ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಾಳೆಯ ಮುಖಂಡರ ನಡುವಿನ ಸಾಕಷ್ಟು ಅಸಮಾಧಾನ, ಗುಂಪುಗಾರಿಕೆ ರಾಜಕೀಯದಿಂದ ತತ್ತರಿಸಿ ಹೋಗಿದೆ. ಮುಖಂಡರ ನಡುವಿನ ಅಸಮಾಧಾನ ಶಮನಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಲೇ ಇವೆ. ಇವುಗಳ ಮಧ್ಯೆ ರಾಜ್ಯ ಬಿಜೆಪಿ ಕೋರ್ ಕಮೀಟಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಇಬ್ಬರ ಹೆಸರನ್ನು ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಲು ನಿರ್ಧರಿಸಿದೆ.
ಎರಡು ಹೆಸರು:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮೀಟಿ ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರುಗಳನ್ನು ಕಳುಹಿಸಲು ನಿರ್ಧರಿಸಿದೆ.
ಶಮನವಾಗದ ಅಸಮಧಾನ:
ರಾಜ್ಯ ಬಿಜೆಪಿ ಕೋರ್ ಕಮೀಟಿ ಈ ನಿರ್ಧಾರ ಗಮನಿಸಿದಾಗ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿನ ಅಸಮಾಧಾನ ಶಮನ ಮಾಡಲು ಸಾಧ್ಯವಾಗಿಲ್ಲ ಎನ್ನುವಂತಿದೆ. ಸ್ಥಳೀಯ ಮುಖಂಡರ ನಡುವಿನ ಅಸಮಾಧಾನ ಶಮನವಾಗದ ಹಿನ್ನೆಲೆಯಲ್ಲಿ ಕೋರ್ ಕಮೀಟಿ ” ಸಿಂಗಲ್ ನೇಮ” ಬದಲಿಗೆ “ಡಬಲ್ ನೇಮ್ ” ಕಳುಹಿಸುವ ನಿರ್ಧಾರಕ್ಕೆ ಬಂದಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠರ ನಡುವಿನ ಭಿನ್ನಮತ ಇಂದು ನಿನ್ನೆಯದಲ್ಲ. ಉಭಯತರ ಮಧ್ಯೆ ನಿರಂತರವಾಗಿ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಪರಿಣಾಮವಾಗಿ ಬಾಗಲಕೋಟೆ ಬಿಜೆಪಿ ಪಾಳೆಯದಲ್ಲಿ ಎರಡು ಸ್ಪಷ್ಟ ಗುಂಪುಗಳು ನಿರ್ಮಾಣವಾಗಿವೆ. ಪಕ್ಷದ ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ಎರಡೂ ಗುಂಪುಗಳು ಪ್ರತ್ಯೇಕವಾಗಿಯೇ ಭಾಗವಹಿಸುವುದು ಸಾಮಾನ್ಯ ಎನ್ನುವಂತಾಗಿದೆ.
ನಿರಂತರ ಪ್ರಯತ್ನ:
ಉಭಯ ಮುಖಂಡರ ನಡುವಿನ ಅಸಮಾಧಾನ ಶಮನಕ್ಕೆ ಪ್ರಯತ್ನಗಳು ನಡೆದಿಲ್ಲವೆಂದಲ್ಲ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಪ್ರಯತ್ನಿಸಿದ್ದಾರೆ. ಈಗಲೂ ಪ್ರಯತ್ನ ನಡೆಸುತ್ತಲೆ ಇದ್ದಾರೆ. ಉಭಯ ಮುಖಂಡರ ಹಠಮಾರಿ ನಿಲುವಿನಿಂದಾಗಿ ಇನ್ನೂ ಅಸಮಾಧಾನ ಶಮನವಾಗುತ್ತಿಲ್ಲ. ಹಾಗಂತ ಮುಖಂಡರು ಪ್ರಯತ್ನ ನಿಂತಿಲ್ಲ. ಶತಾಯ-ಗತಾಯ ಬಿಕ್ಕಟ್ಟು ಶಮನಕ್ಕೆ ನಿರಂತರ ಪ್ರಯತ್ನಗಳು ನಡೆದಿವೆ.
