ಉಪಚುನಾವಣೆ: ಫಲಿಸಿದ ಕೈ ತಂತ್ರ.. ನಡೆಯಲಿಲ್ಲ ಹಿಂದುತ್ವ ಮಂತ್ರ..!

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ಅನುಸರಿಸಿದ ತಂತ್ರಗಳೆಲ್ಲ ಫಲಕಾರಿ ಆಗಿ ದಿ.ಶಾಸಕ ಎಚ್.ವೈ. ಮೇಟಿ ಅವರು ಪುತ್ರ ಉಮೇಶ ಮೇಟಿ ನಿರೀಕ್ಷೆ ಮೀರಿದ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಕ್ಷೇತ್ರದ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಹಿಂದುತ್ವದ ದಾಳ ಉರುಳಿಸುವ ಮೂಲಕ ಕೈ ತಪ್ಪಿ ಹೋಗಿರುವ ಕ್ಷೇತ್ರವನ್ನು ಪುನಃ ವಶಪಡಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿಯನ್ನು ಮತದಾರ ಈ ಬಾರಿಯೂ ಕೈ ಹಿಡಿಯಲಿಲ್ಲ. ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಸತತ ಎರಡನೇ ಸೋಲು ಕಾಣುವಂತಾಯಿತು.

ಅಹಿಂದ ಜತೆ, ಲಿಂಗಾಯತ ಮತ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ದಿ.ಎಚ್.ವೈ. ಮೇಟಿ ಅವರು ಪುತ್ರ ಉಮೇಶ್ ಮೇಟಿ ಅವರನ್ನು ಶತಾಯ-ಗತಾಯ ಗೆಲ್ಲಿಸಿಕೊಳ್ಳಲೇ ಬೇಕು ಎನ್ನುವ ಪ್ರತಿಷ್ಠೆಗೆ ಬಿದ್ದಿದ್ದರು. ಅದಕ್ಕಾಗಿ ವಾರ ಕಾಲ ಕ್ಷೇತ್ರದಲ್ಲೇ ಬೀಡುಬಿಟ್ಟು ಚುನಾವಣೆ ಪ್ರಚಾರ ಕೈಗೊಂಡು, ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಗೆಲುವಿನ ತಂತ್ರ ಹೆಣೆದ್ದಿದ್ದರು. ಅಹಿಂದ ಮಂತ್ರದೊಂದಿಗೆ ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಢಿಕರಿಸುವ ಜತೆಗೆ ಪ್ರಬಲ ಲಿಂಗಾಯತ ಸಮುದಾವನ್ನು ಪಕ್ಷದತ್ತ ಸೆಳೆಯುವ ಅವರ ತಂತ್ರವೂ ಸಿದ್ಧಿಸಿತು.

ವೈದ್ಯ ಕಾಲೇಜ್, ಒಪ್ಪಿತ ದರ ಪರಿಹಾರ:

ಗಮನಾರ್ಹ ಅಂಶವೆಂದರೆ ಚುನಾವಣೆ ದಿನಾಂಕ ಘೋಷಣೆ ಮುನ್ನಾ ದಿನವೇ ಸರ್ಕಾರಿ ವೈದ್ಯ ಕಾಲೇಜು ಸ್ಥಾಪನೆಗೆ ಅಡಿಗಲ್ಲು ಹಾಕಿದರು. ಜತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ರಲ್ಲಿ ಮುಳುಗಡೆ ಆಗುವ ಜಮೀನುಗಳ ಸ್ವಾಧೀನಕ್ಕಾಗಿ ಒಪ್ಪಿದ ಪರಿಹಾರ ಚೆಕ್ ಕೂಡ ವಿತರಿಸಿ, ಅಭಿವೃದ್ಧಿ ಮಂತ್ರ ಜಪಿಸಿದರು. ಹಾಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಮನೆ ಮನೆಗೆ ತಲುಪಿಸುವ ಮೂಲಕ ಕ್ಷೇತ್ರದಲ್ಲಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಹಿಳಾ ಮತದಾರರ ಮನವೊಲಿಸುವಲ್ಲಿ ಕಾಂಗ್ರೆಸ್ಸಿಗರು ಯಶಸ್ಸು ಕಾಣುವ ಮೂಲಕ ಪಕ್ಷದ ಅಭ್ಯರ್ಥಿ ಗೆಲುವಿಗೆ ಮುನ್ನುಡಿ ಬರೆದರು.

