ ಯತ್ನಾಳರ ವಿಷಯ ಎಲ್ಲಿ ಚುನಾವಣೆ ಪ್ರಚಾರಕ್ಕಷ್ಟೆ ಸೀಮಿತವಾಗಬಾರದು ಎನ್ನುವ ಆತಂಕ ಕೂಡ ಅವರ ಬೆಂಬಲಿಗರಲ್ಲಿ ಮನೆ ಮಾಡಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top