ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಗೆ ಶಿವಸೇನಾ ಪಕ್ಷ ಕೂಡ ಸ್ಪರ್ಧಿಸಲಿದೆ ಎಂದು ಆ ಪಕ್ಷದ ರಾಜಾಧ್ಯಕ್ಷರಾದ ಆಂದೋಲದ ಸಿದ್ಧಲಿಂಗ ಸ್ವಾಮಿ ಘೋಷಿಸಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದಂತಾಗಿದೆ.
ಪ್ರಖರ ಹಿಂದುತ್ವದ ನೆಲೆಯಾಗಿರುವ ಬಾಗಲಕೋಟೆ ಕ್ಷೇತ್ರದಲ್ಲಿ ಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯಲಿದೆ ಎನ್ನುತ್ತಿರುವಾಗಲೇ ಹಿಂದುತ್ವದ ಹಾಗೂ ಅಭಿವೃದ್ಧಿಯ ನೆಲೆಗಟ್ಟುನ ಮೇಲೆಯೇ ಶಿವಸೇನೆ ಕೂಡಾ ಸ್ಪರ್ಧಿಸಲು ಮುಂದಾಗಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಯಾರು ಏನೆ ಹೇಳಲಿ ಉಪ ಚುನಾವಣೆ ಎದುರಾಗುತ್ತಿರುವ ಸಮಯದಲ್ಲಿ ನಡೆದಿರುವ ಕಲ್ಲು ತೂರಾಟ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನಗಳಂತೂ ನಿರಂತರವಾಗಿ ನಡೆಯುತ್ತಿವೆ. ಪರಿಣಾಮವಾಗಿ ಘಟನೆ ಕಾವು ಇನ್ನೂ ಕಡಿಮೆ ಆಗುತ್ತಿಲ್ಲ. ಫೆ. 19 ರಂದು ಘಟನೆ ನಡೆದಿದ್ದು ಇಂದಿಗೂ ಅದರ ಕಾವು ಕಡಿಮೆ ಆಗಿಲ್ಲ. ಕಠಿಣ ಪೊಲೀಸ್ ಬಿಗಿ ಬಂದೋಬಸ್ತ್ ಈಗಲೂ ಮುಂದುವರಿದಿದೆ. ಇದನ್ನೇ ದಾಳವಾಸಿಕೊಳ್ಳುವ ಮುಖಂಡರ ನಡುವೆ ಆರೋಪ, ಪ್ರತ್ಯಾರೋಪಗಳು ನಿರಂತರ ನಡೆಯುತ್ತಿವೆ. ಸದ್ಯಕ್ಕೆ ಹೇಳಿಕೆ, ಪ್ರತಿ ಹೇಳಿಕೆ ಸಮರ ನಿಲ್ಲುವಂತೆ ಕಾಣಿಸುತ್ತಿಲ್ಲ.
ಶಿವಸೇನೆ ಸ್ಪರ್ಧೆ:
ಕಲ್ಲು ತೂರಾಟ ಘಟನೆ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ್ದ ಆಂದೋಲ ಶ್ರೀಗಳು, ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಆ ಪಕ್ಷಗಳು ಹಾಗೂ ಪಕ್ಷದ ಮುಖಂಡರ ನಡೆಗಳು ಘಟನೆಗೆ ಕಾರಣವಾಗಿವೆ ಎಂದು ದೂರುತ್ತಲೇ ತಮ್ಮ ನೇತೃತ್ವದ ಶಿವಸೇನೆ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಗೆ ಹಿಂದುತ್ವದ ಆಧಾರದ ಮೇಲೆ ಸ್ಪರ್ಧಿಸಲಿದೆ ಎಂದು ಮಾತನ್ನು ಹೇಳಿದ್ದಾರೆ.
