ಉಪಚುನಾವಣೆಗೆ ಮೊಳಗಲಿದೆ ರಣಕಹಳೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳ ದಂಡು (ಮಾರ್ಚ್ 14) ಶನಿವಾರ ನಗರಕ್ಕೆ ಆಗಮಿಸಲಿದೆ. ಬಾಗಲಕೋಟೆಗೆ ಮಂಜೂರಾಗಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕಾಲೇಜು ಘಟಕದ ಕಟ್ಟಡಕ್ಕೆ ಶಂಕು ಸ್ಥಾಪನೆ ಹಾಗೂ ಕೃಷ್ಞಾ ಮೇಲ್ದಂಡೆ ಯೋಜನೆ ಹಂತ-3 ರ ವ್ಯಾಪ್ತಿಯಲ್ಲಿ ಸ್ವಾಧೀನಕ್ಕೆ ಒಳಗಾಗಲಿರುವ ಜಮೀನುಗಳಿಗೆ ಸಾಂಕೇತಿಕವಾಗಿ ಒಪ್ಪಿತ ದರ ಪರಿಹಾರ ಧನ ಚೆಕ್ ವಿತರಣೆ ಕಾರ್ಯ ನೆರವೇರಿಸುವ ಸಮಾರಂಭದಲ್ಲಿ ಅವರೆಲ್ಲ ಭಾಗವಹಿಸಲಿದ್ದಾರೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ ಎನ್ನುವುದು ಜಗಜ್ಜಾಹಿರು ಸಂಗತಿ. ಯಾವುದೇ ಪಕ್ಷದ ಸರ್ಕಾರವಿದ್ದರೂ ತನ್ನ ಲಾಭಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಅತ್ಯಂತ ಸಹಜ ಪ್ರಕ್ರಿಯೆ. ಈಗಲೂ ಅಷ್ಟೆ.

ಕಾರ್ಯಕ್ರಮದ ಬಳಿಕ ಯಾವಾಗಲಾದರೂ ಉಪಚುನಾವಣೆಗೆ ಅಧಿಸೂಚನೆ ಹೊರ ಬೀಳುವ ಸಾಧ್ಯತೆಗಳಿವೆ. ಹಾಗಾಗಿ ಈ ಕಾರ್ಯಕ್ರಮ ಕಾಂಗ್ರೆಸ್ ಪಾಲಿಗೆ ಉಪಚುನಾವಣೆಗೆ ರಣಕಹಳೆ ಮೊಳಗಿಸುವ ಸಂದರ್ಭ ಎಂದೇ ರಾಜಕೀಯ ವಲಯದಲ್ಲಿ ಅರ್ಥೈಸಲಾಗುತ್ತಿದೆ. ಹಾಗಾಗಿಯೇ ಈ ಕಾರ್ಯಕ್ರಮದಲ್ಲಿ
ಸಹಸ್ರಾರು ಜನ ಸೇರುವಂತೆ ವ್ಯವಸ್ಥೆ ಆಗಿದೆ.

ಪ್ರತಿಮೆಗಳ ಸದ್ದು:

ಬಾಗಲಕೋಟೆ ನಗರದಲ್ಲಿ ಕಳೆದ ಐದಾರು ವರ್ಷಗಳಿಂದ ಶಿವಾಜಿ ಮಹಾರಾಜರ, ಅಣ್ಣ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ವಿವಾದ ಆಗಾಗ್ಗೆ ಸದ್ದು ಮಾಡುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಪ್ರತಿಮೆಗಳ ಸ್ಥಾಪನೆಗೆ ಅನುದಾನ ಮಂಜೂರಾತಿಗೆ ಅಸ್ತು ಎಂದಿದ್ದಾರೆ. ಇದು ಈಗ ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಪ್ರತಿಪಕ್ಷಗಳು ಅನುದಾನ ಬೇಕಿರಲಿಲ್ಲ. ಜಿಲ್ಲಾಡಳಿತದ ಅನುಮತಿ ಬೇಕಿತ್ತು. ಅದನ್ನು ಕೊಡಿಸಿದ್ದರೆ ಸಾಕಿತ್ತು ಎಂದು ಹೇಳಿದೆ. ಮುಖ್ಯಮಂತ್ರಿಗಳು ಅಭಿವೃದ್ಧಿ ವಿಷಯಗಳ ಜತೆಗೆ ರಾಜಕಾರಣದ ಹಿನ್ನೆಲೆಯಲ್ಲಿ ಪ್ರತಿಮೆಗೆ ಅನುದಾನ ವಿಷಯ ಪ್ರಸ್ತಾಪಿಸುವ ಮೂಲಕ ಮತಬ್ಯಾಂಕ್ ರಾಜಕಾರಣ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಉಸ್ತುವಾರಿ ಕುತೂಹಲ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಪಾಳೆಯದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ದಿ.ಶಾಸಕ ಎಚ್.ವೈ. ಮೇಟಿ ಅವರ ಕುಟುಂಬಸ್ಥರ ಮಧ್ಯೆಯೇ ಟಿಕೆಟ್ ಫೈಟ್ ನಡೆದಿದ್ದು, ಇದಕ್ಕೆ ಇನ್ನೂ ಸೂಕ್ತ ಉತ್ತರ ಸಿಕ್ಕಿಲ್ಲ. ಇದಕ್ಕೆ ಪರಿಹಾರ ಕಲ್ಪಿಸಿ, ಚುನಾವಣೆ ಎದುರಿಸಲು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಆಗಾಗ್ಗೆ ಬಾಗಲಕೋಟೆಗೆ ಭೇಟಿ ನೀಡಿ ಚುನಾವಣೆ ಬಗೆಗೆ ಪ್ರಮುಖರೊಂದಿಗೆ ಹಲವು ಸುತ್ತಿನ‌ ಮಾತುಕತೆ ನಡೆಸಿದ್ದಾರೆ. ಬಹುಶಃ ಅವರ ಉಸ್ತುವಾರಿಯಲ್ಲೇ ಕಾಂಗ್ರೆಸ್ ಉಪಚುನಾವಣೆಗೆ ಹೋಗಲಿದೆ ಎನ್ನುವ ವಾತಾವರಣ ಪಕ್ಷದಲ್ಲಿ ಸೃಷ್ಟಿಯಾಗಿತ್ತು.

