ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಜೋಡಿಯ ರಣತಂತ್ರದ ಫಲವಾಗಿಯೇ ಕಾಂಗ್ರೆಸ್ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಗೆಲ್ಲಲು ಸಾಧ್ಯವಾಗಿದೆ ಎಂದು ರಾಜಕೀಯ ವಲಯದಲ್ಲಿ ಅರ್ಥೈಸಲಾಗುತ್ತಿದೆ.
ಸಚಿವ ಸತೀಶ್‌ಗೆ ಟಾಸ್ಕ್:
ಬಾಗಲಕೋಟೆ ಕ್ಷೇತ್ರದ ಶಾಸಕರಾಗಿದ್ದ ದಿ. ಎಚ್.ವೈ. ಮೇಟಿ ಅವರ ನಿಧನದ ಬಳಿಕ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಮುಂದಿನ ಸಾರಥಿ ಯಾರು ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟಿಕೊಂಡಿತ್ತು. ಹಾಗೆ ದಿನಗಳೆದಂತೆ ಮೇಟಿ ಅವರ ಕುಟುಂಬದಲ್ಲೇ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಆರಂಭಗೊಂಡಿತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೆ ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನು. ಯಾವಾಗ ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರಕ್ಕೆ ಕಾಲಿಟ್ಟರೋ ಅಲ್ಲಿಂದಲೇ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿನ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಸೂತ್ರ ಹುಡುಕಲು ಆರಂಭಿಸಿದರು. ಜತೆ ಜತೆಗೆ ಕ್ಷೇತ್ರವನ್ನು ಗೆಲ್ಲುವುದರತ್ತಲೂ ಗಮನ ಹರಿಸಿದರು. ಅದಕ್ಕಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆಗಳನ್ನು ನಡೆಸಲಾರಂಭಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಸತೀಶ್ ಅವರಿಗೆ ಕ್ಷೇತ್ರ ಗೆಲ್ಲಿಸುವ ಟಾಕ್ಸ್ ನೀಡಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಶತಾಯ – ಗತಾಯ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಲು ಮೊದ ಮೊದಲು ಪಕ್ಷದಲ್ಲಿನ ಮುಖಂಡರ ನಡುವಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿ ಪಡಿಸುವ ಕೆಲಸಕ್ಕೆ ಕೈಹಾಕಿದಾಗ ಅದರಲ್ಲಿ ಸಾಕಷ್ಟು ಪ್ರಗತಿಯನ್ನೂ ಕಂಡರು.
ಎಲ್ಲರನ್ನೂ ಒಗ್ಗೂಡಿಸುವ ಕೆಲಸದಲ್ಲಿ ಆಗಿರುವ ಬದಲಾವಣೆ ಕಂಡ ಅವರು ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ತೀವ್ರ ಆಸಕ್ತಿ ತೋರಿದರು. ಮೇಟಿ ಕುಟುಂಬಸ್ಥರಲ್ಲಿ ಟಿಕೆಟ್‌ಗಾಗಿ ಎಷ್ಟೆ ಪೈಪೋಟಿ ನಡೆಸುತ್ತಿದ್ದರೂ ಕ್ಷೇತ್ರದ ಜನತೆ ಯಾರ ಪರ ಒಲವು ತೋರುತ್ತಾರೋ ಅವರಿಗೆ ಟಿಕೆಟ್ ನೀಡಿ ಒಗ್ಗಟ್ಟಿನಿಂದ ಕೆಲಸ ಮಾಡಿ ಅವರನ್ನು ಗೆಲ್ಲಿಸುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಕ್ಷೇತ್ರದಲ್ಲೇ ಠಿಕಾಣಿ:
ಚುನಾವಣೆ ಆಯೋಗ ಇನ್ನೆನು ಚುನಾವಣೆಗೆ ದಿನಾಂಕ ಘೋಷಿಸಲಿದೆ ಎನ್ನುವ ಸುಳಿವು ದೊರೆಯುತ್ತಲೇ ಜಾರಕಿಹೊಳಿ ಅವರು ಕ್ಷೇತ್ರದಲ್ಲೇ ಉಳಿದುಕೊಂಡು ಗೆಲುವಿನ ರಣತಂತ್ರ ಹೆಣೆಯಲು ಆರಂಭಿಸಿದರು. ಆಗಲೇ ಬಿಜೆಪಿ ಪಾಳೆಯದಲ್ಲೂ ಸಣ್ಣ ನಡುಕ ಹುಟ್ಟಿಕೊಂಡಿತ್ತು. ಅದರ ಫಲವೇ ಹಿಂದುತ್ವದ ಮಂತ್ರ ಆರಂಭಗೊಂಡು, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಕರೆತರುವ ಚಿಂತನೆ ಚಿಗುರೊಡೆದದ್ದು. ಅದಕ್ಕೆ ಸ್ವತಃ ಯತ್ನಾಳ್ ಅವರು ಚುನಾವಣೆ ಪ್ರಚಾರಕ್ಕೆ ಬರುವುದಾಗಿ ಒಪ್ಪಿಕೊಂಡದ್ದು. ಬಳಿಕವಷ್ಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಿಂದುತ್ವದ ಮಂತ್ರ ಜಪಿಸಲಾರಂಭಿಸಿ, ಯತ್ನಾಳ್ ಅವರು ಪ್ರಚಾರಕ್ಕೆ ಬಂದರೆ ತಪ್ಪೇನು ಎನ್ನುವ ನಿರ್ಧಾರಕ್ಕೆ ಬಂದಿದ್ದು. ಇದು ಪಕ್ಷದಲ್ಲಿ ಸಾಕಷ್ಟು ವಾದ – ವಿವಾದಕ್ಕೆ ಕಾರಣವಾಯಿತಾದರೂ ಸಚಿವ ಸತೀಶ್ ಜಾರಕಿಹೊಳಿ ಅವರ ಚುನಾವಣೆ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಬಿಜೆಪಿಗರು ಪ್ರಬಲ ಹಿಂದುತ್ವದ ಮಂತ್ರ ಜಪಿಸುತ್ತ, ಯತ್ನಾಳ್ ಆಗಮನಕ್ಕೆ ಅಸ್ತು ಎಂದಿದ್ದು ಎನ್ನುವ ಮಾಹಿತಿ ಇದೆ.
