ಮೇಟಿ ಪುತ್ರರ ನಡೆ; ಕಾರ್ಯಕರ್ತರಲ್ಲಿ ಆತಂಕ

ಬಾಗಲಕೋಟೆ: ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಅವರು ಜಿಲ್ಲೆಗೆ ಭೇಟಿ ನೀಡಿದ ಬಳಿಕ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ನಡೆಯಬೇಕಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ದಿ. ಶಾಸಕ ಎಚ್.ವೈ. ಮೇಟಿ ಅವರ ನಿಧನದ ಬಳಿಕ ನಡೆಯುತ್ತಿರುವ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನ್ನು ಅವರ ಕುಟಂಬಸ್ಥರಿಗೆ ನೀಡಬೇಕು ಎನ್ನುವ ವಾದ ಸಾಕಷ್ಟು ಪುಷ್ಠಿ ಪಡೆದುಕೊಂಡಿದೆ.

ವಿಳಂಬದಿಂದ ಹೊಸ ಲೆಕ್ಕಾಚಾರ:

ಮೇಟಿ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡಬೇಕು ಎನ್ನುವ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ವಾದ ಸರಿಯಾಗಿದ್ದರೂ ಮೇಟಿ ಅವರ ಪುತ್ರರಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಇನ್ನೂ ಅಂತಿಮ ನಿರ್ಣಯವಾಗಿಲ್ಲ. ಮೇಟಿ ಕುಟುಂಬಸ್ಥರೆ ಸೇರಿ ಈ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ. ಅವರ ನಿರ್ಧಾರ ಹೊರ ಬರುವವರೆಗೂ ಊಹಾಪೋಹಗಳದ್ದೇ ಆಟವಾಗಲಿದೆ. ಒಂದೆರಡು ದಿನಗಳಲ್ಲಿ ಈ ಕುರಿತ ಒಂದು ಮಹತ್ವದ ನಿರ್ಧಾರ ಹೊರಬರಬಹುದು ಎನ್ನುವ ನಿರೀಕ್ಷೆಯಲ್ಲಿ ಪಕ್ಷದ ಮುಖಂಡರು ಇದ್ದಾರೆ. ಮೇಟಿ ಅವರ ಪುತ್ರರಿಬ್ಬರೂ ಸೇರಿ ಸ್ಪಷ್ಟ ನಿರ್ಧಾರಕ್ಕೆ ಬರುವುದು ವಿಳಂಬವಾದಲ್ಲಿ, ಅವರೇ ಹೊಸ ಲೆಕ್ಕಾಚಾರಗಳ ಸೃಷ್ಟಿಗೆ ಅವಕಾಶ ಕಲ್ಪಿಸಿದಂತಾಗಲಿದೆ.

ಮೇಟಿ ಅವರು ಇರುವಷ್ಟು ದಿನಗಳ ಕಾಲ ಅವರ ಪುತ್ರರು ಪಕ್ಷ ಸಂಘಟನೆಯಲ್ಲಾಗಲಿ, ರಾಜಕಾರಣದಲ್ಲಾಗಲಿ ಅಷ್ಟೊಂದು ಸಕ್ರೀಯರಾಗಿರಲಿಲ್ಲ. ಹಾಗಾಗಿ ಸದ್ಯದ ವಿಳಂಬ ನೀತಿ ವ್ಯತಿರಿಕ್ತ ರಾಜಕೀಯ ಬೆಳವಣಿಗೆಗೂ ಅವಕಾಶ ಕಲ್ಪಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚೆಗಷ್ಟೆ, ಸಚಿವ ಸತೀಶ್ ಜಾರಕಿಹೊಳಿ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ಟಿಕೆಟ್ ಯಾರಿಗೆ ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಅದಕ್ಕೂ ಮುನ್ನ ಪಕ್ಷದ ಜಿಲ್ಲೆಯ ಮುಖಂಡರು ಹೆಸರುಗಳನ್ನು ಶಿಫಾರಸ್ಸು ಮಾಡಬೇಕಿದೆ. ಎಲ್ಲರೂ ನಿರ್ಧಾರ ಮಾಡಿದ ನಂತರವಷ್ಟೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಅಂತಿಮವಾಗಿ ಅಭ್ಯರ್ಥಿ ಯಾರು ಎನ್ನುವ ನಿರ್ಧಾರ ಮಾಡಲಿದ್ದಾರೆ. ಒಟ್ಟಾಗಿ ಕೆಲಸ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎನ್ನುವ ಕಿವಿಮಾತು ಹೇಳಿ ಹೋಗಿದ್ದಾರೆ.

