ಉಪಚುನಾವಣೆ: ಪರಮಾಪ್ತನ ಕ್ಷೇತ್ರ ಗೆಲ್ಲಲು ಸಮರಾಭ್ಯಾಸ ಶುರು!

ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಪಾಲಿಗೆ ಪ್ರತಿಷ್ಠೆ ಕಣವಾಗಿ ರೂಪಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶತಾಯ – ಗತಾಯ ಈ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಿದೆ. ದಿ.ಶಾಸಕ ಎಚ್. ವೈ. ಮೇಟಿ ಸಿದ್ದರಾಮಯ್ಯ ಅವರ ಪರಮಾಪ್ತರು. ಮೇಟಿ ಅವರಿಂದಾಗಿಯೇ ಕಮಲ ಕೋಟಿಯಲ್ಲಿ ಮೂರುವರೆ ದಶಕದ ಬಳಿಕ ‘ಕೈ’ ಕಮಾಲ್ ನಡೆದಿದ್ದು ಎನ್ನುವುದು ಗಮನಾರ್ಹ.

ಎರಡು ಬಾರಿ ಕೈ ಮೇಲುಗೈ:

ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ಗುಳೇದಗುಡ್ಡ ಕ್ಷೇತ್ರ ಅಸ್ತಿತ್ವ ಕಳೆದುಕೊಂಡ ಬಳಿಕ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿ. ಎಚ್.ವೈ. ಮೇಟಿ ಆಯ್ದುಕೊಂಡದ್ದು ಬಾಗಲಕೋಟೆ ವಿಧಾನಸಭೆ ಕ್ಷೇತ್ರವನ್ನು. 2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಯತ್ನ ವಿಫಲವಾದರೂ, ಪಕ್ಷ ಸಂಘಟನೆ ಕೈಬಿಡದ ಮೇಟಿ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಕೋಟೆಯಲ್ಲಿ ಮೂರುವರೆ ದಶಕದ ಬಳಿಕ ಗೆಲುವಿನ ದಾಖಲೆ ಬರೆಯುವ ಮೂಲಕ ಕಾಂಗ್ರೆಸ್ಸಿಗೆ ಅಸ್ತಿತ್ವ ಕಲ್ಪಿಸಿದರು.

2018ರಲ್ಲಿ ಕೇಸರಿ ಕೋಟೆಯಲ್ಲಿ ಮತ್ತೇ ಕಲಮ ಅರಳಿತಾದರೂ 2023 ರಲ್ಲಿ ಪುನರಾಯ್ಕೆಗೊಳ್ಳುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಬೇರುಗಳು ಇನ್ನೂ ಗಟ್ಟಿಯಾಗಿವೆ ಎನ್ನುವುದನ್ನು ಮೇಟಿ ಅವರು ಸಾಬೀತುಪಡಿಸಿದರು. ಅವರ ನಿಧನದ ಬಳಿಕ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಕಾರಣಗಳಿಂದ ಮೇಟಿ ಕುಟುಂಬದವರನ್ನು ಅಖಾಡಕ್ಕಿಳಿಸಿ ಗೆಲ್ಲಿಸಿಕೊಂಡು ಬರಬೇಕಿದೆ.

ಒಗ್ಗಟ್ಟಿನ ಮಂತ್ರಿ ಜಪಿಸಲು ಸಲಹೆ:

ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಚುನಾವಣೆ ಪೂರ್ವ ಸಿದ್ಧತೆಗಳು ಸದ್ದಿಲ್ಲದೆ ಆರಂಭಗೊಂಡಿವೆ. ಮೊನ್ನೆ ತಾನೇ ಪಿಡಬ್ಲೂಡಿ ಮಂತ್ರಿ, ಸಿದ್ದರಾಮಯ್ಯನವರ ಆಪ್ತ ಬಳಗದ ಸತೀಶ್ ಜಾರಕಿಹೊಳಿ ಅವರು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ನಡೆದ ತೋಟಗಾರಿಕೆ ಮೇಳದ ಸಮಾರೋಪಕ್ಕೆ ಬಂದಾಗ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಆಲಿಸಿ ಹೋಗಿದ್ದಾರೆ. ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ ಟಿಕೆಟ್ ನೀಡಿಕೆ ಬಗೆಗೆ ಸಚಿವರಿಗೆ ವಿವರಣೆ ನೀಡಿದ್ದಾರೆ.

ಟಿಕೆಟ್ ಯಾರಿಗೆ ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಮಾತನ್ನು ಹೇಳಿ ಹೋಗಿದ್ದಾರೆ. ಮೇಟಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತಗೊಂಡಿದ್ದರೂ, ಅದರಾಚೆ ಕೆಲವರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದು ಕುತೂಹಲದ ಸಂಗತಿ.

