ಚುನಾವಣೆ ಅಖಾಡದಲ್ಲಿ ಕೃಷ್ಣೆಯ ಪ್ರವಾಹ

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಿಂದ ಈ ಕುರಿತು ಸವಾಲು, ಜವಾಬುಗಳು ಜೋರಾಗಿವೆ. ಯುಕೆಪಿ ವಿಷಯದಲ್ಲಿ ಯಾರು ಏನು ಮಾಡಿದ್ದಾರೆ ಎನ್ನುವ ಹೂರಣ ಹೊರ ಬೀಳುತ್ತಿದೆ.

ಎಚ್ ಡಿಕೆ ಕಿವಿಮಾತು:

ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಸಹಕಾರದೊಂದಿಗೆ ನಡೆದುಕೊಳ್ಳದ ಪರಿಣಾಮ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿನ ಕೃಷ್ಣಾ ನ್ಯಾಯಾಧೀಕರಣ -2 ರ ಅಧಿಸೂಚನೆ ಹೊರ ಬೀಳುತ್ತಿಲ್ಲ ಎನ್ನುವ ಅಂಶವನ್ನು ಕೇಂದ್ರ ಸರ್ಕಾರದಲ್ಲಿನ ಪಾಲುದಾರ ಪಕ್ಷದ ಸಚಿವ ಎಚ್.ಡಿ. ಕುಮಾರಸ್ವಾಮಿ ಹೊರ ಹಾಕಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಸದಾ ಸಂಘರ್ಷದಲ್ಲೆ ಕಾಲ ಕಳೆದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು ಕೇಂದ್ರದೊಂದಿಗೆ ಹೇಗಿರಬೇಕು ಎನ್ನುವುದನ್ನು ನೆರೆಯ ಆಂಧ್ರ ಪ್ರದೇಶದಿಂದ ಕಲಿಯಬೇಕು ಎನ್ನುವ ಸೂಚ್ಯ ಕಿವಿ ಮಾತನ್ನು ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ.

ಸಹಕಾರ ಮುಖ್ಯ:

ರಾಜ್ಯದ ಅಭಿವೃದ್ಧಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಹಕಾರ ಮನೊಭಾವದಿಂದ ಇರಬೇಕು. ಸದಾ ಸಂಘರ್ಷಕ್ಕಿಳಿದಲ್ಲಿ ಕೇಂದ್ರ ಸಹಕಾರ ಸಾಧ್ಯವಾಗದು. ಕೇಂದ್ರದೊಂದಿಗೆ ಸಹಕಾರ ಮನೊಭಾವದಿಂದ ನಡೆದುಕೊಂಡು ರಾಜ್ಯದ ಅಭಿವೃದ್ಧಿಗೆ ಅವಕಾಶ ಮಾಡಿಕೊಳ್ಳಬೇಕು ಎನ್ನುವ ಹಿತನುಡಿಯನ್ನು ಕುಮಾರಸ್ವಾಮಿ ಹೇಳಿದ್ದಾರೆ.

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ನಿತ್ಯವೂ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ, ಕೃಷ್ಣಾ ನ್ಯಾಯಾಧೀಕರಣ ಅಧಿಸೂಚನೆ ಕುರಿತು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಬಹಿರಂಗ ಚರ್ಚೆಗೆ ಸವಾಲು – ಜವಾಬುಗಳು ನಡೆಯುತ್ತಿವೆ.

ರಾಜ್ಯಕ್ಕೆ ಅನ್ಯಾಯ:

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಕೃಷ್ಣಾ ನ್ಯಾಯಾಧೀಕರಣ -2 ರ ವರದಿ 2010 ರಲ್ಲಿ ಕೇಂದ್ರಕ್ಕೆ ಸಲ್ಲಿಕೆ ಆಗಿದೆ. 2013 ರಲ್ಲಿ ಐತೀರ್ಪು ಬಂದಿದೆ. ಅಂದಿನಿಂದ ಇಂದಿನವರೆಗೂ ಕೇಂದ್ರ ಅಧಿಸೂಚನೆ ಹೊರಡಿಸುತ್ತಿಲ್ಲ. ಯೋಜನಾನುಷ್ಠಾನದಲ್ಲಿ ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುವುದು ಕಾಂಗ್ರೆಸ್ಸಿಗರ ಆರೋಪವಾಗಿದೆ.‌ ಕೃಷ್ಣೆಯ ವಿಷಯದಲ್ಲಿ ಕಾಂಗ್ರೆಸ್ ಕೇವಲ ಭರವಸೆಗಳನ್ನು ನೀಡುತ್ತ, ಮುಳುಗಡೆ ಸಂತ್ರಸ್ತರನ್ನು ವಂಚಿಸುತ್ತ ಹೊರಟಿದೆ ಎಂದು ಬಿಜೆಪಿಗರು ಆಪಾದಿಸುತ್ತಿದ್ದಾರೆ.

