ಖಾತೆ ಕ್ಯಾತೆ ಅಸಲಿಯತ್ತು; ರಾಹುಲ್ – ರೆಡ್ಡಿ ಪ್ರತಿಷ್ಠೆ ಪಣಕ್ಕೆ!

ಒಂದೊಮ್ಮೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೃಷ್ಣ ಭೈರೆಗೌಡರ ಬಳಿ ಇರದೇ ಹೋಗಿದ್ದರೆ, ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯಿಂದ ಉಂಟಾಗಿರುವ ಗೊಂದಲ ಇಷ್ಟು ಹೊತ್ತಿಗೆ ಸುಖಾಂತ್ಯಗೊಳ್ಳುತ್ತಿತ್ತು. ಪರಿಸ್ಥಿತಿ ಹಾಗಿಲ್ಲದ ಪರಿಣಾಮ ಕಳೆದ ಎರಡು ದಿನಗಳಿಂದ ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಅವರು ರಾಮಲಿಂಗಾರೆಡ್ಡಿ ಅವರಿಗೆ ರಾಜೀನಾಮೆ ವಾಪಸ್ ಪಡೆಯುವಂತೆ ನಡೆಸುತ್ತಿರುವ ಸಂಧಾನ ಪ್ರಕ್ರಿಯೆ ಇದುವರೆಗೂ ಫಲಕಾರಿ ಆಗಿಲ್ಲ. ಸಂಧಾನ ಪ್ರಕ್ರಿಯೆಗಳು ಹಾಗೆ ಮುಂದುವರಿದಿವೆ. ಸದ್ಯಕ್ಕೆ ಸಂಧಾನ ಪ್ರಕ್ರಿಯೆ ಅಂತ್ಯಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.

ನಿರ್ಧಾರ ಬದಲಿಲ್ಲ:

“ಆತ್ಮ ಗೌರವದ ಪ್ರಶ್ನೆಯ ಹಿನ್ನೆಲೆಯಲ್ಲಿ ನನ್ನ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರು ಹೈಕಮಾಂಡಿಗೆ ಸೆಡ್ಡು ಹೊಡೆದ್ರಾ” ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಅದರ ಮಧ್ಯೆ ಪಕ್ಷದ ಮುಖಂಡರಿಂದ ಮನವೊಲಿಕೆ ಪ್ರಯತ್ನಗಳು ನಡೆಯುತ್ತಿದ್ದರೂ ಯಾವುದೇ ಸಕಾರಾತ್ಮಕ ಬೆಳವಣಿಗೆ ಕಾಣಿಸುತ್ತಿಲ್ಲ.

ಸಿಎಂ ಸತತ ಯತ್ನ:

ಏತನ್ಮಧ್ಯೆ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರು ಮನವೊಲಿಸಿ ಇಲ್ಲವೆ ರಾಜೀನಾಮೆ ಸ್ವೀಕರಿಸಿ ಎಂದು ಹೇಳಿರುವುದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಾಗಾಗಿ ಹೇಗಾದರೂ ಮಾಡಿ ರಾಜೀನಾಮೆ ವಾಪಸ್ಸಾತಿ ಮಾಡಿಸಲು ಮುಖ್ಯಮಂತ್ರಿಗಳು ಸೇರಿದಂತೆ ಹಲವರು ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ.

ಭರವಸೆಯಂತೆ ನಡೆದುಕೊಳ್ಳಿ:

ರಾಮಲಿಂಗಾರೆಡ್ಡಿ ಪಕ್ಷದ ಹಿರಿಯರು, ಪ್ರಭಾವಿ ಮುಖಂಡರು. ಬೆಂಗಳೂರು ನಗರದ ಇಂಚಿಂಚು ರಾಜಕಾರಣ ಬಲ್ಲವರು. ಬೆಂಗಳೂರಿನ ಭವಿಷ್ಯದ ರಾಜಕಾರಣದ ಹಿನ್ನೆಲೆಯಲ್ಲಿ ಅವರನ್ನು ಕೈಬಿಡುವುದು ಪಕ್ಷಕ್ಕೆ ಅಷ್ಟು ಸಲಿಸು ಕೆಲಸ ಅಲ್ಲ. ಹಾಗಾಗಿಯೇ ನಿರಂತರವಾಗಿ ಮುಖ್ಯಮಂತ್ರಿಗಳು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ ರೆಡ್ಡಿ ಅವರು ತಮ್ಮ ಅಚಲ ನಿರ್ಧಾರದಿಂದ ಹಿಂದಕ್ಕೆ ಸರಿಯುತ್ತಿಲ್ಲ. ತಾವು ಕೇಳದೆ ಇದ್ದರೂ ತಮಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡುವುದಾಗಿ ಹೇಳಿ, ಈಗ ಏಕೆ ಹೀಗೆ ಮಾಡಲಾಯಿತು ಎನ್ನುವುದನ್ನೇ ಪ್ರತಿಷ್ಠೆಯಾಗಿಸಿಕೊಂಡಿದ್ದಾರೆ. ಇದು ಸಹಜವಾಗಿಯೇ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದೆ.