ಇರುಸು ಮುರುಸು:

ಇದೀಗ ಪಕ್ಷ ಬೇರೆಯವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿ ರಚನೆ ವಿಷಯದಲ್ಲಿ ಪಕ್ಷದಲ್ಲಿನ ಬಣ ರಾಜಕಾರಣ ಇಣುಕಿ ಹಾಕಿದಂತೆ ಕಾಣಿಸುತ್ತಿದೆ. ಇದು ಬಾಗಲಕೋಟೆ ಕಾಂಗ್ರೆಸ್ ಪಾಳೆಯದಲ್ಲಿ ಇರುಸು ಮುರುಸಿಗೂ ಕಾರಣವಾಗಿದೆ. ಈ ಹಿಂದೆ ಶಿಗ್ಗಾಂವ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಹಿಂದ್ ಫ್ಯಾಕ್ಟರ್ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಚುನಾವಣೆ ಉಸ್ತುವಾರಿ ವಹಿಸಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದ ಅವರಿಗೆ ಬಾಗಲಕೋಟೆ ಕ್ಷೇತ್ರದ ಉಸ್ತುವಾರಿಯೂ ಅವರ ಹೆಲಗಲಿಗೆ ಬೀಳಲಿದೆ ಎನ್ನುವುದು ಬಹುತೇಕರ ತಲೆಯಲ್ಲಿತ್ತು. ಆದರೆ ನಡೆದದ್ದೆ ಬೇರೆ.

ಅಭ್ಯರ್ಥಿ ಸುಳಿವು:

ಮೇಲ್ನೋಟಕ್ಕೆ ಇದೊಂದು ಸರ್ಕಾರಿ ಕಾರ್ಯಕ್ರಮ ಆಗಿದ್ದರೂ ಈ ಕಾರ್ಯಕ್ರಮದ ಮೂಲಕವೇ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪರೋಕ್ಷವಾಗಿ ರಣಕಹಳೆ ಮೊಳಗಿಸಲು ಸಜ್ಜಾಗಿದೆ. ಈ ವೇದಿಕೆ ಮೂಲಕವೇ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರೂ ಎನ್ನುವ ಪ್ರಶ್ನೆಗೂ ಸುಳಿವು ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ.

ಪ್ರತಿಪಕ್ಷ ಬಿಜೆಪಿ ಸೇರಿದಂತೆ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಾಂಗ್ರೆಸ್ ಅಭ್ಯರ್ಥಿ ಬಗೆಗೆ ಸುಳಿವು ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಬಣ ರಾಜಕಾರಣ ಅಡ್ಡಿ:

ಇಂತಹ‌ ಬೆಳವಣಿಗೆ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ನಡೆಯಲಿರುವ ಕಾರ್ಯಕ್ರಮದ ಮೂಲಕ ಉಪಚುನಾವಣೆಗೆ ಪರೋಕ್ಷವಾಗಿ ನಾಂದಿ ಹಾಡಲಿದ್ದಾರೆ. ಮುಂದಿನ ಬೆಳವಣಿಗೆಗಳು ಕುತೂಹಲಕಾರಿ ಆಗಿವೆ. ಉಪಚುನಾವಣೆಗೆ ಅಭ್ಯರ್ಥಿ ಯಾರಾಗಬಹುದು ಎನ್ನುವುದರ ಸುಳಿವನ್ನು ಮುಖ್ಯಮಂತ್ರಿಗಳು ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಅದು ಅಂದುಕೊಂಡಷ್ಟು ಸರಳವಾಗಿ ಉಳಿದಿಲ್ಲ ಎನ್ನುವುದನ್ನು ಇತ್ತೀಚಿನ ಬೆಳವಣಿಗೆಗಳು ಹೇಳುತ್ತಿವೆ.

ಪಕ್ಷದಲ್ಲಿ ಇತ್ತೀಚೆಗಷ್ಟೆ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿರುವ ಯಾರಿಗೆ ಆಗಲಿ, ಬಣ ರಾಜಕಾರಣದ ಕೈಚಳಕ ಹಿನ್ನೆಲೆಯಲ್ಲಿ ಅಭ್ಯರ್ಥಿ ಯಾರು ಎನ್ನುವ ಸುಳಿವನ್ನು ಅಷ್ಟು ಸಲೀಸಾಗಿ ಬಿಟ್ಟು ಕೊಡುವ ಯಾವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಒಟ್ಟಾರೆ ಒಂದಂತೂ ಸ್ಪಷ್ಟ. ಶಂಕು ಸ್ಥಾಪನೆ ಸಮಾರಂಭ ಕಾಂಗ್ರೆಸ್ ಪಾಳೆಯದಲ್ಲಿ ಉಪಚುನಾವಣೆಗೆ ನಾಂದಿ ಹಾಡಲಿದೆ. ಚುನಾವಣಾ ಚಟುವಟಿಕೆಗಳು ತೀವ್ರಗೊಳ್ಳಲಿವೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top