ಗಂಭೀರ ಯತ್ನ ಆರಂಭ:
ಯತ್ನಾಳ ಅವರು ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದು ಬಿಜೆಪಿಗರಿಗೆ ಎಷ್ಟು ಅನುಕೂಲವಾಯಿತೋ ಏನೋ, ಕಾಂಗ್ರೆಸ್ಸಿನ ಚಾಣಕ್ಯ, ಸಚಿವ ಸತೀಶ್ ಜಾರಕಿಹೊಳಿ ಗೆಲುವಿನ ಕಾರ್ಯ ತಂತ್ರ ರೂಪಿಸಲು ಇನ್ನಷ್ಟು ಸಕ್ರೀಯರಾದರು. ಪರಿಣಾಮವಾಗಿ ಕ್ಷೇತ್ರದಲ್ಲಿನ ಬಹುತೇಕ ಎಲ್ಲ ಸಮುದಾಯಗಳನ್ನು ಸತೀಶ್ ಅವರು ತಲುಪಿ, ಅವರುಗಳ ಮನವೊಲಿಕೆ ಸಾಧ್ಯವಾಯಿತು ಎನ್ನುವ ಮಾತು ಕಾಂಗ್ರೆಸ್ಸಿನಲ್ಲಿ ವ್ಯಾಪಕವಾಗಿದೆ. ಆಗಲೇ ಅಹಿಂದ ಮತ್ತು ಇತರ ಪ್ರಬಲ ಸಮುದಾಯಗಳ ಮತದಾರರು ಕಾಂಗ್ರೆಸ್ಸಿನತ್ತ ಮುಖ ಮಾಡಿದರಂತೆ. ಇವರ ಪ್ರಯತ್ನಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತರ ಮಂತ್ರಿಗಳ ದಂಡಿನೊಂದಿಗೆ ಕ್ಷೇತ್ರದಾದ್ಯಂತ ಚುನಾವಣೆ ಪ್ರಚಾರ ಕೈಗೊಂಡಿದ್ದು ಕ್ಷೇತ್ರದಲ್ಲಿ ಪಕ್ಷದ ವಾತಾವರಣ ಸೃಷ್ಟಿಗೆ ಸಹಕಾರಿ ಕೂಡ ಆಯಿತು.
ಬಿಜೆಪಿಗರ ಹೇಳಿಕೆಗಳು:
ಸಚಿವ ಸತೀಶ್ ಜಾರಕಿಹೊಳಿ ಅವರ ನಿರಂತರ ಪ್ರಯತ್ನದ ಜತೆಗೆ ಬಿಜೆಪಿ ಮಾಜಿ ಸಚಿವ ಸಿ.ಸಿ. ಪಾಟೀಲ, ಯತ್ನಾಳರ ಮಾತುಗಳು ಜನ ಕಾಂಗ್ರೆಸ್ ಪರ ವಾಲಲು ಕಾರಣವಾದವು. ಇಷ್ಟರ ಮೇಲೆ ಪಂಚ ಗ್ಯಾರಂಟಿಗಳ ಫಲ, ವೈದ್ಯ ಕಾಲೇಜ್ ಮಂಜೂರಾತಿ, ಮುಳುಗಡೆ ಸಂತ್ರಸ್ತರ ಜಮೀನುಗಳಿಗೆ ಒಪ್ಪಿತ ಪರಿಹಾರ ಘೋಷಣೆ ಲಾಭ ಕೂಡ ಪಕ್ಷಕ್ಕೆ ಲಭಿಸಿದ ಪರಿಣಾಮವಾಗಿ ಪಕ್ಷವನ್ನು ಗೆಲುವಿನ ದಡಕ್ಕೆ ತಲುಪಿಸಲು ಅವರಿಗೆ ಅನುಕೂಲವಾಯಿತು ಎನ್ನುವುದು ಕಾಂಗ್ರೆಸ್ಸಿಗರ ವಾದ.
ಏನೇ ಆಗಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ದಡ ಸೇರುವಲ್ಲಿ ಸಚಿವ ಜಾರಕಿಹೊಳಿ ಅವರು ರೂಪಿಸಿದ ತಂತ್ರಗಳು ಕೆಲಸ ಮಾಡಿವೆ ಎನ್ನುವುದನ್ನು ಬಹುತೇಕ ಕಾಂಗ್ರೆಸ್ಸಿಗರು ಒಪ್ಪುತ್ತಾರೆ. ಒಟ್ಟಾರೆ ಚಾಣಾಕ್ಯರ ಚಾಣಾಕ್ಷ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಇಂದಿನ ಫಲಿತಾಂಶವೇ ಉತ್ತರವಾಗಿದೆ.
- ವಿಠ್ಠಲ ಆರ್. ಬಲಕುಂದಿ




