ಬಾಗಲಕೋಟೆ: ಪತರಗುಟ್ಟುವ ಚಳಿಯಲ್ಲೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕಾವು ಶುರುವಾಗಿದೆ. ಪ್ರತಿಪಕ್ಷ ಬಿಜೆಪಿಯಲ್ಲಿನ ಸುದೀರ್ಘ ಕಾಲಿನ ಬಣ ಬಡಿದಾಟ ಟಿಕೆಟ್ ರಾಜಕಾರಣದಲ್ಲೂ ಕಾಣಿಸಿಕೊಂಡಿದೆ. ಇದುವರೆಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರು ಮಾತ್ರ ಬಿಜೆಪಿಯಲ್ಲಿ ಕೇಳಿ ಬರುತ್ತಿತ್ತು. ಇದೀಗ ಬಿಜೆಪಿಯಲ್ಲಿನ ಚರಂತಿಮಠರ ವಿರೋಧಿ ಬಣದಿಂದಲೂ ಮತ್ತೊಂದು ಹೆಸರು ಸಾಮಾಜಿಕ ಜಾಲ ತಾಣದಲ್ಲಿ ಓಡಾಡತೊಡಗಿದೆ.
ಡಾ. ಮಾನೆ ಹೆಸರು ಮುನ್ನೆಲೆಗೆ:
ಪ್ರತಿಪಕ್ಷ ಬಿಜೆಪಿಯಲ್ಲಿನ ಬಣ ಬಡಿದಾಟ ಸದ್ದಿಲ್ಲದೆ ಟಿಕೆಟ್ ವಿಷಯದಲ್ಲೂ ಸೇರಿಕೊಂಡಿದೆ. ಮಾಜಿ ಶಾಸಕ ವೀರಣ್ಣ ಚರಂತಿಮಠರ ವಿರೋಧಿ ಬಣದಿಂದ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಮುಖಂಡ ಡಾ. ಶೇಖರ ಮಾನೆ ಹೆಸರು ಓಡಾಡಲಾರಂಭಿಸಿದೆ. ತಣಿಯದ ಬಣ ರಾಜಕಾರಣದ ಮತ್ತೊಂದು ಮೆಟ್ಟಿಲು ಇದಾಗಿದೆ.
ಉಪಚುನಾವಣೆ ಅಖಾಡಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠರ ಆಯ್ಕೆ ಬಹುತೇಕ ಅಂತಿಮ ಎನ್ನುವ ವಾತಾವರಣದ ಮಧ್ಯೆ ಡಾ. ಶೇಖರ ಮಾನೆ ಅವರ ಹೆಸರು ವಿರೋಧಿ ಬಣದಿಂದ ಮುನ್ನಲೆಗೆ ಬಂದಿರುವುದು ಪಕ್ಷದಲ್ಲಿ ಕಸವಿಸಿಗೆ ಕಾರಣವಾಗಿದೆ. ಇವರ ಜತೆಗೆ ಜಿಲ್ಲಾ ಬಿಜೆಪಿ ಯುವಮೋರ್ಚಾ ಮಾಜಿ ಅಧ್ಯಕ್ಷ ವೀರಣ್ಣ ಹಳೇಗೌಡರ ಕೂಡ ಟಿಕೆಟ್ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.
ಒಗ್ಗಟ್ಟು ಬದಲಿಗೆ ಕಗ್ಗಂಟು :
ಬಣಕ್ಕೊಬ್ಬರ ಹೆಸರು ಟಿಕೆಟ್ಗಾಗಿ ಚಾಲ್ತಿಗೆ ಬಂದಿರುವುದು ಪಕ್ಷದಲ್ಲಿನ ಅಸಮಾಧಾನ ಶಮನವಾಗುವ ಬದಲಿಗೆ ಇನ್ನಷ್ಟು ಕಗ್ಗಂಟನ್ನು ಸೃಷ್ಟಿಸಲಿದೆ ಎನ್ನುವ ಭಾವನೆ ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಲಾರಂಭಿಸಿದೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿನ ಬಣ ಬಡಿದಾಟಕ್ಕೆ ಪಕ್ಷದ ವರಿಷ್ಠರು ಮದ್ದು ಅರಿಯದೇ ನಿರ್ಲಕ್ಷಿಸಿರುವುದು ಹೊಸಹೊಸ ಸಮಸ್ಯೆಗಳು ಹುಟ್ಟಿಕೊಳ್ಳಲಿವೆ ಎನ್ನುವುದು ಕಾರ್ಯಕರ್ತರ ಅಂದಾಜು.
