ಎರಡನೇ ತಲೆಮಾರಿನ ಮೊದಲ ಮಂತ್ರಿ ಆಗ್ತಾರಾ ಕಾಶಪ್ಪನವರ

ರಾಜ್ಯದ ನೂತನ ಮುಖ್ಯಮಂತ್ರಿ ಆಗಲಿರುವ ಡಿ.ಕೆ. ಶಿವಕುಮಾರ ಅವರ ಸಂಪುಟದಲ್ಲಿ ಜಿಲ್ಲೆಯ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಎರಡನೇ ತಲೆಮಾರು ರಾಜಕಾರಣದ ಮೊದಲ ಸಚಿವರಾಗ್ತಾರಾ? . ಆ ಮೂಲಕ ಜಿಲ್ಲೆಯ ಎರಡನೇ ತಲೆಮಾರು ರಾಜಕಾರಣದ ಮೊದಲ ಮಂತ್ರಿ ಎನ್ನುವ ದಾಖಲೆ ನಿರ್ಮಿಸುವರೋ ಹೇಗೆ ಎನ್ನುವ ಚರ್ಚೆಗಳು ಜೋರಾಗಿವೆ.

ಯಾರೂ ಮಂತ್ರಿಗಳಾಗಿಲ್ಲ:

ಜಿಲ್ಲೆಯಲ್ಲಿ ಎರಡನೇ ತಲೆಮಾರು ರಾಜಕಾರಣ ಆರಂಭಗೊಂಡು ಹಲವು ದಶಕಗಳೇ ಕಳೆದಿವೆ. ಆದರೆ ಇದುವರೆಗೂ ಎರಡನೇ ತಲೆಮಾರಿನ ಶಾಸಕರಾಗಿದ್ದವರು ಯಾರಿಗೂ ಮಂತ್ರಿಯಾಗುವ ಯೋಗ ಕೂಡಿ ಬಂದಿಲ್ಲ. ಜಿಲ್ಲೆಯ ರಾಜಕಾರಣದಲ್ಲಿ ಮೇಲ್ಮನೆ ಮಾಜಿ ಸದಸ್ಯ ಎಂ.ಪಿ.‌ನಾಡಗೌಡ ಮತ್ತು ಮಾಜಿ ಶಾಸಕರಾದ ಎಸ್. ಜಿ. ನಂಜಯ್ಯನಮಠ, ಎಂ.ಕೆ. ಪಟ್ಟಣಶೆಟ್ಟಿ ಅವರು ಎರಡನೇ ತಲೆಮಾರಿನ ರಾಜಕಾರಣಿಗಳಾಗಿದ್ದು, ಅತ್ಯಂತ ಹಿರಿಯ ಮುಖಂಡರಾಗಿದ್ದಾರೆ. ನಾಡಗೌಡರು ಮೂರು ಬಾರಿ ಮೇಲ್ಮನೆ ಸದಸ್ಯರಾಗಿದ್ದಾರೆ. ಎಂ.ಕೆ. ಪಟ್ಟಣಶೆಟ್ಟಿ ಅವರು ಮೂರು ಬಾರಿ, ಎಸ್.ಜಿ.‌ನಂಜಯ್ಯನಮಠ ಅವರು ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಹಿರಿಯ ಮುಖಂಡರಾಗಿರುವ ಇವರಿಗೆ ಒಮ್ಮೆಯೂ ಮಂತ್ರಿ ಆಗುವ ಅವಕಾಶ ಸಿಗಲ್ಲಿಲ್ಲ.

