ಉಕದವರಿಗೆ ಜಲಸಂಪನ್ಮೂಲ ಹೊಣೆ ಇರಲಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೆ ಖಾತೆ ಕ್ಯಾತೆ ಆರಂಭಗೊಂಡಿದ್ದು, ಹಿರಿಯ ಕಾಂಗ್ರೆಸ್ಸಿಗ, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಮಗೆ ಹಂಚಿಕೆ ಮಾಡಿರುವ ಖಾತೆಯ ಬಗೆಗೆ ಅಪಸ್ವರ ವ್ಯಕ್ತ ಪಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೆ ತಮಗೆ ಕೊಟ್ಟ ಖಾತೆ ಬಗೆಗೆ ಇನ್ನೊಬ್ನ ಹಿರಿಯ ಕಾಂಗ್ರೆಸ್ಸಿಗ, ಸಚಿವ ಮುನಿಯಪ್ಪ ಅವರು ಅಸಮಾಧಾನ ವ್ಯಕ್ತ ಪಡಿಸಿ ಬೇರೆ ಖಾತೆ ಹಂಚಿಕೆ ಮಾಡುವವರೆಗೂ ಅಧಿಕಾರ ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಎಚ್ಚರಿಕೆ ಗಂಟೆ:

ಉಭಯ ಸಚಿವರ ನಿರ್ಧಾರಗಳ ಬಗೆಗೆ ಮಾಜಿ ಸಚಿವರಾದ ಕೆ.ಎನ್. ರಾಜಣ್ಣ, ಎಚ್.ಕೆ. ಪಾಟೀಲ ಇದೊಂದು ಎಚ್ಚರಿಕೆ ಗಂಟೆ ಎನ್ನುವ ಮಾತನ್ನಾಡಿದ್ದಾರೆ. “ಈಗಲೇ ಇಂತಹ ಬೆಳವಣಿಗೆಯನ್ನು ಸರಿಪಡಿಸಿಕೊಂಡು ಹೋಗುವಂತೆ” ಎಚ್.ಕೆ. ಪಾಟೀಲ ಸಲಹೆ ಮಾಡಿದ್ದಾರೆ, “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅದ್ಯಾವ ಟ್ರಬಲ್ ಶೂಟರ್ ” ಎಂದು ಮಾಜಿ ಸಚಿವ ಕೆ.ಎನ್ .‌ರಾಜಣ್ಣ ಲೇವಡಿ ಮಾಡಿದ್ದಾರೆ.

ಏತನ್ಮಧ್ಯೆ ಸಚಿವಾಕಾಂಕ್ಷಿ ಶಾಸಕ ಎನ್.ಎ.‌ಹ್ಯಾರಿಸ್ ಅವರು” ಮಂತ್ರಿಗಳಿಗೆ ಹಂಚಿಕೆ ಖಾತೆಗಳು ಬೇಡವಾದಲ್ಲಿ, ಬಿಟ್ಟು ಬಿಡಲಿ, ನಾವು ನಿಭಾಯಿಸುತ್ತೇವೆ ” ತಿರುಗೇಟು ನೀಡಿದ್ದಾರೆ. ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಪಾಳೆಯದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆದಿವೆ. ಇವರ ಜತೆಗೆ ಸಚಿವರಾಗಿ ಅಧಿಕಾರ ಸ್ಚೀಕರಿಸಿರುವ ಈಶ್ವರ ಖಂಡ್ರೆ ತಮಗೆ ವಹಿಸಿರುವ ಖಾತೆಯಲ್ಲಿ ಉತ್ತಮ ಕೆಲಸ ಮಾಡುವುದಾಗಿ ಭರವಸೆ ವ್ಯಕ್ತ ಪಡಿಸಿದ್ದಾರೆ.

ಹೇಳಿಕೆ, ಪ್ರತಿ ಹೇಳಿಕೆಗಳ‌ ಮಧ್ಯೆ ಕಾಂಗ್ರೆಸ್ ವರಿಷ್ಠರು ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಸ್ವೀಕರಿಸಬೇಡಿ.‌ ವಾಪಸ್ ಪಡೆಯುವಂತೆ ಮನವೊಲಿಸುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮುಖ್ಯಮಂತ್ರಿಗಳು ಈಗ ಇಬ್ಬರೂ ಹಿರಿಯ ಸಚಿವರನ್ನು ಸಮಾಧಾನ ಪಡಿಸುವ ಕೆಲಸ ಮಾಡಬೇಕಿದೆ. ಸದ್ಯದ ಸಂಪುಟದಲ್ಲಿ ರಾಮಲಿಂಗಾರೆಡ್ಡಿ ಮತ್ತು ಮುನಿಯಪ್ಪ ಅವರುಗಳ ಮುನಿಸು ಬಿಟ್ಟರೆ ಉಳಿದವರು ಸಮಾಧಾನದಿಂದ ಇದ್ದಾರೆ. ಅಷ್ಟೆ ಅಲ್ಲ ತಮ್ಮ ಖಾತೆಗಳ ನಿರ್ವಹಣೆ ಆರಂಭಿಸಿದ್ದಾರೆ.