ಕೇಸರಿ ಕೋಟೆಯಲ್ಲಿ ಒಗ್ಗಟ್ಟು ಮೂಡಿದಲ್ಲಿ ಮಾತ್ರ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ನ್ನು ಸುಲಭವಾಗಿ ಮಣಿಸಬಹುದು ಎನ್ನುವ ವಾತಾವರಣ ಕಾರ್ಯಕರ್ತರ ವಲಯದಲ್ಲಿದೆ. ದಿನಗಳೆದಂತೆ ಇದು ಉಲ್ಬಣವಾಗುತ್ತ ಹೋದಲ್ಲಿ ಏನೇ ತೇಪೆ ಹಚ್ಚುವ ಕೆಲಸ ನಡೆದರೂ ಪ್ರಯೋಜನಕ್ಕೆ ಬಾರದು ಎನ್ನುವ ಬೇಸರ ಬಾವ ಕಾರ್ಯಕರ್ತರಲ್ಲಿ ಒಡಮೂಡುತ್ತಿದೆ.
ಪಾಠ ಕಲಿಯದ ಮುಖಂಡರು:
ಪಕ್ಷದ ಮುಖಂಡರ ನಡುವಿನ ಪ್ರತಿಷ್ಠೆ ರಾಜಕಾರಣಕ್ಕೆ ಕೇಸರಿ ಪಡೆಯ ಪ್ರಬಲ ಕೋಟೆ ಅಲ್ಲಾಡುವಂತಾಗಬಾರದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖಂಡರ ನಡುವಿನ ಅಸಮಧಾನ ಮತ್ತು ಬಂಡಾಯದಿಂದ ಏನೆಲ್ಲ ಕಹಿ ಅನುಭವ ಆಗಿದ್ದರೂ ಪರಿಸ್ಥಿತಿ ಸುಧಾರಿಸುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯದ ಸ್ಥಿತಿ ಹೀಗೆ ಮುಂದುವರಿದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಡಾ. ಶೇಖರ ಮಾನೆ ಅವರು ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ ಅವರ ಕಟ್ಟಾ ಬೆಂಬಲಿಗರು ಎನ್ನುವುದರಲ್ಲಿ ಎರಡು ಮಾತಿಲ್ಲ. ಪೂಜಾರ ಅವರ ಅಣತಿಯಂತೆ ಡಾ. ಮಾನೆ ಅವರು ಪಕ್ಷದ ಟಿಕೆಟ್ ಕೇಳಲು ಸಜ್ಜಾಗಿದ್ದಾರೆ. ಬರುವ ದಿನಗಳಲ್ಲಿ ಪಕ್ಷದಲ್ಲಿ ಇನ್ನಷ್ಟು ಜನ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡು ಅನಗತ್ಯ ಸಮಸ್ಯೆ ಸೃಷ್ಟಿಗೆ ಕಾರಣವಾಗಲಿದೆ ಎನ್ನುವ ಆತಂಕ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.
ವರಿಷ್ಠರ ಮೇಲೆ ಬೇಸರ:
ಆಡಳಿತ ಪಕ್ಷದ ಅಭ್ಯರ್ಥಿಯನ್ನು ಚುನಾವಣೆ ಅಖಾಡದಲ್ಲಿ ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇಡೀ ಸರ್ಕಾರವೇ ಮುಂದೆ ನಿಂತು ಚುನಾವಣೆ ನಡೆಸಲಿದೆ. ಅದನ್ನು ಸಮರ್ಥವಾಗಿ ಎದುರಿಸಲು, ಬಿಜೆಪಿ ಪಾಳೆಯದಲ್ಲಿನ ಬಣದ ಬಡಿದಾಟಕ್ಕೆ ವರಿಷ್ಠರು ಕಡಿವಾಣ ಹಾಕಬೇಕಿದೆ. ಆಡಳಿತ ಪಕ್ಷದಲ್ಲಿ ಇರಬೇಕಾದ ಪ್ರತಿಷ್ಠೆ ರಾಜಕಾರಣ ಪ್ರತಿಪಕ್ಷದಲ್ಲಿ ನಡೆಯುತ್ತಿರುವುದು ಕಮಲಪಡೆ ಕಾರ್ಯಕರ್ತರಲ್ಲಿ ಸಾಕಷ್ಟು ಬೇಸರಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿನ ಪಕ್ಷದ ಮುಖಂಡರು ಬಹಿರಂಗವಾಗಿ ಕಿತ್ತಾಡಿಕೊಂಡರೂ ವರಿಷ್ಠರು ಏಕೆ ಮೌನಕ್ಕೆ ಶರಣಾಗಿದ್ದಾರೆ ಎನ್ನುವುದು ಕಾರ್ಯಕರ್ತರಿಗೆ ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಬಹಿರಂಗ ಆರೋಪ, ಪ್ರತ್ಯಾರೋಪಗಳಿಗೆ ಕಡಿವಾಣ ಬಿದ್ದಿದ್ದರೂ ಮುಸುಕಿನ ಗುದ್ದಾಟ ಮಾತ್ರ ಹಾಗೆ ಇದೆ. ಅನಿರೀಕ್ಷಿತವಾಗಿ ಎದುರಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯನ್ನು ಪಕ್ಷ ಒಗ್ಗಟ್ಟಿನಿಂದ ಎದುರಿಸಬೇಕಿದೆ.
