ರಾಜ್ಯ ರಾಜಕಾರಣದ ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೊಸದಾಗಿ ಮುಖ್ಯಮಂತ್ರಿ ಆಗಲಿರುವ ಡಿ.ಕೆ. ಶಿವಕುಮಾರ ಅವರೊಂದಿಗೆ ಜಿಲ್ಲೆಯಿಂದ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರು ಯಾರು ಎನ್ನುವ ಚರ್ಚೆ ಜೋರಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಡಿ.ಕೆ. ಶಿವಕುಮಾರ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಮೂಲಕ ಶಿವಕುಮಾರ ಅವರು ಮುಂದಿನ ಮುಖ್ಯಮಂತ್ರಿ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೆನಿದ್ದರೂ ಸಂಪುಟ ಸರ್ಕಸ್ ಮಾತ್ರ.
ರೇಸ್ ನಲ್ಲಿ ಮೂವರು:
ನೂತನ ಮುಖ್ಯಮಂತ್ರಿಗಳ ಜತೆ ಸಂಪುಟ ಸೇರಲು ಜಿಲ್ಲೆಯ ಮೂವರು ಶಾಸಕರ ನಡುವೆ ತೀಬ್ರ ಪೈಪೋಟಿ ನಡೆದಿದೆ. ಹಾಲಿ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಹಿರಿಯ ಶಾಸಕ ಜೆ.ಟಿ. ಪಾಟೀಲ ಮತ್ತು ಹುನಗುಂದ ಶಾಸಕ ವಿಜಯಾದ ಕಾಶಪ್ಪವರ ಮಂತ್ರಿಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿದ್ದಾರೆ.
ದೆಹಲಿಗೆ ಹೋಗಿದ್ದ ಸಚಿವಾಕಾಂಕ್ಷಿಗಳು:
ಮೂವರು ಸಚಿವಾಕಾಂಕ್ಷಿಗಳ ಪೈಕಿ ಶಾಸಕ ಜೆ.ಟಿ. ಪಾಟೀಲ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ ಸಚಿವ ಸ್ಥಾನಕ್ಕಾಗಿ ದೆಹಲಿಗೂ ಹೋಗಿ ಬಂದಿದ್ದಾರೆ. ಸಚಿವ ತಿಮ್ಮಾಪುರ ದಲಿತ ಸಮುದಾಯದ ಕೋಟಾದಡಿ ಸಚಿವ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರಾದರೂ ಅವರ ಮೇಲೆ ಸಾಕಷ್ಟು ಬಾರಿ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿರುವುದು ಅವರಿಗೆ ಎಲ್ಲಿ ಸಂಪುಟ ಸೇರ್ಪಡೆಗೆ ಮುಳ್ಳಾಗಲಿದೆ ಏನೋ ಎನ್ನುವ ಆತಂಕ ಅವರ ಬೆಂಬಲಿಗರನ್ನು ಕಾಡಲಾರಂಭಿಸಿದೆ.
