ಶುರುವಾಯ್ತು ಮೇಟಿ ಪುತ್ರ ಉಮೇಶ ಆಡಳಿತ

ಬಾಗಲಕೋಟೆ ಶಾಸಕರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನೂತನ ಶಾಸಕ ಉಮೇಶ ಮೇಟಿ ಅವರು ಶುಕ್ರವಾರ ಬಾಗಲಕೋಟೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶಾಸಕರ ಜನ ಸಂಪರ್ಕ ಕಚೇರಿ ಆರಂಭಿಸಿದ್ದಾರೆ. ಆ ಮೂಲಕ ಕ್ಷೇತ್ರಾಧಿಪತಿ ಅಧಿಕಾರ ಶುರು ಮಾಡಿದ್ದಾರೆ.

ಬಾಕಿ ಕಾರ್ಯದ ಜವಾಬ್ದಾರಿ:

ಕ್ಷೇತ್ರ ಹಾಗೂ ಕ್ಷೇತ್ರದ ಜನರ ಕೆಲಸಗಳು ಅಧಿಕೃತವಾಗಿ ಆರಂಭಗೊಂಡಂತಾಗಿದ್ದು, 2028 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮರು ಆಯ್ಕೆಗೆ ಸಾಧ್ಯವಾಗುವ ರೀತಿಯಲ್ಲಿ ಜನವಿಶ್ವಾಸ ಗಳಿಸುವ ಕೆಲಸ ಮಾಡಬೇಕಿದೆ. ಈಗಾಗಲೇ ಸರ್ಕಾರ ಮೂರು ವರ್ಷಗಳ ಅವಧಿ ಪೂರೈಸುತ್ತಿದ್ದು, ದಿ. ಶಾಸಕ ಎಚ್.ವೈ.‌ ಮೇಟಿ ಮಾಡಬೇಕಿರುವ ಕೆಲಸ ಮಾಡಿದ್ದಾರೆ. ಉಳಿದ ಬಾಕಿ ಕಾರ್ಯದ ಜವಾಬ್ದಾರಿ ನಿಭಾಯಿಸಬೇಕಿದೆ.

ಜನ ನೀರಿಕ್ಷೆಯತ್ತ ಚಿತ್ತ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಇತಿಹಾಸದಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವ ಶಾಸಕ ಉಮೇಶ ಮೇಟಿ ಅವರು ಜನರ ಅಭೂತಪೂರ್ವ ನಿರೀಕ್ಷೆಗಳ ಸಾಕಾರದತ್ತ ಆದ್ಯ ಗಮನ ಹರಿಸಬೇಕಿದೆ. ದಿ. ಶಾಸಕ ಎಚ್. ವೈ.‌ ಮೇಟಿ ಅವರ ವರ್ಚಸ್ಸು, ಕಾಂಗ್ರೆಸ್ ಸರ್ಕಾರದ ಪಂಚಗ್ಯಾರಂಟಿಗಳ ಜತೆಗೆ ಪಕ್ಷದ ಮುಖಂಡರ ಒಗ್ಗಟ್ಟಿನ ಫಲವಾಗಿ ಗೆಲುವು ಸಾಧ್ಯವಾಗಿದೆ. 2028 ರಲ್ಲೂ ಈ ಗೆಲುವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸಗಳು ಆಗಬೇಕಿದೆ.

ಗ್ರಾಮೀಣ ಪ್ರದೇಶದ ಜನತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜತೆಗೆ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ. ಹಾಗೇ ಬಾಗಲಕೋಟೆ ನಗರದ ಜನತೆಯ ಅಗತ್ಯತೆಗಳನ್ನು ಪೂರೈಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಮುಖ್ಯವಾಗಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಿದೆ.