ರಾಹುಲ್ ಸುತಾರಾಂ ಒಪ್ಪರು:

ಬೆಂಗಳೂರು ಅಭಿವೃದ್ಧಿ ಖಾತೆ ಜವಾಬ್ದಾರಿ ವಹಿಸಿಕೊಂಡಿರುವ ಕೃಷ್ಣ ಭೈರೇಗೌಡರು ಹೇಳಿ ಕೇಳಿ ರಾಹುಲ್ ಗಾಂಧಿ ಅವರ ಪರಮಾಪ್ತರು.ಅವರಿಬ್ಬರ ಒಡನಾಟ ಕೇವಲ ಎರಡು ದಿನಗಳಲ್ಲಿ ತಮ್ಮ ಬಳಿ ಇರುವ ಖಾತೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ಕೊಡಲು ಸ್ವತಃ ಕೃಷ್ಣ ಭೈರೇಗೌಡರೆ ಒಪ್ಪಿಕೊಳ್ಳಲು ಮುಂದಾದರೂ ರಾಹುಲ್ ಗಾಂಧಿ ಅದಕ್ಕೆ ಒಪ್ಪಲಾರರು. ಆಪ್ತನ ಬಳಿಯೇ ಖಾತೆ ಉಳಿಸಲು ಯಾವುದೇ ನಿರ್ಧಾರಕ್ಕೂ ಸಿದ್ದ ಎನ್ನುವ ನಿರ್ಧಾರವನ್ನು ಅವರು ಶುಕ್ರವಾರ ಬೆಂಗಳೂರಿಗೆ ಬಂದಾಗಲೇ ಸ್ಪಷ್ಟ ಪಡಿಸಿದ್ದಾರೆ.

ಒಂದು ಹಂತದಲ್ಲಿ ಖಾತಾಕ್ಯಾತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಭೈರೇಗೌಡರಿಗೆ ಪ್ರತಿಷ್ಠೆ ಪ್ರಶ್ನೆಯಾಗಿಲ್ಲವಾದರೂ, ರಾಹುಲ್ ಮತ್ತು ರೆಡ್ಡಿ ನಡುವೆ ಪ್ರತಿಷ್ಠೆ ಪ್ರಶ್ನೆಯಾಗಿ ಪರಿಣಮಿಸಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಜಲಸಂಪನ್ಮೂಲ ಖಾತೆಯನ್ನೇ ತಿರಸ್ಕರಿಸಿರುವ ರಾಮಲಿಂಗಾರೆಡ್ಡಿ ತಮಗೆ ನೀರಾವರಿ ಬಗೆಗೆ ಅಷ್ಟಾಗಿ ಮಾಹಿತಿ ಇಲ್ಲ ಎನ್ನುವುದನ್ನೂ ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಬಿಟ್ಟು ಇತರ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿಕೊಳ್ಳಲು ಅವರು ಸಿತಾರಾಂ ತಯಾರಿಲ್ಲ.‌ ಹಾಗಾಗಿ ಮನವೊಲಿಕೆ ಪ್ರಯತ್ನಗಳು ಫಲಕಾರಿ ಆಗುತ್ತಿಲ್ಲ. ಒಂದೊಮ್ಮೆ ಪಕ್ಷದ ಮುಖಂಡರ ಸಂಧಾನಗಳು ಫಲಕಾರಿ ಆಗದೆ ಹೋದಲ್ಲಿ, ಅವರ ರಾಜೀನಾಮೆ ಅಂಗಿಕಾರ ಆದರೂ ಅಚ್ಚರಿ ಪಡಬೇಕಿಲ್ಲ.

ಒಮ್ಮೆ ಹೈಕಮಾಂಡ್ ಖಾತೆ ಬದಲಾವಣೆಗೆ ಮುಂದಾದಲ್ಲಿ, ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗಿ ಬರಬಹುದು ಎನ್ನುವ ಆತಂಕ ಕೂಡ ಇರುವುದರಿಂದ ಖಾತೆ ಬದಲಾವಣೆ ಅಸಾಧ್ಯ ಎನ್ನುವ ಮಾತಿದೆ.

ಪರಿಸ್ಥಿತಿ ವಿಕೋಪಕ್ಕೆ:

ರಾಹುಲ್ ಗಾಂಧಿ ಅವರು ಯಾವುದೇ ಕಾರಣಕ್ಕೂ ಕೃಷ್ಣ ಭೈರೇಗೌಡರ ಬಳಿಯ ಬೆಂಗಳೂರು ನಗರಾಭಿವೃದ್ಧಿ ಖಾತೆ ಅವರಿಂದ ಕಸಿದು ಬೇರೆಯವರಿಗೆ ಕೊಡುವ ಮನಸ್ಥಿತಿಯಲ್ಲಿಲ್ಲ. ಈ ಖಾತೆಗಾಗಿ ಉಭಯ ನಾಯಕರ ನಡುವೆ ಉಂಟಾಗಿರುವ ಪ್ರತಿಷ್ಠೆ ಪ್ರಶ್ನೆಯಲ್ಲಿ ಗೆಲುವು ಯಾರದಾಗಲಿದೆ ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ. ಯಾರೂ ತಮ್ಮ ಪಟ್ಟುಗಳಿಂದ ಹಿಂದೆ ಸರಿಯುವಂತೆ ಕಾಣಿಸುತ್ತಿಲ್ಲ. ಹಾಗಾಗಿ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.

  • ವಿಠ್ಠಲ ಆರ್. ಬಲಕುಂದಿ
Scroll to Top