ತೋವಿವಿ ಕಂಪೌಂಡ್ ಆಚೆಗೆ ಬರಬೇಕಿದೆ ಮಾವು ಮೇಳ

ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಮಾವು ಬೆಳೆಗಾರರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಮೂರು ದಿನಗಳ ಕಾಲ ಮಾವು ಮೇಳ ಆಯೋಜಿಸುತ್ತಿದೆ. ಮಾವು ಬೆಳೆಗಾರರು‌ ಬೆಳೆದ ನಾನಾ ತಳಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡುತ್ತಿದೆ. ಆದರೆ ಈ ಮಾವು ಮೇಳ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಮೇಳ ಯಶಸ್ವಿ ಆಗಲು ಅದು ವಿವಿಯ ಕಂಪೌಂಡ್ ನಿಂದ ಹೊರ ಬರಬೇಕಾದ ಅಗತ್ಯವಿದೆ ಎನ್ನುವ ಅಭಿಪ್ರಾಯ ಮೇಳದ ಮೊದಲ ದಿನವೇ ವ್ಯಕ್ತವಾಗಿದೆ. ಇದು ನಿಜ ಕೂಡ.

ಆವರಣದಾಚೆ ಬರಬೇಕು:

ಮಾವು ಬೆಳೆಗಾರರಿಗೆ ಉತ್ತೇಜನ ನೀಡುವುದು ಹಾಗೂ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದು, ಜತೆಗೆ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ ವಿವಿಧ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜನೆ ಮಾಡುತ್ತಿದೆ. ಅದರ ಉದ್ದೇಶ ಸಾಫಲ್ಯಗೊಳ್ಳುವಂತಾಗಲು ರೈತರ ಬೆಳೆದ ಮಾವಿಗೆ ವ್ಯಾಪಕ ಮಾರುಕಟ್ಟೆ ಸಿಗುವಂತಾಗಲು ಮೇಳ ವಿವಿ ಆವರಣದ ಆಚೆಗೆ ಬರಬೇಕು. ನಗರದ ಆಯಕಟ್ಟಿನ ಸ್ಥಳದಲ್ಲಿ ಮೇಳದ ಏರ್ಪಾಡು ಆಗಬೇಕಿದೆ.

ಸೂಕ್ತ ಆಯಕಟ್ಟಿನ ಸ್ಥಳ:

ಜನನಿಬಿಡ ಪ್ರದೇಶಗಳ ಬಳಿ ಮೇಳ‌ ಆಯೋಜನೆಯಿಂದ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಲಿದೆ. ರೈತರು ಬೆಳೆದ ನಾನಾ‌ ಬಗೆಯ ಹಣ್ಣುಗಳ ಪರಿಚಯ ಕೂಡ ಆಗುತ್ತದೆ. ಜತೆಗೆ ಒಳ್ಳೆಯ ವ್ಯಾಪಾರ ಕೂಡ ಆಗಲಿದೆ. ವಿವಿ ಆವರಣದಲ್ಲೆ ಮೇಳ ಆಯೋಜನೆ ಮಾಡುವುದರಿಂದ ಇಲ್ಲಿಗೆ ಜನ ಬರುವುದೆ ಕಡಿಮೆ. ಆವರಣದಲ್ಲಿನ ಸಿಬ್ಬಂದಿ, ವಿದ್ಯಾರ್ಥಿಗಳು ಬಿಟ್ಟರೆ ಹಣ್ಣು ಬೆಳೆದ ರೈತರು ಮಾತ್ರ ಮೇಳದ ಪ್ರಯೋಜನ ಪಡೆದುಕೊಳ್ಳಬೇಕಾಗುತ್ತದೆ ಎನ್ನುವ ಸಾರ್ವಜನಿಕ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

ಪರಿಚಯವಾಗದ ತಳಿಗಳು:

ಸದ್ಯ ಆಯೋಜನೆಗೊಂಡಿರುವ ಮಾವು ಮೇಳದಲ್ಲಿ 100ಕ್ಕೂ ಹೆಚ್ಚು ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರತ್ನಗಿರಿ, ದೇವಗಡ, ಧಾರವಾಡ ಅಪೂಸ್, ಮಲ್ಲಿಕಾ, ಆರ್ಕಾ ನೀಲಕಿರಣ, ಆರ್ಕಾ ಉದಯ, ಅಮ್ರಪಲ್ಲಿ, ಸಿಂಧು, ನೀಲಮ್, ರತ್ನಾ, ದಾಶೇಕರಿ, ಟಾಮ್ಮಿ ಆಟಕಿನ್ಸ್, ಖದರ್, ಪೈರಿ, ತೋತಾಪುರಿ, ಸುಂದರಶಾ ಸೇರಿದಂತೆ ಇತರೆ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಲ್ಲದೇ ಮಾವಿನಿಂದ ತಯಾರಿಸಲಾದ ಮೌಲ್ಯವರ್ಧಿತ ಉತ್ಪನ್ನಗಳಾದ ಮಾವಿನ ಜ್ಯಾಂ, ಜ್ಯೂಸ್, ಉಪ್ಪಿನಕಾಯಿ, ಫಲ್ಫ್, ಒಣಮಾವು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ಎಷ್ಟೋ ತಳಿ ಮಾವುಗಳನ್ನು, ಮೌಲ್ಯವರ್ಧಿತ ವಸ್ತುಗಳನ್ನು ಜನ ನೋಡಿಯೇ ಇಲ್ಲ.