ಉಕದವರಿಗೆ ಖಾತೆ ಹೊಣೆ ವಹಿಸಲಿ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಚಿವರನ್ನು ಸಮಾಧಾನ ಪಡಿಸುವ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾದ ಖಾತೆಯಲ್ಲಿ ಬದಲಾವಣೆ ಮಾಡುವುದೇ ಆದಲ್ಲಿ, ಆ ಖಾತೆಯನ್ನು ಸದ್ಯ ತಮ್ಮ ಬಳಿಯೇ ಉಳಿಸಿಕೊಳ್ಳಲಿ, ಇಲ್ಲವೆ ಅದರ ಜವಾಬ್ದಾರಿಯನ್ನು ಉತ್ತರ ಕರ್ನಾಟಕದ ಸಚಿವರಿಗೆ ವಹಿಸಲಿ ಎನ್ನುವ ಮಾತು ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ವ್ಯಕ್ತವಾಗತೊಡಗಿದೆ.

ಉತ್ತರ ಕರ್ನಾಟಕಕ್ಕೆ ಅದರಲ್ಲೂ ವಿಜಯಪುರ – ಬಾಗಲಕೋಟೆ ಜಿಲ್ಲೆಯ ಜನತೆಗೆ ಆ ಖಾತೆಯ ಅಗತ್ಯತೆ ಇದೆ. ಉತ್ತರ ಕರ್ನಾಟಕದಲ್ಲಿನ ಬೃಹತ್ ನೀರಾವರಿ ಯೋಜನೆಗಳ ಅನುಷ್ಠಾನ ಹಿನ್ನೆಲೆಯಲ್ಲಿ ಆ ಖಾತೆಯ ಜವಾವ್ದಾರಿ ಉಕ ಪ್ರದೇಶಕ್ಕೆ ಸೇರಿದ ಸಚಿವರಿಗೆ ವಹಿಸಬೇಕಿತ್ತು. ಹಾಗೆ ಮಾಡದ ಕಾಂಗ್ರೆಸ್ ಹೈಕಮಾಂಡ್, ರಾಜಧಾನಿ ಬೆಂಗಳೂರಿಗೆ ಸೇರಿದ ರಾಮಲಿಂಗಾರೆಡ್ಡಿ ಅವರಿಗೆ ಕೊಟ್ಟು ಇಲ್ಲದ ವಿವಾದ ಸೃಷ್ಟಿಸಿಕೊಂಡಿದೆ. ಖಾತೆ ಬೇಡವೆಂದು ಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದು ” ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲಾರೆ. ನನಗೆ ಆ ಖಾತೆ ಬೇಡ” ಎಂದು ಹೇಳಿದ್ದಾರೆ. ಹಾಗಾಗಿ ಸರ್ಕಾರ ಇಲ್ಲದ ಮುಜುಗರಕ್ಕೆ ಒಳಗಾಗಿದೆ.

ಜಟೀಲ ಸಮಸ್ಯೆಗಳಿವೆ:

ಮುಖ್ಯಮಂತ್ರಿ ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ನಿಭಾಯಿಸಿದ ಅನುಭವಿ ಆಗಿದ್ದಾರೆ. ಉತ್ತರ ಕರ್ನಾಟಕದ ಜನತೆಯ ಪಾಲಿಗೆ ಜಲಸಂಪನ್ಮೂಲ ಖಾತೆ ಎಷ್ಟು‌ ಮಹತ್ತರವಾದುದು, ಎಷ್ಟೊಂದು ಸಮಸ್ಯೆ ಹಾಗೂ ಸವಾಲಿನಿದ್ದಾಗಿದೆ ಎನ್ನುವುದು ಅವರಿಗೆ ಗೊತ್ತಿರದ ವಿಷಯವೆನಲ್ಲ.

ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ-ಬಂಡೂರಿ, ಮಹಾದಾಯಿ ಯೋಜನೆ , ಭದ್ರಾ ಯೋಜನೆಗಳ ಅನುಷ್ಟಾನವಾಗಬೇಕಿದೆ. ಅಂತರ ರಾಜ್ಯ ನದಿ ನೀರು ಹಂಚಿಕೆ ವ್ಯಾಜ್ಯಗಳು ಬಗೆ ಹರಿಯಬೇಕಿದೆ. ಇಂತಹ ಜಟೀಲ ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಸರ್ಕಾರ ಉತ್ತರ ಕರ್ನಾಟದ ಜನಪ್ರತಿನಿಧಿಗಳಿಗೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ವಹಿಸಬೇಕಿತ್ತು. ಇಲ್ಲವೆ ತಮ್ಮ ಬಳಿಯೇ ಖಾತೆಯನ್ನು ಉಳಿಸಿಕೊಳ್ಳಬೇಕಿತ್ತು ಎನ್ನುವುದು ಉತ್ತರ ಕರ್ನಾಟಕ ಭಾಗದ ಜನಾಶಯವಾಗಿದೆ.