ಇತರರು ಟಿಕೆಟ್‌ಗಾಗಿ ಪ್ರಯತ್ನ:

ಅಭ್ಯರ್ಥಿ ಆಗುವ ವಿಷಯದಲ್ಲಿ ಮೇಟಿ ಪುತ್ರರ ವಿಳಂಬ ನೀತಿಯಿಂದಾಗಿ ಹೊಸ ಲೆಕ್ಕಾಚಾರಗಳಿಗೂ ರೆಕ್ಕೆಪುಕ್ಕಗಳು ಹುಟ್ಟಿಕೊಳ್ಳಲಿವೆ. 2028 ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಕೈ ನೋಡೋಣ ಎನ್ನುವವರೆಲ್ಲ ಈಗಲೇ ಟಿಕೆಟ್‌ಗಾಗಿ ಪ್ರಯತ್ನಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಧಿಕಾರ ರಾಜಕಾರಣದಿಂದ ದೂರವಾಗಿರುವ ಹಿರಿಯ ಮುಖಂಡರು, ಭವಿಷ್ಯದಲ್ಲಿ ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದು, ಅವರೆಲ್ಲ ಈಗಲೇ ಟಿಕೆಟ್‌ಗಾಗಿ ಪಕ್ಷದ ವರಿಷ್ಠರ ದುಂಬಾಲು ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ರಾಜಕಾರಣದಲ್ಲಿ ಯಾವ ಸಾಧ್ಯತೆಗಳನ್ನೂ ಅಲ್ಲೆಗಳೆಯುವಂತಿಲ್ಲ.

ಆತಂಕದಲ್ಲಿ ಕಾರ್ಯಕರ್ತರು:

ಮೇಟಿ ಅವರ ನಿಧನದ ಬಳಿಕ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಶೂನ್ಯ ಆವರಿಸಿದ್ದು, ಭವಿಷ್ಯದಲ್ಲಿ ಪಕ್ಷವನ್ನು ಅತ್ಯಂತ ಸಮರ್ಥವಾಗಿ ಸಂಘಟಿಸುವ ಸಂಘಟನಾತ್ಮಕ ಶಕ್ತಿಯ ಅಗತ್ಯವಿದೆ. ಸಮರ್ಥ ಸಂಘಟನಾತ್ಮಕ ಶಕ್ತಿ ಇಲ್ಲದೆ ಹೋದಲ್ಲಿ ಪಕ್ಷ ಮುಂಬರುವ ಚುನಾವಣೆಗಳನ್ನು ಎದುರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ ಎನ್ನುವ ಆತಂಕ ಪಕ್ಷದ ಕಾರ್ಯಕರ್ತರನ್ನು ಕಾಡಲಾರಂಭಿಸಿದೆ.

ಜಡತ್ವ ಪಡೆದ ವ್ಯವಸ್ಥೆ:

ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಬೆನ್ನಲ್ಲೆ ತಾಪಂ, ಜಿಪಂ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಬರಲಿರುವ ಚುನಾವಣೆಗಳನ್ನು ಎದುರಿಸಲು ಕ್ಷೇತ್ರದ ಹಡಗನ್ನು ಮುನ್ನಡೆಸಬಲ್ಲ ತತ್ಕಾಲ ನಾವಿಕನ ಅಗತ್ಯತೆ ಇದೆ. ಉಪಚುನಾವಣೆ ಜತೆಗೆ ಪಕ್ಷದ ಸಂಘಟನೆ ಜವಾಬ್ದಾರಿ ಹೊರಬಲ್ಲ ನಾಯಕನ ಹುಡುಕಾಟದಲ್ಲೂ ಪಕ್ಷ ತೊಡಗಿದೆ.

ಪಕ್ಷದಲ್ಲಿ ಹಿರಿಯರಾದ ಎಸ್. ಆರ್. ಪಾಟೀಲ, ಅಜಯಕುಮಾರ ಸರನಾಯಕ, ಎಸ್.ಜಿ. ನಂಜಯ್ಯನಮಠ, ರಕ್ಷಿತಾ ಈಟಿ ಮೊದಲಾವರು ಇದ್ದಾರೆ. ಆದರೆ ಪಕ್ಷ ಇದುವರೆಗೂ ಕ್ಷೇತ್ರದ ಸಂಘಟನಾ ಜವಾಬ್ದಾರಿಯನ್ನು ಯಾರಿಗೂ ವಹಿಸಿದಂತೆ ಕಾಣಿಸುತ್ತಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಸೇರಿದಂತೆ, ಮೂಲ ಸೌಕರ್ಯಗಳ ಸಮಸ್ಯೆ ಕೂಡ ಹೆಚ್ಚಿದೆ. ಆಡಳಿತ ವ್ಯವಸ್ಥೆ ಜಡತ್ವ ಪಡೆದುಕೊಂಡಿದೆ. ಜತೆಗೆ ಕಾರ್ಯಕರ್ತರನ್ನು ಕೇಳುವವರು ಯಾರೂ ಇಲ್ಲದಂತ ವಾತಾವರಣ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ, ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಮಾಜಿ ಶಾಸಕರು ಪಕ್ಷದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕರೂ ಇಲ್ಲ. ಹಾಗಾಗಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯಷ್ಟೆ, ಪಕ್ಷವನ್ನು ಸಮರ್ಥವಾಗಿ ಸಂಘಟಿಸಬಲ್ಲವರಿಗೆ ಸಂಘಟನಾ ಜವಾಬ್ದಾರಿ ವಹಿಸುವ ಕೆಲಸ ಆಗಬೇಕಿದೆ ಎನ್ನುವ ವಾದ ಪಕ್ಷದಲ್ಲಿ ಕೇಳಿ ಬರುತ್ತಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top