ಆಂದೋಲಶ್ರೀಗಳ ಈ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ತಳಮಳ ಮೂಡಿಸಿದೆ. ಇದುವರೆಗೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಶಿವಸೇನೆ ಕೂಡ ಸ್ಪರ್ಧಿಸಲಿದೆ ಎನ್ನುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಮತವಿಭಜನೆ :
ಹಿಂದುತ್ವದ ಗಟ್ಟಿ ನೆಲದಲ್ಲಿ ಶಿವಸೇನೆ ಕೂಡ ಹಿಂದುತ್ವದ ಆಧಾರದ ಮೇಲೆಯೇ ಚುನಾವಣೆ ಎದುರಿಸಲು ಸಜ್ಜಾಗಿದೆ. ಹಾಗಾಗಿ ಹಿಂದುತ್ವವನ್ನೆ ನಂಬಿರುವ ಬಿಜೆಪಿ ಮತ್ತು ಶಿವಸೇನೆಯ ಸ್ಪರ್ಧೆಯಿಂದ ಹಿಂದುಪರ ಮತಗಳ ವಿಭಜನೆಗೆ ಆಗಲಿವೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಇದುವರೆಗೂ ಬಾಗಲಕೋಟೆ ವಿಧಾನಸಭೆ ಚುನಾವಣೆ ಅನುಂಕಪದ ಆಧಾರದ ಮೇಲೆ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತು. ಸದ್ಯದ ಬೆಳವಣಿಗೆ ಗಮನಿಸಿದಾಗ ಅನುಕಂಪದ ಟ್ರಂಪಕಾಡ್೯ ಜತೆಗೆ ಕಲ್ಲು ತೂರಾಟ ಘಟನೆ ಬೆಳವಣಿಗೆಗಳು ಕೂಡಾ ನಿರ್ಣಾಯಕ ಪಾತ್ರ ವಹಿಸುವ ಲಕ್ಷಣಗಳು ಗೋಚರಿಸತೊಡಗಿವೆ.
ಹಿಂದುತ್ವ ಪ್ರತಿಪಾದಕರಿಗೆ ಬೆಂಬಲ:
ಗಮನಾರ್ಹ ಅಂಶವೆಂದರೆ ಮೊನ್ನೆ ತಾನೇ ಬಾಗಲಕೋಟೆಗೆ ಭೇಟಿ ನೀಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ಮಾಳ್ ಅವರು ಬಾಗಲಕೋಟೆ ಉಪಚುನಾವಣೆಯಲ್ಲಿ ತಮ್ಮ ಬೆಂಬಲಿಗರು ಹಿಂದುತ್ವದ ಪರವಾಗಿರುವವರನ್ನು ಬೆಂಬಲಿಸಲಾಗುವುದು ಎನ್ನುವ ದಾಟಿಯಲ್ಲಿ ಮಾತನಾಡಿ ಹೋಗಿದ್ದಾರೆ.
ಈಗ ಆಂದೋಲಶ್ರೀಗಳು ಹಿಂದುತ್ವದ ಆಧಾರದ ಮೇಲೆ ಚುನಾವಣೆಗೆ ಸ್ಫರ್ಧಿಸಲಾಗುವುದು ಎನ್ನುವ ಹೇಳಿಕೆ ನೀಡಿರುವುದು, ಹಿಂದುತ್ವ ಬೆಂಬಲಿಸುವವರಿಗೆ ಬೆಂಬಲ ನೀಡುವುದಾಗಿ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿ ಹೋಗಿರುವುದು ಹೊಸ ರಾಜಕೀಯ ಸಮೀಕರಣದ ಸಾಧ್ಯತೆಗಳನ್ನು ಸೂಚಿಸುತ್ತಿದೆ.
ಚುನಾವಣೆ ರಾಜಕಾರಣ ಏನೆ ಇರಲಿ. ಮೊದಲು ಬಾಗಲಕೋಟೆಯಲ್ಲಿ ನಿರ್ಮಾಣವಾಗಿರುವ ಆತಂಕದ ವಾತಾವರಣ ತಿಳಿಗೊಂಡು ಶಾಂತ ವಾತಾವರಣ ಸೃಷ್ಠಿ ಆಗಬೇಕಿದೆ.
- ವಿಠ್ಠಲ ಆರ್. ಬಲಕುಂದಿ