ಇಂತಹ ವಾತಾವರಣದಲ್ಲಿ ಮೇಲ್ಮನೆ ಸದಸ್ಯ ಪಿ.ಎಚ್.ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ಇಬ್ಬರೂ ಕಡೆಣಿಸುವಂತಿಲ್ಲ. ಆಡಳಿತ ಪಕ್ಷದ ವಿರುದ್ಧದ ಹೋರಾಟಕ್ಕೆ ಇಳಿಯಲು ಶತಾಯ -ಗತಾಯ ಪಕ್ಷದ ವರಿಷ್ಠರು ಉಭಯತರ ಮಧ್ಯೆ ರಾಜಿಸಂಧಾನ ನಡೆಸಲೇ ಬೇಕಿದೆ.
ಹೊರಗಿನ ಶಕ್ತಿ ದೂರವಿಡಿ:
ಕ್ಷೇತ್ರದ ಒಳಗಿನ ಅಸಮಾಧಾನ ಶಮನಕ್ಕೂ ಮೊದಲು ಪಕ್ಷದ ವರಿಷ್ಠರ ಹೊರಗಿನವರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕಿದೆ. ಹೊರಗಿನವರ ಕುಮ್ಮಕ್ಕಿನಿಂದಲೇ ಪಕ್ಷದ ಮುಖಂಡರ ನಡುವಿನ ರಾಜಕೀಯ ವೈಷಮ್ಯ ತಣ್ಣಗಾಗುತ್ತಿಲ್ಲ ಎನ್ನುವ ಆರೋಪ ಕೂಡ ವ್ಯಾಪಕವಾಗಿದೆ. ಕ್ಷೇತ್ರದ ಹೊರಗಿನ ಶಕ್ತಿಗಳನ್ನು ದೂರವಿಟ್ಟು ಸ್ಥಳೀಯ ಮುಖಂಡರ ಮಧ್ಯೆ ರಾಜಿಸಂಧಾನ ನಡೆಯಬೇಕು. ಉತ್ತರಾಯಣ ಆರಂಭದ ಹೊತ್ತಿಗೆ ಕ್ಷೇತ್ರದ ಕೇಸರಿ ಪಾಳೆಯದಲ್ಲಿ ಒಗ್ಗಟ್ಟಿನ ಮಂತ್ರ ಕೇಳಿಸಬೇಕು ಎನ್ನುವುದು ಬಹುತೇಕ ಕಾರ್ಯಕರ್ತರ ಆಶಯವಾಗಿದೆ.
ಪಕ್ಷದ ವರಿಷ್ಠರು ಕಾರ್ಯಕರ್ತರ ಆಶಯಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಸ್ವಲ್ಪವೇ ನಿರ್ಲಕ್ಷಿಸಿದರೂ ಇದುವರೆಗಿನ ಬಣ ಬಡಿದಾಟ ಟಿಕೆಟ್ ಬಡಿದಾಟಕ್ಕೂ ಕಾರಣವಾಗಿ, ವ್ಯತಿರಿಕ್ತ ಬೆಳವಣಿಗೆಗಳಿಗೆ ನಾಂದಿ ಹಾಡಬಾರದು ಎನ್ನುವುದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತರ ಕಳಕಳಿ ಆಗಿದೆ.
- ವಿಠ್ಠಲ ಆರ್. ಬಲಕುಂದಿ



