ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 17 ನೇ ಬಜೆಟ್‌ನಲ್ಲಿ ಅಖಂಡ ವಿಜಯಪುರ ಜಿಲ್ಲೆಗೆ ನಿರೀಕ್ಷಿಸಿದಷ್ಟು ಸಿಗದೆ ಹೋದರೂ ಸಮಾಧಾನ ಪಡಬಹುದಾದಷ್ಟು ಸಿಕ್ಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ಶೂನ್ಯ ಸಂಪಾದನೆ ಎನ್ನಬಹುದಾಗಿದೆ.
ಭೂಸ್ವಾಧೀನಕ್ಕೆ ಅಸ್ತು:
ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯದ ಎತ್ತರವನ್ನು 59.60 ರಿಂದ 524.256 ಮೀಟರ್ ಹೆಚ್ಚಿಸಿ, ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಸಂಗ್ರಹಿಸಲು ಅಗತ್ಯವಿರುವ ಭೂಸ್ವಾಧೀನ ಕಾರ್ಯವನ್ನು ಪ್ರಸಕ್ತ ವರ್ಷ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಈಗಾಗಲೇ ಸ್ವಾಧೀನಕ್ಕೊಳಪಡುವ ಒಣ ಬೇಸಾಯಿ ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ, ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಇಂತಿಷ್ಟು ಹಣ ಎಂದು ಮೀಸಲಿಟ್ಟಿಲ್ಲ. ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಬಹುಶಃ ಮಾರ್ಚ್ ತಿಂಗಳಾಂತ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆಗಳಿವೆ.
ಸಂಗ್ರಹಣಾ ಜಲಾಶಯ:
ವಿಜಯಪುರ ಬಾಬಾನಗರದಲ್ಲಿ 0.67 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅಸ್ತು ಎಂದಿದ್ದಾರೆ. ಏತ ನೀರಾವರಿ ಯೋಜನೆಯಡಿ ಈ ಜಲಾಶಯ ನಿರ್ಮಾಣಕ್ಕೆ ತಾತ್ವಿಕ ಅನುಮೊದನೆ ನೀಡಲಾಗಿದೆ ಎಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಜಲಾಶಯ ನಿರ್ಮಾಣದಿಂದ ಬಾಬಾ ನಗರದ ಸುತ್ತಲಿನ ಗ್ರಾಮಗಳ ಜಮೀನುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಆರೋಗ್ಯ ವಿವಿ ಕಾಲೇಜ್ ಘಟಕ:
ಬಾಗಲಕೋಟೆಯಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಘಟಕ ಕಾಲೇಜ್ ನಿರ್ಮಾಣಕ್ಕೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶೀಘ್ರ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದು, ಈ ಕಾರ್ಯಕ್ಕೆ ಮಾರ್ಚ್ ಮೂರನೇ ವಾರದಲ್ಲಿ ಚಾಲನೆ ಸಾಧ್ಯತೆ ಸಿಗುವ ಲಕ್ಷಣಗಳಿವೆ.
ಹೋರಾಟಕ್ಕೆ ಸಂದ ಜಯ:
ವಿಜಯಪುರದಲ್ಲಿ ಸರ್ಕಾರಿ ವೈದ್ಯ ಕಾಲೇಜ್ ಸ್ಥಾಪನೆಗೆ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗುವುದು ಎಂದು ಹೇಳಿದ್ದಾರೆ. ವಿಜಯಪುರದಲ್ಲಿ ಇತ್ತೀಚೆಗಷ್ಟೆ ಸರ್ಕಾರಿ ವೈದ್ಯ ಕಾಲೇಜ್ ಸ್ಥಾಪನೆಗೆ ನಿರಂತರ ಹೋರಾಟ ನಡೆಸುವ ಮೂಲಕ ಸಾರ್ವಜನಿಕರು ಗಮನ ಸೆಳೆದಿದ್ದು ಗಮನಾರ್ಹ ಅಂಶ.
ಮೀನು ಮಾರುಕಟ್ಟೆ:
ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಬಾಗಲಕೋಟೆ ಜಿಲ್ಲೆಯಲ್ಲಿ ವ್ಯವಸ್ಥಿತ ಮಾರುಕಟ್ಟೆ ನಿರ್ಮಿಸಲಾಗುವುದು. ಇದರಿಂದ ಮೀನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಈಗಾಗಲೇ ಆಲಮಟ್ಟಿ ಹಿನ್ನೀರು ಪ್ರದೇಶ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಮೀನು ಕೃಷಿ ಅಖಂಡ ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿದೆ. ಮಾರುಕಟ್ಟೆ ನಿರ್ಮಾಣದಿಂದ ಆರ್ಥಿಕ ಅನುಕೂಲತೆ ಹೆಚ್ಚಲಿದೆ.
