ಉಪಚುನಾವಣೆ: ಹಿಂದುತ್ವ V/S ಗ್ಯಾರಂಟಿ ನಡುವಿನ ಸಮರ

ಬೇಸಿಗೆಯ ಬಿಸಿಲಿನ ಜತೆಗೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಚುನಾವಣೆ ಕಾವು ಹೆಚ್ಚಾಗತೊಡಗಿದೆ. ಬಿಜೆಪಿಗರು ಹಿಂದುತ್ವ ಮಂತ್ರ ಜಪಿಸುತ್ತ, ಕಾಂಗ್ರೆಸ್ಸಿಗರು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದಾದ್ಯಂತ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಜತೆಗೆ ಸರಣಿ ಸಭೆಗಳಿಗೆ ಮೊರೆಹೋಗಿದ್ದಾರೆ.

ಇದೀಗ ನಾಮಪತ್ರ ವಾಪಸ್ಸಾತಿ ಪ್ರಕ್ರಿಯೆ ಕೂಡ ಗುರುವಾರ ಮುಕ್ತಾಯಗೊಂಡಿದ್ದು, ಪರಿಣಾಮವಾಗಿ ಪ್ರಚಾರದ ತೀವ್ರತೆ ಕೂಡ ಮತ್ತಷ್ಟು ಹೆಚ್ಚಾಗಲಿದೆ. ಪ್ರಸಕ್ತ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ, ಕ್ಷೇತ್ರದ ಅಭಿವೃದ್ಧಿ ವಿಚಾರಗಳು ಏನೇ ಇದ್ದರೂ ಸದ್ಯ ಹಿಂದುತ್ವ ಮತ್ತು ಪಂಚ ಗ್ಯಾರಂಟಿಗಳೇ ನಿರ್ಣಾಯಕ ಎನ್ನುವ ವಾತಾವರಣ ಸೃಷ್ಟಿ ಆಗುತ್ತಿದೆ. ಕಾಂಗ್ರೆಸ್ ಅಭಿವೃದ್ಧಿ ಮತ್ತು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಮುಂದಾಗಿದೆ.

ಪ್ರತಿಪಕ್ಷ ಬಿಜೆಪಿ ಹಿಂದುತ್ವ ಉಳಿಸಿ ಎನ್ನುವ ಮಂತ್ರವನ್ನು ಮುಂದಿಟ್ಟುಕೊಂಡು ಚುನಾವಣೆ ಕಣಕ್ಕಿಳಿದಿದೆ. ಚುನಾವಣೆ ಪ್ರಚಾರ ಸಭೆಗಳಲ್ಲಿ ಬಿಜೆಪಿ ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತವನ್ನು ತರಾಟೆಗೆ ತೆಗೆದುಕೊಂಡರೂ ಹಿಂದುತ್ವದ ಉಳಿವಿಗಾಗಿ ಹೋರಾಟ ಇದಾಗಿದೆ ಎಂದು ಹೇಳುತ್ತಿದ್ದಾರೆ.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಸೇರಿದಂತೆ ಬಹುತೇಕ ಮುಖಂಡರು ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ. ಹಿಂದುತ್ವದ ಉಳಿವಿಗಾಗಿನ ಚುನಾವಣೆ ಇದಾಗಲಿದೆ. ಬಿಜೆಪಿ ಗೆಲುವು ಹಿಂದುತ್ವದ ಗೆಲುವಾಗಲಿದೆ ಎಂದು ಹೇಳುವ ಮೂಲಕ ಹಿಂದುತ್ವದ ಮತಬ್ಯಾಂಕ್ ಗಟ್ಟಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಯತ್ನಾಳ್ ಬರಲಿ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಕೇಸರಿ ಪಡೆಯ ಗಟ್ಟಿನೆಲ ಇಲ್ಲಿ ಹಿಂದುತ್ವದ ಮತಬ್ಯಾಂಕ್ ಇನ್ನಷ್ಟು ಮತ್ತಷ್ಟು ಗಟ್ಟಿಗೊಳ್ಳಲು ಬಿಜೆಪಿ ಮುಖಂಡರಿಗೆ ಹಿಂದುತ್ವ ಮಂತ್ರ ಅನಿವಾರ್ಯ ಎನ್ನುವಂತೆ ಕಾಣಿಸುತ್ತಿದೆ. ಹಿಂದುಗಳ ಮತಬ್ಯಾಂಕ್ ಭದ್ರಗೊಳಿಸಲು ಹಿಂದುತ್ವದ ಪ್ರಬಲ ಪ್ರತಿಪಾದಕ, ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆತರಬೇಕು ಎನ್ನುವ ಬೇಡಿಕೆ ಬಿಜೆಪಿ ಪಾಳೆಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಯತ್ನಾಳ್ ಅವರ ಹಿಂದೆ ಅಪಾರ ಸಂಖ್ಯೆಯ ಹಿಂದುತ್ವದ ಬೆಂಬಲಿಗರ ಪಡೆಯೇ ಇದೆ. ಇದು ನಾಮಪತ್ರ ಸಲ್ಲಿಕೆ ಕೊನೆಯ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯದ ಮಾಜಿ ಸಚಿವರು ಸೇರಿದಂತೆ ಅನೇಕ ಜನ ಮುಖಂಡರು ಭಾಗವಹಿಸಿದ್ದ ಮೆರವಣಿಗೆಯಲ್ಲಿ “ಯತ್ನಾಳ ಮುಂದಿನ ಸಿಎಂ” ಎನ್ನುವ ಪ್ಲೆಕ್ಸ್ ಗಳು ರಾರಾಜಿಸಿದ್ದವು. ಆ ಬಗೆಗೆ ಯಾವೊಬ್ಬ ಮುಖಂಡರು ಚಕಾರ ಎತ್ತಿರಲಿಲ್ಲ ಎನ್ನುವುದು ಗಮನಾರ್ಹ.

ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರೂ ಯತ್ನಾಳ ಅವರು ವೈಯಕ್ತಿಯವಾಗಿ ಪ್ರಚಾರಕ್ಕೆ ಬರಲಿ ಎನ್ನುವ ಭಾವನೆಯಲ್ಲಿಯೇ ಇದ್ದಾರೆ. ಹಾಗಾಗಿ ಕೇಸರಿ ಪಾಳೆಯದಲ್ಲಿ ಸಹಜವಾಗಿಯೇ ಯತ್ನಾಳರನ್ನು ಕರೆಯಿಸಬೇಕು ಎನ್ನುವ ಧ್ವನಿ ಗಟ್ಟಿಯಾಗಿದೆ. ಇದನ್ನು ಪಕ್ಷದ ಮುಖಂಡರು ಎಷ್ಟರ ಮಟ್ಟಿಗೆ ಒಪ್ಪುವರು ಎನ್ನುವುದೇ ಸದ್ಯ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇಕ್ಕಟ್ಟಿನ ಸ್ಥಿತಿ:

ಪಕ್ಷದಿಂದ ಉಚ್ಚಾಟನೆಗೊಂಡಿರುವ ಮುಖಂಡ ಯತ್ನಾಳ್ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಯಿಸುವುದನ್ನು ಸ್ವತಃ ಪಕ್ಷದ ರಾಜ್ಯಾಧ್ಯಕ್ಷರೆ ಒಪ್ಪುವ ಸ್ಥಿತಿಯಲ್ಲಿಲ್ಲ. ಆದಾಗ್ಯೂ ಅವರನ್ನು ಕರೆಯಿಸಬೇಕು ಎನ್ನುವ ಒತ್ತಡ ಹೆಚ್ಚುತ್ತಲೇ ಇದೆ. ಏತನ್ಮಧ್ಯೆ ಬಿಜೆಪಿ ಹಿಂದುತ್ವದ ಮಂತ್ರ ಜಪಿಸುವ ಮೂಲಕ ಕ್ಷೇತ್ರವನ್ನು ಗೆಲ್ಲಲು ಹೊರಟಿದೆ.