ಶುರುವಾಗಿದೆ ಸಮರಾಭ್ಯಾಸ:

ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿನ ಸದ್ಯದ ಬೆಳವಣಿಗೆಯ ಮಧ್ಯೆ ಸಿದ್ದರಾಮಯ್ಯ ಅವರು ಆಪ್ತಮಿತ್ರನ ಕ್ಷೇತ್ರದಲ್ಲಿ ಅವರ ಕುಟುಂಬದವರನ್ನು ಗೆಲ್ಲಿಸಿಕೊಂಡು ಬರಬೇಕಿದೆ. ಅದಕ್ಕಾಗಿ ಪೂರ್ವ ತಯಾರಿಗಳು ನಡೆದಿದ್ದು, ಅದರ ಭಾಗವಾಗಿಯೇ ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದು, ಕಾರ್ಯಕರ್ತರ ಅಭಿಪ್ರಾಯ ಆಲಿಸಿದ್ದು ಎನ್ನಲಾಗುತ್ತಿದೆ.

ಕ್ಷೇತ್ರ ಗೆಲುವು ಸವಾಲಿನ ಪ್ರಶ್ನೆ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನೆಂದೂ ಗೆಲ್ಲದು ಎನ್ನುವ ವಾತಾವರಣವನ್ನು ದಿ. ಶಾಸಕ ಎಚ್.ವೈ. ಮೇಟಿ ಅಳಿಸಿ ಹಾಕಿ, ಎರಡು ಬಾರಿ ಶಾಸಕರಾಗಿ ಗೆದ್ದು ತೋರಿಸಿದ್ದಾರೆ. ಇದೀಗ ಕಾಂಗ್ರೆಸ್ ಗೆಲುವಿನ ಪರಂಪರೆ ಮುಂದುವರಿಯುವಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. 2023 ರ ಬಳಿಕ ನಡೆದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹಾಗೆಯೇ ಬಾಗಲಕೋಟೆ ವಿಧಾನಸಭೆ ಕ್ಷೇತ್ರವನ್ನು ಎಚ್.ವೈ. ಮೇಟಿ ಅವರಿಲ್ಲದ ಸಮಯದಲ್ಲಿ ಗೆಲ್ಲುವುದು ಬಹುದೊಡ್ಡ ಸವಾಲಿನ ಪ್ರಶ್ನೆಯಾಗಿದೆ.

ಅಸಮಾಧಾನದ್ದೆ ಸಮಸ್ಯೆ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಇಂದಿಗೂ ಬಿಜೆಪಿ ಪ್ರಾಬಲ್ಯವನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕುವ ಸ್ಥಿತಿ ಇಲ್ಲ. ಬೇರು ಮಟ್ಟದಲ್ಲಿ ಬಿಜೆಪಿ ಬೇರುಗಳೂ ಗಟ್ಟಿಯಾಗಿವೆ. ಆದರೆ ಜಿಲ್ಲೆ ಹಾಗೂ ಕ್ಷೇತ್ರದ ಮುಖಂಡರ ನಡುವಿನ ಅಸಮಾಧಾನ ಕಾರ್ಯಕರ್ತರನ್ನು ಕಸಿವಿಸಿಯನ್ನುಂಟು ಮಾಡಿದೆ. ಕ್ಷೇತ್ರದ ಇಬ್ಬರು ಪ್ರಬಲ ಮುಖಂಡರ ನಡುವಿನ ಅಸಮಾಧಾನದ ಕಂದಕ ದಿನದಿಂದ ದಿನಕ್ಕೆ ಕಡಿಮೆ ಆಗುವ ಬದಲು ಹೆಚ್ಚುತ್ತಲೇ ಇದೆ.

ಪಕ್ಷದ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರು, ಪಕ್ಷದ ರಾಜ್ಯ ಉಸ್ತುವಾರಿಗಳು ಅಸಮಾಧಾನ ಸರಿಪಡಿಸುವ ನಿಟ್ಟಿನಲ್ಲಿ ನಡೆಸಿದ ಸಂಧಾನಸಭೆಗಳು ಫಲಕಾರಿ ಆಗಿಲ್ಲ. ಕ್ಷೇತ್ರದ ಮುಖಂಡರ ನಡುವಿನ ಅಸಮಾಧಾನಕ್ಕೆ ಪಕ್ಷದಲ್ಲಿನ ಜಿಲ್ಲೆಯ ಮುಖಂಡರು ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದರಿಂದ ಅಸಮಾಧಾನ ನಿಗಿನಿಗಿ ಎನ್ನುತ್ತಿದೆ ಎನ್ನುವ ಮಾತುಗಳು ಬಿಜೆಪಿ ಕಾರ್ಯಕರ್ತರಲ್ಲೆ ವ್ಯಕ್ತವಾಗುತ್ತಿವೆ.

ಕೈ, ಕಮಲ ನಾಯಕರಿಗೆ ಪ್ರತಿಷ್ಠೆ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಗೆಲ್ಲುವುದು ರಾಜ್ಯದ ಕೈ, ಕಮಲ ನಾಯಕರ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆ ನಿಟ್ಟಿನಲ್ಲಿ ಈಗಲೇ ರಣತಂತ್ರಗಳು ಶುರುವಾಗಿವೆ. ಒಂದೊಮ್ಮೆ ಬಿಜೆಪಿ ಪಾಳೆಯದಲ್ಲಿನ ಅಸಮಾಧಾನ ಶಮನವಾದಲ್ಲಿ, ಅದು ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ಸವಾಲಾಗಲಿದೆ. ಆ ಸವಾಲನ್ನು ಎದುರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ. ಮೇಟಿ ಅವರ ಕುಟುಂಬಸ್ಥರನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top