ಟಿಕೆಟ್ ಫೈಟ್: ಮುಖ್ಯಮಂತ್ರಿ ಮಾತಿಗೂ ಸಿಗಲಿಲ್ಲ ಮಾನ್ಯತೆ

ನಾಡ ದೋರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬುಧವಾರ ನಡೆದ ಮಾತುಕತೆ ವೇಳೆ ದಿ. ಶಾಸಕ ಎಚ್.ವೈ.‌ ಮೇಟಿ ಪುತ್ರರ ನಡುವಿನ ಟಿಕೆಟ್ ಕದನಕ್ಕೆ ತೆರೆ ಬೀಳಬಹುದು ಎನ್ನುವ ಬಹುತೇಕರ ನಿರೀಕ್ಷೆ ಹುಸಿಯಾಗಿದೆ. ದಿ.ಎಚ್.ವೈ. ಮೇಟಿ ಅವರ ನಿಧನದ ಬಳಿಕ ಅವರ ನಾಲ್ವರು ಪುತ್ರರಲ್ಲಿ ಆರಂಭಗೊಂಡ ಟಿಕೆಟ್ ಫೈಟ್ ವಿಷಯ ಮತ್ತಷ್ಟು ಜಟೀಲವಾಗಿ ಪರಿಣಮಿಸಿದೆ.

ಸಂಧಾನಗಳು ವಿಫಲ:

ಮೇಟಿ ಅವರ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಮತ್ತು ಕೊನೆಯ ಸುಪುತ್ರಿ ಮಹಾದೇವಿ ಮೇಟಿ ಬಾಗಲಕೋಟೆ ವಿಧಾನಸಭೆ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಇವರ ನಡುವೆ ಒಗ್ಗಟ್ಟು ಮೂಡಿಸಲು ಇನ್ನಿಲ್ಲದ ಪ್ರಯತ್ನಗಳ ಜತೆಗೆ ಇವರನ್ನೆ ಮುಂದಿಟ್ಟುಕೊಂಡು ಇವರ ಕುಟುಂಬದ ಆಪ್ತನನ್ನು ಹಣಿಯುವ ಷಡ್ಯಂತ್ರ ಕೂಡ ನಡೆದಿದೆ. ಪರಿಣಾಮವಾಗಿ ಇದುವರೆಗೂ ಕಾಂಗ್ರೆಸ್ ಪ್ರಮುಖರ ಸಮ್ಮುಖದಲ್ಲಿ ಅನೇಕ ಬಾರಿ ಸಂಧಾನ ಮಾತುಕತೆಗಳು ನಡೆದರೂ ಪ್ರಯೋಜನವಾಗಿಲ್ಲ.

ವರಿಷ್ಠರ ನಿರ್ಧಾರ ಅಂತಿಮ:

ಮೊದ ಮೊದಲು ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಸ್ಥರಿಗೆ ಎನ್ನುವ ಹೇಳಿಕೆ ನೀಡುತ್ತಿದ್ದವರು ಇತ್ತೀಚಿನ‌ ದಿನಗಳಲ್ಲಿ ಪಕ್ಷದ ಹೈ ಕಮಾಂಡ್ ನಿರ್ಧಾರ ಅಂತಿಮ ಎನ್ನುವ ನೀತಿಗೆ ಶರಣಾಗಿದ್ದಾರೆ. ಸ್ವತಃ ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿಗಳೂ ಕೂಡ ಈ ವಿಷಯದಲ್ಲಿ ವರಿಷ್ಠರ ನಿರ್ಧಾರ ಅಂತಿಮ ಎನ್ನುವ‌ ಮಾತನ್ನು ಮೊನ್ನೆ ತಾನೆ ಬಾಗಲಕೋಟೆಗೆ ಬಂದಾಗ ಹೇಳಿ‌ ಹೋಗಿದ್ದಾರೆ.

ನಿರಂತರ ವಾಗ್ದಾಳಿ:

ಏತನ್ಮಧ್ಯೆ ಮಹಾದೇವಿ ಮೇಟಿ ಅವರು ಸಿಎಂ ಆಪ್ತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಟೀಕೆ ಹಾಗೆ ಮುಂದುವರಿಸಿದ್ದಾರೆ. ಹೊರಗಿನವರ ಹಸ್ತಕ್ಷೇಪ ಬೇಡ ಎನ್ನುತ್ತಲೇ ಪ್ರಬಲ‌ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಬಂದಿದ್ದಾರೆ. ಟಿಕೆಟ್ ಕೊಡದೇ ಹೋದಲ್ಲಿ ಬಂಡಾಯ ಸ್ಪರ್ಧೆಯ ಮಾತನ್ನು ಆಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸೌಹಾರ್ದ ಮಾತುಕತೆಯಲ್ಲಿ ತಮ್ಮ ಗಟ್ಟಿ ನಿಲುವನ್ನು ಮಂಡಿಸಿದ್ದಾರೆ. ಮಹಾದೇವಿ ಮೇಟಿ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆ ಕಾಣದೆ ಇರುವುದು ಟಿಕೆಟ್ ಹಂಚಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಜಟೀಲಗೊಳಿಸಿದೆ.

