ದಕ್ಷಿಣಾಯನ ಕಳೆದು ಉತ್ತರಾಯಣ ಆರಂಭದ ಹೊತ್ತಲ್ಲೇ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯದ ಕಹಳೆ ಮೊಳಗಿದೆ. ದಿ. ಶಾಸಕ ಎಚ್.ವೈ. ಮೇಟಿ ಅವರ ನಿಧನದ ಬಳಿಕ ಕ್ಷೇತ್ರದ ಕಾಂಗ್ರೆಸ್ಸಿನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಬರಲಿರುವ ಉಪ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿ ಒಗ್ಗಟ್ಟು ಪ್ರದರ್ಶಿಸಬೇಕಾದ ಹೊತ್ತಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ.
ಕಾಂಗ್ರೆಸ್ ಗೆ ಗೆಲ್ಲುವ ಅನಿವಾರ್ಯತೆ:
ಮುಂಬರುವ ಉಪಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರವನ್ನು “ಕೈ” ತೆಕ್ಕೆಯಲ್ಲೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಆಡಳಿತಾರೂಢ ಕಾಂಗ್ರೆಸ್ಗೆ ಅನಿವಾರ್ಯವಾಗಿದೆ. ಎರಡುವರೆ ವರ್ಷಗಳ ಆಡಳಿತಕ್ಕೆ ಕೈಗನ್ನಡಿ ಎಂದೇ ವಿಶ್ಲೇಷಿಸಲಾಗುತ್ತಿರುವ ಈ ಉಪಚುನಾವಣೆ ಅಧಿಕಾರಸ್ಥ ಕಾಂಗ್ರೆಸ್ಸಿಗೆ ಸವಾಲಿನ ಪ್ರಶ್ನೆಯಾಗಿದೆ. ಅದಕ್ಕಾಗಿ ಈಗಲೇ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎನ್ನುವ ಚರ್ಚೆ ಜೋರಾಗಿದೆ. ಮೇಟಿ ಕುಟುಂಬಸ್ಥರಲ್ಲಿ ಯಾರಿಗೆ ಟಿಕೆಟ್ ಎನ್ನುವ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಕುಟುಂಬಸ್ಥರೇ ಕುಳಿತು ಚರ್ಚಿಸಿ ತಮ್ಮಲ್ಲೇ ಟಿಕೆಟ್ ಯಾರಿಗೆ ಎನ್ನುವುದನ್ನು ಅಂತಿಮಗೊಳಿಸಬೇಕಿದೆ. ಆದರೆ ಆ ಕೆಲಸ ಇನ್ನೂ ಆಗುತ್ತಿಲ್ಲ.
ಅದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮೇಟಿ ಅವರ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ ಬೆಂಬಲಿಗರು ಒಬ್ಬೊಬ್ಬರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೇಟಿ ಸಹೋದರರು ಕೂಡ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರ ನಡುವೆ ನಡೆಯುತ್ತಿರುವ ಪೈಪೋಟಿಗೆ ತೆರೆ ಎಳೆಯುವ ಕೆಲಸ ಮಾಡುತ್ತಿಲ್ಲ. ಹಾಗಾಗಿ ಮೇಟಿ ಕುಟಂಬಸ್ಥರಲ್ಲೇ ಯಾರಿಗೆ ಟಿಕೆಟ್ ಎನ್ನುವ ಗೊಂದಲ ಮುಂದುವರಿದಿದೆ. ಜತೆಗೆ ಇತರ ಅನೇಕ ಮುಖಂಡರು ಟಿಕೆಟ್ ಮೇಲೆ ಕಣ್ಣಿಟ್ಟು, ಅವಕಾಶ ಸಿಕ್ಕಲ್ಲಿ ಒಂದು ಕೈ ನೋಡೋಣ ಎನ್ನುವ ಸಿದ್ಧತೆಯಲ್ಲಿದ್ದಾರೆ.
