ತಿರುಗುಬಾಣವಾಯ್ತಾ ಅರುಣ್ ಕಾರಜೋಳರು ಆಡಿದ ಮಾತು!

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವಾಗಲೇ, ಇತ್ತ ಮುಧೋಳದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಕಾರ್ಯವೈಖರಿ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ತಾಲೂಕಾಡಳಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿನ ಮುಖಂಡರ ಮಾತುಗಳು ಕೇವಲ ಕಾರ್ಯವೈಖರಿ, ದುರಾಡಳಿತದ ಆರೋಪಗಳಿಗೆ ಸೀಮಿತಿವಾಗಿರಲಿಲ್ಲ. ಎಲ್ಲೆ ಮೀರಿದ ಮಾತುಗಳು ಕ್ಷೇತ್ರದ ಬಹುತೇಕರ ಬೇಸರಕ್ಕೆ ಕಾರಣವಾಗಿವೆ.

ತಾಳ್ಮೆಗೆಟ್ಟ ನಿದರ್ಶನಗಳಿಲ್ಲ:

ಮುಧೋಳ ಕ್ಷೇತ್ರದ ರಾಜಕಾರಣವೇ ವಿಚಿತ್ರ. ರೈತ ಹೋರಾಟದ ಗಟ್ಟಿ ನೆಲದಲ್ಲಿ ಹೋರಾಟದ ಮಾತು ಸದಾ ಮಾರ್ದನಿಸುತ್ತಿರುತ್ತದೆ. ರಾಜಕಾರಣಿಗಳ ನಡೆಗಳ ವಿರುದ್ಧ ರೈತ ಮುಖಂಡರು ಸದಾ ತೀವ್ರತರವಾದ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅವರ ಭಾವೋದ್ವೆಗದ ಮಾತುಗಳಿಂದ ಅಲ್ಲಿನ ರಾಜಕಾರಣಿಗಳು ಎಂದೂ ತಾಳ್ಮೆ ಕಳೆದುಕೊಂಡು ಮಾತನಾಡಿರುವ ಉದಾಹರಣೆಗಳು ಇಲ್ಲ.

ತೂಕದ ಮಾತು:

ಮುಧೋಳ ವಿಧಾನಸಭೆ ಕ್ಷೇತ್ರವನ್ನು ಸತತ ಎರಡು ದಶಕಗಳ ಕಾಲ ಪ್ರತಿನಿಧಿಸಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ತಮ್ಮ ವಿರುದ್ಧ ಪ್ರತಿಭಟನೆಗಳು ನಡೆದಾಗ ಜಾಣ್ಮೆ ಹಾಗೂ ತಾಳ್ಮೆಯಿಂದ ನಿಭಾಯಿಸಿಕೊಂಡು ಬಂದಿದ್ದಾರೆ. ಪ್ರತಿಪಕ್ಷಗಳು ಹೋರಾಟಕ್ಕಿಳಿದಾಗಲೂ ಅಲ್ಲಿನ ಮುಖಂಡರು ಬಾಯ್ತಪ್ಪಿಯೂ ಕೆಟ್ಟದಾಗಿ ಮಾತನಾಡಿದ ನಿದರ್ಶನಗಳಿಲ್ಲ. ರಾಜಕೀಯವನ್ನು ರಾಜಕಾರಣಕ್ಕೆ ಸೀಮಿತಗೊಳಿಸಿಕೊಂಡು ಬಂದಿದ್ದಾರೆ. ಚುನಾವಣಾ ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಹಾಗಾಗಿ ಇಂದಿಗೂ ಅವರಿಗೆ ಕ್ಷೇತ್ರದಲ್ಲೊಂದು ಗಟ್ಟಿ ನೆಲೆ ಇದೆ.

ಅರುಣರ ಮಾತಿಗೆ ಬೇಸರ:

ಏತನ್ಮಧ್ಯೆ ಬುಧವಾರ ಬಿಜೆಪಿ ಕ್ಷೇತ್ರದ ಶಾಸಕರ ಅಭಿವೃದ್ಧಿ ಬಗೆಗಿನ ದಿವ್ಯ ನಿರ್ಲಕ್ಷ್ಯ ವಿರೋಧಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆ ನಡೆಸಿದ ವೇಳೆ, ಪಕ್ಷದ ಮುಖಂಡ ಅರುಣ್ ಕಾರಜೋಳರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕ್ಷೇತ್ರದ ಶಾಸಕ ಆರ್.ಬಿ. ‌ತಿಮ್ಮಾಪುರ ಅವರ ವಿರುದ್ಧ ವಾಗ್ದಾಳಿಗೆ ಇಳಿದ ಭರದಲ್ಲಿ ಆಡಿರುವ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿವೆ. ಸಚಿವ ತಿಮ್ಮಾಪುರ ವಿರುದ್ಧ ವೈಯಕ್ತಿಕವಾಗಿ ನಿಂದಿಸಿರುವುದು ಅವರ ಬೆಂಬಲಿಗರಲ್ಲಿ‌ ಬೇಸರ ತರಿಸಿದೆ. ಅಷ್ಟೆ ಅಲ್ಲ ಕ್ಷೇತ್ರದಲ್ಲೂ ಅರುಣ್ ಕಾರಜೋಳ ಅವರು ಈ ತರಹದ ನಿಂದನೆಗೆ ಇಳಿಯಬಾರದಿತ್ತು ಎನ್ನುವ ಚರ್ಚೆಗೆ ಗ್ರಾಸವಾಗಿದ್ದಾರೆ.

