ಉಪಚುನಾವಣೆ: ಕೈ ಪಾಲಿಗೆ ಅಸ್ತ್ರವಾಯ್ತು ಕೃಷ್ಣೆಯ ಕೂಗು

ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ವಿಳಂಬದಲ್ಲಿ ರಾಜ್ಯವನ್ನಾಳಿದ ಎಲ್ಲ ಪಕ್ಷಗಳ ಪಾಲಿದೆ. ಪ್ರಮುಖ ರಾಜಕೀಯ ಪಕ್ಷಗಳೆಲ್ಲ ಕೃಷ್ಣೆಯ ಹೆಸರಲ್ಲಿ ರಾಜಕಾರಣ ಮಾಡಿವೆ. ಜನಪ್ರತಿನಿಧಿನಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಇಂದಿಗೂ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ. ಹಾಗಾಗಿ ಇಂದಿಗೂ ಅವಿಭಜಿತ ಲಕ್ಷಾಂತರ ಎಕರೆ ಜಮೀನು ನೀರಾವರಿಯಿಂದ ವಂಚಿತವಾಗಿದೆ. ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಎನ್ನುವುದು ಮರಿಚಿಕೆ ಆಗಿದೆ.

ಇಂತಹ ಸನ್ನಿವೇಶದಲ್ಲಿ ಯುಕೆಪಿ ಯೋಜನಾ ವ್ಯಾಪಿಯ ಭಾಗವಾಗಿರುವ ಬಾಗಲಕೋಟೆ ವಿಧಾನ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಬಿರು ಬಿಸಿಲಿನ ಮಧ್ಯೆ ಅಬ್ಬರದ ಪ್ರಚಾರಕ್ಕೆ ಮೊರೆ ಹೋಗಿವೆ. ಏತನ್ಮಧ್ಯೆ ಅಬ್ಬರದ ಪ್ರಚಾರದಲ್ಲಿ ಕೃಷ್ಣೆಯ ಕೂಗ ಮತ್ತೆ ಮಾರ್ದನಿಸುತ್ತಿದೆ.

ಯೋಜನೆಗೆ ದೊಡ್ಡ ಪೆಟ್ಟು:

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅನುಷ್ಠಾನ ನನೆಗುದಿಗೆ ಬಿದ್ದಿದೆ. ಯೋಜನೇ ಅನುಷ್ಠಾಕ್ಕಾಗಿ ಕೃಷ್ಣಾ ನ್ಯಾಯಾಧೀಕರಣ -2 ರ ಐತೀರ್ಪು ಕುರಿತಂತೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಬೇಕಿದೆ. ಆಲಮಟ್ಟಿ ಎತ್ತರ ಹೆಚ್ಚಳ ಸೇರಿದಂತೆ ಹಲವು ವಿಷಯಗಳಲ್ಲಿ ನೆರೆಯ ಮಹಾರಾಷ್ಟ್ರ , ಆಂಧ್ರಪ್ರದೇಶ ರಾಜ್ಯಗಳು ತಕರರಾರು ತೆಗೆದು ನ್ಯಾಯಾಲಯದ‌ ಮೆಟ್ಟಿಲು ಹತ್ತಿವೆ. ಪರಿಣಾಮವಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಬಗೆಗೆ ರಾಜಕೀಯ ಕಾರಣಗಳಿಗಾಗಿ ಮೀನ- ಮೇಷ‌ ಏನಿಸುತ್ತಿದೆ. ಇದರಿಂದಾಗಿ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗೆ ದೊಡ್ಡ ಪೆಟ್ಟು ಬಿದ್ದಿದೆ.

ಇಲ್ಲಿಯೂ ಕಾವೇರಿ ನ್ಯಾಯ ಅಗತ್ಯ:

ಕಾವೇರಿ ನದಿ ನೀರು ಹಂಚಿಕೆ ವಿಷಯ ನ್ಯಾಯಾಲಯದಲ್ಲಿದ್ದರೂ ಕೇಂದ್ರ ಸರ್ಕಾರ ನ್ಯಾಯಾಲಯದ ನಿಬಂಧನೆಗೊಳಪಟ್ಟು ಅಧಿಸೂಚನೆ ಹೊರಡಿಸಿದೆ. ಅಂತಹ ನೀತಿಯನ್ನು ಕೃಷ್ಣೆಯ ವಿಷಯದಲ್ಲಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ನ್ಯಾಯಾಧೀಕರಣ ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಸಂಸದರಿಂದಲೂ ನಿರೀಕ್ಷಿತ ಒತ್ತಡ ಕೇಂದ್ರದ ಮೇಲೇ ಆಗುತ್ತಿಲ್ಲ.

