ಬಿಜೆಪಿಯಲ್ಲಿ ಶುರುವಾಗಿದೆ 28ರ ಚುನಾವಣೆ ಸಿದ್ಧತೆ

28 ರ ವಿಧಾನಸಭೆ ಚುನಾವಣೆಗೆ ಇನ್ನೂ‌ ಸಾಕಷ್ಟು ಸಮಯವಿದೆ. ಅಷ್ಟರ ಮಧ್ಯೆ ಜಿಲ್ಲಾ, ತಾಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಬೇಕಿವೆ. ಆದಾಗ್ಯೂ ಮುಂಬರುವ ವಿಧಾನಸಭೆ ಚುನಾವಣೆಗಾಗಿ ರಾಜ್ಯ ಕಮಲ ಪಾಳೆಯದಲ್ಲಿ ಈಗಲೇ ಅಭ್ಯರ್ಥಿಗಳ ಬಗೆಗೆ ಗಂಭೀರ ಚಿಂತನೆಗಳು ಶುರುವಾಗಿವೆ. ಒಂದು ಕಾಲಕ್ಕೆ ಜಿಲ್ಲೆಯ ಭದ್ರಕೋಟೆಯಂತಿದ್ದ ಬಿಜೆಪಿ ಇಂದು ಛಿದ್ರಛಿದ್ರವಾಗಿದೆ.

ಕ್ಷೇತ್ರದ ಮೇಲೆ ಸವದಿ ಹಿಡಿತ:

ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸುವ ಜತೆಗೆ ಸೂಕ್ತ ಅಭ್ಯರ್ಥಿಗಳ ಶೋಧ ಕಾರ್ಯ ನಡೆಯಬೇಕಿದೆ. ಸದ್ಯ ಆ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕಾರ್ಯೋನ್ಮುಖರಾ ದಂತೆ ಕಾಣಿಸುತ್ತಿಲ್ಲ. ಸದ್ಯ ತೇರದಾಳ ಮತಕ್ಷೇತ್ರದಲ್ಲಿ ಮಾತ್ರ ಗಟ್ಟಿ ಬೇರುಗಳನ್ನು ಹೊಂದಿರುವುದು ಮೇಲ್ಮೋಟಕ್ಕೆ ಕಾಣಿಸುತ್ತಿದೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಸಿದ್ದು ಸವದಿ ತೇರದಾಳ ಕ್ಷೇತ್ರದವರು. ಪಕ್ಷದಲ್ಲಿನ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಹೊರತು ಪಡಿಸಿ ಅವರು ಈಗಲೂ ಕ್ಷೇತ್ರದ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ.

ಮುಂಬರುವ. 28 ರ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವ ವಾತಾವರಣ ತೇರದಾಳ ಬಿಜೆಪಿ ಪಾಳೆಯದಲ್ಲಿದೆ. ಚುನಾವಣೆ ಸಮಯದಲ್ಲಿ ಕೆಲ ಆಕಾಂಕ್ಷಿಗಳು ಹುಟ್ಟಿಕೊಳ್ಳಬಹುದಾದರೂ ಸವದಿ ಅವರಿಗೆ ಅವಕಾಶಗಳು ನಿಚ್ಚಳವಾಗಿವೆ.

ಬೀಳಗಿಯಲ್ಲಿಲ್ಲ ಒಳ ವಿರೋಧ:

ಇಂತಹ ಸಾಧ್ಯತೆಗಳು ಬೀಳಗಿ ವಿಧಾನಸಭೆ ಕ್ಷೇತ್ರದಲ್ಲೂ ಇವೆ. ಅಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಪಕ್ಷದ ಚಟುವಟಿಕೆಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಜತೆಗೆ ಬೀಳಗಿ ಬಿಜೆಪಿ ಪಾಳೆಯದಲ್ಲಿ ಮಾಜಿ ಸಚಿವರಿಗೆ ವಿರೋಧಿ ಬಣ ಎನ್ನುವುದು ಕಾಣಿಸುತ್ತಿಲ್ಲ. ಹಾಗಾಗಿ ಮುರುಗೇಶ ನಿರಾಣಿ ಅವರಿಗೂ ಹೆಚ್ಚು ಕಡಿಮೆ ಬಿಜೆಪಿ ಅಭ್ಯರ್ಥಿ ಆಗುವ ಅವಕಾಶಗಳು ಮುಕ್ತವಾಗಿವೆ.

ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರುಗೇಶ ನಿರಾಣಿ ಬಿಟ್ಟರೆ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಹೀಗೆ ಎಂದು ಹೇಳುವ ಸ್ಥಿತಿ ಇಲ್ಲ. ಜಮಖಂಡಿ, ಮುಧೋಳ, ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಅಷ್ಟಕ್ಕಷ್ಟೆ ಎನ್ನುವಂತಿದೆ. ಜತೆಗೆ ಬಣ ರಾಜಕಾರಣ, ಟಿಕೆಟ್ ಆಕಾಂಕ್ಷಿಗಳ ಬೇರೆ ಇದ್ದಾರೆ.

ಮುಧೋಳದಲ್ಲಿಲ್ಲ ಪೈಪೋಟಿ:

ರಾಜ್ಯ ಬಿಜೆಪಿ ಪ್ರಭಾವಿ‌ ಮುಖಂಡ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರ ಕ್ಷೇತ್ರ ಮುಧೋಳ ಮೀಸಲು ಕ್ಷೇತ್ರದಿಂದ ಅವರಿಗೆ ಅವಕಾಶಗಳು ಇವೆ. ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿ ಅವರನ್ನು ಬಿಟ್ಟರೆ ಉಳಿದಂತೆ ಬೇರೆ ಆಕಾಂಕ್ಷಿಗಳು ಇಲ್ಲ. ಆದರೆ ಅವರು ಸಂಸದರಾಗಿರುವುದರಿಂದ ಅವರಿಗೆ ಪಕ್ಷ ಎಷ್ಟರ ಮಟ್ಟಿಗೆ ಸ್ಪರ್ಧೆಗೆ ಅವಕಾಶ ನೀಡಲಿದೆ ಎನ್ನುವುದು ಕುತೂಹಲದ ಸಂಗತಿ. ಅವರನ್ನು ಬಿಟ್ಟರೆ ಅವರ ಪುತ್ರನಿಗೆ ಅವಕಾಶಗಳು ಇವೆ. ಪಕ್ಷದ ನಿರ್ಧಾರ ಏನಾಗಿರಲಿದೆ ಎನ್ನುವುದನ್ನು ಹೇಳಲು ಇನ್ನೂ ಕಾಲ ಪಕ್ವವಾಗಿಲ್ಲ.

ಆಕಾಂಕ್ಷಿಗಳ ದಂಡು:

ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ಸದ್ಯ ಬಿಜೆಪಿಯ ಜಗದೀಶ್ ಗುಡಗುಂಟಿ ಶಾಸಕರಾಗಿದ್ದು, ಪಕ್ಷದಲ್ಲೇ ಅವರಿಗೆ ಸಾಕಷ್ಟು ಅಪಸ್ವರ ಇದೆ. ಜತೆಗೆ ಅಲ್ಲಿ ಸಾಕಷ್ಟು ಜನ ಬಿಜೆಪಿ ಮುಖಂಡರು ಟಿಕೆಟ್ ಆಕಾಂಕ್ಷಿಗಳು ಇದ್ದಾರೆ.
ಹಾಗಾಗಿ ಅಲ್ಲಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಗಳು ನಿಚ್ಚಳವಾಗಿವೆ.