ಕೈಗೆ ಗ್ಯಾರಂಟಿ ಬಲ:

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಗೆಲುವಿನ ದಡ ಸೇರಿಸಲಿವೆ ಎನ್ನುವ ಬಲವಾದ ನಂಬಿಕೆಯಾಗಿದೆ. ದಿ.ಶಾಸಕ ಎಚ್.ವೈ. ಮೇಟಿ ಅವರ ನಿಧನದ ಅನುಕಂಪ, ಸರ್ಕಾರಿ ವೈದ್ಯ ಕಾಲೇಜ್‌ಗೆ ಶಂಕು ಸ್ಥಾಪನೆ, ಯುಕೆಪಿ ಹಂತ-೩ ರ ವ್ಯಾಪ್ತಿಯಲ್ಲಿ ಮುಳುಗಡೆ ಆಗಲಿರುವ ಜಮೀನುಗಳಿಗೆ ಒಪ್ಪಿತ ಪರಿಹಾರ ಹಂಚಿಕೆ ಆರಂಭಿಸಿರುವುದು ಕಾಂಗ್ರೆಸ್ ಪಾಲಿಗೆ ವರದಾನವಾಗಿವೆ.

ಗೆಲುವಿನ ಆಶಾಭಾವ :

ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಪ್ರಚಾರ ವೇಳೆ ಪಂಚ ಗ್ಯಾರಂಟಿ ಯೋಜನೆಗಳನ್ನು ವ್ಯಾಪಕ ಪ್ರಚಾರ ಕೈಗೊಂಡು, ಯೋಜನೆಗಳ ಫಲಾನುಭವಿಗಳ ಮನವೊಲಿಕೆ ನಡೆಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಕುರಿತು ಉತ್ತಮ ಪ್ರತಿಕ್ರಿಯ ಬರುತ್ತಿರುವುದು ಕಾಂಗ್ರೆಸ್ಸಿಗರಲ್ಲಿ ಗೆಲುವಿನ ಆಶಾಭಾವನೆ ಮೂಡಿಸಿದೆ.

ಪ್ರಚಾರದ ಕಾವು ಇನ್ನಷ್ಟು ಹೆಚ್ಚಾದಂತೆ ಮುಂದಿನ ದಿನಗಳಲ್ಲಿ ಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಮುಖಂಡರ ದಂಡು ಆಗಮಿಸಲಿದೆ. ಈಗಾಗಲೆ ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕ್ಷೇತ್ರದಲ್ಲೇ ಬೀಡು ಬಿಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು, ಗೆಲುವಿನ ತಂತ್ರಗಳು ರೂಪಿಸುತ್ತಿದ್ದಾರೆ.

ಒಟ್ಟಾರೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ಹರಸಾಹಸ ಪಡುತ್ತಿದ್ದರೆ, ಕೈ ಬಿಟ್ಟು ಹೋಗಿರುವ ಕ್ಷೇತ್ರವನ್ನು ಪುನಃ ವಶಪಡಿಸಿಕೊಳ್ಳಲು ಬಿಜೆಪಿಗರು ಮತದಾರರ ಮನವೊಲಿಕೆ ನಡೆಸುತ್ತಿದ್ದಾರೆ. ಒಬ್ಬರಿಗೆ ಹಿಂದುತ್ವ ಚುನಾವಣೆ ಅಸ್ತçವಾಗಿದ್ದರೆ, ಇನ್ನೊಬ್ಬರಿಗೆ ಪಂಚಗ್ಯಾರಂಟಿ ಯೋಜನೆಗಳು ಪ್ರತ್ಯಾಸ್ತ್ರವಾಗಿವೆ. ಕ್ಷೇತ್ರದಲ್ಲಿ ಸದ್ಯ ಚುನಾವಣೆ ನಡೆಯುತ್ತಿರುವುದು ಹಿಂದುತ್ವ ವರ್ಸಸ್ ಪಂಚಗ್ಯಾರಂಟಿ ಯೋಜನೆಗಳ ಮಧ್ಯೆ ಎನ್ನುವ ವಿಶ್ಲೇಷಿಸಲಾಗುತ್ತಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top