ಯೋಜನೆಗಳಿಗೆ ವೇಗ:

ಮುಖ್ಯಮಂತ್ರಿಗಳ ಬಳಿ ಇಲ್ಲವೆ ಉತ್ತರ ಕರ್ನಾಟಕ ಭಾಗದ ಸಚಿವರಿಗೆ ಖಾತೆಯ ಹೊಣೆ ಹೊರಿಸಿದ್ದಲ್ಲಿ ಉತ್ತರ ಕರ್ನಾಟದ ನೀರಾವರಿ ಯೋಜನೆಗಳ ಅನುಷ್ಠಾನ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಲು ಸಾಧ್ಯವಾಗುತ್ತಿತ್ತು.

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ, ಮಹಾದಾಯಿ ವಿವಾದಗಳಿಗೆ ಉತ್ತರ ಹುಡುಕುವುದು ಎಷ್ಟು ಕಷ್ಟದಾಯಕ ಎನ್ನುವುದರ ಪೂರ್ಣ ಅರಿವು ಮುಖ್ಯಮಂತ್ರಿಗಳಿಗೆ ಇದೆ. ಈಗಲೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಉತ್ತರ ಕರ್ನಾಟಕ ಭಾಗದ ಅನುಭವಿ ಜನಪತ್ರಿನಿಧಿಯೊಬ್ಬರಿಗೆ ಈ ಖಾತೆಯ ಜವಾವ್ದಾರಿ ವಹಿಸುವುದು ಸೂಕ್ತ ಎನ್ನುವ ಸಲಹೆಯ ಮಾತುಗಳು ಉಕದಲ್ಲಿ ಕೇಳಿಬರುತ್ತಿವೆ.

ಅನಗತ್ಯ ನೆಪಗಳನ್ನು ಹೇಳದೆ ಉತ್ತರ ಕರ್ನಾಟದ ಜನತೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿವಾದಕ್ಕೆ ಗ್ರಾಸವಾಗಿರುವ ಜಲಸಂಪನ್ಮೂಲ ಖಾತೆಯನ್ನು ಉತ್ತರ ಭಾಗದವರಿಗೆ ವಹಿಸುವರೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಿದೆ. ಸದ್ಯ ಉಂಟಾಗಿರುವ ಸಮಸ್ಯೆ ಪರಿಹಾರ ಸಮಯದಲ್ಲಿ ಜಲಸಂಪನ್ಮೂಲ ಖಾತೆ ಉತ್ತರ ಭಾಗದವರಿಗೆ ವಹಿಸಿದಲ್ಲಿ ಅಷ್ಟರ ಮಟ್ಟಿಗೆ ಮುಖ್ಯಮಂತ್ರಿಗಳ ಕಾಳಜಿಗೆ ಹೆಚ್ಚಿನ ಜನ ಮನ್ನಣೆ ಸಿಗಲಿದೆ.

ಎಚ್ಚರ ತಪ್ಪಿದರೆ ಯೋಜನೆ ವಿಳಂಬ:

ಜಲಸಂಪನ್ಮೂಲ ಖಾತೆ ಹಂಚಿಕೆಯಲ್ಲಿ ಎಚ್ಚರಿಕೆ ಹೆಜ್ಜೆಗಳನ್ನು ಇಡದೇ ಹೋದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಬೃಹತ್ ನೀರಾವರಿ ಯೋಜನೆಗಳು ಇನ್ನಷ್ಟು ಮತ್ತಷ್ಟು ವಿಳಂಬಗೊಳ್ಳಲಿವೆ. ಗ್ರಾಮಗಳ ಸ್ಥಳಾಂತರ, ಪುನರ್ ವಸತಿ, ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳು ನಡೆಯಬೇಕಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ಯೋಜನೆ ರಾಜಕೀಯ ತಿಕ್ಕಾಟಕ್ಕೆ ಒಳಗಾಗಬಾರದು ಎನ್ನುವ ಆತಂಕದಲ್ಲಿ ರೈತ ಸಮೂಹವಿದೆ. ಈಗಲೇ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದೆ.

ಸಂಪುಟದ ಸಚಿವರು ಯಾವುದೇ ಖಾತೆ ಕೊಟ್ಟರೂ ನಿರ್ವಹಿಸಬೇಕು.‌ ಅದು ಬಿಟ್ಟು ಇಂತಹುದೆ ಖಾತೆ ಬೇಕು ಎನ್ನುವ ಪಟ್ಟು ಹಿಡಿದಲ್ಲಿ ಸಹಜವಾಗಿಯೇ ಇಲ್ಲದ ಗೊಂದಲಗಳು ಸೃಷ್ಟಿ ಆಗುತ್ತವೆ. ಇದು ಹೊಸ ನಾಯಕತ್ವಕ್ಕೆ ಒಳ್ಳೆಯ ಸೂಚನೆಯಂತೂ ಅಲ್ಲವೇ ಅಲ್ಲ.

  • ವಿಠ್ಠಲ ಆರ್. ಬಲಕುಂದಿ
Scroll to Top