ಹೊಸಬರ ಎಂಟ್ರಿ ಸಾಧ್ಯತೆ:

ಹುನಗುಂದ ಕ್ಷೇತ್ರದಿಂದ ದೊಡ್ಡನಗೌಡ ಪಾಟೀಲ ಮೂರು‌ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಅವರು ಸಂಘಟನೆ ವಿಷಯದಲ್ಲಿ ಅಷ್ಟಕ್ಕಷ್ಟೆ ಎನ್ನುವ ವಾತಾವರಣ ಇದೆ. ಇಲ್ಲಿಯೂ ಕೂಡ ದೊಡ್ಡನಗೌಡರ ಜತೆ 28 ರಲ್ಲಿ ಟಿಕೆಟ್ ಕೇಳಬೇಕು ಎನ್ನುವವರು ಹಲವು ಮುಖಂಡರಿದ್ದಾರೆ. ಜತೆಗೆ ಕೆಲವರು ಪಕ್ಷ ಸೇರ್ಪಡೆಗೊಂಡು ಟಿಕೆಟ್ ಕೇಳುವ ವಿಚಾರದಲ್ಲಿ ಇದ್ದಾರೆ.

ಹೊಂದಾಣಿಕೆ ಸಮಸ್ಯೆ:

ಬಾದಾಮಿ ಬಿಜೆಪಿ ಪರಿಸ್ಥಿತಿಯಂತೂ ಅಯೋಮಯವಾಗಿದೆ. 2013 ರಿಂದ ಇಲ್ಲಿಯವರೆಗೂ ನಡೆದ ಮೂರು ಚುನಾವಣೆಗಳಲ್ಲೂ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. 2013 ರಲ್ಲಿ ಬಿ.ಬಿ. ಚಿಮ್ಮನಕಟ್ಟಿ, 2018 ರಲ್ಲಿ ಸಿದ್ದರಾಮಯ್ಯ, 2023 ರಲ್ಲಿ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮನಕಟ್ಟಿ ಆಯ್ಕೆಗೊಂಡಿದ್ದಾರೆ. ಸತತ ಮೂರು ಸೋಲುಗಳು ಬಿಜೆಪಿ ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿವೆ.

ಗಮನಾರ್ಹ ಅಂಶವೆಂದರೆ ಬಾದಾಮಿ ಕ್ಷೇತ್ರ 2028 ಚುನಾವಣೆ ವೇಳೆ ಜೆಡಿಎಸ್ -ಬಿಜೆಪಿ ನಡುವೆ ಸ್ಥಾನ ಹೊಂದಾಣಿಕೆ ಏರ್ಪಟ್ಟಲ್ಲಿ, ಈ ಕ್ಷೇತ್ರ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ. ಹೊಂದಾಣಿಕೆ ಏರ್ಪಟ್ಟಲ್ಲಿ ಶತಾಯ-ಗತಾಯ ಕ್ಷೇತ್ರ ಗಿಟ್ಟಿಸಿಕೊಳ್ಳಲು ಜೆಡಿಎಸ್ ಸಜ್ಜಾಗುತ್ತಿದೆ. ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಹೆಚ್ಚು ಸಶಕ್ತವಾಗಿರುವುದು ಇಲ್ಲಿಯೇ. ಅದರ ಬಹುತೇಕ ಎಲ್ಲ ಸಂಘಟನಾ ಚಟುವಟಿಕೆಗಳು ಇಲ್ಲಿಯೇ ನಡೆಯುತ್ತಿವೆ. ಇಷ್ಟರ ಮಧ್ಯೆ ಬಿಜೆಪಿಯಲ್ಲೂ ಟಿಕೆಟ್ ಗಾಗಿ ಹಲವು ಘಟಾನುಘಟಿಗಳು ಸಜ್ಜಾಗಿದ್ದಾರೆ.