ಕಾಶಪ್ಪನವರ 2ನೇ ಬಾರಿ ಶಾಸಕ:

ಸದ್ಯ ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ರಾಜಕಾರಣದಲ್ಲಿ ಮಾಜಿ ಸಚಿವ ಬಿ. ಬಿ. ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮಕಟ್ಟಿ, ದಿ. ಶಾಸಕ ಎಚ್.ವೈ. ಮೇಟಿ ಪುತ್ರ ಉಮೇಶ ಮೇಟಿ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ದಿ. ಸಚಿವ ಎಸ್. ಆರ್. ಕಾಶಪ್ಪನವರ ಪುತ್ರ ವಿಜಯಾನಂದ ಕಾಶಪ್ಪನವರ ಮಾತ್ರ ಎರಡನೇ ಬಾರಿಗೆ ಹುನಗುಂದದ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಎರಡನೇ ತಲೆಮಾರು ರಾಜಕಾರಣಕ್ಕೆ ಸೇರಿರುವ ಮೂವರ ಪೈಕಿ ಎರಡನೇ ಬಾರಿಗೆ ಆಯ್ಕೆಗೊಂಡಿರುವ ವಿಜಯಾನಂದ ಕಾಶಪ್ಪನವರ ಮಂತ್ರಿ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಇವರು ಸಮುದಾಯ, ಜಿಲ್ಲೆ ಮತ್ತು ಯುವ ನಾಯಕತ್ವದ ಕೋಟಾದಡಿ ಮಂತ್ರಿಸ್ಥಾನ ಕೇಳುತ್ತಿದ್ದಾರೆ.

ಪೈಪೋಟಿಯಲ್ಲಿ ಹಿರಿಯರು:

ಹೊಸ ಮುಖ್ಯಮಂತ್ರಿಗಳ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಯುವ ಶಾಸಕರಿಗೆ ಅವಕಾಶಗಳಿದ್ದರೂ ಮುಧೋಳ ಮೀಸಲು ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಬೀಳಗಿಯ ಹಿರಿಯ ಶಾಸಕ ಜೆ.ಟಿ. ಪಾಟೀಲ ಅವರು ಸಂಪುಟ ಸೇರಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಹಿರಿಯರಿಗೆ ಅವಕಾಶ ಎನ್ನುವುದಾದಲ್ಲಿ ತಿಮ್ಮಾಪುರ ಇಲ್ಲವೆ ಜೆ.ಟಿ.‌ಪಾಟೀಲ ಅವರಿಗೆ ಅವಕಾಶ ಹೆಚ್ಚಾಗಿವೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಶಯದಂತೆ ಹೊಸ ಮುಖ್ಯಮಂತ್ರಿಗಳು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾದಲ್ಲಿ ವಿಜಯಾನಂದ ಕಾಶಪ್ಪನವರಿಗೆ ಮಂತ್ರಿಯೋಗ ಲಭಿಸಲಿದೆ.

ಜಿಲ್ಲೆಯ ರಾಜಕಾರಣದಲ್ಲಿ ದಾಖಲೆ:

ಜಿಲ್ಲೆಯಲ್ಲಿ ಇದುವರೆಗೂ ಎರಡನೇ ತಲೆಮಾರು ರಾಜಕಾರಣದಲ್ಲಿದ್ದವರಿಗೆ ಎಷ್ಟೆ ಹಿರಿತನವಿದ್ದರೂ ಮಂತ್ರಿ ಆಗುವ ಅವಕಾಶ ಸಿಕ್ಕಿಲ್ಲ. ಈಗ ಕಾಶಪ್ಪನವರ ಅವರಿಗೆ ಮಂತ್ರಿಸ್ಥಾನದ ಅವಕಾಶ ಸಿಕ್ಕಲ್ಲಿ, ಜಿಲ್ಲೆಯ ಎರಡನೇ ತಲೆಮಾರು ರಾಜಕಾರಣದ ಮೊದಲ ಮಂತ್ರಿ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಅದೊಂದು ಜಿಲ್ಲೆಯ ರಾಜಕಾರಣದಲ್ಲಿ ದಾಖಲೆ ಕೂಡ ಆಗಲಿದೆ. ಶಾಸಕರ ಎಷ್ಟೆಲ್ಲ ಪ್ರಯತ್ನಗಳ ಮಧ್ಯೆ ಕಾಂಗ್ರೆಸ್ ವರಿಷ್ಠರ ನಿರ್ಣಯದ ಮೇಲೆ ಎಲ್ಲ ನಿರ್ಧಾರವಾಗಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top