ಏಟು- ಎದಿರೇಟು:

ಯುಕೆಪಿ ವಿಷಯದಲ್ಲಿ ಕಾಂಗ್ರಸ್ಸಿಗರು ಏನು‌ ಮಾಡಿದ್ದಾರೆ ಎನ್ನುವ ಕುರಿತು ಬಹಿರಂಗ ಚರ್ಚೆ ನಡೆಯಲಿ ಎಂದು ಬಿಜೆಪಿಗರು ಸವಾಲು ಹಾಕಿದ್ದಾರೆ. ಬಿಜೆಪಿಗರ ಸವಾಲನ್ನು ಸ್ವೀಕರಿಸಿರುವ ಕಾಂಗ್ರೆಸ್ಸಿಗರು ಬಹಿರಂಗ ಚರ್ಚೆಗೆ ಸಿದ್ದ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿಗರ ಕೊಡುಗೆ ಏನು?:

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಆಲಮಟ್ಟಿಯಲ್ಲಿ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ನಾವು. ಜಲಾಶಯ ಕಟ್ಟಿ, ಗೇಟ್ ಗಳನ್ನು ಅಳವಡಿಸಿ, ಪೂಜೆ ಮಾಡಿದವರು ನಾವು. ಹಂತ- 1, ಹಂತ-2 ರ ಮೂಲಕ 120 ಟಿಎಂಸಿ ನೀರು ಹಿಡಿದು ಗಂಗಾ ಪೂಜೆ ಮಾಡಿದವರು ಯಾರು?. ಇಷ್ಟೆಲ್ಲ‌ ಕೆಲಸ ಮಾಡಲು ಸಾವಿರಾರು ಕೋಟಿ ರೂ.ಗಳನ್ನು ಖರ್ಚ ಮಾಡಿದವರು ಯಾರು?. 1999 ರಲ್ಲಿ ಜಲಾಶಯದಲ್ಲಿ ನೀರು ಸಂಗ್ರಹಿಸಿ 2002 ರಲ್ಲಿ2.55 ಲಕ್ಷ ಹೆಕ್ಟೆರ್ ಭೂಮಿಗೆ ನೀರು ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಸರ್ಕಾರದಲ್ಲಿನ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ ಬಿಜೆಪಿಗರನ್ನು ಪ್ರಶ್ನಿಸಿದ್ದಾರೆ.

ಬಿಜೆಪಿಯಿಂದ ಅನ್ಯಾಯ:

ಬಚಾಬತ್ ಐತೀರ್ಪಿನ ಪ್ರಕಾರ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಬ್ರಿಜೇಶ್ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ -2 ರ ವರದಿ 2010 ರಲ್ಲಿ ಕೇಂದ್ರಕ್ಕೆ ಸಲ್ಲಿಕೆ ಆಗಿ 2013 ರಲ್ಲಿ ಐತೀರ್ಪು ಬಂದಿದೆ. ಅಲ್ಲಿಂದ ಇಲ್ಲಿಯವರೆಗೂ ಕೇಂದ್ರ ಸರ್ಕಾರ ನ್ಯಾಯಾಧೀಕರಣ -2 ರ ಅಧಿಸೂಚನೆ ಹೊರಡಿಸದೇ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿರುವವರಿಗೆ ನ್ಯಾಯಾಧೀಕರಣ-2 ರ ಐತೀರ್ಪು ಬಂದು 15 ವರ್ಷಗಳಾಗುತ್ತ ಬಂದರೂ ಅಧಿಸೂಚನೆ ಹೊರಡಿಸಲು ಆಗುತ್ತಿಲ್ಲ. ಬಹಿರಂಗ ಚರ್ಚೆಯ‌ ಬಗೆಗೆ ಮಾತನಾಡುವವರು, ಆಲಮಟ್ಟಿ ಜಲಾಶಯ ಎತ್ತರವನ್ನು ಹೆಚ್ಚಿಸಲು ಅಧಿವೇಶನದಲ್ಲಿ ನಡೆದ ಚರ್ಚೆಗೆ ಬರಬಹುದಿತ್ತು. ಏಕೆ ಬರಲಿಲ್ಲ ಎಂದು ಪ್ರಶ್ನಿಸಿರುವುದು ಹತ್ತಾರು ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿದೆ.

