ಕಾಂಗ್ರೆಸ್ ವಿದ್ಯಮಾನಗಳ ಕುರಿತು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ರವರೆಗೆ ಸುದೀರ್ಘ ಸಭೆ ನಡೆಸಿದ ಕೇಂದ್ರ ಕಾಂಗ್ರೆಸ್ ವರಿಷ್ಠರು, ಸಂಜೆ ಹೊತ್ತು ಪತ್ರಿಕಾಗೋಷ್ಠಿ ನಡೆಸಿ ಸಭೆಯಲ್ಲಿ ಬರೀ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಬಗೆಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು. ಆ ಮೂಲಕ ಹತ್ತಾರು ಲೆಕ್ಕಾಚಾರದ ಮೇಲೆ ತೆರಳಿದ್ದ ರಾಜ್ಯ ಕಾಂಗ್ರೆಸ್ ಮುಖಂಡರಲ್ಲಿ ನಿರಾಸೆಯ ಕಾರ್ಮೋಡ ಆವರಿಸಿದಂತಾಗಿದೆ.
ಇಷ್ಟೊಂದು ಸಮಯ ಬೇಕಾ?:
ಬಹುಶಃ ರಾಜ್ಯದ ಯಾರೂ ಕಾಂಗ್ರೆಸ್ ವರಿಷ್ಠರ ಮಾತನ್ನು ಒಪ್ಪುವ ಸ್ಥಿತಿಯಲ್ಲಿಲ್ಲ. ರಾಜ್ಯಸಭೆಯ ಮೂರು ಸ್ಥಾನಗಳು ಮತ್ತು ವಿಧಾನ ಪರಿಷತ್ತಿನ ಏಳು ಸ್ಥಾನಗಳ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಇಷ್ಟೊಂದು ಸುದೀರ್ಘ ಸಭೆ ನಡೆಸುವ ಅಗತ್ಯ ಇರಲಿಲ್ಲ. ಇದರ ಜತೆಗೆ ಇನ್ನಷ್ಟು ಚರ್ಚೆ ನಡೆದಿರಬಹುದು. ಆ ಬಗ್ಗೆ ವರಿಷ್ಟರು ಚರ್ಚೆಯ ಗುಟ್ಟು ಬಿಟ್ಟುಕೊಡಲು ಹಿಂದೇಟು ಹಾಕುತ್ತಿರಬಹುದು ಎನ್ನುವುದು ಬಹುತೇಕರು ಅಭಿಪ್ರಾಯಪಡುತ್ತಿದ್ದಾರೆ.
ಹಿಂದೇಟು ಹಾಕಿದ ನಾಯಕರು:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ನೇತೃತ್ವದಲ್ಲಿ ನಡೆದ ಮ್ಯಾರಾಥಾನ್ ಸಭೆಯಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಬಗೆಗಷ್ಟೆ ಅಲ್ಲ, ಇತರ ವಿಷಯಗಳ ಬಗೆಗೂ ಚರ್ಚೆಗಳು ನಡೆದಿವೆ ಎನ್ನುವುದನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರ ಮುಖಭಾವಗಳು ಹೇಳುತ್ತಿದ್ದವು. ಸಭೆಯಿಂದ ಹೊರಬಂದ ಮುಖಂಡರು ಮಾಧ್ಯಮಗಳಿಗೆ ಹೇಳಿಕೆ ಕೊಡಲು ಹಿಂದೇಟು ಹಾಕುತ್ತಲೇ ಎಐಸಿಸಿ ಕಚೇರಿ ಆವರಣದಿಂದ ಹೊರ ನಡೆದರು.
