ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ಸಿಗರು, ಅದರಲ್ಲೂ 28 ರ ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳು ಈಗಲೇ ಒಂದು ಬಾರಿ ಹಿಂದಿರುಗಿ ನೋಡಬೇಕಿದೆ. ಅಂದಾಗಲೇ ಮುಂದಿನ ನಡೆಗಳು ಸ್ಪಷ್ಟವಾಗಲಿವೆ.
ಸಿಎಂ ಹೇಳಿಕೆ:
ಉಪಚುನಾವಣೆ ಬಹಿರಂಗ ಪ್ರಚಾರ ವೇಳೆ ವಾರ ಕಾಲ ಕ್ಷೇತ್ರದಲ್ಲಿ ಬೀಡು ಬಿಟ್ಟು ಬಹಿರಂಗ ಪ್ರಚಾರ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ ಸಭೆಯಲ್ಲಿ “ಮುಂದಿನ ಎರಡು ವರ್ಷಕ್ಕೆ ಉಮೇಶ್ ಮೇಟಿ ಅವರನ್ನು ಗೆಲ್ಲಿಸಿ, ಬಳಿಕ ನಡೆಯುವ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲೂ ಅವರಿಗೆ ಟಿಕೆಟ್ ಕೊಡಲಾಗುವುದು. ಆಗ ಐದು ವರ್ಷದ ಅವಧಿಗೆ ಗೆಲ್ಲಿಸಬೇಕು” ಎನ್ನುವ ಮನವಿ ಮಾಡಿದ್ದರು.
ಗಂಭೀರ ವಿಷಯ:
ಆ ವೇಳೆ ಅದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲವಾದರೂ. ಉಮೇಶ್ ಮೇಟಿ ಅವರು ಗೆದ್ದು ಬೀಗುತ್ತಿರುವ ಈ ವೇಳೆ ಗಂಭೀರವಾಗಿ ಪರಿಗಣಿಸಲೇ ಬೇಕಿದೆ. ಅದರಲ್ಲೂ 2028 ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಮೇಲೆ ಕಣ್ಣಿಟ್ಟವರಂತೂ ಇದನ್ನು ಈಗಲೇ ಅರಿತುಕೊಳ್ಳುವ ಅಗತ್ಯತೆ ಇದೆ.
ನಿಷ್ಠೆಯಿಂದ ಚುನಾವಣೆ ಪ್ರಚಾರ:
2028 ರ ವಿಧಾನಸಭೆಯಲ್ಲಿ ಪಕ್ಷದ ಟಿಕೆಟ್ ಸಿಗಬಹುದು ಎನ್ನುವ ಕಾರಣಕ್ಕಾಗಿಯೇ ಕೆಲವರು ಕಾಯಾ, ವಾಚಾ, ಮನಸಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಶಾಸಕರು ಅಚಾನಕ್ಕಾಗಿ ನಿಧನ ಹೊಂದಿದರೆ ಅವರ ಕುಟುಂಬಸ್ಥರಿಗೆ ಟಿಕೆಟ್ ಎನ್ನುವ ಅಲಿಖಿತ ನಿಯಮದ ಹಿನ್ನೆಲೆಯಲ್ಲಿ ಉಮೇಶ್ ಮೇಟಿ ಅವರು ನಾನಾ ತಂತ್ರಗಳ ಮೂಲಕ ಕುಟುಂಬಸ್ಥರ ನಡುವಿನ ಪೈಪೋಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡು ಅಭೂತಪೂರ್ವ ಯಶಸ್ಸು ಕಂಡಿದ್ದಾರೆ.
ಶಾಸಕರಿಗೆ ಟಿಕೆಟ್ ತಪ್ಪಿದ್ದು ವಿರಳ:
ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ತೀರ ವಿರಳ. ಹೆಚ್ಚಾಗಿ ಸಿಟ್ಟಿಂಗ್ ಎಂಎಲ್ ಎ ಗಳಿಗೆ ಟಿಕೆಟ್ ಕೊಡುವ ಪದ್ಧತಿ ನಡೆದುಕೊಂಡು ಬಂದಿದೆ. 2028 ರ ಚುನಾವಣೆಯಲ್ಲಿ ಉಮೇಶ್ ಮೇಟಿ ಅವರು ಸಿಟ್ಟಿಂಗ್ ಎಂಎಲ್ ಎ ಎನ್ನುವ ಅಧಾರದ ಮೇಲೆ ಸುಲಭವಾಗಿ ಟಿಕೆಟ್ ಸಿಗಲಿದೆ. ಈ ಹಿನ್ನೆಲೆಯಲ್ಲಿಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅವರಿಗೆ ಟಿಕೆಟ್ ನೀಡಲಿದೆ ಎನ್ನುವ ಸ್ಪಷ್ಟ ಭರವಸೆ ಮಾತುಗಳನ್ನಾಡಿದ್ದು ಅನ್ನಿಸುತ್ತದೆ.
ಇಕ್ಕಟ್ಟಿನಲ್ಲಿ ಆಕಾಂಕ್ಷಿಗಳು:
ಒಂದಂತೂ ನಿಜ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲಿ ಹೇಳಿದಂತೆ 2028 ರ ವಿಧಾನಸಭೆ ಚುನಾವಣೆಗೂ ಬಾಗಲಕೋಟೆ ಕ್ಷೇತ್ರಕ್ಕೆ ಸಿಟಿಂಗ್ ಎಂ ಎಲ್ ಎ ಅಭ್ಯರ್ಥಿ ಎನ್ನುವುದು ಪಕ್ಕಾ ಆಗಿದ್ದು, 28 ರ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ನಡೆ ಏನಾಗಿರಲಿದೆ ಎನ್ನುವುದು ಗಮನಾರ್ಹ.
2028 ರ ವಿಧಾನಸಭೆಗೂ ಮುನ್ನ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು, ಅವಧಿ ಮುಗಿದ ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ ಚುನಾವಣೆಗಳು ಎದುರಾಗಲಿವೆ. ಚುನಾವಣೆ ಆಯೋಗ ಕೂಡ ಇವುಗಳಿಗೆ ಚುನಾವಣೆ ನಡೆಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಇಲ್ಲಿ ಆಕಾಂಕ್ಷಿಗಳ ಪಾತ್ರ ಕೂಡ ನಿರ್ಣಾಯಕ ವಾಗಿರಲಿದೆ. ಹೀಗಿರುವಾಗ 28 ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ನಡೆ ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.
- ವಿಠ್ಠಲ ಆರ್. ಬಲಕುಂದಿ