ವಿಜಯಪುರದಲ್ಲಿ ಪೈಲಟ್ ತರಬೇತಿ ಕೇಂದ್ರ ಸ್ಥಾಪನೆ ವಿಚಾರ ಮಂಡಿಸಿರುವುದು ಆಶಾದಾಯಕ ಬೆಳವಣಿಗೆ. ಇದರಿಂದ ಯುವ ಸಮೂಹಕ್ಕೆ ಅನುಕೂಲವಾಗಲಿದೆ.
ಪ್ರವಾಸೋದ್ಯಮ ಕಡೆಗಣನೆ:
ಅಖಂಡ ವಿಜಯಪುರ ಜಿಲ್ಲೆಗೆ ಪ್ರಸಕ್ತ ಮುಂಗಡ ಪತ್ರದಲ್ಲಿ ನೀರಾವರಿ, ವೈದ್ಯಕೀಯ, ಮೀನುಗಾರಿಕೆ ಮತ್ತು ನೇಕಾರರಿಗೆ ಉತ್ತೇಜನ ಅಂಶಗಳನ್ನ ಹೊರತು ಪಡಿಸಿ ಉಳಿದ ಕ್ಷೇತ್ರದಲ್ಲಿ ನಿರೀಕ್ಷಿತ ಕೊಡುಗೆ ಸಿಕ್ಕಿಲ್ಲ. ಅಖಂಡ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಬಜೆಟ್‌ನಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರ ಗಮನ ಸೆಳೆಯುವ ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆಯ ಪ್ರವಾಸಿ ತಾಣಗಳು, ಧಾರ್ಮಿಕ ಶ್ರದ್ಧಾಕೇಂದ್ರ ಕೂಡಲಸಂಗಮದಂತ ಕ್ಷೇತ್ರಗಳ ಅಭಿವೃದ್ಧಿಯ ಬಗೆಗೆ ಮುಖ್ಯಮಂತ್ರಿಗಳು ಏನನ್ನೂ ಪ್ರಸ್ತಾಪಿಸಿಲ್ಲ.
ಇತ್ತೀಚೆಗಷ್ಟೆ ಬಾದಾಮಿಯಲ್ಲಿ ಆಯೋಜನೆಗೊಂಡಿದ್ದ ಚಾಲುಕ್ಯ ಉತ್ಸವ ಉದ್ಘಾಟನೆಗೆ ಬಂದಿದ್ದ ಮುಖ್ಯಮಂತ್ರಿಗಳ ಮುಂದೆ, ಸಂಸದ ಪಿ.ಸಿ.ಗದ್ದಿಗೌಡರ ಪ್ರವಾಸಿ ಸರ್ಕಿಟ್ ನಿರ್ಮಾಣ ವಿಷಯ ಪ್ರಸ್ತಾಪಿಸಿ, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ. ಆಗ ಮುಖ್ಯಮಂತ್ರಿಗಳು ನಿಮ್ಮಿಂದ ಪತ್ರ ಬಂದ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು. ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ ಎನ್ನುವ ಅಂಶವನ್ನು ಪ್ರಸ್ತಾಪಿಸಿದ್ದರು. ಆದರೆ ಪ್ರಸಕ್ತ ಬಜೆಟ್‌ನಲ್ಲಿ ಅಖಂಡ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಬಗೆಗೆ ಪ್ರಸ್ತಾಪವೇ ಇಲ್ಲದಿರುವ ಜನತೆಯಲ್ಲಿ ಬೇಸರವನ್ನುಂಟು ಮಾಡಿದೆ.
ಬಾಗಲಕೋಟೆ ನಗರ ಬಳಿಯ ಮಲ್ಲಯ್ಯನಗುಡ್ಡ ಪ್ರದೇಶವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವ ಜನತೆಯ ಆಶಯ ಇಡೇರಲಿಲ್ಲ. ಪ್ರವಾಸೋದ್ಯಮ ಸಚಿವರ ಗಮನಕ್ಕೂ ವಿಷಯವನ್ನು ವಿವರಿಸಲಾಗಿತ್ತು ಎನ್ನುವುದು ಗಮನಾರ್ಹ.
ಒಟ್ಟಾರೆ ಮುಖ್ಯಮಂತ್ರಿಗಳ ಪ್ರಸಕ್ತ ಬಜೆಟ್‌ನಲ್ಲಿ ಅಖಂಡ ಜಿಲ್ಲೆಯ ಜನತೆಯ ನಿರೀಕ್ಷೆ ಅಪಾರವಾಗಿತ್ತು, ನಿರೀಕ್ಷಿಸಿದಷ್ಟು ಸಿಗದೇ ಹೋದರೂ ಸಮಾಧಾನ ಪಡಬಹುದಾಷ್ಟು ಸಿಕ್ಕಿದೆ.
- ವಿಠ್ಠಲ ಆರ್. ಬಲಕುಂದಿ




