ಬಾಗಲಕೋಟೆ: ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷಾಂತರ ಪಿಡುಗು ಸಹಜ. ಮುಂಬರುವ ಉಪಚುನಾವಣೆಯಲ್ಲೂ ಅದರ ಛಾಯೆ ಕಾಣಿಸಿಕೊಳ್ಳುವ ಲಕ್ಷಣಗಳು ಗೋಚರಿಸತೊಡಗಿವೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ವೇಳೆಯೂ ಪಕ್ಷಾಂತರ ಗಾಳಿ ಬೀಸುವ ವದಂತಿಗಳು ಜೋರಾಗಿವೆ. ಉಪಚುನಾವಣೆಯಲ್ಲಿನ ಸೋಲು, ಗೆಲುವಿಗಿಂತ ಭವಿಷ್ಯದ ಲೆಕ್ಕಾಚಾರದಲ್ಲಿ ಪಕ್ಷಾಂತರಕ್ಕೆ ಪ್ರಮುಖರು ಸಜ್ಜಾಗಿದ್ದಾರೆ.
ಘರ್ ವಾಪ್ಸಿ ಚಿಂತನೆ:
2013 ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್ನಿಂದ ಕಾಂಗ್ರೆಸ್ ಗೆ ಬಹುದೊಡ್ಡ ಪ್ರಮಾಣದಲ್ಲಿ ಪಕ್ಷಾಂತರ ನಡೆಯಿತು. ಆ ವೇಳೆ ಐತಿಹಾಸಿಕ ವಿಜಯ ಸಾಧಿಸಿದ ಕಾಂಗ್ರೆಸ್, 2018 ವಿಧಾನಸಭೆಯಲ್ಲಿ ಆ ಗೆಲುವನ್ನು ಉಳಿಸಿಕೊಳ್ಳಲಿಲ್ಲ. 2013 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ನಿಂದ ಬಂದವರಲ್ಲಿ ಅನೇಕರು ವಾಪಸ್ ಕೇಸರಿ ಪಾಳೆಯ ಸೇರಿದರು.
2023ರ ಚುನಾವಣೆ ವೇಳೆಯೂ ಬಿಜೆಪಿಯಿಂದ ಅನೇಕರು ಕಾಂಗ್ರೆಸ್ಸಿನತ್ತ ಮುಖಮಾಡಿದರು. ಕೆಲವರು ಪರೋಕ್ಷವಾಗಿ ಕಾಂಗ್ರೆಸ್ ಪರವಾಗಿ ಒಳೊಳಗೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ. ಮೇಟಿ ಅವರು ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಎರಡನೇ ಬಾರಿಗೆ ವಿಜಯಪತಾಕೆ ಹಾರಿಸಿದರು.
ಪಕ್ಷಾಂತರ ಪರ್ವ ಆರಂಭ:
ಇದೀಗ ಮೇಟಿ ಅವರ ನಿಧನದಿಂದಾಗಿ ಉಪಚುನಾವಣೆ ಮುಂಬರುವ ದಿನಗಳಲ್ಲಿ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಬಾಗಲಕೋಟೆ ಕಾಂಗ್ರೆಸ್ ಪಾಳೆಯದಲ್ಲಿನ ಕೆಲವರು ಘರ್ ವಾಪ್ಸಿ ಆಗುವ ವಾತಾವರಣ ಕಂಡು ಬರಲಾರಂಭಿಸಿದೆ. ತೆರೆಮರೆಯಲ್ಲಿ ಚಟುವಟಕೆಗಳು ಜೋರಾಗಿವೆ.
ಮಾತಿನಂತೆ ನಡೆಯಲಿಲ್ಲ:
2018 ಮತ್ತು 2023 ರಲ್ಲಿ ಬಿಜೆಪಿಯಿಂದ ಕೆಲವರು ಕಾಂಗ್ರೆಸ್ಸಿಗೆ ಪಕ್ಷಾಂತರಗೊಂಡಿದ್ದರು. ಪಕ್ಷಾಂತರ ವೇಳೆ ನೀಡಿದ ಭರವಸೆಯಂತೆ ನಡೆದುಕೊಳ್ಳಲಿಲ್ಲ ಎನ್ನುವ ಅಸಮಾಧಾನದ ಮಾತುಗಳು ಈಗ ಕೇಳಿಸಲಾರಂಭಿಸಿವೆ. ಅನೇಕರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ, ನಿಗಮ-ಮಂಡಳಿಗಳಲ್ಲಿ ಅವಕಾಶ ನಿರೀಕ್ಷೆಯಲ್ಲಿ ಕಾಂಗ್ರೆಸ್ ಸೇರಿದ್ದರು. ನಿರೀಕ್ಷೆಯಂತೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಗೆಲುವು ಸಾಧಿಸುವ ಜತೆಗೆ ರಾಜ್ಯದಲ್ಲೂ ಅಧಿಕಾರ ಚುಕ್ಕಾಣಿ ಹಿಡಿಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾದರೂ ನಾನಾ ಹುದ್ದೆಗಳ ನಿರೀಕ್ಷೆ ಇಟ್ಟುಕೊಂಡು ಪಕ್ಷಕ್ಕೆ ಬಂದವರಿಗೆ ಅವಕಾಶಗಳು ಗಗನ ಕುಸಮ ಎನ್ನುವಂತಾಗಿದೆ. ಬಿಟಿಡಿಎ ಅಧ್ಯಕ್ಷ ಹುದ್ದೆಯೂ ಇಲ್ಲ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವೂ ಇಲ್ಲ, ನಿಗಮ-ಮಂಡಳಿಗಳಲ್ಲೂ ಸ್ಥಾನಮಾನ ಸಿಗಲಿಲ್ಲ. ಈ ಬೆಳವಣಿಗೆ ಕೇವಲ ವಲಸೆ ಬಂದವರಲ್ಲಿ ಮಾತ್ರ ನಿರಾಶೆಗೆ ಕಾರಣವಾಗಿಲ್ಲ. ಮೂಲ ಕಾಂಗ್ರೆಸ್ ಕಾರ್ಯಕರ್ತರಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.
