ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಎರಡನೇ ತಲೆಮಾರು ರಾಜಕಾರಣ ಗಟ್ಟಿಗೊಳ್ಳುತ್ತಿದೆ. ಕಾಂಗ್ರೆಸ್ಸಿನಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ಇರುವ ಹಿನ್ನೆಲೆಯಲ್ಲಿ ಎರಡನೇ ತಲೆಮಾರಿನ ರಾಜಕಾರಣ ಪ್ರವರ್ಧಮಾನಕ್ಕೆ ಬರುತ್ತಿದೆ. ಈಗಾಗಲೇ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಎರಡನೇ ತಲೆಮಾರಿನ ರಾಜಕಾರಣ ನಡೆಯುತ್ತಿದೆ. ಇದೀಗ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಗೆಲುವಿನ ಮೂಲಕ ನಾಲ್ಕನೇ ಕ್ಷೇತ್ರಕ್ಕೂ ಅದು ಕಾಲಿಟ್ಟಿದೆ.
ಉಮೇಶ ಮೇಟಿ ನಾಲ್ಕನೆಯವರು:
ಜಿಲ್ಲೆಯ ಹುನಗುಂದ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಸಚಿವ, ದಿ.ಎಸ್. ಆರ್. ಕಾಶಪ್ಪನವರ ಪುತ್ರ ವಿಜಯಾನಂದ ಕಾಶಪ್ಪನವರ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಇದೀಗ ದಿ.ಎಚ್.ವೈ. ಮೇಟಿ ಅವರ ಪುತ್ರ ಉಪಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ.
ಜಮಖಂಡಿ ವಿಧಾನ ಸಭೆ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ, ದಿ. ಸಿದ್ದು ನ್ಯಾಮಗೌಡರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಆನಂದ ನ್ಯಾಮಗೌಡ ಶಾಸಕರಾಗಿ ಆಯ್ಕೆಗೊಂಡಿದ್ದರು. 2023 ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಸದ್ಯ ಸಕ್ರೀಯ ರಾಜಕಾರಣದಲ್ಲಿ ಇದ್ದಾರೆ. ಹಾಗೆ ನೋಡಿದರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠರ ಕಾಲದಲ್ಲೇ ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಎರಡನೇ ತಲೆಮಾರು ರಾಜಕಾರಣ ಆರಂಭಗೊಂಡಿದೆ.
ಸಕ್ರೀಯ ರಾಜಕಾರಣ:
ಹೀಗೆ ಬಾಗಲಕೋಟೆ ಜಿಲ್ಲೆಯ ರಾಜಕಾರಣದಲ್ಲಿ ಎರಡನೇ ತಲೆಮಾರು ರಾಜಕೀಯವಾಗಿ ಹೆಚ್ಚು ಸಕ್ರೀಯವಾಗುತ್ತಿದೆ. ಜಿಲ್ಲೆಯ ಇತರ ಕ್ಷೇತ್ರಗಳಿಗೂ ಇದು ವಿಸ್ತಾರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಪುತ್ರ ವಿನಯ ತಿಮ್ಮಾಪುರ ಸಕ್ರೀಯ ರಾಜಕಾರಣದಲ್ಲಿ ಇದ್ದಾರೆ. ಯುವ ಕಾಂಗ್ರೆಸ್ಸಿನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅವರು ಸದ್ಯ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಜೆಪಿಯಲ್ಲೂ ಇದೆ:
ಬಿಜೆಪಿ ಕೂಡ ಇದಕ್ಕೆ ಹೊರತಾಗಿಲ್ಲ. ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರು ಎರಡನೇ ತಲೆಮಾರಿಗೆ ಸೇರಿದವರು. ಅವರ ತಂದೆಯವರೂ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರು. ರಾಜಕೀಯ ಪಕ್ಷಗಳಲ್ಲಿನ ಕುಟುಂಬ ರಾಜಕಾರಣದ ವ್ಯವಸ್ಥೆ ಪರಿಣಾಮ, ಹೊಸಬರಿಗೆ ಅವಕಾಶಗಳು ಮರಿಚಿಕೆ ಎನ್ನುವಂತಾಗಿದೆ.
ಚರ್ಚೆಯಾಗದ ಸಿದ್ದು ಹೇಳಿಕೆ:
ಬಾಗಲಕೋಟೆ ಉಪಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ” ಈಗ ಮೇಟಿ ಅವರ ಪುತ್ರ ಉಮೇಶ ಮೇಟಿ ಅವರನ್ನು ಎರಡು ವರ್ಷದ ಅವಧಿಗೆ ಗೆಲ್ಲಿಸಿ, ಮುಂದೆ 2028 ರಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗುವುದು” ಎನ್ನುವ ಹೇಳಿಕೆಯನ್ನು ಚುನಾವಣೆ ಪ್ರಚಾರ ವೇದಿಕೆಯಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತಾದರೂ ಯಾವುದೇ ಪರಿಣಾಮ ಉಂಟಾಗಲಿಲ್ಲ.
ಹೊಸಬರಿಗೆ ಅವಕಾಶ ಕ್ಷೀಣ:
ಒಟ್ಟಾರೆ ಜಿಲ್ಲೆಯ ಬಹುತೇಕ ವಿಧಾನಸಭೆ ಕ್ಷೇತ್ರಗಳು ಎರಡನೇ ತಲೆಮಾರಿಗೆ ಫಿಕ್ಸ್ ಆದಂತಾಗಿದೆ. ಹಾಗಾಗಿ ಇಲ್ಲಿ ಹೊಸಬರು ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳವ ಸ್ಥಿತಿ ಇಲ್ಲ ಎನ್ನುವುದಂತೂ ಸತ್ಯ.
- ವಿಠ್ಠಲ ಆರ್. ಬಲಕುಂದಿ