ಹೊಸ ಆಕಾಂಕ್ಷಿಗಳು:

ಬಾಗಲಕೋಟೆ ಕ್ಷೇತ್ರದ ಸ್ಥಿತಿಯಂತೂ ಹೇಳುವಂತಿಲ್ಲ. ಮೊನ್ನೆ ತಾನೇ‌ ಮುಗಿದ ಉಪ ಚುನಾವಣೆಯಲ್ಲಿ ಯಾರೂ ಊಹಿಸದ ಅಂತರದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಕೇಸರಿಯ ಭದ್ರಕೋಟೆ ಎಂದೆ ಬಿಂಬಿಸಲಾಗುತ್ತಿದ್ದ ಬಾಗಲಕೋಟೆ ನಗರ ಪ್ರದೇಶ ಛಿದ್ರಛಿದ್ರವಾಗಿದೆ. ಅಂದುಕೊಂಡದ್ದೆಲ್ಲ ಉಲ್ಟಾಪಲ್ಟಾ ಆಗಿದೆ. ಹಿಂದುತ್ವ ಮಂತ್ರಕ್ಕೆ ಅಹಿಂದ ಮಂತ್ರ ಬಲವಾದ ಪೆಟ್ಟುಕೊಟ್ಟಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಸತತ ಎರಡು ಸೋಲು ಅವರ ಬೆಂಬಲಿಗರಿಗೆ ಭಾರಿ ಆಘಾತವನ್ನುಂಟು ಮಾಡಿದೆ. ಪರಿಣಾಮವಾಗಿ 28 ರ ವಿಧಾನಸಭೆ ಚುನಾವಣೆ ಹೊತ್ತಿಗೆ ಇಲ್ಲಿ ಹೊಸಬರು ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಳ್ಳಲು ಬಹುದೊಡ್ಡ ಅವಕಾಶ ಸಿಕ್ಕಂತಾಗಿದೆ.

ಜಿಲ್ಲಾಧ್ಯಕ್ಷರತ್ತ ಚಿತ್ತ:

ಒಟ್ಟಾರೆ ಜಿಲ್ಲೆಯಲ್ಲಿ ಸದ್ಯ ಬಿಜೆಪಿ ಸ್ಥಿತಿ ಅಂದುಕೊಂಡಷ್ಟು ಉತ್ತಮವಾಗಿಲ್ಲ. ಮುಂದಿನ ಚುನಾವಣೆಗೆ ಪಕ್ಷದ ಜಿಲ್ಲಾಧ್ಯಕರು ಅದ್ಹೇಗೆ ಪಕ್ಷವನ್ನು ಸಜ್ಜುಗೊಳಿಸುವರು ಎನ್ನುವುದು ಕುತೂಹಲದ ಸಂಗತಿ ಆಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಕೇಸರಿ ಪಡೆಯ ಕೇಂದ್ರ ವರಿಷ್ಠರು ರಾಜ್ಯದತ್ತ ಮುಖ ಮಾಡಿದ್ದಾರೆ. ಈಗಾಗಲೇ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ ನಬಿನ್ ಅವರ ಆಗಮನದ ದಿನಾಂಕ ನಿಗದಿ ಆದಂತಿದೆ. ರಾಷ್ಟ್ರಾಧ್ಯಕ್ಷರಾದ ನಂತರ ಅವರು ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಕೇಂದ್ರ ವರಿಷ್ಠರ ನಡೆ ಗಮನಿಸಿದ ಯಾರಿಗೆ ಆಗಲಿ, ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವರಿಷ್ಠರ ವೇಗಕ್ಕೆ ತಕ್ಕಂತೆ ರಾಜ್ಯದಲ್ಲಿ ಪಕ್ಷದ ಸಂಘಟನೆ ನಡೆಯಬೇಕಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಹೇಗೆ ಸಂಘಟನೆ ಕೆಲಸ ನಡೆಯಲಿದೆ ಎನ್ನುವುದು ಗಮನಾರ್ಹವಾಗಿದೆ. ಪಕ್ಷದಲ್ಲಿ ಕಾರ್ಯಕರ್ತರ ಪಡೆ ಒಗ್ಗೂಡಿಸುವ ಮುನ್ನ ಪಕ್ಷದ ಮುಖಂಡರ ನಡುವೆ ಉಂಟಾಗಿರುವ ವ್ಯತ್ಯಾಸಗಳನ್ನು ಸರಿ ಪಡಿಸುವ ಮಹಾಯಾಗ ನಡೆಯಬೇಕಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top