ಬೃಹತ್ ಮಾರುಕಟ್ಟೆ:

ಮಹತ್ವಾಕಾಂಕ್ಷಿ ಯುನಿಟ್ -3 ರ ಅಭಿವೃದ್ಧಿಯ ವೇಗ ಹೆಚ್ಚಿಸಿ, ಆದಷ್ಟುಬೇಗ ಫಲಾನುಭವಿ ಸಂತ್ರಸ್ತರಿಗೆ ನಿವೇಶನಗಳ ಹಂಚಿಕೆ ಕೆಲಸ ನಡೆಯಬೇಕಿದೆ. ಇದೆಲ್ಲಕ್ಕೂ ಮಿಗಿಲಾಗಿ, ಹರಿದು ಹಂಚಿಹೋಗಿರುವ ಬಾಗಲಕೋಟೆ ಮಾರುಕಟ್ಟೆಯನ್ನು ಒಂದುಕಡೆ ತರಬೇಕಿದೆ. ಆ ನಿಟ್ಟಿನಲ್ಲಿ ಇಲ್ಲಿನ ವ್ಯಾಪಾರಸ್ಥರ ಆಶಯದಂತೆ 200 ಎಕರೆಗೂ ಅಧಿಕ ಅಗತ್ಯ ಪ್ರದೇಶದಲ್ಲಿ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣದತ್ತ ಕಾರ್ಯೋನ್ಮುಖರಾಗಬೇಕಿದೆ. ಬೃಹತ್ ಮಾರುಕಟ್ಟೆ ನಿರ್ಮಾಣ ಆಗಬೇಕು. ಆ ಮೂಲಕ ಬಾಗಲಕೋಟೆಯ ವ್ಯಾಪಾರದ ಗತವೈಭವ ಮರುಕಳುಹಿಸಬೇಕಿದೆ. ಇದೊಂದು ಬಹುದೊಡ್ಡ ಕಾರ್ಯವಾಗಬೇಕಿದೆ. ಬೃಹತ್ ಮಾರುಕಟ್ಟೆ ನಿರ್ಮಾಣ ಆಗಬೇಕು ಎನ್ನುವುದು ವ್ಯಾಪಾರಸ್ಥರು ಸೇರಿದಂತೆ ನಗರದ ಬಹುತೇಕ ಜನತೆಯ ಆಶಯವೂ ಆಗಿದೆ. ಇದೇ ವೇಳೆ ಬೃಹತ್ ಮಾರುಕಟ್ಟೆ ಮತ್ತೊಂದು ಕಾಟನ್ ಮಾರ್ಕೆಟ್ ಆಗದಂತೆ ಎಚ್ಚರಿಕೆಯನ್ನೂ ಕೂಡ ವಹಿಸಬೇಕಿದೆ.

ನಗರ ಸಾರಿಗೆ:

ಇವುಗಳ ಜತೆಗೆ ಬಾಗಲಕೋಟೆ ನವನಗರದ ಎಲ್ಲ ಸೆಕ್ಟರಗಳಿಗೂ ಕೇಂದ್ರ ಬಸ್ ನಿಲ್ದಾಣ, ನವನಗರ ಬಸ್ ನಿಲ್ದಾಣ, ಸೀಮಿಕೇರಿ ಕ್ರಾಸ್ , ಗದ್ದನಕೇರಿ ಕ್ರಾಸ್ ಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥಿತ ನಗರ ಸಾರಿಗೆ ಸೌಲಭ್ಯ ಆಗಬೇಕಿದೆ. ಸದ್ಯ ಬಹುತೇಕ ಸೆಕ್ಟರಗಳಿಗೆ ಅಟೋ, ಟಂಟಂ ಬಿಟ್ಟರೆ ಬೇರೆ ಬಸ್ ಸಾರಿಗೆ ಇಲ್ಲವಾಗಿದೆ. ಇದರಿಂದ ಜನತೆ ಸಂಜೆ ಆಗುತ್ತಿದ್ದಂತೆ ಅಗತ್ಯ ಬಸ್ ಸಾರಿಗೆ ಇಲ್ಲದೆ ಪರದಾಡಬೇಕಿದೆ.

ಒಟ್ಟಾರೆ ನೂತನ ಶಾಸಕ ಉಮೇಶ ಮೇಟಿ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಜತೆಗೆ ಜನತೆಯ ವಿಶ್ವಾಸ ಉಳಿಸಿಕೊಂಡು ಹೋಗುವ ಜನತೆಗೆ 2028 ರ ವಿಧಾನಸಭೆ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಸಜ್ಜುಗೊಳ್ಳಬೇಕಿದೆ. ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲವಾದರೂ, ಇಚ್ಛಾಶಕ್ತಿ ಮೆರೆಯುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಶಾಸಕ ಉಮೇಶ ಮೇಟಿ ಮೆರೆಯಬೇಕಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top