ಉಪಚುನಾವಣೆ: ಚಾಣಾಕ್ಷರಲ್ಲಿ ಚಾಣಕ್ಯನ ಹುಡುಕಾಟ!

ಬಾಗಲಕೋಟೆ ವಿಧಾನಸಭೆ ಕ್ಷೇತ್ರವನ್ನು ಗೆದ್ದುಕೊಳ್ಳಲು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ರಾಜಕೀಯ ಚಾಣಾಕ್ಷರ ದಂಡೆ ಆಗಮಿಸಿದೆ. ಇನ್ನಷ್ಟು ಆಗಮಿಸಲಿದೆ. ಪ್ರತಿ ಪಕ್ಷವೂ ಚುನಾವಣೆ ಗೆಲುವಿನ ದಡ ತಲುಪಲು ಚಾಣಾಕ್ಷರ ತಂಡವನ್ನೇ ರಚಿಸಿದೆ.

ಪಕ್ಷಾಂತರ:

ಎರಡೂ ಪಕ್ಷಗಳಲ್ಲಿನ ಚಾಣಾಕ್ಷರ ತಂಡ ಈಗಾಗಲೇ ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರ, ಪ್ರತಿತಂತ್ರ, ರಣತಂತ್ರಗಳನ್ನು ಹೆಣೆಯುತ್ತಿವೆ. ತಂತ್ರಗಾರಿಕೆ ಭಾಗವಾಗಿ ಕ್ಷೇತ್ರದಲ್ಲಿನ ಪ್ರಭಾವಿ ಮುಖಂಡರನ್ನು ತಮ್ಮ ತಮ್ಮ ಪಕ್ಷಗಳಿಗೆ ಸೆಳೆಯುವ ಕೆಲಸ ನಡೆಸಿವೆ. ಜತೆಗೆ ಪಕ್ಷದಲ್ಲಿನ ಆಂತರಿಕ ಅಸಮಾಧಾನಗಳನ್ನು ಶಮನ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಸಣ್ಣ ಸಮುದಾಯಗಳ ಚಿತ್ತ:

ಮುಖ್ಯವಾಗಿ ಎರಡೂ ಪಕ್ಷಗಳು ಕ್ಷೇತ್ರದಲ್ಲಿನ ಪ್ರಬಲ ಸಮುದಾಯಗಳ ಮತಗಳನ್ನು ಸೆಳೆಯಲು ಪ್ರಬಲ ಸಮುದಾಯಗಳ ಜತೆಗೆ ಸಣ್ಣ ಪುಟ್ಟ ಸಮುದಾಯಗಳನ್ನು ತಮ್ಮತ್ತ ಸೆಳೆಯುತ್ತಿವೆ. ಒಂದು‌ ಪಕ್ಷ ಹಿಂದುತ್ವದ ಆಧಾರದ ಮೇಲೆ ಪ್ರಬಲ ಸಮುದಾಯಗಳ‌ ಜತೆಗೆ ಸಣ್ಣಪುಟ್ಟ ಸಮುದಾಯಗಳ ಮತಗಳನ್ನು ಸೆಳೆಯುವ ಯತ್ನ ನಡೆಸಿದೆ.

ಇನ್ನೊಂದು ಪಕ್ಷ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಯಾವ ಸಮುದಾಯಗಳಿಗೆ ಎಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎನ್ನುವುದನ್ನು ಮನದಟ್ಟು ಮಾಡುವ ಮೂಲಕ ಅಭಿವೃದ್ಧಿ ಮಂತ್ರ ಜಪಿಸಿ ಮತಬ್ಯಾಂಕ್ ಸೃಷ್ಟಿಯ ಪ್ರಯತ್ನದಲ್ಲಿ ತೊಡಗಿದೆ.

ಬಹಿರಂಗ ಪ್ರಚಾರ:

ಚುನಾವಣೆ ಕಣ ದಿನದಿಂದ‌ ದಿನಕ್ಕೆ ರಂಗೇರುತ್ತಿದೆ. ಪ್ರಮುಖ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಭ್ಯರ್ಥಿಗಳ ಜತೆಗೂಡಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆ ಹವಾ ಶುರುವಾಗಿದೆ. ಪಕ್ಷಾಂತರ ಕಾರ್ಯ ಕೂಡ ಜೋರಾಗಿದೆ. ಮುಂಜಾನೆ ಒಂದು ಪಕ್ಷದವರು ಮನ ಒಲಿಸಿ ಪಕ್ಷಕ್ಕೆ ಬರಮಾಡಿಕೊಂಡಿದ್ದರೆ, ಸಂಜೆ ಹೊತ್ತಿಗೆ ಅದೇ ಪಕ್ಷಾಂತರಿಗಳನ್ನು ವಾಪಸ್ ಕರೆಯಿಸಿಕೊಂಡ ಪ್ರಸಂಗಗಳು ನಡೆದಿವೆ.