ಫಲಪ್ರದವಾಗದ ಮಾತುಕತೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಟಿ ಅವರ ಕುಟುಂಬದ ಒಡನಾಡಿಗಳು. ಅವರ ಕುಟುಂಬದ ಎಲ್ಲರನ್ನೂ ಬಲ್ಲವರು. ಅವರ ಮಾತನ್ನು ಮೇಟಿ‌ ಕುಟುಂಬಸ್ಥರಲ್ಲಿ ಯಾರೂ ತಳ್ಳಿ ಹಾಕಲಾರರು ಎನ್ನುವ ವಿಶ್ವಾಸದ ಹಿನ್ನೆಲೆಯಲ್ಲಿಯೇ ಮೇಟಿ ಅವರ ಪುತ್ರರನ್ನು ಮಾತುಕತೆಗಾಗಿ ಬೆಂಗಳೂರಿಗೆ ಕರೆಯಿಸಿಕೊಂಡಿದ್ದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬುಧವಾರ ನಡೆಯಲಿರುವ ಮಾತುಕತೆಯಲ್ಲಿಯೇ ಟಿಕೆಟ್ ಫೈಟ್ ಕೊನೆಗೊಳ್ಳಲಿದೆ ಎನ್ನುವ ವಿಶ್ವಾಸ ಬಹುತೇಕರದ್ದಾಗಿತ್ತು.

ಸಿಎಂ‌ ಮುಂದೆಯೂ ಬಂಡಾಯದ ಮಾತು:

ಮಾತುಕತೆ ವೇಳೆ ಮಹಾದೇವಿ ಮೇಟಿ‌ ತಮ್ಮ ನಿಲುವಿಗೆ ಅಂಟಿಕೊಂಡ ಹಿನ್ನೆಲೆಯಲ್ಲಿ ಒಟ್ಟಾಭಿಪ್ರಾಯಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಟಿಕೆಟ್ ತಮಗೇ ಬೇಕು. ಟಿಕೆಟ್ ಸಿಗದಿದ್ದಲ್ಲಿ ಬಂಡಾಯ ಎನ್ನುವ‌ ಮಾತನ್ನು ಆಡಿದ್ದಾರೆ. ರಾಜಕಾರಣದ ಮನೆತನದಲ್ಲಿಯೇ ಇದ್ದರೂ ರಾಜಕಾರಣದಿಂದ ಗಾವುದ ದೂರವೇ ಇದ್ದ ಮಹಾದೇವಿ ಮೇಟಿ ಅವರಲ್ಲಿ ಇಂತಹ ಕಠಿಣ ನಿಲುವು ಚಿಗುರೊಡೆಯಲು ಕಾರಣ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿ ಕಾಡಲಾರಂಭಿಸಿದೆ.

ಕಾಣದ ಕೈಗಳ ಬೆಂಬಲ:

ಟಿಕೆಟ್ ನೆಪವಾಗಿಟ್ಟುಕೊಂಡು ಹೊರಗಿನವರ ಹಸ್ತಕ್ಷೇಪ ಕ್ಷೇತ್ರದಲ್ಲಿ ಬೇಡ. ಹೊರಗಿನವರ ಮಾತು ಕೇಳುವವರಿಗೆ ಟಿಕೆಟ್ ಬೇಡ. “ನನಗೆ ಟಿಕೆಟ್ ಕೊಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಸಿಎಂ ಆಪ್ತನ ವಿರುದ್ಧ ನಡೆಸುತ್ತಿದ್ದ ವಾಗ್ದಾಳಿಯ ಹಿಂದೆ ಅವರದೇ ಪಕ್ಷದ ಕೆಲ ಪ್ರಮುಖರ ಕುಮ್ಮಕ್ಕು ಕಾರಣವಂತೆ. ಪಕ್ಷದಲ್ಲಿ ಸಿಎಂ ಆಪ್ತನ ಹಿಡಿತ ಸಡಿಲುಗೊಳಿಸುವ ಪ್ರಯತ್ನವೂ ಟಿಕೆಟ್ ಫೈಟ್ ಹಿಂದೆ ಇದೆ ಎಂದು ಹೇಳಲಾಗುತ್ತಿದೆ. ಪಕ್ಷದಲ್ಲಿ ಒಳೊಳಗೆ ಸಿಎಂ ಆಪ್ತನ ವಿರುದ್ಧ ಬಹುದೊಡ್ಡ ಗುಂಪೊಂದು ಕೆಲಸ ಮಾಡುತ್ತಿದೆ. ಆ ಗುಂಪು ಈ ವಿಷಯದಲ್ಲಿ ಎಷ್ಟರ‌ ಮಟ್ಟಿಗೆ ಯಶಸ್ಸು ಕಾಣಲಿದೆ ಎನ್ನುವುದು ಕುತೂಹಲಕರ ಸಂಗತಿ ಆಗಿದೆ.

