ವೈಯಕ್ತಿಕ ಸಂಬಂಧಗಳ ಆಧಾರದ ಮೇಲೆ ಬಿಜೆಪಿ ಉಚ್ಚಾಟಿತ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚುನಾವಣೆ ಪ್ರಚಾರಕ್ಕೆ ಬರಬಹುದು. ಬಂದರೆ ತಪ್ಪೇನು ಎಂದು ಪ್ರಶ್ನಿಸಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಈ ಚುನಾವಣೆ ಹಿಂದುತ್ವದ ಆಧಾರದ ಮೇಲೆ ನಡೆಯಲಿದೆ. ಈ ಚುನಾವಣೆ ಗೆಲುವು ಹಿಂದುತ್ವದ ಗೆಲುವಾಗಲಿದೆ ಎಂದು ಹೇಳಿದ್ದಾರೆ.
ಯತ್ನಾಳ್ ಉಪಸ್ಥಿತಿ ?:
ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಮತಿಮಠ ಅವರು ಮಾ.23 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಪ್ರಬಲ ಹಿಂದುತ್ವ ಪ್ರತಿಪಾದಕ ಬಸನಗೌಡ ಪಾಟೀಲ ಯತ್ನಾಳ್ ಅವರು ಆಗಮಿಸುವರೆ ಎನ್ನುವುದು ಈಗ ಬಿಲಿಯನ್ ಡಾಲರ್ ಪ್ರಶ್ನೆ.
ಸ್ಮೇಹ ಬಂಧನ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಂಡರಾಗದ, ಅವರ ಹೆಸರು ಪ್ರಸ್ತಾಪವಾದರೆ ಸಾಕು ಕಟು ಟೀಕೆಗೆ ಮುಂದಾಗುವ ಯತ್ನಾಳ್ ಅವರನ್ನು ಮುಂದಿಟ್ಟುಕೊಂಡು ಚರಂತಿಮಠ ಅವರು ಚುನಾವಣೆ ಎದುರಿಸಲು ಹೊರಟಿರುವುದು ಸ್ವಪಕ್ಷಿಯರನ್ನೇ ಹುಬ್ಬೇರಿಸುವಂತೆ ಮಾಡಿದೆ.
ಹಿಂದುತ್ವದ ಬಂಧ:
ಬಿಜೆಪಿಯಲ್ಲಿ ಮಹಾನ್ ನಾಯಕರ ದಂಡೆ ಇರುವಾಗ ಯತ್ನಾಳ್ ಅವರು ಪ್ರಚಾರಕ್ಕೆ ಬರಬೇಕು ಎಂದು ಚರಂತಿಮಠ ಆಶಿಸುತ್ತಿರುವ ಹಿಂದೆ ಅದ್ಯಾವ ಲೆಕ್ಕಾಚಾರಗಳು ಅಡಗಿವೆಯೋ ಎನ್ನುವ ಚರ್ಚೆ ಕ್ಷೇತ್ರದಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಹಾಗೂ ಹಿಂದುತ್ವದ ಪ್ರಬಲ ಪ್ರತಿಪಾದಕ ಯತ್ನಾಳ್ ರ ಬೆಂಬಲಿಗರ ಪಡೆ ಎಷ್ಟಿದೆ ಎನ್ನುವುದನ್ನು ಬಹುಶಃ ಚರಂತಿಮಠ ಅವರು ಮನಗಂಡಂತೆ ಕಾಣಿಸುತ್ತದೆ. ಯತ್ನಾಳ್ ಅವರು ಪ್ರಚಾರಕ್ಕೆ ಧುಮುಕುವುದರಿಂದ ಹಿಂದುತ್ವದ ಮತಬ್ಯಾಂಕ್ ಮತ್ತಷ್ಟು ಗಟ್ಟಿಗೊಳ್ಳಲಿದೆ ಎನ್ನುವ ಲೆಕ್ಕಾಚಾರವೂ ಇರಬಹುದು.
ಪಕ್ಷ ಒಪ್ಪುತ್ತಾ ?:
ಯತ್ನಾಳ್ ಅವರು ಚುನಾವಣೆ ಪ್ರಚಾರಕ್ಕೆ ಬರುವುದನ್ನು ಪಕ್ಷದಲ್ಲಿನ ಅವರ ವಿರೋಧಿಗಳು ಎಷ್ಟರ ಮಟ್ಟಿಗೆ ಒಪ್ಪುವರು ಎನ್ನುವುದು ಗಮನಾರ್ಹ. ಯತ್ನಾಳ್ ಅವರು ಪ್ರಚಾರಕ್ಕೆ ಬರಲಿ ಎನ್ನುವ ಚರಂತಿಮಠರ ವಾದವನ್ನು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮುಖಂಡರು ಪುರಸ್ಕರಿಸುವರು ಎನ್ನುವುದು ಮುಖ್ಯವಾಗಲಿದೆ.
ಬಿಜೆಪಿ ಅಭ್ಯರ್ಥಿ ಚರಂತಿಮಠ ಅವರು ಸ್ನೇಹಕ್ಕೆ ಕಟ್ಟುಬಿದ್ದು ಚುನಾವಣೆ ಪ್ರಚಾರ ವಿಷಯದಲ್ಲಿ ಇಲ್ಲದ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅವರ ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನುವ ಆಂತಕ ಅವರ ಬೆಂಬಲಿಗರಲ್ಲೇ ಮನೆ ಮಾಡುತ್ತಿದೆ.
ಎಲ್ಲವೂ ಮೌನ:
ಏತನ್ಮಧ್ಯೆ ಹತ್ತಾರು ಲೆಕ್ಕಾಚಾರಗಳ ಆಧಾರದ ಮೇಲೆ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ ಘೋಷಣೆ ಮಾಡಿ 48 ಗಂಟೆ ಕಳೆದಿದೆ. ಈ ವೇಳೆ ಪಕ್ಷದಲ್ಲಿ ಯಾವುದೇ ಅಸಮಾಧಾನ, ಭಿನ್ನಮತ ಕಾಣಿಸಿಕೊಂಡಿಲ್ಲ ಎನ್ನುವುದು ಬಿಜೆಪಿ ಪಾಲಿಗೆ ಸಮಾಧಾನದ ಸಂಗತಿ.
23 ನಿರ್ಣಾಯಕ ದಿನ:
ಪಕ್ಷದಲ್ಲಿನ ಇವರ ವಿರೋಧಿಗಳು ಮೌನಕ್ಕೆ ಶರಣಾಗಿರುವುದನ್ನು ಗಮನಿಸಿದಾಗ ಎಲ್ಲೂ ಸರಿಯಾಗಿರಬಹುದು ಎನ್ನುವ ವಾತಾವರಣ ಸೃಷ್ಟಿ ಆಗುತ್ತಿದೆ. ನಾಮಪತ್ರ ಸಲ್ಲಿಕೆ ವೇಳೆ ಇದು ಸ್ಪಷ್ಟವಾಗಲಿದೆ. ಅಲ್ಲಿಯವರೆಗೂ ಎಲ್ಲವನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