ಮದ್ದರಿಯುವ ನಿರೀಕ್ಷೆ:
ಅಚ್ಚರಿಯ ಸಂಗತಿ ಎಂದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡುತ್ತಿದ್ದಂತೆ, ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಷ್ಟೆ ಅಲ್ಲ. ಇಡೀ ರಾಜ್ಯದಾದ್ಯಂತ ಕಳೆದ ಎರಡುವರೆ ವರ್ಷಗಳಿಂದ ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಗೆ ಗೊಂದಲಕ್ಕೆ ಪಕ್ಷದ ವರಿಷ್ಠರು ಕೊನೆ ಹಾಡಲಿದ್ದಾರೆ ಎನ್ನುವ ವ್ಯಾಪಕ ಚರ್ಚೆ ಜೋರಾಗಿ ನಡೆದಿತ್ತು. ಆ ಬಗೆಗೂ ಸಾಕಷ್ಟು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಮಂದಸ್ಮಿತರಾಗಿದ್ದ ಸತೀಶ್:
ಮುಖ್ಯಮಂತ್ರಿಗಳ ಆಪ್ತರು, ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಿಗೆ ದೆಹಲಿಯಿಂದ ಬುಲಾವ್ ಬಂದಿರುವ ಸುದ್ದಿಯಿಂದ ಸಾಕಷ್ಟು ಪುಳಕಿತಗೊಂಡಿದ್ದರು. ಉಪಮುಖ್ಯಮಂತ್ರಿಗಳು ಮಾತ್ರ ಗಂಭೀರವಾಗಿಯೇ ಇದ್ದರು. ದೆಹಲಿ ಬುಲಾವ್ ಹಿನ್ನೆಲೆಯಲ್ಲಿ ಮಂದಸ್ಮಿತರಾಗಿದ್ದ ಸತೀಶ್ ಜಾರಕಿಹೊಳಿ ಅವರು ರಾಜ್ಯ ಕಾಂಗ್ರೆಸ್ಸಿನಲ್ಲಿನ ಗೊಂದಲಗಳಿಗೆ ಅಂತ್ಯ ಹಾಡಬಹುದು ಎನ್ನುವ ಹೇಳಿಕೆ ಕೂಡ ನೀಡಿದ್ದರು.ಜತೆಗೆ ಸಭೆಯಲ್ಲಿ ಏನೆಲ್ಲ ಚರ್ಚೆ ನಡೆಯಬಹುದು ಎನ್ನುವುದು ಕೆಲವರಿಗೆ ಗೊತ್ತಿರುತ್ತದೆ. ಅವರಾರೂ ಹೇಳುವ ಗೋಜಿಗೆ ಹೋಗುವುದಿಲ್ಲ ಎನ್ನುವ ಮಾತನ್ನು ಉತ್ಸಾಹದಿಂದಲೇ ಹೇಳಿದ್ದರು. ಆ ಉತ್ಸಾಹಕ್ಕೆ ಹೈಕಮಾಂಡ್ ನಿಂದ ಸ್ಪಂದನೆ ಸಿಗಲಿಲ್ಲ ಎಂದು ಹೇಳಲಿಕ್ಕಾಗದು. ಏಕೆಂದರೆ ಸಭೆಯಲ್ಲಿ ಚರ್ಚೆ ವಿಷಯ ಇನ್ನೂ ಸ್ಪಷ್ಟವಾಗಬೇಕಿದೆ. ಆಗಲೇ ಅವರ ಮಂದಹಾಸಕ್ಕೆ ಉತ್ತರ ಸಿಗಲಿದೆ.
ದೆಹಲಿಯಲ್ಲಿ ವಿಜಯಾನಂದ :
ವರಿಷ್ಠರ ಬುಲಾವ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಪ್ತರು, ಬೆಂಬಲಿಗರು ಅವರವರ ಲೆಕ್ಕಾಚಾರದಲ್ಲಿದ್ದರು. ಹಾಗಾಗಿ ಉಭಯ ನಾಯಕರ ಬೆಂಬಲಿಗರ ದಂಡು ದೆಹಲಿಗೆ ತೆರಳಿತ್ತು. ಇವರ ಜತೆಗೆ ಸಂಪುಟ ಪುನಾರಚನೆ ವಿಷಯ ಚರ್ಚೆಗೆ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿ ಮಂತ್ರಿಸ್ಥಾನದ ಆಕಾಂಕ್ಷಿಗಳು ದೆಹಲಿಗೆ ತೆರಳಿದ್ದರು. ಜಿಲ್ಲೆಯ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕೂಡ ದೆಹಲಿಗೆ ಹೋಗಿದ್ದರು. ಅಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಂಪುಟ ಪುನಾರಚನೆ ಕುರಿತು ಸಿಹಿಸುದ್ದಿ ಸಿಗಲಿದೆ ಎನ್ನುವ ಹೇಳಿಕೆ ನೀಡಿದ್ದರು. ಅವರು ಆ ನಿರೀಕ್ಷೆಯಲ್ಲಿಯೇ ಇದ್ದರು ಕೂಡ.