ಬಂಡಾಯದ ಬಾವುಟ:
ಈಗಾಗಲೇ ಪಿಡಬ್ಲುಡಿ ಮಂತ್ರಿ ಸತೀಶ್ ಜಾರಕಿಹೊಳಿ ಬಾಗಲಕೋಟೆಗೆ ಆಗಮಿಸಿ ಪಕ್ಷದ ಪ್ರಮುಖರ ಸಭೆ ನಡೆಸಿ, ಅಭಿಪ್ರಾಯಗಳನ್ನು ಆಲಿಸಿ, ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಸಲಹೆ ಮಾಡಿ ಹೋಗಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಬೇಕಾದ ಸಮಯದಲ್ಲಿ ಏಕಾಏಕಿ ಬಂಡಾಯದ ಬಾವುಟ ಹಾರಿರುವುದು ಕ್ಷೇತ್ರದಲ್ಲಿನ ಕಾರ್ಯಕರ್ತರಲ್ಲಿ ತಳಮಳವನ್ನುಂಟು ಮಾಡಿದೆ.
ಬಾಗಲಕೋಟೆ ನಗರ ಬ್ಲಾಕ್ ಸಮಿತಿ ಅಧ್ಯಕ್ಷರ ನೇಮಕಾತಿ ಆದೇಶ ಹೊರಬಿದ್ದದ್ದೆ ಬಂಡಾಯದ ರಣಕಹಳೆಗೆ ಕಾರಣವಾಗಿದೆ. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಜಾಕ್ ಬೆವನೂರ ಅವರು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಆರಂಭಗೊಂಡಿತ್ತು. ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರ ನೇಮಕ ತಡೆ ಹಿಡಿಯಲಾಗಿತ್ತು.
ಸಿಡಿದೆದ್ದ ಅಲ್ಪಸಂಖ್ಯಾತ ಮುಖಂಡರು:
ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೂ ಬಾರದೇ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಆದೇಶ ಹೊರ ಬಿದ್ದಿದೆ. ಜಿಲ್ಲಾಧ್ಯಕ್ಷರ ಗಮನಕ್ಕೂ ಬಾರದೇ ನೇಮಕಾತಿ ನಡೆದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಬಾಗಲಕೋಟೆ ಕಾಂಗ್ರೆಸ್ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸಲಾರಂಭಿಸಿದೆ.
ಪಕ್ಷದ ಮುಖಂಡರು ಹಾಗೂ ಜಿಲ್ಲಾಧ್ಯಕ್ಷರ ಗಮನಕ್ಕೆ ಬಾರದೇ ಅಕ್ಬರ್ ಮುಲ್ಲಾ ಅವರನ್ನು ಕೆಪಿಸಿಸಿ ಹೇಗೆ ನೇಮಕ ಮಾಡಿತು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಪಕ್ಷದಲ್ಲಿ ಉಪಚುನಾವಣೆ ಪ್ರಕ್ರಿಯೆಗಳು ಜೋರಾಗಿರುವಾಗಲೇ ಬಂಡಾಯದ ಬಿರುಗಾಳಿ ಬೀಸಲಾರಂಭಿಸಿದೆ. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೂ ಮುನ್ನ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ನಿರ್ಧಾರ ಮಾಡಬೇಕಿತ್ತು. ಅದು ಬಿಟ್ಟು ಏಕಾಏಕಿ ಅಕ್ಬರ್ ಮುಲ್ಲಾ ಅವರನ್ನು ನೇಮಕ ಮಾಡಿರುವುದಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರೇ ಸಿಡಿದೆದ್ದಿದ್ದಾರೆ. ಕ್ಷೇತ್ರದವರಲ್ಲದ ಹೋರಗಿನವರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಪಕ್ಷದ ಮುಖಂಡರಿಗೆ ಪತ್ರ:
ಪಕ್ಷದಲ್ಲಿನ ಅಲ್ಪಸಂಖ್ಯಾತ ಮುಖಂಡರೂ ಸೇರಿದಂತೆ ಇತರರು ಸೇರಿದ ನೇಮಕಾತಿ ತಡೆಯುವಂತೆ ಜಿಲ್ಲಾ ಮುಸ್ಲಿಂ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವೇದಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರಿಗೆ ಖಾರವಾಗಿ ಪತ್ರ ಬರೆದಿದ್ದಾರೆ.