ಗೆಲುವಿನ‌ ಲೆಕ್ಕಾಚಾರ:

ಇಷ್ಟೆಲ್ಲದರ ನಡುವೆ ಸಮುದಾಯ ಸಭೆಗಳು ಮಾತ್ರ ನಗರ, ಗ್ರಾಮ, ಗಲ್ಲಿಗಳಲ್ಲಿ ನಿರಂತರವಾಗಿ ನಡೆಯುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಸಮುದಾಯ ಸಭೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹಿಂದೆ ಗೆಲುವಿನ ಬಹುದೊಡ್ಡ ರಾಜಕೀಯ ಲೆಕ್ಕಾಚಾರ ಅಡಗಿದೆ. ಪ್ರಸಕ್ತ ಚುನಾವಣೆ ಗೆಲುವಿಗೆ ಕ್ಷೇತ್ರದಲ್ಲಿನ ಸಣ್ಣಪುಟ್ಟ ಸಮುದಾಯಗಳು ನಿರ್ಣಾಯಕವಾಗಿದೆ. ಹಾಗಾಗಿ ಈ ಸಮುದಾಯಗಳ ಮತಬ್ಯಾಂಕ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಚಾಣಾಕ್ಷರ ಲೆಕ್ಕ :

ಪ್ರಬಲ‌ ಸಮುದಾಯಗಳ ನಡುವಿನ ಜಿದ್ದಾಜಿದ್ದಿಯಲ್ಲಿ‌ ಯಾರು ಸಣ್ಣಪುಟ್ಟ ಸಮುದಾಯಗಳನ್ನು ಒಲಿಸಿಕೊಳ್ಳುತ್ತಾರೋ ಅವರು ಗೆಲುವಿನದಡ ತಲುಪುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಪ್ರಮುಖ ರಾಜಕೀಯ ಪಕ್ಷಗಳಲ್ಲಿನ ಚಾಣಾಕ್ಷರ ಲೆಕ್ಕಾಚಾರವಾಗಿದೆ. ಹಾಗಾಗಿ ಬಿಜೆಪಿ, ಕಾಂಗ್ರೆಸ್ ಮುಖಂಡರು ಸಮುದಾಯಗಳ ಸಭೆಯಲ್ಲಿ ಸಕ್ರೀಯರಾಗಿದ್ದಾರೆ.

ಚಾಣಕ್ಯನ ಹುಡುಕಾಟ:

ಸಮುದಾಯ ಸಭೆಗಳಲ್ಲಿ ಮುಖಂಡರಿಂದ ಆಣೆ , ಪ್ರಮಾಣವೂ ನಡೆಯುತ್ತಿದೆಯಂತೆ. ಒಟ್ಟಾರೆ ಸಣ್ಣ ಪುಟ್ಟ ಸಮುದಾಯಗಳ ಮತಗಳನ್ನು ಸೆಳೆಯಲು ಚಾಣಾಕ್ಷರು ನಾನಾ ತಂತ್ರಗಳ ಮೊರೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ತಂತ್ರ- ಪ್ರತಿ ತಂತ್ರಗಳ ಮೊರೆ ಹೋಗಲಿದ್ದಾರೆ. ಈ‌ ತಂತ್ರ – ಪ್ರತಿಗಳನ್ನು ಹೆಣೆಯುತ್ತಿರುವ ಚಾಣಾಕ್ಷರ ಪೈಕಿ ಯಾರು ಚಾಣಕ್ಯರಾಗಿ ಹೊರ ಹೊಮ್ಮಲಿದ್ದಾರೆ ಎನ್ನುವುದಕ್ಕೆ ಇನ್ನು ಸಾಕಷ್ಟು ಸಮಯ ಕಾಯಬೇಕಿದೆ. ಆದರೆ ಚಾಣಾಕ್ಷರ ತಂತ್ರ-ಪ್ರತಿ ತಂತ್ರಗಳ ಅನಾವರಣ ಚುನಾವಣಾ ಅಖಾಡದಲ್ಲಿ ನಿತ್ಯವೂ ಕಾಣಿಸಿಕೊಳ್ಳಲಿದೆ. ಅಖಾಡದಲ್ಲಿ ಕಾಣಿಸಿಕೊಳ್ಳುವ ಬೆಳವಣಿಗೆಗಳು ಇಂತವರೆ ಚಾಣಕ್ಯರಾಗಿ ಹೊರ ಹೊಮ್ಮಬಹುದು ಎನ್ನುವ ಅಂದಾಜಿನ ಲೆಕ್ಕಪಕ್ಕಾ ಆಗಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top