ಇಷ್ಟೆಲ್ಲದರ ಮಧ್ಯೆ ಸಂಜೆ ವೇಣುಗೋಪಾಲ್ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳು ಅಲ್ಲಿಗೆ ಹೋಗಿದ್ದವರಲ್ಲಿ ನಿರಾಸೆ ಮೂಡಿಸಿದ್ದಂತೂ ನಿಜ.
ಗ್ರೀನ್ ಸಿಗ್ನಲ್ ವಿಶ್ವಾಸ:
ನಾಯಕತ್ವ ಬದಲಾವಣೆ ಬಗೆಗೆ ತಲೆ ಕೆಡಿಸಿಕೊಳ್ಳದ ಸಚಿವಾಕಾಂಕ್ಷಿಗಳು, ವರಿಷ್ಠರ ಸಭೆಯಲ್ಲಿ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಕೊಡಬಹುದು ಎನ್ನುವ ವಿಶ್ವಾಸದಲ್ಲಿದ್ದರು. ಹಾಗಾಗಿಯೇ ಕಳೆದ ಬಾರಿ ಸಚಿವಾಕಾಂಕ್ಷಿಗಳ ದಂಡಿನೊಂದಿಗೆ ದೆಹಲಿಗೆ ಹೋಗದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಈ ಬಾರಿ ದೆಹಲಿಗೆ ತೆರಳಿದ್ದರು. ದೆಹಲಿಯಲ್ಲಿನ ವಿದ್ಯಮಾನಗಳನ್ನು ನೋಡಿಕೊಂಡು, ಜಿಲ್ಲೆಯ ಇನ್ನೋರ್ವ ಹಿರಿಯ ಶಾಸಕ ಜೆ.ಟಿ. ಪಾಟೀಲ ದೆಹಲಿಗೆ ಹೊರಡುವ ಸಿದ್ದತೆಯಲ್ಲಿ ಇದ್ದರು. ದೆಹಲಿಯಲ್ಲಿ ಸಂಪುಟ ಪುನಾರಚನೆ ಬಗೆಗೆ ವರಿಷ್ಠರಿಂದ ಸಿಹಿ ಸುದ್ದಿ ಬರಬಹುದು ಎನ್ನುವ ಉತ್ಸಾಹದಲ್ಲಿ ಕಾಶಪ್ಪನವರ ಎಐಸಿಸಿ ಕಚೇರಿ ಬಳಿ ಓಡಾಡಿಕೊಂಡಿದ್ದರು.
ಸಭೆಯಲ್ಲಿದ್ದವರೆ ಹೇಳಬೇಕು:
ಕಾಂಗ್ರೆಸ್ ವರಿಷ್ಠರ ಸಭೆಯಲ್ಲಿ ನಡೆದ ಚರ್ಚೆಯ ಬಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಾಗಲೇ ಎಲ್ಲವೂ ಗೊತ್ತಾಗಬಹುದು. ಅಲ್ಲಿಯವರೆಗೂ ಎಲ್ಲವೂ ಗುಪ್ತಗುಪ್ತ. ಅಲ್ಲಿಯವರೆಗೂ ನಾಯಕತ್ವ ಗೊಂದಲ, ಸಂಪುಟ ಪುನಾರಚನೆ ವಿಷಯಗಳ ಚರ್ಚೆ ಹಾಗೆ ಮುಂದುವರಿಯಲಿವೆ.
- ವಿಠ್ಠಲ ಆರ್. ಬಲಕುಂದಿ