ವ್ಯತಿರಿಕ್ತ ಪರಿಣಾಮದ ಎಚ್ಚರಿಕೆ:
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದಲ್ಲಿ ಆಗಿರುವ ಅನ್ಯಾಯ ಸರಿಪಡಿಸದೇ ಹೋದಲ್ಲಿ ಉಪಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎನ್ನುವ ನೇರ ಎಚ್ಚರಿಕೆ ನೀಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನೂ ಗಣನೆಗೆ ತೆಗೆದುಕೊಳ್ಳದೇ ನಗರ ಬ್ಲಾಕ್ ಅಧ್ಯಕ್ಷರ ನೇಮಕಾತಿ ನಡೆದಿರುವ ಹಿಂದಿನ ಶಕ್ತಿ ಯಾವುದು ಎನ್ನುವುದು ಈಗ ಯಕ್ಷಪ್ರಶೆಯಾಗಿ ಕಾಡಲಾರಂಭಿಸಿದೆ. ಉಪಚುನಾವಣೆ ಹೊತ್ತಲ್ಲಿ ಈ ನೇಮಕದ ಅಗತ್ಯವಿತ್ತೇ ? ಕಾಂಗ್ರೆಸ್ ಮತಬ್ಯಾಂಕ್ ಎಂದೇ ಪರಿಗಣಿಸಲಾಗುವ ಅಲ್ಪಸಂಖ್ಯಾತ ಮುಖಂಡರು ಸೇರಿದಂತೆ ಪಕ್ಷದ ಪ್ರಮುಖರೊಂದಿಗೆ ಚರ್ಚಿಸದೇ ನೇಮಕ ಮಾಡುವ ಅಗತ್ಯವೇನಿತ್ತು ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಉತ್ತರದಾಯಿತ್ವಕ್ಕಾಗಿನ ಪೈಪೋಟಿ:
ಎಚ್.ವೈ. ಮೇಟಿ ಅವರ ನಿಧನದ ಬಳಿಕ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಮೇಲೆ ರಾಜಕೀಯ ಹಿಡಿತ ಸಾಧಿಸಬೇಕು ಎನ್ನುವ ಪೈಪೋಟಿ ಪಕ್ಷದ ಕೆಲ ಮುಖಂಡರ ನಡುವೆ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಉತ್ತರದಾಯಿತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿಯ ಫಲವೇ ಬಾಗಲಕೋಟೆ ನಗರ ಬ್ಲಾಕ್ ಅಧ್ಯಕ್ಷರ ನೇಮಕದ ಹಿಂದಿನ ಮರ್ಮ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಕ್ಷೇತ್ರದ ಉತ್ತರದಾಯಿತ್ವಕ್ಕಾಗಿ ಪ್ರಮುಖ ಮುಖಂಡರ ನಡುವೆ ತೆರೆಮರೆಯಲ್ಲಿ ನಡೆಯುತ್ತಿರುವ ಹಾವು- ಏಣಿಯಾಟದ ಪರಿಣಾಮ ಉಪಚುನಾವಣೆ ಮೇಲೆ ಆಗಬಾರದು ಎನ್ನುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಅಭಿಮಾನಿಗಳದ್ದಾಗಿದೆ. ಯಾರದೋ ಒತ್ತಡಕ್ಕಾಗಿ ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ನೇಮಕದ ಅಗತ್ಯವಿರಲಿಲ್ಲ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಜೋರಾಗಿವೆ.
- ವಿಠ್ಠಲ ಆರ್. ಬಲಕುಂದಿ



