ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕಾಲೇಜ್ ಘಟಕ ನಿರ್ಮಾಣದ ಶಂಕು ಸ್ಥಾಪನೆ ಸಮಾರಂಭಕ್ಕೆ ದಿನಾಂಕ ನಿಗದಿ ಆಗಿದ್ದು, ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯವಾಗಿಯೂ ಈ ಸಮಾರಂಭ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್ಸಿಗೆ ಬ್ರಹ್ಮಾಸ್ತ್ರ:
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬತ್ತಳಿಕೆಯಲ್ಲಿ ಈಗಾಗಲೇ ಗ್ಯಾರಂಟಿಯಂತಹ ಬತ್ತಳಿಕೆಗಳಿದ್ದರೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಮೆಡಿಕಲ್ ಕಾಲೇಜು ಘಟಕ ಸ್ಥಾಪನೆಯೆ ಕಾಂಗ್ರೆಸ್ ಪಾಲಿಗೆ ಚುನಾವಣೆ ಬ್ರಹ್ಮಾಸ್ತ್ರವಾಗಲಿದೆ ಎಂದೇ ಹೇಳಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಆಗಬೇಕು ಎನ್ನುವ ಕೂಗು ಇತ್ತು. ಇದಕ್ಕಾಗಿ ನಿರಂತರ ಹೋರಾಟಗಳು ನಡೆದುಕೊಂಡು ಬಂದಿವೆ. ಬೂಟ್ ಪಾಲೀಶ್‌ನಂತಹ ಚಳುವಳಿ ಕೂಡ ನಡೆದಿದೆ. ಆದರೆ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಆಗಲೇ ಇಲ್ಲ.
ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ:
ಹತ್ತು ವರ್ಷಗಳ ಹಿಂದೆ ಬಾಗಲಕೋಟೆಗೆ ಸರ್ಕಾರಿ ಕಾಲೇಜ್ ಮಂಜೂರಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜೀವ ಗಾಂಧಿ ಆರೋಗ್ಯ ವಿವಿಯ ಕಾಲೇಜು ಘಟಕ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ.
ಟಿಕೆಟ್ ಗೊಂದಲ ಪರಿಹಾರ:
ದಿ.ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಅವರ ಕುಟುಂಬಸ್ಥರಿಗೆ ಕಾಂಗ್ರೆಸ್ ಟಿಕೆಟ್ ಎನ್ನುವುದು ಬಹುತೇಕ ಗ್ಯಾರಂಟಿ ಎನ್ನುವ ಅಭಿಪ್ರಾಯವನ್ನು ಜಿಲ್ಲೆಯ ಕಾಂಗ್ರೆಸ್ ಮುಖಂಡರು ವ್ಯಕ್ತ ಪಡಿಸುತ್ತಿದ್ದಾರೆ. ಮೇಟಿ ಅವರು ಕುಟುಂಬಸ್ಥರಿಗೆ ಟಿಕೆಟ್ ಎಂದಾದಲ್ಲಿ ಅವರ ಪುತ್ರರ ಪೈಕಿ ಯಾರಿಗೆ ಟಿಕೆಟ್ ಎನ್ನುವುದು ಮಾತ್ರ ಇಂದಿಗೂ ಗುಟ್ಟಾಗಿ ಉಳಿದಿದೆ.
ಏತನ್ಮಧ್ಯೆ ಮೇಟಿ ಕುಟುಂಬಸ್ಥರಿಗೆ ಟಿಕೆಟ್ ಎಂದಾದಲ್ಲಿ ತಮ್ಮದೇನೂ ಅಭ್ಯಂತರವಿಲ್ಲ. ಅದಕ್ಕೆ ತಮ್ಮದೂ ಬೆಂಬಲವಿದೆ. ಅವರ ಕುಟುಂಬ ಬಿಟ್ಟು ಬೇರೆಯವರಿಗೆ ಟಿಕೆಟ್ ಎಂದಾದಲ್ಲಿ ನಾನು ಆಕಾಂಕ್ಷಿ ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ. ರಾಜೀವಗಾಂಧಿ ಆರೋಗ್ಯ ವಿವಿಯ ಕಾಲೇಜು ಘಟಕ ಶಂಕು ಸ್ಥಾಪನೆ ಹೊತ್ತಿಗೆ “ ಟಿಕೆಟ್ ಫೈಟ್” ಗೊಂದಲ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಈ ಕಾರ್ಯಕ್ರಮದ ಸಮಯದಲ್ಲೇ ಅಭ್ಯರ್ಥಿ ಹೆಸರು ಘೋಷಣೆ ಆದರೂ ಅಚ್ಚರಿ ಪಡಬೇಕಿಲ್ಲ.