ಬಂಡಾಯ ಗ್ಯಾರಂಟಿ:

“ನನಗೆ ಟಿಕೆಟ್ ಕೊಡಿ, ನನಗೆ ಕೊಡದೆ ಉಮೇಶ ಅವರಿಗೆ ಕೊಟ್ಟಲ್ಲಿ, ಅವರನ್ನು ಬೆಂಬಲಿಸುತ್ತೇನೆ. ಮಲ್ಲಿಕಾರ್ಜುನ ಅವರಿಗೆ ಕೊಟ್ಟಲ್ಲಿ ಬಂಡಾಯ ಗ್ಯಾರಂಟಿ” ಎನ್ನುವ ಹೇಳಿಕೆ ನೀಡಿದ್ದ ಅವರು ಈಗ ತಮಗೆ ಟಿಕೆಟ್ ಬೇಕು ಎನ್ನುತ್ತಿದ್ದಾರೆ. ಇವರ ಜತೆಗೆ ಉಮೇಶ ಮೇಟಿ ಅವರ ಬೆಂಬಲಿಗರು, ಉಮೇಶ ಅವರಿಗೆ ಟಿಕೆಟ್ ಕೊಡದಿದ್ದಲ್ಲಿ ಪಕ್ಷ ಬಿಟ್ಟು ಹೋಗುವ ಮಾತನ್ನು ಆಡಿದ್ದಾರೆ. ಮಲ್ಲಿಕಾರ್ಜುನ ಬೆಂಬಲಿಗರು ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೊಟ್ಟಲ್ಲಿ ಮಾತ್ರ ಪಕ್ಷದ ಗೆಲವು ಸಾಧ್ಯವಾಗಲಿದೆ ಎನ್ನುವ ವಾದವನ್ನು ಪಕ್ಷದ ಪ್ರಮುಖರ ಮುಂದೆ ಉಸಿರಿದ್ದಾರೆ.

ಸಿಎಂ ಹಿತೋಕ್ತಿ:

ಮಹಾದೇವಿ ಮೇಟಿ ತಾವು ಚುನಾವಣೆ ಅಖಾಡಕ್ಕಿಳಿಯುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದು ಟಿಕೆಟ್ ಫೈಟ್ ನ್ನು ಮತ್ತಷ್ಟು ಟಫ್ ಆಗಿಸಿದೆ. ಸದ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಂದುಕೊಂಡಷ್ಟು ಸುಲಭವಾಗಿಲ್ಲ. ಹಾಗಂತ ಪರಿಹಾರ ಕಂಡುಕೊಳ್ಳಲು ಇರಲೂ ಆಗಲ್ಲ. ಸಮಸ್ಯೆ ಪರಿಹಾರದ ನೆಪದಲ್ಲಿ ಇತರರಿಗೆ ಟಿಕೆಟ್ ಎನ್ನುವ ಕುರಿತು ಚಿಂತನೆಯನ್ನೂ ಮಾಡುವಂತಿಲ್ಲ. ಹಾಗೇನಾದರೂ ಅದಲ್ಲಿ ಕಾಂಗ್ರೆಸ್ ಮೇಟಿ ಕುಟುಂಬಕ್ಕೆ ಅನ್ಯಾಯ‌ ಮಾಡಿತು ಎನ್ನುವುದೆ ವಿರೋಧಿಗಳ ಪಾಲಿಗೆ ಬಹುದೊಡ್ಡ ಅಸ್ತ್ರವಾಗಲಿದೆ. ಪರಿಸ್ಥಿತಿ ಸೂಕ್ಷ್ಮವಾಗಿದೆ. ಪರಿಹಾರ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top