ಸನ್ನಿವೇಶದ ಪ್ರಯೋಜನ ಪಡೆಯಲು ಕಾಂಗ್ರೆಸ್ 2012 ರಲ್ಲಿ ಹೊಸಪಟೆಯಿಂದ ಕೂಡಲ ಸಂಗಮದವರೆಗೆ ಪಾದಯಾತ್ರೆ ನಡೆಸಿ, ನಿಗದಿತ ಅವಧಿಯಲ್ಲಿ ನೀರಾವರಿ ಯೋಜಮೆ ಪೂರ್ಣಗೊಳಿಸುವ ಭರವಸೆ ನೀಡಿತು. ಅಷ್ಟೆ ಅಲ್ಲದೆ ಕೂಡಲ ಸಂಗಮನಾಥನ ಮುಂದೆ ಆಣೆ-ಪ್ರಮಾಣ ಮಾಡಿ, 2013 ರ ಚುನಾವಣೆಯಲ್ಲಿ ಇದೆ ವಿಷಯ ಮುಂದಿಟ್ಟುಕೊಂಡು ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಯಿತು. 2013 ರಿಂದ 2018 ರ ವರೆಗೆ ಯುಕೆಪಿ ಅನುಷ್ಠಾನ ನನೆಗುದಿಗೆ ಬಿದ್ದಿತು.

ಕೇಂದ್ರ ಸರ್ಕಾರ ಯೋಜನೆ ಅನುಷ್ಠಾನಕ್ಕಾಗಿ ಕೃಷ್ಣಾ ನ್ಯಾಯಾಧೀಕರಣ -2ರ ಅಧಿಸೂಚನೆ ಹೊರಡಿಸುತ್ತಿಲ್ಲ ಎನ್ನುವ ಆರೋಪದಲ್ಲೇ ಅಧಿಕಾರಾವಧಿ ಪೂರೈಸಿತು. ಈ ವೇಳೆ ರಾಜ್ಯದಿಂದ ಅಧಿಕ ಸಂಖ್ಯೆಯ ಸಂಸದರು ಕೇಂದ್ರ ಬಿಜೆಪಿ ಸರ್ಕಾರದವರೆ ಇದ್ದರೂ ಸೂಕ್ತ ಒತ್ತಡ ಹಾಕಲೇ ಇಲ್ಲ.

ಎಚ್ ಡಿಕೆ ಮೌನ:

2018 ರಲ್ಲಿ ಕಾಂಗ್ರೆಸ್ -ಜೆಡಿಸ್ ಸಮ್ಮಿಶ್ರ ಸರ್ಕಾರ ಬಂದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.‌ ಕುಮಾರಸ್ವಾಮಿ ಯುಕೆಪಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಿ ಎಂದು ಒತ್ತಾಯಿಸಿದರಾದರೂ ಪ್ರಯೋಜನವಾಗಲಿಲ್ಲ. ಅಚ್ಚರಿಯ ಸಂಗತಿ ಎಂದರೆ ಈಗಿನ ಕೇಂದ್ರದ ಎನ್ ಡಿ ಎ ಸರ್ಕಾರದಲ್ಲಿ ಅವರು ಸಚಿವರಾಗಿದ್ದಾರೆ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಕೃಷ್ಣಾ ನ್ಯಾಯಾಧಿಕರಣ -2ರ ಅಧಿಸೂಚನೆ ಹೊರಡಿಸಿ ಎಂದು ಒತ್ತಾಯಿಸದೆ ಇರುವುದು ದುರದೃಷ್ಟಕರ ಸಂಗತಿ.

ಪಟ್ಟು ಹಿಡಿಯಲಿಲ್ಲ:

2020 ರ ಹೊತ್ತಿಗೆ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ, ಅಧಿಕ ಸಂಖ್ಯೆಯ ಬಿಜೆಪಿ ಸಂಸದರಿದ್ದರೂ ನ್ಯಾಯಾಧೀಕರಣ-2 ರ ಐತೀರ್ಪು ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸುವ ಒತ್ತಾಯಿಸುವ ಕೆಲಸ ನಡೆದರೂ ಪ್ರಧಾನಿಯವರ ಬಳಿ ಪಟ್ಟು ಹಿಡಿದು ಕೂಡಲಿಲ್ಲ.

ಅಹೋರಾತ್ರಿ ಧರಣಿ:

2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ವಿಜಯಪುರದಲ್ಲಿ ಮುಳುಗಡೆ ಸಂತ್ರಸ್ತರ ಸಭೆ ನಡೆಸಿದ್ದ ಅವರು ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಅದನ್ನು ಈಡೇರಿಸುವಂತೆ ಮುಳುಗಡೆ ಸಂತ್ರಸ್ತರು ಬಾಗಲಕೋಟೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.