ಕಾರ್ಯಕರ್ತರ ಅಸಮಾಧಾನ ಮೊನ್ನೆ ತಾನೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದ ಪಿಡಬ್ಲೂಡಿ ಮಂತ್ರಿ ಸತೀಶ್ ಜಾರಕಿಹೊಳಿ ಅವರ ಮುಂದೆಯೇ ಅನಾವರಣಗೊಂಡಿತ್ತು ಎನ್ನುವುದು ಗಮನಾರ್ಹ ಸಂಗತಿ. ಪಕ್ಷ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ಸಿನಲ್ಲಿ ಏನೂ ಆಗುವುದಿಲ್ಲ ಎನ್ನುವ ಭಾವನೆ ಬೇರೂರುತ್ತಿದೆ. ಈಗಲೇ ಇಲ್ಲಿಂದ ಕಾಲುಕೀಳುವುದು ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದು, ಆಪ್ತರ ಜತೆ ಸಮಾಲೋಚನೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಭವಿಷ್ಯದ ಲೆಕ್ಕಾಚಾರ:
ಉಪಚುನಾವಣೆ ಫಲಿತಾಂಶ ಏನೇ ಆಗಲಿ, ಬಳಿಕ ಸಾಲು ಸಾಲು ಚುನಾವಣೆಗಳು ನಡೆಯಲಿದ್ದು, ಆ ವೇಳೆ ಏನಾದರೂ ಅನುಕೂಲವಾಗಬಹುದು ಎನ್ನುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಮಲ ಪಾಳೆಯಕ್ಕೆ ಹಾರುವ ಚಿಂತನೆ ನಡೆಸಿದ್ದಾರೆ. ಗ್ರಾಪಂ, ತಾಪಂ ಮತ್ತು ಜಿಪಂ. ಚುನಾವಣೆ ಮೇಲೆ ಕಣ್ಣಿಟ್ಟಿರುವವರು ಈಗಲೇ ಕಮಲ ಪಾಳೆಯ ಸೇರಿ ಸುರಕ್ಷಿತ ಜಾಗೆ ಅರಸುವ ಪ್ರಯತ್ನದಲ್ಲಿದ್ದಾರೆ.
ಪಕ್ಷ ಬಿಟ್ಟವರು ವಾಪಸ್ ಬನ್ನಿ:
ಗಮನಾರ್ಹ ಸಂಗತಿ ಎಂದರೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಈಗಾಗಲೇ ನಾನಾ ಕಾರಣಗಳಿಂದ ಪಕ್ಷ ಬಿಟ್ಟವರು ವಾಪಸ್ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಅಷ್ಟೆ ಅಲ್ಲದೆ ಎಲ್ಲರೂ ಸೇರಿ ಪಕ್ಷ ಕಟ್ಟೋಣ ಎನ್ನುವ ಮಾತನ್ನು ಹೇಳಿದ್ದಾರೆ. ಅವರ ಹೇಳಿಕೆ ಬಳಿಕವೇ ಒಂದಿಷ್ಟು ಜನ ಬಿಜೆಪಿಯತ್ತ ವಾಲುವ ಚಿಂತನೆ ನಡೆಸಿದ್ದು, ಸಮಯ ಸಂದರ್ಭಕ್ಕಾಗಿ ಕಾಯುತ್ತಿದ್ದಾರಂತೆ.
ಒಟ್ಟಾರೆ ಮುಂಬರುವ ಉಪಚುನಾವಣೆ ಸಮಯದಲ್ಲಿ ಪಕ್ಷಾಂತರ ಪರ್ವ ನಡೆಯುವುದು ಗ್ಯಾರಂಟಿ ಎನ್ನಲಾಗುತ್ತಿದ್ದು, ಪಕ್ಷ ತೊರೆದು ಹೋಗುವವರನ್ನು ಉಳಿಸಿಕೊಳ್ಳುವ ಪ್ರಯತ್ನ ಎರಡೂ ಕಡೆಗಳಿಂದಲೂ ನಡೆಯಲಿದೆ. ಏನೇ ಪಕ್ಷಾಂತರ ನಡೆದರೂ ದೂರಗಾಮಿ ಪರಿಣಾಮ ಹೇಗಿರಲಿದೆ ಎನ್ನುವುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎನ್ನುವ ಅಂಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
- ವಿಠ್ಠಲ ಆರ್. ಬಲಕುಂದಿ