ಒಗ್ಗಟ್ಟು ಪ್ರದರ್ಶನ:

ಪಕ್ಷದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿ ಪಡಿಸುವ ಮೂಲಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗುವಲ್ಲಿ ಸಚಿವ ಜಾರಕಿಹೊಳಿ ನಿರ್ವಹಿಸಿದ ಪಾತ್ರ ಎಲ್ಲರ ಗಮನ ಸೆಳೆಯಿತು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೂಡ ಈ ಬಾರಿ ಅತ್ಯಂತ ನಿಷ್ಠೆಯಿಂದ ಪಕ್ಷದ ಪರ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಉಮೇಶ್ ಮೇಟಿ ಅವರು ನಿರೀಕ್ಷೆಗಿಂತ ಹೆಚ್ಚಿನ ಮತಗಳನ್ನು ಪಡೆದು ಕ್ಷೇತ್ರದಲ್ಲಿ ಪಕ್ಷದ ಗೆಲುವಿನ ಓಟವನ್ನು ಮುಂದುವರಿಸಲು ಸಾಧ್ಯವಾಗಿದೆ.

ಛಿದ್ರವಾದ ಭದ್ರಕೋಟೆ:

ದಿ.ಶಾಸಕ ಎಚ್.ವೈ. ಮೇಟಿ ಅವರು ೨೦೧೩ ಮತ್ತು ೨೦೨೩ ರಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಸೋಲಿಸುವ ಮೂಲಕ ಕೇಸರಿ ಪಾಳೆಯದ ಭದ್ರಕೋಟೆಯನ್ನು ಛಿದ್ರಗೊಳಿಸಿ ಕಾಂಗ್ರೆಸ್ಸಿಗೆ ಭದ್ರ ಬುನಾದಿ ಹಾಕಿದ್ದರು. ಈಗ ಉಪಚುನಾವಣೆಯಲ್ಲಿ ಅವರ ಪುತ್ರ ಉಮೇಶ ಮೇಟಿ ಕೂಡ, ಎದುರಾಳಿ ಬಿಜೆಪಿಯ ವೀರಣ್ಣ ಚರಂತಿಮಠ ಅವರ ವಿರುದ್ಧ ಗೆಲುವು ಸಾಧಿಸಿ ಕೈಕೋಟೆಯನ್ನು ಮತ್ತಷ್ಟು ಭದ್ರಗೊಳಿಸಿದ್ದಾರೆ.

ಕೈ ಹಿಡಿಯದ ಹಿಂದುತ್ವ:

ಬಾಗಲಕೋಟೆ ಉಪಚುನಾವಣೆಯನ್ನು ಹಿಂದುತ್ವ ಮಂತ್ರ ಜಪಿಸುವ ಮೂಲಕವೇ ಗೆಲ್ಲಬೇಕು ಎಂದು ಹೊರಟಿದ್ದ ಬಿಜೆಪಿ ಹೀನಾಯ ಸೋಲು ಕಂಡಿದೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿಯಲ್ಲಿ ಹಿಂದುತ್ವ ಮಂತ್ರದ ಜಪ ಆರಂಭಗೊAಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಹಿಂದುತ್ವದ ಗೆಲುವಾಗಲಿದೆ ಎನ್ನುವುದನ್ನು ಬಿಜೆಪಿಗರು ಗಟ್ಟಿಯಾಗಿ ಹೇಳುತ್ತಿದ್ದರು. ಅದೇ ಮಾತನ್ನು ಚುನಾವಣೆಯಲ್ಲೂ ಮುಂದುವರಿಸಿದ್ದರು.

ಯತ್ನಾಳ್ ಪ್ರಚಾರ:

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಎಷ್ಟರ ಮಟ್ಟಿಗೆ ಹಿಂದುತ್ವಕ್ಕೆ ಅಂಟಿಕೊಂಡಿದ್ದರು ಎಂದರೆ ಪ್ರಬಲ ಹಿಂದುತ್ವ ಪ್ರತಿಪಾದಕ, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚುನಾವಣೆ ಪ್ರಚಾರಕ್ಕೆ ಬರುವುದನ್ನು ಸಮರ್ಥಿಸಿಕೊಂಡಿದ್ದರು. ಪಕ್ಷದ ಮುಖಂಡರನ್ನು ಕಾಡಿಬೇಡಿ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಯಿಸಿಕೊಂಡಿದ್ದರು. ಮಿತ್ರನನ್ನು ಗೆಲ್ಲಿಸಲು ಯತ್ನಾಳ್ ಅವರೂ ಹಲವು ಸವಾಲುಗಳ ಮಧ್ಯೆ ಕ್ಷೇತ್ರಕ್ಕೆ ಆಗಮಿಸಿ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿದ್ದರು. ಇದು ಬಿಜೆಪಿ ಅನೇಕ ಮುಖಂಡರಿಗೆ ಸಹ್ಯವಾಗಿರಲಿಲ್ಲ ವಾದರೂ ಅನಿವಾರ್ಯವಾಗಿ ಒಪ್ಪಿಕೊಂಡಿದ್ದರು.