ಪರಿಹಾರ ಹಣ ನಿಗದಿ:

ಯುಕೆಪಿ ಹಂತ-3 ರ ಅನುಷ್ಠಾನಕ್ಕಾಗಿ ಅಗತ್ಯ ಭೂಮಿ ಸ್ವಾಧೀನದ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಜಮೀನುಗಳಿಗೆ ನಿಗದಿ ಪಡಿಸಿರುವ ಒಪ್ಪಿತ ಪರಿಹಾರ ಮೊತ್ತದ ವಿಷಯದಲ್ಲೂ ಬಿಜೆಪಿ‌ ಮುಖಂಡರು ಅಪಸ್ವರ ತೆಗೆದಿದ್ದಾರೆ. ಪ್ರತಿ ಎಕರೆ ಒಣ ಬೇಸಾಯ ಭೂಮಿಗೆ 30 ಲಕ್ಷ, ಪ್ರತಿ ಎಕರೆ ನೀರಾವರಿಗೆ 40 ಲಕ್ಷ ಎಂದು ನಿಗದಿ ಪಡಿಸಲಾಗಿದೆ. ಇದು ದೇಶದ ಯಾವ ಭಾಗದಲ್ಲೂ ನಿಗದಿ ಪಡಿಸಿರುವ ಬೆಲೆಗಿಂತ ಅಧಿಕವಾಗಿದೆ ಎನ್ನುವುದು ಕಾಂಗ್ರೆಸ್ ಮುಖಂಡರ ವಾದವಾಗಿದೆ.

ಬೆಂಕಿಗೆ ತುಪ್ಪ:

ಬಾಗಲಕೋಟೆ ಉಪ ಚುನಾವಣೆ ಅಖಾಡದಲ್ಲಿ ಕೃಷ್ಣೆಯ ಬಗೆಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿರುವಾಗ ಕೇಂದ್ರ ಸಚಿವ,‌ಮಾಜಿ ಮುಖ್ಯಮಂತ್ರಿ ಎಚ್.ಡಿ.‌ಕುಮಾರಸ್ವಾಮಿ ಉರಿವ ಬೆಂಕಿಗೆ ತುಪ್ಪ ಸುರಿವ ಕೆಲಸ ಮಾಡಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ -2 ರ ಅಧಿಸೂಚನೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರ ಸಂಪುಟದಲ್ಲಿನ ಸಚಿವರು, ಸಂಸದರನ್ನು ಭೇಟಿ ಮಾಡಿಲ್ಲ. ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎನ್ನುವ ಸಮಜಾಯಿಸಿ ನೀಡಿದ್ದಾರೆ.

ಉದ್ದೇಶಪೂರ್ವಕ ಅನ್ಯಾಯ:

ಹಾಗೆ ಕೇಂದ್ರದೊಂದಿಗೆ ಸದಾ ಸಂಘರ್ಷಕ್ಕಿಳಿಯದೆ ಸಹಕಾರ ಭಾವದಿಂದಿರಬೇಕು. ಯಾವ ರೀತಿ ಸಹಕಾರದಿಂದ ಇರಬೇಕು ಎನ್ನುವುದನ್ನು ನೆರೆ ಆಂಧ್ರ ಪ್ರದೇಶವನ್ನು ನೋಡಿ ಕಲಿಯಬೇಕು ಎನ್ನುವ ಮಾತನ್ನು ಗಮನಿಸಿದಾಗ ಕೇಂದ್ರದೊಂದಿಗಿನ ರಾಜ್ಯ ಸರ್ಕಾರದ ಸಂಘರ್ಷ ಮನೋಭಾವದಿಂದಾಗಿ ರಾಜ್ಯಕ್ಕೆ ಉದ್ದೇಶ ಪೂರ್ವಕವಾಗಿ ಅನ್ಯಾಯ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಉಪಚುನಾವಣೆ ಆಖಾಡದಲ್ಲಿ ಕೃಷ್ಣೆಯ ಬಗೆಗೆ ನಡೆಯುತ್ತಿರುವ ಚರ್ಚೆಗೆ ತಾರ್ಕಿಕ ಅಂತ್ಯ ಸಿಗಬೇಕಿದೆ. ಈ ಚರ್ಚೆಯ ಫಲಾಫಲ ಯಾರಿಗೆ ಸಿಗಲಿದೆ ಎನ್ನುವುದನ್ನು ಕಾಯ್ದು ನೋಡಬೇಕು.

  • ವಿಠ್ಠಲ ಆರ್. ಬಲಕುಂದಿ
Scroll to Top