ಕೇಸರಿ ಪಡೆ ಭದ್ರಕೋಟೆ:
ಏತನ್ಮಧ್ಯೆ ದಿ. ಶಾಸಕ ಎಚ್. ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಕೇಸರಿ ಪಡೆಯ ಭದ್ರಕೋಟೆ. ಈಗಲೂ ಕೇಸರಿ ಪಡೆಗೆ ಬೇರು ಮಟ್ಟದಲ್ಲಿ ಸಾಕಷ್ಟು ಶಕ್ತಿಇದೆ. ರಾಜಕೀಯ ಬೆಳವಣಿಗೆಗಳ ಮಧ್ಯೆ 2023 ರ ಚುನಾವಣೆಯಲ್ಲಿ ದಿ.ಎಚ್.ವೈ.ಮೇಟಿ ಅವರು ಎರಡನೇ ಬಾರಿಗೆ ಗೆಲುವಿನ ದಾಖಲೆ ನಿರ್ಮಿಸುವ ಮೂಲಕ ಬಿಜೆಪಿ ಸೋಲಿಸಿ ಕೈಗೆ ಶಕ್ತಿ ತುಂಬಿದ್ದರು. ಇದೀಗ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದೆ.
ಕಮಲ ಅರಳಿಸುವ ಯತ್ನ:
ಉಪಚುನಾವಣೆಯಲ್ಲಿ ಕಳೆದುಕೊಂಡಿರುವ ಕ್ಷೇತ್ರವನ್ನು ಮರಳಿ ಪಡೆಯಲೇ ಬೇಕು. ಆ ಮೂಲಕ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂದು ಬಿಜೆಪಿ ನಾಯಕರು ಅತ್ಯಂತ ಉತ್ಸಾಹದಿಂದ ಹೊರಟಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ನಾಯಕರ ಉತ್ಸಾಹಕ್ಕೆ ಸ್ಥಳೀಯ ಮುಖಂಡರ ನಡುವಿನ ಅಸಮಾಧಾನ ಅಡ್ದಿಯಾಗಿ ಪರಿಣಮಿಸಿದೆ.
ಕ್ಷೇತ್ರದಲ್ಲಿನ ಬಣ ರಾಜಕಾರಣ ಶಮನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿರುವಾಗಲೇ ಬಿಜೆಪಿ ಕೋರ್ ಕಮೀಟಿ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಗೆ ಎರಡು ಹೆಸರುಗಳನ್ನು ಶಿಫಾರಸ್ಸು ಮಾಡಲು ಮುಂದಾಗಿದೆ.
ಆಶಾವಾದದ ಮಾತು:
ಅಂತಿಮವಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಆಯ್ಕೆ ಹೊತ್ತಿಗೆ ಅಸಮಾಧಾನ ಶಮನಗೊಳ್ಳಲಿದೆ ಎನ್ನುವ ವಿಶ್ವಾಸವನ್ನು ಪಕ್ಷದ ರಾಜ್ಯ ನಾಯಕರು ವ್ಯಕ್ತ ಪಡಿಸುತ್ತಿದ್ದಾರೆ. ಏನೇ ಆಗಲಿ ಕೇಂದ್ರ ಸಂಸದೀಯ ಮಂಡಳಿಗೆ ಒಂದೇ ಹೆಸರು ಹೋಗಬೇಕಿತ್ತು ಎನ್ನುವ ಮಾತುಗಳು ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಗುವ ಅದೃಷ್ಟ ಯಾರಿಗೆ ಒಲಿಯಲಿದೆ ಎನ್ನುವುದು ಕಾತರದ ಸಂಗತಿ. ಬಿಜೆಪಿಯಲ್ಲಿನ ಈ ಬೆಳವಣಿಗೆ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯಬಾಗಲಕೋಟೆಯಲ್ಲಿ ಉಪಹಾರ ರಾಜಕಾರಣಕ್ಕೆ ಮುಂದಾಗಿರುವುದು ಕುತೂಹಕರ ಸಂಗತಿ.
- ವಿಠ್ಠಲ ಆರ್. ಬಲಕುಂದಿ