ಕಾಲ್ಕಿತ್ತ ಬಿವೈವಿ:

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಚುನಾವಣೆ ಪ್ರಚಾರಕ್ಕೆ ಬರುವ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಲ್ಲಿಂದ ಕಾಲ್ಕಿತ್ತರು. ವಾಪಸ್ ಬರಲೇ ಇಲ್ಲ. ಅವರ ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಾಗಲಕೋಟೆಗೆ ಆಗಮಿಸಿ ಇಲ್ಲಿಯೇ ಇದ್ದು ಚುನಾವಣೆ ಪ್ರಚಾರ ಕೈಗೊಂಡಿದ್ದರು. ಒಂದೇ ಒಂದು ಪ್ರಚಾರ ಸಭೆಯಲ್ಲೂ ಬಿಎಸ್‌ವೈ ಮತ್ತು ಯತ್ನಾಳ್ ಮುಖಾಮುಖಿ ಆಗಲಿಲ್ಲ. ಯಾವಾಗ ಯತ್ನಾಳ್ ಅವರು ಚುನಾವಣೆ ಪ್ರಚಾರ ಕೈಗೊಂಡರೋ ಆಗ ಕಾಂಗ್ರೆಸ್ ಪಾಳೆಯದಲ್ಲಿ ಅಹಿಂದ ಮಂತ್ರ ಜೋರಾಯಿತು. ಜತೆಗೆ ಪ್ರಬಲ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯುವ ತಂತ್ರಗಳು ಜೋರಾದವು.

ಯಾರೂ ಊಹಿಸದ ಆಘಾತ:

ಏತನ್ಮಧ್ಯೆ ಚುನಾವಣೆ ಪ್ರಚಾರ ವೇಳೆ ವೀರಶೈವ -ಲಿಂಗಾಯತ ಪಂಚಮಸಾಲಿ ಸಮುದಾಯ ಮುಖಂಡರ ಸಭೆಯಲ್ಲಿ ಕುರುಬ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಬಗೆಗೆ ಹಗುರವಾಗಿ ಮಾತನಾಡಿದ್ದಾರೆ ಎನ್ನುವುದು ಸಾಕಷ್ಟು ಸುದ್ದಿಗೆ ಗ್ರಾಸವಾಯಿತು. ಯತ್ನಾಳರು ಪ್ರಚಾರಕ್ಕೆ ಆಗಮಿಸಿದ್ದು, ಸಿ.ಸಿ. ಪಾಟೀಲರು ಕುರುಬ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಬಗೆಗೆ ಹಗುರವಾಗಿ ಮಾತನಾಡಿದ್ದು ಕಾಂಗ್ರೆಸ್ಸಿಗೆ ವರದಾನವಾಗಿ, ಬಿಜೆಪಿಗೆ ಸಮಸ್ಯೆ ಆಯಿತು. ಬಿಜೆಪಿಯ ರಾಜ್ಯ ಹಾಗೂ ಜಿಲ್ಲೆಯ ಮುಖಂಡರು ತಮ್ಮಲ್ಲಿನ ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದರೂ ಯಾರೂ ಊಹಿಸದಷ್ಟು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ. ಬಿಜೆಪಿ ಪಾಳೆಯದಲ್ಲಿನ ಹಲವಾರು ಅಂಶಗಳು ಗೆಲುವಿಗೆ ತೊಡಕಾಗಿ ಪರಿಣಮಿಸಿದವು. ಹಿಂದುತ್ವ ಮಂತ್ರದ ಜಪವೇ ಕಾಂಗ್ರೆಸ್ ಗೆಲುವಿಗೆ ಬಹುದೊಡ್ಡ ಅಸ್ತ್ರವಾಯಿತು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ವ್ಯಾಪಕವಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top