ಒಳ್ಳೆ ಬೆಳವಣಿಗೆಯಂತೂ ಅಲ್ಲ:

ತಂದೆ ಆಳಿದ ಕ್ಷೇತ್ರದಲ್ಲಿ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಬೇಕು ಎನ್ನುವ ತವಕದಲ್ಲಿರುವ ಅರುಣ್ ಕಾರಜೋಳರ ಮಾತುಗಳು ಯಾರನ್ನೇ ಉದ್ದೇಶಿಸಿ‌ ಮಾತನಾಡಿದರೂ ತೂಕಬದ್ಧವಾಗಿರಬೇಕೇ ಹೊರತು ತೂಕ ರಹಿತವಾಗಿರಬಾರದು ಎನ್ನುವ ಸಹಾನುಭೂತಿಯೂ ವ್ಯಕ್ತವಾಗತೊಡಗಿದೆ. ಅರುಣ್ ಅವರು ಆಡುವ ಪ್ರತಿ‌ಮಾತುಗಳು ಹಿರಿಯ ನಾಯಕ ಗೋವಿಂದ ಕಾರಜೋಳರ ಘನತೆ ಹೆಚ್ಚಿಸುವಂತಿರಬೇಕು ಎನ್ನುವ ಅಭಿಪ್ರಾಯ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ವ್ಯಕ್ತವಾಗಿದೆ.

ನಡೆದದ್ದಾದರೂ ಏನು ?:

ಪ್ರತಿಭಟನೆ ವೇಳೆ ನಡೆದದ್ದಾದರೂ ಏನು ಎನ್ನುವ ಕುತೂಹಲ‌ ಮೂಡುವುದು ಸಹಜ. ಪ್ರತಿಭಟನೆ ವೇಳೆ ಅರುವ ಕಾರಜೋಳ ಅವರು ಕ್ಷೇತ್ರದ ಶಾಸಕರೂ ಆಗಿರುವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ವಾಗ್ದಾಳಿ ನಡೆಸಿದ ವೇಳೆ ಮಾತಿನ ಭರದಲ್ಲಿ ” 2023 ರ ವಿಧಾನಸಭೆ ಚುನಾವಣಾ ಸಮಯದಲ್ಲಿ ಮುಧೋಳದ ಶಿವಾಜಿ ಸರ್ಕಲ್‌ನಲ್ಲಿ ನಿಂತು ಹೂವಿನ ಹಾರ ಹಾಕಿಸಿಕೊಂಡು “ನಾನು ನಿಮ್ಮ ಮನೆ ಮಗನಿದ್ದಂತೆ, ನನ್ನನ್ನು ಗೆಲ್ಲಿಸಿ” ಎಂದು ನಾಟಕವಾಡಿದ್ದ ಸಚಿವರು, ಇಂದು ಅಧಿಕಾರಕ್ಕೆ ಬಂದ ಮೇಲೆ ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ಅರುಣ್ ನೇರವಾಗಿ ಚಾಟಿ ಬೀಸಿದರು. ಈ ವೇಳೆ ಅವರು ಮಾತಿನ ಭರದಲ್ಲಿ “ಎಲ್ಲಿದೀಯಪ್ಪಾ ಮನೆ ಮಗನೇ? ” ಎಂದು ಆಡಿದ ಮಾತು ಈಗ ತಿರುಗುಬಾಣವಾಗಿ ಪರಿಣಮಿಸಿದೆ. ಇಂತಹ ಮಾತುಗಳನ್ನು ಸಂಸದ ಗೋವಿಂದ ಕಾರಜೋಳ ಅವರು ಅಪ್ಪಿತಪ್ಪಿ ಯಾರಿಗೂ ಮಾತನಾಡಿದ ಉದಾಹರಣೆಗಳಿಲ್ಲ.

ಪ್ರತಿಭಟನೆ ಎಲ್ಲರ ಹಕ್ಕು:

ಆಡಳಿತ ಪಕ್ಷದವರು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದಾಗ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದಾಗ ಪ್ರತಿಪಕ್ಷ ಪ್ರತಿಭಟನೆ ಮೂಲಕ ಎಚ್ಚರಿಸಲೇ ಬೇಕು. ಅದರಲ್ಲಿ ಯಾವುದೇ ತಪ್ಪಿಲ್ಲ. ಟೀಕೆಗಳು ತೀರಾ ವೈಯಕ್ತಿಕ ಹಂತಕ್ಕೆ ಹೋಗಬಾರದು ಎನ್ನುವ ಎಚ್ಚರಿಕೆ ಕೂಡ ಅಷ್ಟೆ ಮುಖ್ಯ. ಬಾಯಿ ತಪ್ಪಿ ಆಡುವ ಮಾತುಗಳು ಮುನ್ನಡೆಯುವ ಮಾರ್ಗದಲ್ಲಿ ಮಗ್ಗಲು ಮುಳ್ಳಾಗಬಾರದಷ್ಟೆ.

ಅರುಣ ಕಾರಜೋಳ ಅವರ ಮಾತಿಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಬ್ಯೂಸಿ ಆಗಿರುವ ಸಚಿವ ತಿಮ್ಮಾಪುರ ಅವರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದು ಕುತೂಹಲಕರವಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top