ತಂತ್ರಗಾರಿಕೆ:
ಕಳೆದ ಮೂರುವರೆ ದಶಕಗಳಿಂದ ರಾಜಕಾರಣದಲ್ಲಿರುವ ಸಚಿವ ಆರ್.ಬಿ. ತಿಮ್ಮಾಪುರ ರಾಜಕಾರಣದಲ್ಲಿ ಹಲವು ಏಳು ಬೀಳುಗಳನ್ನು ಕಂಡವರು. ಸತತ ಸೋಲಿನ ಮಧ್ಯೆಯೂ ರಾಜಕೀಯ ಅಧಿಕಾರ ಪಡೆದವರು. ಮಂತ್ರಿಗಳಾಗಿ ಕೆಲಸ ಮಾಡಿದ ಅವರು ರಾಜಕಾರಣದ ಪಟ್ಟುಗಳನ್ನು ಬಲ್ಲವರು. ಹಾಗಾಗಿ ಅಷ್ಟು ಸುಲಭವಾಗ ಇತರರ ಪೈಪೋಟಿಗೆ ಬಗ್ಗುವವರಲ್ಲ. ತಮ್ಮ ರಾಜಕೀಯ ಅನುಭವ ಮತ್ತು ತಂತ್ರಗಾರಿಕೆ ಬಳಸಿಕೊಂಡು ಹೊಸ ಮುಖ್ಯಮಂತ್ರಿಗಳ ಸಂಪುಟದಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಪ್ರಾಬಲ್ಯಗಳ ಪೈಪೋಟಿ:
ಪಕ್ಷ ಹಿರಿತನ ಮತ್ತು ಅನುಭವಕ್ಕೆ ಆದ್ಯತೆ ನೀಡಬೇಕು ಎನ್ನುವ ಪ್ರಶ್ನೆ ಬಂದಾಗ ಜೆ.ಟಿ.ಪಾಟೀಲರ ಹೆಸರು ಮುನ್ನೆಲೆಗೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ. ಶಾಸಕ ವಿಜಯಾನಂದ ಕಾಶಪ್ಪನವರ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು, ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಯುವಕರಾಗಿದ್ದಾರೆ ಹಾಗೇ ಅವರ ತಂದೆ ದಿ. ಎಸ್. ಆರ್. ಕಾಶಪ್ಪನವರ ಮಂತ್ರಿ ಆಗಿದ್ದವರು ಎನ್ನುವ ಕಾರಣಕ್ಕೆ ಮಂತ್ರಿ ಸ್ಥಾನದ ಅವಕಾಶ ಸಿಕ್ಕುವ ಸಾಧ್ಯತೆಗಳನ್ನು ಅಲ್ಲಗಳೆಯುಂತಿಲ್ಲ.
ಹಳೆ ಹೇಳಿಕೆಗೆ ಈಗ ಬಲ:
ಗಮನಾರ್ಹ ಅಂಶವೆಂದರೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬರುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಮಧ್ಯೆ ಮುಖ್ಯಮಂತ್ರಿ ಸ್ಥಾನದ ಪಟ್ಟಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದ ವೇಳೆ ಕಾಶಪ್ಪನವರ ಅವರು ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಆಡಿದ ಒಂದು ಮಾತಿನಿಂದ ಸಚಿವ ಸ್ಥಾನ ತಪ್ಪಿತು ಎಂದು ಹೇಳಲಾಗುತ್ತಿದೆ. ಈಗ ಅದೇ ಮಾತು ಅವರಿಗೆ ಸಚಿವ ಸ್ಥಾನವನ್ನು ಕೊಡಿಸಲು ನೆರವಾಗಬಹುದು ಎಂದು ಹೇಳಲಾಗುತ್ತಿದೆ.
ಒಬ್ಬರಿಗೆ ಅವಕಾಶ:
ಹೊಸ ಮುಖ್ಯಮಂತ್ರಿಗಳ ಸಂಪುಟದಲ್ಲಿ ಮೂವರು ಸಚಿವಾಕಾಂಕ್ಷಿಗಳ ಪೈಕಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಆ ಒಬ್ಬರು ಯಾರಾಗಲಿದ್ದಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಗಮನಾರ್ಹ ಅಂಶವೆಂದರೆ ಜಿಲ್ಲೆಯ ಬಹುತೇಕ ಎಲ್ಲ ಶಾಸಕರು ಸಿದ್ದರಾಮಯ್ಯ ಬೆಂಬಲಿಗರು ಎನ್ನುವ ವಾದವಿದೆ. ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ವೇಳೆ ಜಿಲ್ಲೆಗೆ ಪ್ರಾತಿನಿಧ್ಯವೇ ಸಿಗದೆ ಹೋದರೂ ಅಚ್ಚರಿ ಪಡಬೇಕಾಗಿಲ್ಲ.
- ವಿಠ್ಠಲ ಆರ್. ಬಲಕುಂದಿ