ಗೊಂದಲ ಮುಂದುವರಿಕೆ:
ಮುಖ್ಯಮಂತ್ರಿಗಳು ಬಾಗಲಕೋಟೆಗೆ ಆಗಮಿಸಿದ ವೇಳೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗದೇ ಗುಟ್ಟಾಗಿಯೇ ಉಳಿದಲ್ಲಿ, ನಾಮಪತ್ರ ಸಲ್ಲಿಕೆ ಕೊನೆ ಹಂತದವರೆಗೂ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಹಾಗೆ ಮುಂದುವರಿಯಲಿದೆ. ಮೇಟಿ ಕುಟುಂಬಸ್ಥರಲ್ಲೇ ಟಿಕೆಟ್‌ಗಾಗಿ ಪೈಪೋಟಿ ಇರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೇಟಿ ಅವರ ಕುಟುಂಬಸ್ಥರು “ನಾವೆಲ್ಲ ಒಟ್ಟಾಗಿದ್ದೇವೆ” ಎನ್ನುವ ಮಾತನ್ನು ಹೇಳುತ್ತಿದ್ದಾರಾದರೂ ಸ್ಪಷ್ಟ ನಿರ್ಧಾರ ಹೊರ ಬೀಳುತ್ತಿಲ್ಲ. ಇದು ಕಾರ್ಯಕರ್ತರದಲ್ಲಿನ ಗೊಂದಲ ಹಾಗೆ ಉಳಿಯುವಂತೆ ಮಾಡಿದೆ.
ತಂತ್ರಗಾರಿಕೆಗೆ ಮೊರೆ:
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದ ಕ್ಷೇತ್ರವನ್ನು ಶತಾಯ-ಗತಾಯ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗಿದೆ. ದಿ.ಶಾಸಕ ಎಚ್.ವೈ. ಮೇಟಿ ಅವರಿಂದಾಗಿಯೇ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಂಡಿದೆ. ಅದನ್ನೂ ಹೇಗಾದರೂ ಮಾಡಿ ಉಳಿಸಿಕೊಳ್ಳಲು ಕಾಂಗ್ರೆಸ್ ಈಗಾಗಲೇ ಹತ್ತು ಹಲವು ತಂತ್ರಗಳ ಮೊರೆ ಹೋಗಿದ್ದು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನಾನಾ ಕಾರಣಗಳನ್ನು ಮುಂದೆ ಮಾಡಿಕೊಂಡು ಮೇಲಿಂದ ಮೇಲೆ ಕ್ಷೇತ್ರಕ್ಕೆ ಆಗಮಿಸಿ ಸಂಘಟನೆ ಚುರುಕುಗೊಳಿಸಿದ್ದಾರೆ. ಟಿಕೆಟ್ ಹಂಚಿಕೆ ಬಗೆಗೂ ಗಂಭೀರ ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ರಾಜೀವ ಗಾಂಧಿ ಆರೋಗ್ಯ ವಿವಿಯ ಕಾಲೇಜು ಘಟಕ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆಗೆ ಮುಖ್ಯಮಂತ್ರಿಗಳು ಆಗಮಿಸಲಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಹುಮ್ಮಸ್ಸು ಕಾಣಿಸಿಕೊಳ್ಳಲಿದೆ. ಇದು ಚುನಾವಣೆ ಕಾರ್ಯಕ್ಕೂ ಕಾರ್ಯಕರ್ತರಿಗೆ ಟಾನಿಕ್ ಆಗಿ ಪರಿಣಮಿಸಲಿದೆ.
- ವಿಠ್ಠಲ ಆರ್. ಬಲಕುಂದಿ




