ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಗೆ ಭೇಟಿ ನೀಡಿದ ಬೆನ್ನಲ್ಲೆ ಚುನಾವಣೆ ಆಯೋಗ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಕ್ಷೇತ್ರದ ಜನತೆ ಚುನಾವಣೆ ದಿನಾಂಕ ಘೋಷಣೆ ನಿರೀಕ್ಷೆಯಲ್ಲಿದ್ದರು.
ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಾಳೆಯದಲ್ಲಿ ಹುಮ್ಮಸ್ಸು ಕಾಣಿಸಿಕೊಂಡಿದೆ. ಇದುವರೆಗೂ ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗಳು ಈಗ ಇನ್ನಷ್ಟು ಚುರುಕುಗೊಳ್ಳಲಿವೆ.
ಎರಡೂ ಪಕ್ಷಗಳೂ ಚುನಾವಣೆ ಸಿದ್ಧತೆ ನಡೆಸಿದ್ದರೂ ಇದುವರೆಗೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಅಭ್ಯರ್ಥಿಗಳು ಯಾರು ಎನ್ನುವ ಕುತೂಹಲ ಎರಡೂ ಪಕ್ಷಗಳ ಕಾರ್ಯಕರ್ತರಲ್ಲೂ ಇದೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಇದೀಗ ಚುರುಕುಗೊಳ್ಳಲಿದೆ. ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಇದುವರೆಗೂ ಇಲ್ಲದ ಲೆಕ್ಕಾಚಾರಗಳು ಸೇರಿಕೊಳ್ಳಲಿವೆ.
ಎರಡೂ ಪಕ್ಷಗಳಲ್ಲೂ ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಮುಖಂಡರಲ್ಲಿನ ಗುಂಪುಗಾರಿಕೆ ರಾಜಕೀಯ ಅಭ್ಯರ್ಥಿಗಳ ಆಯ್ಕೆಗೆ ಅಡಚಣೆ ಆಗಿ ಪರಿಣಮಿಸಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾರ ಗುಂಪು ಮೇಲುಗೈ ಸಾಧಿಸಲಿವೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಸವಾಲಿನ ಚುನಾವಣೆ:
ಉಪಚುನಾವಣೆ ಇಡೀ ರಾಜ್ಯದ ಗಮನ ಸೇಳೆಯುವ ಚುನಾವಣೆ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಲಿವೆ. ಹಾಗಾಗಿ ಈ ಚುನಾವಣೆ ಕಾಂಗ್ರೆಸ್ ಪಾಲಿಗೆ ಸವಾಲಿನ ಚುನಾವಣೆ ಆಗಿದೆ. ಶತಾಯ- ಗತಾಯ ಚುನಾವಣೆ ಗೆಲ್ಲಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸದ್ಯ ಕಾಂಗ್ರೆಸ್ ಪಾಲಿಗೆ ಮೂರು ವರ್ಷಗಳಲ್ಲಿ ನಡೆಸಿದ ಆಡಳಿತ ಮತ್ತು ನೀಡಿದ ಕಾರ್ಯಕ್ರಮಗಳೇ ಚುನಾವಣೆ ಅಸ್ತ್ರಗಳಾಗಲಿವೆ. ಪಂಚ ಗ್ಯಾರಂಟಿ ಕಾರ್ಯಕ್ರಮಗಳ ಜತೆಗೆ ಬಾಗಲಕೋಟೆಯ ಬಹುವರ್ಷಗಳ ಬೇಡಿಕೆಗಳನ್ನು ಸಾಕಾರಗೊಳಿಸಿರುವ ಕಾರ್ಯಕ್ರಮಗಳು ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸಲಿವೆ ಎನ್ನುವ ಬಲವಾದ ನಂಬಿಕೆ ಪಕ್ಷದ ಮುಖಂಡರದ್ದಾಗಿದೆ. ಜತೆಗೆ ಯಾರನ್ನು ಅಖಾಡಕ್ಕೆ ಇಳಿಸಲಿದೆ. ಅದರ ಪರಿಣಾಮಗಳು ಗೆಲುವಿಗೆ ಮೆಟ್ಟಿಲುಗಳಾಗಲಿವೆ.
ಕ್ಷೇತ್ರದಲ್ಲಿ ಮೊದಲಿನಿಂದಲೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿರುವ ಬಿಜೆಪಿಗೆ ಆಡಳಿತ ಪಕ್ಷದಲ್ಲಿನ ವೈಫಲ್ಯಗಳೇ ಗೆಲುವಿನ ದಡ ಸೇರಲು ಇರುವ ಅಸ್ತ್ರಗಳು. ಅದಕ್ಕೂ ಮೊದಲು ಅಭ್ಯರ್ಥಿ ಆಯ್ಕೆಯಲ್ಲಿ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಜಾಣ ನಡೆ ಅನುಸರಿಬೇಕಿದೆ. ಪಕ್ಷದಲ್ಲಿರುವ ಅಸಮಾಧಾನವೇ ಅಭ್ಯರ್ಥಿ ಆಯ್ಕೆ ವಿಳಂಬಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಒಗ್ಗಟ್ಟಿನ ಮಂತ್ರ:
ಭಿನ್ನಮತ ಶಮನಗೊಳಿಸಿ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಲು ಸಜ್ಜಾಗುತ್ತಿರುವ ಮುಖಂಡರು, ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಮುಂದೆ ಸಾಲು ಸಾಲು ಚುನಾವಣೆಗಳು ಎದುರಾಗುತ್ತಿರುವುದರಿಂದ ಕಳೆದುಕೊಂಡಿರುವ ಕ್ಷೇತ್ರವನ್ನು ಹೇಗಾದರೂ ಗೆಲ್ಲಲೇ ಬೇಕಿದೆ. ಅದಕ್ಕಾಗಿ ಪಕ್ಷದಲ್ಲಿನ ಅಸಮಾಧಾನ ಶಮಗೊಂಡಿದೆ ಎನ್ನುವುದನ್ನು ಬಹಿರಂಗವಾಗಿ ತೋರ್ಪಡಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಎಷ್ಟರ ಮಟ್ಟಿಗೆ ಪ್ರಯತ್ನ ಫಲಕಾರಿ ಆಗಲಿದೆ ಎನ್ನುವುದು ಬಹಳ ಮುಖ್ಯವಾಗಿದೆ.
ಚುನಾವಣೆ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ಇನ್ನು ಮುಂದೆ ಚುನಾವಣೆ ಪ್ರಚಾರದ ನಾನಾ ತಂತ್ರಗಳು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಶುರುವಾಗಲಿವೆ. ಬಾಗಲಕೋಟೆ ಕ್ಷೇತ್ರದಲ್ಲಿ ಮತದಾನ ನಡೆಯುವವರೆಗೂ ಚುನಾವಣೆಯದ್ದೇ ಮಾತು.
- ವಿಠ್ಠಲ ಆರ್. ಬಲಕುಂದಿ