ಯೋಜನಾನುಷ್ಠಾನಕ್ಕೆ ಒಪ್ಪಿಗೆ:

ಪರಿಣಾಮವಾಗಿ ನಿರಂತರ ಸಭೆಗಳು ನಡೆದು ನಾಲ್ಕು ಆರ್ಥಿಕ ವರ್ಷಗಳಲ್ಲಿ ಯುಕೆಪಿ ಹಂತ- 3 ಪೂರ್ಣಗೊಳಿಸುವ ಭರವಸೆ ನೀಡಿದ್ದಲ್ಲದೆ ಅಗತ್ಯ ಭೂಮಿ ಸ್ವಾಧೀನಕ್ಕೆ ಒಪ್ಪಿತ ಪರಿಹಾರ ಘೋಷಣೆ ಮಾಡಿ, ಪರಿಹಾರ ಕಾರ್ಯ ಆರಂಭಿಸಿದ್ದಾರೆ. ಆದರೆ ವರ್ಷಕ್ಕೆ 18 ಸಾವಿರ ಕೋಟಿ ಅನುದಾನ ಮೀಸಲಿಡುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು 3 ಸಾವಿರ ಕೋಟಿ ಮಾತ್ರ ಮೀಸಲಿಟ್ಟು ಹೆಚ್ಚುವರಿ ಅಗತ್ಯ ಹಣಕಾಸಿನ ಭರವಸೆ ನೀಡಿದ್ದಾರೆ.

ಅಧಿಸೂಚನೆ ಏಕಿಲ್ಲ:

ಯುಕೆಪಿ ವಿಷಯದಲ್ಲಿ ಸಕಾರಾತ್ಮಕ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿಗಳು, ಕೃಷ್ಣಾ ನ್ಯಾಯಾಧೀಕರಣ -2 ರ ಐತೀರ್ಪು ಬಂದರೂ ಕೇಂದ್ರ ಏಕೆ ಅಧಿಸೂಚನೆ ಹೊರಡಿಸುತ್ತಿಲ್ಲ. ರಾಜ್ಯ ಬಿಜೆಪಿಗರು ಏನು ಮಾಡುತ್ತಿದ್ದಾರೆ ಎಂದು ಮೊದಲ ದಿನದ ಪ್ರಚಾರ ವೇಳೆ ಪ್ರಶ್ನಿಸಿದ್ದರೆ, ಎರಡನೇ ದಿನದ ಪ್ರಚಾರ ವೇಳೆ ನವನಗರ ಅಭಿವೃದ್ಧಿಗೆ ಶ್ರಮಿಸಿದ್ದು ದಿ.ಎಚ್.ವೈ. ಮೇಟಿ ಎನ್ನುವ ಮಾತನ್ನಾಡಿದ್ದಾರೆ. ಆ ಮೂಲಕ ಉಪ ಚುನಾವಣೆಯಲ್ಲೂ ಯುಕೆಪಿ ವಿಷಯ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯದಲ್ಲಿ ಮತದಾರ ಸೂಕ್ತ ನೀಡಬೇಕಿದೆ.

ಬೆಟ್ಟದಂತೆ ಬೆಳೆಯಲಿದೆ:

ಈಗಲಾದರೂ ಕೇಂದ್ರದ ಎನ್ ಡಿಎ ಸರ್ಕಾರ ನ್ಯಾಯಾಲಯದ ನಿಬಂಧನೆಗೊಳಪಟ್ಟು ಅಧಿಸೂಚನೆಗೆ ಮುಂದಾದಲ್ಲಿ ಯೋಜನಾನುಷ್ಠಾನ ಕಾರ್ಯ ಚುರುಕುಗೊಳ್ಳಲಿದೆ. ಇಲ್ಲದೆ ಹೋದಲ್ಲಿ ಚುನಾವಣೆಗಳು ಬಂದಾಗಲೊಮ್ಮೆ ರಾಜಕೀಯ ಅಸ್ತ್ರವಾಗಿ ಪರಿಣಮಿಸಿ, ರಾಜಕೀಯ ಪಕ್ಷಗಳ ಮುಖಂಡರಿಂದ ಕೃಷ್ಣೆಯ ಕೂಗು ಸದಾ ಕೇಳಿಸುತ್ತಲೇ ಇರುತ್ತದೆ. ಯೋಜನಾ ವೆಚ್ಚ ಬೆಟ್ಟದಂತೆ ಬೆಳೆದು ನಿಲ್ಲಲಿದೆ. ಯೋಜನಾ ವ್ಯಾಪ್ತಿಯ ಮುಳುಗಡೆ ಸಂತ್ರಸ್ತರ ಬದುಕು ಅತಂತ್ರ ಸ್ಥಿತಿಯಲ್ಲೆ ಮುಂದುವರಿಯಲಿದೆ ಎನ್ನುವ ಆತಂಕಕ್ಕೆ ಕೊನೆ ಮೊದಲು ಇರುವುದಿಲ್ಲ.

  • ವಿಠ್ಠಲ ಆರ್. ಬಲಕುಂದಿ
Scroll to Top