ಜನತೆ ಗಮನಕ್ಕೆ ಬರಬೇಕು:

ರೈತರು ಬೆಳೆದು ಪ್ರದರ್ಶನಕ್ಕೆ ಬರುವ ಮಾವಿನ ಹಣ್ಣುಗಳ ಪರಿಚಯ ಜನತೆಗೆ ಆಗಬೇಕು. ಅಂದಾಗ ಅವರು ಹೊಸ ಬಗೆಯ ಹಣ್ಣುಗಳನ್ನು ಕೊಳ್ಳಲು ಸಾಧ್ಯವಾಗಲಿದೆ. ರೈತರು ಬೆಳೆದ ಹೊಸ ಬಗೆಯ ಹಣ್ಣುಗಳ‌ ಬಗೆಗೆ ಮಾರುಕಟ್ಟೆಯಲ್ಲೂ ವ್ಯಾಪಕ ಪ್ರಚಾರ ಸಿಗಲಿದೆ. ರೈತರು ಬೆಳೆದ ಹೊಸ ಬಗೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ಪರಿಚಯವಾಗದೆ ಇದ್ದರೆ ಏನು ಪ್ರಯೋಜನ. ಎಲ್ಲೋ ಒಂದು ಕಡೆ ಮೇಳ ಮಾಡಿದಲ್ಲಿ ಅದು ಯಾರಿಗೆ ಲಾಭ ಎನ್ನುವ ಸಹಜ ಪ್ರಶ್ನೆ ಜನತೆಯಲ್ಲಿ ಎದುರಾಗಿದೆ.

ಕಾಟಾಚಾರಕ್ಕಾಗಬಾರದು:

ಮಾವು‌ ಮೇಳ ಎನ್ನುವುದು ಕಾಟಾಚಾರಕ್ಕೆ ಮಾಡುವಂತದ್ದಾಗಬಾರದು. ರೈತರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಾಗಬೇಕು. ಇದರಿಂದ ರೈತರು ಬೆಳೆದ ಹೊಸ ಹೊಸ ತಳಿಗಳ ಪರಿಚಯ ಜನತೆಗೆ ಆಗುತ್ತದೆ. ಇದು ರೈತರಿಗೂ ಹೆಚ್ಚಿನ ಅನುಕೂಲ‌ವಾಗಲಿದೆ. ಜತೆಗೆ ಹೆಚ್ಚಿನ ಪ್ರೋತ್ಸಾಹ ಕೂಡ ನೀಡಿದಂತಾಗುತ್ತದೆ ಎನ್ನುವುದು ಜನತೆಯ ಅಭಿಪ್ರಾಯವಾಗಿದೆ.

ಪ್ರಚಾರ ಕೊರತೆ:

ಮಾವು ಮೇಳ ವಿಶ್ವ ವಿದ್ಯಾಲಯದ ಆವರಣಕ್ಕೆ ಸೀಮಿತವಾಗಬಾರದು. ವಿವಿ ಆವರಣಕ್ಕೆ ಸೀಮಿತ ಆಗುವುದರಿಂದ ಅಲ್ಲಿಗೆ ಜನತೆಯೂ ಅಷ್ಟಾಗಿ ಬರುವುದಿಲ್ಲ. ಜತೆಗೆ ಪ್ರಚಾರ ಕೊರತೆ ಕೂಡ. ಇಷ್ಟು ದಿನಗಳ ಕಾಲ ಆಗಿದ್ದು ಇದೆ. ರೈತರ ಉತ್ಪನ್ನಗಳಿಗೆ ವ್ಯಾಪಕ‌ ಮಾರುಕಟ್ಟೆ ಸಿಗುವಂತಾಗಲು ಮೇಳ ವಿವಿ ಆವರಣದಾಚೆ ನಡೆಯಬೇಕು. ಈ ನಿಟ್ಟಿನಲ್ಲಿ ವಿವಿ ಆಡಳಿತ ಮಂಡಳಿ ಕೂಡ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮೇಳ ಆಯೋಜನೆ ಮಾಡಿದಾಗ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಗಲು ಸಾಧ್ಯವಾಗಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top